Varanasi News: ವಾರಣಾಸಿಯ ಕಾಲಭೈರವ ದೇವಸ್ಥಾನದಲ್ಲಿ ಮಹಿಳೆಯೊಬ್ಬರು ಕೇಕ್ ಕತ್ತರಿಸಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ವೀಡಿಯೋ ವೈರಲ್ ಆಗುತ್ತಿದ್ದಂತೆ, ಎಚ್ಚೆತ್ತುಕೊಂಡಿರುವ ದೇವಸ್ಥಾನದ ಆಡಳಿತ ಮಂಡಳಿ, ಇನ್ನು ಮುಂದೆ ದೇವಸ್ಥಾನದ ಸನ್ನಿಧಿಯಲ್ಲಿ ಈ ರೀತಿ ಕೇಕ್ ಕಟ್ ಮಾಡುವಂತಿಲ್ಲ. ಮನಸ್ಸಿಗೆ ಬಂದಂತೆ ನಡೆದುಕೊಳ್ಳುವಂತಿಲ್ಲ ಎಂದು ಆದೇಶ ಹೊರಡಿಸಿದೆ.
ಇನ್ನು ಈ ಮೊದಲು ದೇವಸ್ಥಾನದ ಗರ್ಭಗುಡಿಯಲ್ಲಿ ವೀಡಿಯೋ ಫೋಟೋ ತೆಗೆಯಲು ಅವಕಾಶವಿತ್ತು. ಆದರೆ ಇದೀಗ, ವಾರಣಾಸಿ ಕಾಲಭೈರವ ದೇವಸ್ಥಾನದಲ್ಲಿ ಫೋಟೋ ತೆಗೆಯಲು ಮತ್ತು ವೀಡಿಯೋ ಮಾಡಲು ಅವಕಾಶವಿಲ್ಲ.
ಮಹಿಳೆ ಕೇಕ್ ಕತ್ತರಿಸುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದಾಗ, ಜನ ದೇವಸ್ಥಾನದ ಆಡಳಿತ ಮಂಡಳಿ ಮತ್ತು ಅಲ್ಲಿನ ಅರ್ಚಕರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಸನಾತನ ಧರ್ಮದ ನಂಬಿಕೆಯನ್ನು ಹಾಳು ಮಾಡುತ್ತಿದ್ದಾರೆ. ಪಾಶ್ಚಾತ್ಯ ಸಂಸ್ಕೃತಿಗೆ ಬೆಂಬಲ ನೀಡುತ್ತಿದ್ದಾರೆ. ಪ್ರಸಿದ್ಧ ಪುಣ್ಯ ಕ್ಷೇತ್ರದಲ್ಲಿ ಜನ ತಮಗೇನೇನು ಬೇಕೋ, ಎಲ್ಲವೂ ಮಾಡಲು ಪರ್ಮಿಷನ್ ನೀಡುತ್ತಿದ್ದಾರೆ ಎಂದು ನೆಟ್ಟಿಗರು ವಾಕ್ಪ್ರಹಾರ ನಡೆಸಿದ್ದರು.
ವಿಷಯ ಏನಂದ್ರೆ, ಕಾಲಭೈರವ ದೇವಸ್ಥಾನದಲ್ಲಿ ಯಾರೂ ಬೇಕಾದರೂ, ಯಾವಾಗ ಬೇಕಾದರೂ ಬಂದು ಕೇಕ್ ಕತ್ತರಿಸುತ್ತಿದ್ದರು. ಆದರೆ ಈ ವಿಷಯ ಯಾರಿಗೂ ಗೊತ್ತಿರಲಿಲ್ಲ. ಆದರೆ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಎನ್ನಿಸಿಕೊಂಡ ಮಹಿಳೆ ಈ ಕೆಲಸ ಮಾಡಿದ್ದಕ್ಕೆ, ಈ ವಿಷಯ ಸದ್ದು ಮಾಡಿದೆ.
ಈ ಬಗ್ಗೆ ಮಾತನಾಡಿರುವ ಅಲ್ಲಿನ ಅರ್ಚಕರು, ಅವರು ನಮ್ಮ ಬಳಿ ಬಂದು ಕೇಕ್ ಕತ್ತರಿಸಲು ಅವಕಾಶ ಕೇಳಿದರು. ಹೇಗೂ ಹಲವರು ಇಲ್ಲಿ ಬಂದು ಕೇಕ್ ಕತ್ತರಿಸುತ್ತಾರೆ ಎಂದು ನಾವು ಅವರಿಗೂ ಅವಕಾಶ ನೀಡಿದೆವು. ಅವರು ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಎಂದು ನಮಗೆ ಗೊತ್ತಿರಲಿಲ್ಲ. ಆದರೆ ವೀಡಿಯೋ ವೈರಲ್ ಆಗುತ್ತಿದ್ದಂತೆ, ನಾವು ಹಣ ತೆಗೆದುಕೊಂಡು ಇದಕ್ಕೆಲ್ಲ ಪರ್ಮಿಷನ್ ನೀಡುತ್ತಿದ್ದೇವೆ ಎಂದು ಆರೋಪಿಸಲಾಯಿತು. ಹೀಗಾಗಿ ಆಡಳಿತ ಮಂಡಳಿ, ಇನ್ನು ಮುಂದೆ ಇಲ್ಲಿ ಬಂದು ಕೇಕ್ ಕತ್ತರಿಸುವ ಸಂಸ್ಕೃತಿಯನ್ನು ಇಲ್ಲಿಗೆ ಮುಕ್ತಾಯಗೊಳಿಸಿದೆ ಎಂದಿದ್ದಾರೆ.