ಬೆಂಗಳೂರು: ಅತೃಪ್ತ ಶಾಸಕರ ಅರ್ಜಿ ಕುರಿತ ಸುಪ್ರೀಂಕೋರ್ಟ್ ಆದೇಶದ ಕ್ರಿಯಾಲೋಪದ ಬಗ್ಗೆ ಸದನದಲ್ಲಿ ಚರ್ಚೆ ಜೋರಾಗಿ ನಡೆದಿದೆ. ಕ್ರಿಯಾಲೋಪ ವಿಚಾರವಾಗಿ ಕಾಂಗ್ರೆಸ್ ಶಾಸಕರು ಮಾತನಾಡುತ್ತಿದ್ದ ವೇಳೆ ಮಧ್ಯಪ್ರವೇಶಿಸಿದ ಪ್ರತಿಪಕ್ಷ ನಾಯಕ ಯಡಿಯೂರಪ್ಪ ಶಾಸಕರಿಗೆ ಜಾರಿಮಾಡಲಾಗಿರುವ ವಿಪ್ ಕುರಿತು ಗೊಂದಲದ ಹೇಳಿಕೆ ನೀಡಿ ಬೆಸ್ತು ಬಿದ್ದ ಪ್ರಸಂಗ ನಡೆಯಿತು.
ಸದನದಲ್ಲಿ ವಿಶ್ವಾಸಮತಯಾಚನೆ ಕುರಿತಾಗಿ ಮೈತ್ರಿ ಪಕ್ಷ ಹಾಗೂ ವಿರೋಧ ಪಕ್ಷಗಳ ನಡುವೆ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಬೆಳಗ್ಗಿನಿಂದಲೂ ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶದ ಕುರಿತ ಕ್ರಿಯಾಲೋಪದ ಕುರಿತಾಗಿ ಮಾತನಾಡುತ್ತಿರುವ ಕಾಂಗ್ರೆಸ್ ಶಾಸಕರು, ಬಿಜೆಪಿ ಸದಸ್ಯರ ಅಸಹನೆಗೆ ನಾಂದಿ ಹಾಡಿದ್ದಾರೆ. ಒಂದೆಡೆ ಬಿಜೆಪಿ ಎಷ್ಟೊತ್ತಿಗೆ ವಿಶ್ವಾಸಮತ ಯಾಚನೆ ಮಾಡಿ ಮೈತ್ರಿ ಸರ್ಕಾರವನ್ನು ಉಳಿಸುತ್ತೀವೋ ಅಂತ ಚಾತಕಪಕ್ಷಿಗಳಂತೆ ಎದುರುನೋಡುತ್ತಿದ್ರೆ, ದೋಸ್ತಿ ಶಾಸಕರು ಕ್ರಿಯಾಲೋಪವನ್ನೇ ದೊಡ್ಡ ಚರ್ಚೆಗೆ ಇಟ್ಟಿದ್ದಾರೆ.
ಈ ಮಧ್ಯೆ ಸದನದಲ್ಲಿ ಎದ್ದುನಿಂತು ಮಾತನಾಡಿದ ಪ್ರತಿಪಕ್ಷ ನಾಯಕ ಯಡಿಯೂರಪ್ಪ, ಸುಪ್ರೀಂ ಕೋರ್ಟ್ ಅತೃಪ್ತ ಶಾಸಕರಿಗೆ ವಿಪ್ ಜಾರಿ ಮಾಡಬಾರದು ಅಂತ ಹೇಳಿದ್ರೂ ದೋಸ್ತಿ ಪಕ್ಷಗಳು ಜಾರಿ ಮಾಡಿವೆ ಅಂತ ಹೇಳುತ್ತಿದ್ದಂತೆಯೇ ಸಭಾಪತಿ ರಮೇಶ್ ಕುಮಾರ್ ಆಕ್ಷೇಪಿಸಿ ಸುಪ್ರೀಂ ಕೋರ್ಟ್ ಹಾಗಂತ ಎಲ್ಲಿ ಹೇಳಿದೆ ಅಂತ ಹೇಳಿದ್ರು. ಕೂಡಲೇ ಮಧ್ಯಪ್ರವೇಶಿದ ಸಚಿವ ಡಿ.ಕೆ ಶಿವಕುಮಾರ್ ಹಾಗೂ ಇತರೆ ಕಾಂಗ್ರೆಸ್ ಸದಸ್ಯರು, ವಿರೋಧಪಕ್ಷದ ನಾಯಕನಾಗಿ ಸದನದ ಗಮನ ಬೇರೆಡೆ ಸೆಳೆಯುತ್ತಿದ್ದೀರಿ. ದೇಶಕ್ಕೆ ತಪ್ಪು ಮಾಹಿತಿ ನೀಡುತ್ತಿದ್ದೀರಿ. ಇದು ಸುಪ್ರೀಂಕೋರ್ಟ್ ಗೆ ಅವಮಾನ ಅಂತ ಡಿಕೆಶಿ ಕೆಂಡಾಮಂಡಲರಾದ್ರು. ಇದರಿಂದ ಪೆಚ್ಚಾದ ವಿಪಕ್ಷನಾಯಕ ಯಡಿಯೂರಪ್ಪ, ನಾನು ನನ್ನ ಮಾತನ್ನು ಹಿಂಪಡೆಯುತ್ತೇನೆ ಅಂತ ಹೇಳಿದ್ರು. ನಂತರ ಸದನದಲ್ಲಿ ಎದ್ದಿದ್ದ ಗದ್ದಲಕ್ಕೆ ತೆರೆಬಿತ್ತು.
ಜೋಡೆತ್ತುಗಳ ಕಡೇ ಆಟ ಸಕ್ಸಸ್ ಆಗುತ್ತಾ??? ಮಿಸ್ ಮಾಡದೇ ಈ ವಿಡಿಯೋ ನೋಡಿ