ರಾಜ್ಯದ ವಿವಿಧ ಭಾಗಗಳಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಅಪಾರ ಹಾನಿ ಉಂಟಾಗಿದೆ. ಜಮೀನಿನ ಬೆಳೆ ನಾಶ, ಆಸ್ತಿಪಾಸ್ತಿ ಹಾನಿ, ರಸ್ತೆ ಸಂಪರ್ಕ ಕಡಿತ ಸೇರಿದಂತೆ ಜನಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ನೆರೆ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಲು ನಿಖಿಲ್ ಕುಮಾರಸ್ವಾಮಿ ರಾಜ್ಯವ್ಯಾಪಿ ಪ್ರವಾಸ ಕೈಗೊಳ್ಳಲಿದೆ
ಈ ನಿಟ್ಟಿನಲ್ಲಿ ಬಿಜೆಪಿ ಕೂಡ ರಾಜ್ಯವ್ಯಾಪಿ ಪ್ರವಾಸ ಕ್ರಮಕೈಗೊಂಡಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಈ ಕುರಿತು ಪಕ್ಷದ ಎಲ್ಲ ಜಿಲ್ಲಾಧ್ಯಕ್ಷರಿಗೆ ಪತ್ರ ಬರೆದಿದ್ದಾರೆ. ಸೆಪ್ಟೆಂಬರ್ 8ರೊಳಗೆ ಮಳೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಿ, ಸಂಪೂರ್ಣ ವರದಿಯನ್ನು ಚಿತ್ರಗಳೊಂದಿಗೆ ಪಕ್ಷದ ರಾಜ್ಯ ಕಚೇರಿಗೆ ಸಲ್ಲಿಸುವಂತೆ ನಿರ್ದೇಶನ ನೀಡಿದ್ದಾರೆ.
ಪತ್ರದಲ್ಲಿ ‘ರಾಜ್ಯದ ಹಲವೆಡೆ ಮಳೆಯ ಹಾವಳಿ ಮುಂದುವರಿದಿದ್ದು, ಜನಸಾಮಾನ್ಯರು ಸಂಕಷ್ಟ ಅನುಭವಿಸುತ್ತಿದ್ದಾರೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಸಂಪುಟದ ಸಚಿವರು ಈ ಕುರಿತಾಗಿ ಸೂಕ್ತ ಕ್ರಮ ತೆಗೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಹಾನಿಯನ್ನು ನಿರ್ಣಯಿಸುವುದು, ಪರಿಹಾರ ನೀಡುವುದು ಸರ್ಕಾರದ ಹೊಣೆಗಾರಿಕೆ. ಆದರೆ ಅವರು ಇದರಲ್ಲಿ ನಿರ್ಲಕ್ಷ್ಯ ತೋರಿಸಿದ್ದಾರೆ’ ಎಂದು ಆರೋಪಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಆಡಳಿತ ಕಾಲವನ್ನು ಸ್ಮರಿಸಿದ್ದಾರೆ. ಅವರು ಸಹಜ ವಿಪತ್ತಿನ ಸಂದರ್ಭಗಳಲ್ಲಿ ತಕ್ಷಣ ಜನರ ನೆರವಿಗೆ ಧಾವಿಸಿ, ರೈತರಿಗೆ ದ್ವಿಗುಣ ಪರಿಹಾರ ನೀಡುವಂತೆ ಕೇವಲ ಕೇಂದ್ರವನ್ನೇ ಅಲ್ಲ, ರಾಜ್ಯ ಸರಕಾರವನ್ನೂ ಒತ್ತಾಯಿಸಿದ್ದರು ಎಂಬುದನ್ನು ಉಲ್ಲೇಖಿಸಿದ್ದಾರೆ.
ಪ್ರಸ್ತುತ ಸರ್ಕಾರ ಗಾಢ ನಿದ್ರೆಯಲ್ಲಿ ಮುಂದುವರೆದಿದೆ. ಜನರ ಸಂಕಷ್ಟಗಳ ಬಗ್ಗೆ ಕಿಂಚಿತ್ತು ಆಸಕ್ತಿಯೂ ತೋರಿಸುತ್ತಿಲ್ಲ. ಇಂತಹ ಸಮಯದಲ್ಲಿ ಪ್ರತಿಪಕ್ಷವಾದ ನಾವು ಜವಾಬ್ದಾರಿಯುತ ನಡವಳಿಕೆಯಿಂದ ಮುಂದಾಗಬೇಕು ಎಂದು ಬಿ.ವೈ. ವಿಜಯೇಂದ್ರ ಸೂಚಿಸಿದ್ದಾರೆ.
ಬಿಜೆಪಿ ನಾಯಕರು, ಕಾರ್ಯಕರ್ತರು ಮಳೆಹಾನಿ ಪ್ರದೇಶಗಳಿಗೆ ತೆರಳಿ ಜನರ ನೋವನ್ನ ಆಲಿಸಲಿದ್ದಾರೆ. ಬೆಳೆ ನಾಶ, ಸಾವು-ನೋವು, ರಸ್ತೆಗಳಲ್ಲಿ ಉಂಟಾದ ಹಾನಿ ಮುಂತಾದ ವಿವರಗಳನ್ನು ಸಂಗ್ರಹಿಸಿ ಚಿತ್ರಸಹಿತ ವರದಿ ಸಲ್ಲಿಸಲಿದ್ದಾರೆ.

