Friday, August 29, 2025

Latest Posts

ದಕ್ಷಿಣ ಕನ್ನಡ ಸ್ಟೈಲ್ ಬೋಳುಕೊದ್ಲು ರೆಸಿಪಿ

- Advertisement -

ಬೋಳು ಕೊದ್ಲು.. ದಕ್ಷಿಣ ಕನ್ನಡದ ಜನರಿಗೆ ಹೆಚ್ಚು ಪರಿಚಿತವಾಗಿರುವ ಶಬ್ದ. ಯಾಕಂದ್ರೆ, ಸಾರಿಗೆ ದಕ್ಷಿಣ ಕನ್ನಡದ ಜನ ಕೊದ್ಲು ಅಂತಾ ಹೇಳ್ತಾರೆ. ಇವತ್ತು ನಾವು ಸಿಂಪಲ್ ಆಗಿ ಕೆಲವೇ ನಿಮಿಷಗಳಲ್ಲಿ ನುಗ್ಗೇ- ಬದನೆ ಹಾಕಿ ಬೋಳು ಕೊದ್ಲು ಮಾಡೋದು ಹೇಗೆ ಅನ್ನೋದನ್ನ ಹೇಳಿ ಕೊಡ್ತೀವಿ.

ಬೋಳು ಕೊದ್ಲಿಗೆ ಬೇಕಾಗುವ ಸಾಮಗ್ರಿಯನ್ನ ನೋಟ್ ಮಾಡಿಕೊಳ್ಳಿ

ಬೇಕಾಗುವ ಸಾಮಗ್ರಿ: ಒಂದು ಬದ್ನೇಕಾಯಿ, ಒಂದು ನುಗ್ಗೇಕಾಯಿ, ಒಂದು ಕಪ್ ನೆನೆಸಿಟ್ಟ ಕಡ್ಲೇಕಾಳು ಮತ್ತು ಬಟಾಣಿ ಕಾಳು, ಕಡಲೇಕಾಳು ಇಷ್ಟವಾಗಿದ್ದಲ್ಲಿ ಮಾತ್ರ ಬಳಸಿಕೊಳ್ಳಿ. ಇಲ್ಲವಾದಲ್ಲಿ ಬಟಾಣಿ ಕಾಳನ್ನಷ್ಟೇ ಬಳಸಿ. ಅರ್ಧ ಕಪ್ ತೊಗರಿ ಬೇಳೆ, ಒಂದು ಹಸಿ ಮೆಣಸಿನಕಾಯಿ, ಚಿಟಿಕೆ ಅರಿಷಿಣ, ಒಂದು ಸ್ಪೂನ್ ಬೆಲ್ಲ, ಎರಡು ಸ್ಪೂನ್ ಹುಣಸೆ ರಸ, ಚಿಟಿಕೆ ಇಂಗು, ಸ್ವಲ್ಪ ಕೊತ್ತಂಬರಿ ಸೊಪ್ಪು, ಒಂದು ಸ್ಪೂನ್ ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಮೊದಲು ಬದನೆ ಮತ್ತು ನುಗ್ಗೆಕಾಯಿಯನ್ನು ಒಂದು ಸ್ಪೂನ್ ಉಪ್ಪು ಹಾಕಿದ ನೀರಿನಲ್ಲಿ 10ರಿಂದ 15 ನಿಮಿಷ ನೆನೆಸಿಡಿ.

ನಂತರ, ಕುಕ್ಕರ್‌ನಲ್ಲಿ ಒಂದು ಸ್ಪೂನ್ ಎಣ್ಣೆ ಹಾಕಿ, ಹಸಿ ಮೆಣಸಿನಕಾಯಿ ಹಾಕಿ ಒಂದು ನಿಮಿಷ ಹುರಿಯಿರಿ, ಈಗ ನೆನೆಸಿಟ್ಟ ಕಡಲೆ ಮತ್ತು ಬಟಾಣಿ ಹಾಕಿ ಕೊಂಚ ಹುರಿಯಿರಿ.

ನಂತರ ಬದನೆಕಾಯಿ ಮತ್ತು ನುಗ್ಗೇಕಾಯಿ ಹಾಕಿ ಒಂದು ನಿಮಿಷ ಹುರಿಯಿರಿ. ಈಗ ತೊಗರಿ ಬೇಳೆ ಹಾಕಿ ಮಿಕ್ಸ್ ಮಾಡಿ. ಇದಕ್ಕೆ ಎರಡು ಗ್ಲಾಸ್ ನೀರು, ಚಿಟಿಕೆ ಅರಿಷಿಣ ಹಾಕಿ, ಜೊತೆಗೆ ಅಗತ್ಯವಿದ್ದಷ್ಟು ಉಪ್ಪಿನಲ್ಲಿ ಅರ್ಧ ಉಪ್ಪು ಹಾಕಿ 4ರಿಂದ 5 ವಿಶಲ್‌ಗೆ ತೆಗೆಯಿರಿ.

ಕೆಲವೊಮ್ಮೆ ಕೆಲ ಕುಕ್ಕರಿನಲ್ಲಿ ಎರಡರಿಂದ ಮೂರು ವಿಶಲ್‌ನಲ್ಲೇ ತರಕಾರಿ, ಬೇಳೆ ಬೇಯುತ್ತದೆ. ಆದ್ರೆ ಕೆಲ ಕುಕ್ಕರಿನಲ್ಲಿ 4ರಿಂದ 5 ವಿಶಲ್ ನಂತರವೇ ತರಕಾರಿ, ಬೇಳೆ ಬೇಯುವುದು. ಹೀಗಾಗಿ ನಿಮ್ಮ ಕುಕ್ಕರಿನಲ್ಲಿ ವಿಶಲ್ ಹೇಗೆ ಸೆಟ್ ಆಗುವುದೋ ಹಾಗೇ ಬೇಯಿಸಿ.

ಇದೀಗ ತರಕಾರಿ, ಬೇಳೆ, ಕಾಳು ಬೆಂದಿದ್ದು, ಇದಕ್ಕೆ ಉಳಿದ ಅರ್ಧ ಉಪ್ಪು, ಹುಣಸೆ ರಸ, ಬೆಲ್ಲ ಬೆರೆಸಿ 5 ನಿಮಿಷ ಕುದಿಸಿ.

https://youtu.be/6dnm-Ej5Emw

ಕೊನೆಗೆ ಚಿಟಿಕೆ ಇಂಗು ಹಾಕಿ 1ರಿಂದ2 ನಿಮಿಷ ಕುದಿಸಿದರೆ ಬೋಳು ಕೊದ್ಲು ರೆಡಿ. ಈಗ ಕೊತ್ತೊಂಬರಿ ಸೊಪ್ಪು ಹಾಕಿ ಹತ್ತು ನಿಮಿಷ ಮುಚ್ಚಳ ಹಾಕಿ ಮುಚ್ಚಿಡಿ. ಹೀಗೆ ಮಾಡಿದರೆ ಕೊತ್ತೊಂಬರಿ ಸೊಪ್ಪಿನ ಘಮ ಉಳಿಯುತ್ತದೆ. ಈಗ ಬೋಳು ಕೊದ್ಲು ಸವಿಯಲು ರೆಡಿ.

ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ

- Advertisement -

Latest Posts

Don't Miss