Political news: ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ಮುಂದಾಗಿದ್ದ ಜಾತಿ ಗಣತಿ ವರದಿಗೆ ತಾತ್ಕಾಲಿಕ ಬೇಕ್ ಬಿದ್ದಂತಾಗಿದೆ. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಸ್ಪಷ್ಟ ತೀರ್ಮಾನ ಕೈಗೊಳ್ಳುವ ನಿರೀಕ್ಷೆ ಇತ್ತು. ಆದರೆ ಸರ್ಕಾರದಲ್ಲಿನ ಸಚಿವರು ಹಾಗೂ ಶಾಸಕರ ನಡುವೆ ಭಿನ್ನಾಭಿಪ್ರಾಯಗಳು ವ್ಯಕ್ತವಾಗಿ ಸಭೆಯು ಅರ್ಧಕ್ಕೆ ಮೊಟಕುಗೊಂಡಿತ್ತು. ಇನ್ನೂ ಪ್ರಮುಖವಾಗಿ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಒಕ್ಕಲಿಗ ಹಾಗೂ ಲಿಂಗಾಯತ ಹೊರತುಪಡಿಸಿದರೆ ಬಹುತೇಕ ಹಿಂದುಳಿದ, ದಲಿತ ಸಚಿವರು ಜಾತಿ ಗಣತಿಯ ಪರವಾಗಿಯೇ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದ್ದರು.
ಸೂಕ್ಷ್ಮ, ಭಾವನಾತ್ಮಕ ವಿಚಾರ..
ಇನ್ನೂ ಸಭೆಯ ಆರಂಭದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಯಾರೂ ಕೂಡ ಉದ್ವೇಗದಲ್ಲಿ ಮಾತನಾಡುವ ಅಗತ್ಯವಿಲ್ಲ. ಈ ವರದಿಯು ಸೂಕ್ಷ್ಮ ಹಾಗೂ ಭಾವನಾತ್ಮಕವಾಗಿದ್ದು, ಎಲ್ಲರೂ ನಿಮ್ಮ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ ಎಂದು ಹೇಳಿ ಸಭೆಯನ್ನು ಆರಂಭಿಸಿದ್ದರು. ಬಳಿಕ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ ವರದಿ ಕುರಿತು ಸಂಪುಟದ ಸದಸ್ಯರಿಗೆ ವಿವರ ನೀಡಿದರು. ನಂತರ ಒಬ್ಬೊಬ್ಬರಾಗಿ ಸಚಿವರು ಇದರ ಬಗ್ಗೆ ಚರ್ಚೆ ನಡೆಸಿದರು. ಈ ವೇಳೆ ಲಿಂಗಾಯತ ಸಮುದಾಯದ ಒಳ ಪಂಗಡಗಳು, ಉಪಜಾತಿಗಳನ್ನು ವರ್ಗೀಕರಿಸಿ ಉಲ್ಲೇಖ ಮಾಡಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಸಭೆಯು ಕಾವೇರುವಂತೆ ಮಾಡಿತು. ಅಲ್ಲದೆ ಪ್ರಮುಖವಾಗಿ ಸಭೆಯಲ್ಲಿದ್ದ ಲಿಂಗಾಯತ ಸಚಿವರು 2018 ರಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮ ಮಾನ್ಯತೆ ವಿಷಯದಿಂದ ಪಕ್ಷಕ್ಕಾದ ನಷ್ಟದ ಬಗ್ಗೆಯೂ ಸಭೆಯಲ್ಲಿ ಪ್ರಸ್ತಾಪಿಸಿದರು. ಅಲ್ಲದೆ ಈ ವಿಚಾರಕ್ಕೆ ಕೈ ಹಾಕಿದ್ದ ಕಾರಣಕ್ಕೆ ಸಾಕಷ್ಟು ಜನರು ಚುನಾವಣೆಯಲ್ಲಿ ಸೋಲುಂಡಿರುವುದನ್ನು ಮರೆಯುವಂಥದ್ದಲ್ಲ ಎಂದು ಕೆಲವರು ನೆನಪಿಸಿಕೊಂಡರು.
ನನಗೆ ಸಲಹೆ ನೀಡಲು ನೀನ್ಯಾರು..?
ಇನ್ನೂ ಪ್ರಮುಖವಾಗಿಯೇ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಈಗಾಗಲೇ ಹೇಳಿದಂತೆಯೇ ಅವರ ಪುತ್ರ ಹಾಗೂ ಸಚಿವ ಎಸ್.ಎಸ್. ಮಲ್ಲಿಕಾರ್ಜನ ಜಾತಿ ಗಣತಿಯ ವರದಿಗೆ ಸಭೆಯಲ್ಲಿ ತೀವ್ರ ವಿರೋಧ ವ್ಯಕ್ತಪಡಿಸಿದರು. ಅಲ್ಲದೆ ಇದನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಾಗುವುದಿಲ್ಲ ಎಂದು ಬಂಡಾಯದ ಬಾವುಟ ಎತ್ತಿ ಹಿಡಿದಿದ್ದರು. ಇನ್ನೂ ವೀರಶೈವ ಲಿಂಗಾಯತ ಸೇರಿ ಎಲ್ಲ ಜಾತಿಗಳನ್ನು ಉಪ ಪಂಗಡವಾಗಿ ವಿಭಜಿಸಿರುವುದಕ್ಕೆ ಆಕ್ಷೇಪಿಸಿದರು. ಇನ್ನೂ ಇದೇ ವಿಚಾರಕ್ಕೆ ಮಲ್ಲಿಕಾರ್ಜುನ ಹಾಗೂ ಸಚಿವ ಸಂತೋಷ್ ಲಾಡ್ ನಡುವೆ ನೇರ ವಾಗ್ವಾದ ನಡೆದು ಸಭೆಯಲ್ಲಿ ಕೆಲ ಕಾಲ ಗೊಂದಲ ಮೂಡಿತ್ತು. ನನಗೆ ಸಲಹೆ ನೀಡಲು ನೀನ್ಯಾರು ಎಂದು ಮಲ್ಲಿಕಾರ್ಜುನ ಲಾಡ್‌ರನ್ನು ತರಾಟೆಗೆ ತೆಗೆದುಕೊಂಡಿದ್ದರು.
ಅಲ್ಲದೆ ಚಿನ್ನಪ್ಪರೆಡ್ಡಿ ಆಯೋಗದಲ್ಲಿ ಹಿಂದುಳಿದ ಲಿಂಗಾಯತ ಶೇಕಡಾ 17.43 ರಷ್ಟಿತ್ತು. ಈ ವರದಿಯಲ್ಲಿ ಶೇಕಡಾ 11.09 ರಷ್ಟು ಮಾತ್ರ ತೋರಿಸಲಾಗಿದೆ, ಶೇಕಡಾ 6.32 ರಷ್ಟು ಕಡಿಮೆ ಆಗಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದ್ದಾರೆ. ಇನ್ನೂ ಮುಸ್ಲಿಮರ ಸಂಖ್ಯೆಯನ್ನು ಒಟ್ಟಾಗಿ ತೋರಿಸಿ ಲಿಂಗಾಯತ ಜನಸಂಖ್ಯೆಯನ್ನು ಪ್ರತ್ಯೇಕವಾಗಿ ವಿಂಗಡಿಸಿ ಕಡಿಮೆ ಮಾಡಿ ತೋರಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದರು. ಮಲ್ಲಿಕಾರ್ಜುನ ಈ ಮಾತಿಗೆ ಸಚಿವರಾದ ಈಶ್ವರ್ ಖಂಡ್ರೆ, ಲಕ್ಮ್ಮೀ ಹೆಬ್ಬಾಳ್ಕರ್ ಸೇರಿದಂತೆ ಲಿಂಗಾಯತ ಮಂತ್ರಿಗಳು ಧ್ವನಿಗೂಡಿಸಿದರು.
ರಾತ್ರೋ ರಾತ್ರಿ ಮೀಸಲು ಬದಲಾಯಿಸ್ತೀರಾ..?
ಅಲ್ಲದೆ ಕುರುಬ ಹಾಗೂ ಒಕ್ಕಲಿಗ ಸಮುದಾಯಗಳಲ್ಲೂ ಪ್ರವರ್ಗವಾರು ವಿಂಗಡಣೆಯಲ್ಲೂ ವ್ಯತ್ಯಾಸವಿದೆ. ಸಾಮಾಜಿಕ – ಶೈಕ್ಷಣಿಕ ಸಮೀಕ್ಷೆಯ ಹೆಸರಿನಲ್ಲಿ ರಾತ್ರೋ ರಾತ್ರಿ ಮೀಸಲು ವ್ಯವಸ್ಥೆ ಬದಲಾಯಿಸುತ್ತೀರಿ..? ಈ ರೀತಿಯೆಲ್ಲಾ ಆಗುತ್ತದೆ ಅಂತ ನಿರೀಕ್ಷಿರಲಿಲ್ಲ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಭೆಯಲ್ಲಿಯೇ ಏರು ಧ್ವನಿಯಲ್ಲಿಯೇ ಆಕ್ರೋಶ ಹೊರಹಾಕಿದ್ದರು. ಇನ್ನೂ ಕುರುಬ ಪ್ರವರ್ಗ 1ಬಿಗೆ ಸೇರ್ಪಡೆ ಮಾಡುವ ಶಿಫಾರಸು ಬಗ್ಗೆ ಅವರು ತಮ್ಮ ಆಕ್ಷೇಪ ವ್ಯಕ್ತಪಡಿಸಿದರು.
ಕೆನೆ ಪದರ ನೀತಿಗೆ ಆಕ್ಷೇಪ..
ಇನ್ನೂ ಸಭೆಯಲ್ಲಿದ್ದ ಒಕ್ಕಲಿಗ ಸಚಿವರು ತಮ್ಮ ಸಮುದಾಯದ ಕಡೆಗಣನೆಯ ಬಗ್ಗೆ ತಮ್ಮ ಅಭಿಪ್ರಾಯವನ್ನು ಮಂಡಿಸಿದರು. ಹಾಗೆಯೇ ಲಿಂಗಾಯತ ಸಚಿವರೂ ಕೂಡ ಸಮುದಾಯದ ಕೋರಿಕೆಯನ್ನು ಸಭೆಯ ಗಮನಕ್ಕೆ ತರುವ ಮೂಲಕ ಜಾತಿ ಗಣತಿ ವರದಿಯನ್ನು ತಿರಸ್ಕರಿಸುವ ತೀರ್ಮಾನ ಕೈಗೊಂಡರು. ಅಲ್ಲದೆ ಸಭೆಯಲ್ಲಿನ ಈ ಎಲ್ಲ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ದಲಿತ ಸಚಿವರು ಜಾತಿ ಗಣತಿಯ ಪರವಾದ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದರು. ಅಂದಹಾಗೆ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ನೀಡುವಲ್ಲಿ ಕೆನೆಪದರ ನೀತಿ ಜಾರಿ ಶಿಫಾರಸಿಗೆ ದಲಿತ ಸಮುದಾಯದ ಕೆಲ ಸಚಿವರು ಅಪಸ್ವರ ಎತ್ತಿದರು. ಬಳಿಕ ಎಲ್ಲರ ಅಭಿಪ್ರಾಯವನ್ನು ಗಮನಿಸಿದ ಸಿಎಂ ಎಲ್ಲ ಸಚಿವರು ತಮ್ಮ ಅಭಿಪ್ರಾಯಗಳನ್ನು ಲಿಖಿತ ರೂಪದಲ್ಲಿ ನೀಡುವಂತೆ ಸೂಚನೆ ನೀಡಿ ಸಭೆಯನ್ನು ಮುಗಿಸಿದರು. ಅಲ್ಲದೆ ಮೇ 2ರಂದು ಈ ಕುರಿತು ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಅವರು ತಿಳಿಸಿದರು.
ಬಿಜೆಪಿಗೆ ತಿರುಗು ಬಾಣವಾಗುತ್ತಾ ಸಮೀಕ್ಷೆ..?
ಅಂದಹಾಗೆ ರಾಜ್ಯದಲ್ಲಿನ ಜಾತಿ ದಂಗಲ್ ವಿಚಾರವನ್ನು ಬಿಜೆಪಿಗೆ ಕೊರಳಿಗೆ ಏರಿಸಲು ಕೈ ಪಾಳಯದಲ್ಲಿ ಪ್ಲಾನ್ ರೂಪಿಸಲಾಗುತ್ತಿದೆ. ಪ್ರಮುಖವಾಗಿ ಪ್ರಸ್ತುತ ಪರ – ವಿರೋಧದ ಕೇಂದ್ರ ಬಿಂದುವಾಗಿರುವ ಜಾತಿ ಗಣತಿಯ ಸಮೀಕ್ಷೆಯ ದತ್ತಾಂಶ ವಿಶ್ಲೇಷಣೆ, ಅದರ ಅಂತಿಮ ವರದಿ ಸಿದ್ಧವಾಗಿರುವುದು ಬಿಜೆಪಿ ಸರ್ಕಾರ ನೇಮಕ ಮಾಡಿದ್ದ ಜಯಪ್ರಕಾಶ್ ಹೆಗ್ಡೆ ಅಧ್ಯಕ್ಷತೆಯ ಆಯೋಗದ ಅವಧಿಯಲ್ಲಿ ಎಂಬುದನ್ನು ಹೈಲೈಟ್ ಮಾಡಲು ಕಾಂಗ್ರೆಸ್ ಸಿದ್ಧವಾಗಿದೆ.
ಈ ವಿಚಾರವನ್ನು ಜನರಿಗೆ ಮುಟ್ಟಿಸಬೇಕಿದೆ, ಬಿಜೆಪಿ ಸರ್ಕಾರದಲ್ಲಿ ಆಗಿರುವ ವರದಿಯ ಕುರಿತು ನಮ್ಮ ಸರ್ಕಾರ ಚರ್ಚೆ ನಡೆಸುವಂತಾಗಿದೆ. ಇದರಿಂದ ಸರ್ಕಾರದ ಬಗ್ಗೆ ಜನರಲ್ಲಿ ಬೇರೆಯದ್ದೆ ಅಭಿಪ್ರಾಯ ಮೂಡುತ್ತಿದ್ದು, ಹಾನಿಯನ್ನು ತಪ್ಪಿಸಲು ಮುಂದಾಗಬೇಕಿದೆ ಎಂಬ ಅಭಿಪ್ರಾಯವೂ ಕೈ ನಾಯಕರಲ್ಲಿ ವ್ಯಕ್ತವಾಗಿದೆ.
ಹೀಗಾಗಿ ಸಮೀಕ್ಷೆಯು ಬಿಜೆಪಿಯ ಅವಧಿಯಲ್ಲೇ ನಡೆದಿದೆ, ನಾವು ಕೇವಲ ಅದರ ಜಾರಿಯ ಬಗ್ಗೆಯಷ್ಟೇ ಚರ್ಚೆ ಮಾಡುತ್ತಿದ್ದೇವೆ ಎಂದು ಜನರಲ್ಲಿ ಅರಿವು ಮೂಡಿಸುವ ಮೂಲಕ ಇದನ್ನು ವಿರೋಧಿಸುತ್ತಿರುವ ಬಿಜೆಪಿಗೆಯೇ ಇದು ಉಲ್ಟಾ ಹೊಡೆಯುವಂತೆ ಮಾಡಲು ಕಾಂಗ್ರೆಸ್ ತಂತ್ರಗಾರಿಕೆ ಹೆಣೆಯುತ್ತಿದೆ.
ಈ ಜಾತಿ ವಿಚಾರ ಭಾವನಾತ್ಮಕವಾದದ್ದು, ಪ್ರತಿಯೊಬ್ಬರನ್ನು ಕೂಡ ಇದು ತನ್ನದೇ ಆದ ಪರೀಧಿಯಲ್ಲಿ ಬಂಧಿಸಿಡಲು ಪ್ರಯತ್ನಿಸುತ್ತದೆ. ಇದಕ್ಕಾಗಿಯೇ ಎರಡು ಸಂಪುಟ ಸಭೆಗಳು ನಡೆದರೂ ಯಾವುದೇ ಲಾಭವಾಗಿಲ್ಲ. ಇನ್ನೂ ಮೇ 2ರತ್ತ ಎಲ್ಲರ ಚಿತ್ತ ನೆಟ್ಟಿದ್ದು, ಅಂದು ಜಾತಿ ಗಣತಿ ವರದಿಯ ಬಗ್ಗೆ ಯಾವ ತೀರ್ಮಾನ ಹೊರಬೀಳಲಿದೆ ಎನ್ನುವುದು ತೀರ್ವ ಕುತೂಹಲ ಮೂಡಿಸಿದೆ.