Hassan News: ಹಾಸನ : ಕೇಂದ್ರ ಸರ್ಕಾರದ ವಿರುದ್ಧ ಗೃಹಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ ವಾಗ್ದಾಳಿ ನಡೆಸಿದ್ದಾರೆ. ಹಾಸನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಿವಲಿಂಗೇಗೌಡ, ರೈತರು ಉಳಿಯಬೇಕು, ಕೊಬ್ಬರಿ ಬೆಳೆಗಾರರು ಉಳಿಯಬೇಕು. ಹಾಸನ ಜಿಲ್ಲೆಯಲ್ಲಿ 97,961 ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯುತ್ತಾರೆ. ಅದರಲ್ಲಿ ತೆಂಗಿನ ಇಳುವರಿ 31,33,381 ಕ್ವಿಂಟಾಲ್, ಅದರಲ್ಲಿ 3,62,000 ಕೊಬ್ಬರಿ ಬರುತ್ತೆ. 2,20,000 ಕ್ವಿಂಟಾಲ್ ಕೊಬ್ಬರಿ ಖರೀದಿಸಿದ್ದಾರೆ. 1,42,000 ಕ್ವಿಂಟಾಲ್ ಕೊಬ್ಬರಿ ಉಳಿದಿದೆ. ಎಂಎಸ್‌ಪಿ ರೇಟ್ ಕೇಂದ್ರ ಸರ್ಕಾರ ಕೊಡುತ್ತಿಲ್ಲ. ಎಂಎಸ್‌ಪಿ ರೇಟ್‌ನ್ನು ಇದುವರೆಗೆ ಕೊಟ್ಟಿಲ್ಲ ಎಂದು ಆರೋಪಿಸಿದ್ದಾರೆ.
ಇದು ಯಾರ ಮನೆ ಆಸ್ತಿ ಅಲ್ಲ. ರೈತನ ಸಂಚಿತ ನಿಧಿಗೆ ಕೊಡಬೇಕು ಎನ್ನುವುದು ಕಾನೂನಾತ್ಮಕವಾದ ವ್ಯವಸ್ಥೆ. 1,42,000 ಕೊಬ್ಬರಿ ಖರೀದಿ ಮಾಡಿದ್ರೆ ಏನಾಗುತ್ತಿತ್ತು..? ಹಾಸನ ಜಿಲ್ಲೆಯ ಮುಖ್ಯ ಬೆಳೆಯಲ್ಲಿ ತೆಂಗು ಒಂದು. ಹೆಂಗಸರನ್ನು ಬೀದಿಯಲ್ಲಿ ಮಲಗಿಸಿದ್ದೀರಿ. ರಾತ್ರಿಯೆಲ್ಲಾ ಸೊಳ್ಳೆ ಕೈಯಲ್ಲಿ ಕಡಿಸಿಕೊಂಡು ಬೀದಿಯಲ್ಲಿ ಮಲಗಿದ್ರು. ಬೀದಿಯಲ್ಲಿ ರೈತರಿಗೆ ಅನ್ನ ತಿನ್ನಿಸಿದ್ದೀರಾ. ಕೇಂದ್ರ ಸರ್ಕಾರಕ್ಕೆ ಮಾನ, ಮರ್ಯಾದೆ ಇದೆಯಾ..? ಆತ್ಮಗೌರವ ಇದೆಯಾ ಬಿಜೆಪಿಯವರಿಗೆ, ದೊಡ್ಡದಾಗಿ ಭಾಷಣ ಮಾಡ್ತೀರಿ. ರೈತರನ್ನು ಬೀದಿಯಲ್ಲಿ ಮಲಗುವ ಹಾಗೇ ಕೇಂದ್ರ ಸರ್ಕಾರ ಮಾಡಿದೆ. ನಿಮಗೆ ಮಾನ, ಮರ್ಯಾದೆ ನಾಚಿಕೆ ಇದ್ದರೆ ಉಳಿದಿರುವ ಕೊಬ್ಬರಿ ತೆಗೆದುಕೊಳ್ಳಿ ಎಂದು ಶಿವಲಿಂಗೇಗೌಡರು ಹೇಳಿದ್ದಾರೆ.
ಯಾರಪ್ಪನ ಮನೆಯದಲ್ಲ ಎಂಎಸ್‌ಪಿ ದರ. ರೈತರನ್ನು ಇಂತಹ ಅವಹೇಳನ ಸ್ಥಿತಿಗೆ ತಂದಿದ್ದಾರೆ. ನಾಲ್ಕು ದಿನ ರೈತರ ಕಷ್ಟ ನೋಡಲು ಆಗಲಿಲ್ಲ. ರೈತರು ಪಟ್ಟ ಪಾಡು ನೋಡಿದರೆ ಕಣ್ಣೀರು ಬರುತ್ತೆ. ನಾಲ್ಕು ದಿನ ಕ್ಯೂ ನಿಲ್ಲಿಸಿ ರೈತರನ್ನು ಅಲೆಸಿದ್ರು. ಅನೇಕ ಜನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೇಂದ್ರ ಸರ್ಕಾರಕ್ಕೆ ಎಂಎಸ್‌ಪಿ ದರ ಫಿಕ್ಸ್ ಮಾಡುವ ಯೋಗ್ಯತೆ ಇಲ್ಲ. ಹಾಸನ ಜಿಲ್ಲೆಯ ಸಂಸದರು ರಾಜ್ಯ ಸರ್ಕಾರದ ಮೇಲೆ ಆಪಾದನೆ ಮಾಡ್ತಾರೆ. ಇಲ್ಲಿ ಮಾಡೋದಲ್ಲ ಕೇಂದ್ರ ಸರ್ಕಾರದ ಬಳಿ ಹೋಗಿ ಕೂರಲಿ. ಉಳಿದಿರುವ ಕೊಬ್ಬರಿಯನ್ನು ಖರೀದಿ ಮಾಡುವವರೆಗೂ ಮೇಲೆ ಏಳಬಾರದು. ಅದನ್ನು ಬಿಟ್ಟು ಹಾಲಿನ ಡೈರಿಯ ಪ್ಯಾಕೆಟ್ ತಂದು ಕ್ಯೂನಲ್ಲಿ ನಿಂತವರಿಗೆ ಕೊಡೋದಲ್ಲ. ಈಗ ಹೊಂದಾಣಿಕೆ ಪಕ್ಷ ಅಲ್ವಾ ಅಲ್ಲಿ ಹೋಗಿ ರಿಕ್ವೆಸ್ಟ್ ಮಾಡಲಿ. ಅದನ್ನು ಬಿಟ್ಟು ಕ್ಕೂ ನಿಂತಿರುವವರಿಗೆ ಸಾಂತ್ವಾನ ಹೇಳೋದಲ್ಲ. ಎಂಪಿಯಾಗಿ ರೈತರ ಪರ ಕೆಲಸ ಮಾಡಬೇಕು. ಅಲ್ಲಿಯವರೆಗೂ ಕೇಂದ್ರ ಸರ್ಕಾರದ ಮುಂದೆ ಕೂರಲಿ ಮೇಲೆ ಎದ್ದೇಳಬಾರದು ಎಂದು ಸಂಸದ ಪ್ರಜ್ವಲ್ ರೇವಣ್ಣ ವಿರುದ್ದ ವಾಗ್ದಾಳಿ ಮಾಡಿದ್ದಾರೆ.
ಕೇಂದ್ರ ಸರ್ಕಾರದ ನೀತಿಯನ್ನು ಖಂಡನೆ ಮಾಡ್ತಿನಿ. ಕೇಂದ್ರ ಸರ್ಕಾರಕ್ಕೆ ಎಂಎಸ್‌ಪಿ ದರ ಕೊಡಲು ಯೋಗ್ಯತೆ ಇಲ್ಲ. ಡೂಪ್ಲಿಕೇಟ್, ಬೂಟಾಟಿಕೆ ಮಾಡುವ ಸರ್ಕಾರ ಇದು. ಕೇಂದ್ರ ಸರ್ಕಾರದ ವಿರುದ್ಧ ಉಗ್ರವಾದ ಪ್ರತಿಭಟನೆ ಮಾಡಬೇಕಾಗುತ್ತದೆ. ನಿಮ್ಮ ಮನೆ ಆಸ್ತಿ ಕೇಳ್ತಿಲ್ಲ ಕಾನೂನು ಕೇಳ್ತಿದ್ದೀವಿ. ರೈತರನ್ನು ಈ ರೀತಿ ನಡೆಸಿಕೊಳ್ಳಬೇಕಾ, ನಾಚಿಕೆ ಆಗಬೇಕು ನಿಮಗೆ ಎಂದು ಶಿವಲಿಂಗೇಗೌಡ ವಾಗ್ದಾಳಿ ನಡೆಸಿದ್ದಾರೆ.
ಅಲ್ಲದೇ, ಹಾಸನ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆ ಗೌಪ್ಯವಾಗಿ ಮಾಡಿದ್ದಾರೆ. ಡೈರಿಯನ್ನು ಅವರ ಮನೆ ಮಾಡಿಕೊಂಡಿದ್ದಾರೆ. ಚುನಾವಣೆ ಮಾಡಬೇಕಾದರೆ ಜಾಹೀರಾತು ನೀಡಬೇಕು, ನೋಟಿಫಿಕೇಷನ್ ಮಾಡಬೇಕು. ಇಡೀ ಹಾಸನ ಜಿಲ್ಲೆಯ ಜನರನ್ನು ವಂಚಿಸಿದ್ದಾರೆ. ಇದಕ್ಕಿದ್ದಂತೆ ನೋಟಿಫಿಕೇಷನ್ ಮಾಡಿದ್ದಾರೆ. ಸಚಿವರು ವಿದೇಶಕ್ಕೆ ಹೋಗಿರುವುದನ್ನು ನೋಡಿ ಚುನಾವಣೆ ಮಾಡಿದ್ದಾರೆ. ಎಲ್ಲಿಯೂ ಪ್ರಚಾರ ಮಾಡದಂತೆ ಡೈರಿ ಸೆಕ್ರೆಟರಿಗಳನ್ನು ಹೆದರಿಸಿದ್ದಾರೆ ಎಂದು ಶಿವಲಿಂಗೇಗೌಡರು ಹೇಳಿದ್ದಾರೆ.
ಮುಂದೆ ಸರ್ಕಾರದ ಗಮನಕ್ಕೆ ತರುತ್ತೇವೆ. ನಾಳೆ ಸಹಕಾರ ಸಚಿವರನ್ನು ಭೇಟಿ ಮಾಡ್ತಿವಿ. ನಾಳೆ ಸಹಕಾರ ಸಚಿವರಿಗೆ ದೂರು ಕೊಡ್ತೀವಿ. ಕಾಂಗ್ರೆಸ್ ಪರ ಇದ್ದ ಸೊಸೈಟಿಗಳನ್ನು ಲಿಸ್ಟ್‌ನಿಂದಲೇ ಕೈಬಿಟ್ಟಿದ್ದಾರೆ. ಇದರಲ್ಲಿ ನಮ್ಮ ಸರ್ಕಾರದ್ದು ತಪ್ಪಿದೆ. ಎಂಡಿಯನ್ನು ಸರ್ಕಾರದಿಂದಲೇ ಹಾಕಿದ್ದಾರೆ. ಎಂಡಿ ಏನ್ ದನ ಕಾಯುತ್ತಿದ್ದನಾ..? ಅವನು ಮಿನಿಸ್ಟರ್ ಅವರಿಗೆ ತಿಳಿಸಬೇಕಿತ್ತು. ಇಂತಹ ಪ್ರಜಾಪ್ರಭುತ್ವ ಕಗ್ಗೊಲೆ ಮಾಡುವವರನ್ನು ಖಂಡಿಸಲೇಬೇಕು.
ಕೋಆಪರೇಟಿವ್ ಯಾರಪ್ಪನ ಆಸ್ತಿ ಅಲ್ಲ. ಅವನ್ಯಾವನೋ ಆಸೆಗೆ ಮಾಡ್ತಾನೆ, ಇವನು ಆ ರೀತಿ ಮಾಡುವವನು ಎಂತಹವನು..? ಶ್ರೇಯಸ್‌ಪಟೇಲ್ ಅವರನ್ನು ಅಭ್ಯರ್ಥಿ ಮಾಡಿದ್ದಾರೆ. ಸರ್ವೆ ಮಾಡಿಸಿದಾಗ ಶ್ರೇಯಸ್‌ಪಟೇಲ್‌ಗೆ ಜನಾಭಿಪ್ರಾಯ ಜಾಸ್ತಿ ಬಂದಿದೆ ಅವನಿಗೆ ಕೊಡ್ತಿವಿ ಅಂದ್ರು. ಎಲ್ಲರೂ ಒಮ್ಮತವಾಗಿ ಒಪ್ಪಿಕೊಂಡರು. ನಮ್ಮಲ್ಲಿರುವ ಭಿನ್ನಾಭಿಪ್ರಾಯಗಳನ್ನು ಸರಿ ಮಾಡಿಕೊಂಡು ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡ್ತೀವಿ. ಈ ಭಾರಿ ಲೋಕಸಭಾ ಚುನಾವಣೆ ಗೆಲ್ಲಲೇಬೇಕು. ಕಳೆದ ಬಾರಿ ಕಾಂಗ್ರೆಸ್ ಜೊತೆ ಇದ್ರು. ಈ ಭಾರಿ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಎನ್‌ಡಿಎ ಜೊತೆ ಮೈತ್ರಿ ಆದರೂ ಈ ಭಾರಿ ನಡೆಯಲ್ಲ. ಜಾತ್ಯಾತೀತ ಪಕ್ಷದ ಹೆಸರು ಇಟ್ಕಂಡು ಮೈತ್ರಿ ಮಾಡಿಕೊಂಡಿರುವುದು ತಪ್ಪು ಅಂತ ಜನ ಹೇಳುತ್ತಿದ್ದಾರೆ. ನಮ್ಮಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿವೆ. ಎಲ್ಲರ ಅಭಿಪ್ರಾಯ ತಗೊಂಡು ಅಭ್ಯರ್ಥಿ ಹೆಸರು ಅನೌನ್ಸ್ ಮಾಡಿದ್ದಾರೆ ಎಂದು ಶಿವಲಿಂಗೇಗೌಡ ಹೇಳಿದ್ದಾರೆ.
ಬೆಂಗಳೂರಿನ ಈ ಸ್ಥಳದಲ್ಲಿ ಪಾರ್ಕಿಂಗ್ ಮಾಡಬೇಕು ಅಂದ್ರೆ, ಕೊಡಬೇಕಂತೆ 1 ಸಾವಿರ ರೂಪಾಯಿ..
ಟಿಕೆಟ್ ದೊರೆತರೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತೇನೆ: ಮೋಹನ್ ಲಿಂಬಿಕಾಯಿ