Political News: ಮಂಡ್ಯದ ವರ್ತುಲ ರಸ್ತೆಯನ್ನು ಆದಷ್ಟು ಬೇಗ ಅನುಷ್ಠಾನಕ್ಕೆ ತರುವ ಬಗ್ಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಭೂಸಾರಿಗೆ ಸಚಿವರಾದ ನಿತೀನ್ ಗಡ್ಕರಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು.
ಸಂಸತ್ ಭವನದಲ್ಲಿರುವ ನಿತೀನ್ ಗಡ್ಕರಿ ನಿವಾಸಕ್ಕೆ ಭೇಟಿ ನೀಡಿ, ಚರ್ಚೆ ನಡೆಸಿರುವ ಕುಮಾರಸ್ವಾಮಿಯವರು ಈಗಾಗಲೇ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರವು ಯೋಜನೆಗೆ ಡಿಪಿಆರ್ ಮಾಡಿದೆ. ಆದರೆ ಪ್ರಾಧಿಕಾರದ ಅಂದಾಜು ವೆಚ್ಚ ಯೋಜನೆಗೆ ಸಾಕಾಗುವುದಿಲ್ಲ. 900 ಕೋಟಿ ವೆಚ್ಚದ ಪರಿಷ್ಕೃತ ಯೋಜನೆಗೆ ಒಪ್ಪಿಗೆ ಕೊಟ್ಟು ಅನುಷ್ಠಾನಗೊಳಿಸಬೇಕು ಎಂದು ಕುಮಾರಸ್ವಾಮಿ ಮನವಿ ಮಾಡಿದ್ದು, ಈ ಮನವಿಗೆ ಗಡ್ಕರಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ಇನ್ನು ಸಕಾರಾತ್ಮಕ ಸ್ಪಂದನೆಗೆ ಗಡ್ಕರಿಯವರಿಗೆ ಧನ್ಯವಾದ ಹೇಳಿರುವ ಕುಮಾರಸ್ವಾಮಿಯವರು ಭೂಸ್ವಾಧೀನಕ್ಕೆ 550 ಕೋಟಿ ರೂಪಾಯಿ ಮತ್ತು ನಿರ್ಮಾಣ ಕಾರ್ಯಕ್ಕೆ 350 ಕೋಟಿ ರೂಪಾಯಿ ಬೇಕಾಗುತ್ತದೆ. ಹೀಗಾಗಿ ಈ ಯೋಜನೆ ಜಾರಿಗೆ ತರಲು 900 ಕೋಟಿ ರೂಪಾಯಿ ಬೇಕಾಗುತ್ತದೆ ಎಂದು ಗಡ್ಕರಿ ಅವರಿಗೆ ಮನವಿ ಮಾಡಿಕೊಟ್ಟಿದ್ದಾರೆ.
ಅಲ್ಲದೇ, ಮಂಡ್ಯ ವರ್ತುಲ ರಸ್ತೆ ಯೋಜನೆ ಅಭಿವೃದ್ಧಿಗೊಳಿಸಿದರೆ, ಇದರಿಂದ ಮಂಡ್ಯ ಜಿಲ್ಲೆಯ ಅಭಿವೃದ್ಧಿಯಾಗುತ್ತದೆ. ಜಿಲ್ಲೆಯ ಬೆಳವಣಿಗೆಗೆ ಅನುಕೂಲವಾಗುತ್ತದೆ ಎಂದು ಕುಮಾರಸ್ವಾಮಿ ವಿವರಿಸಿದ್ದಾರೆ. ಇಷ್ಟೇ ಅಲ್ಲದೇ, ಜೀವರ್ಗಿ- ಚಾಮರಾಜನಗರ ನಡುವೆ ಮೇಲುಕೋಟೆ ವಿಧಾನಸಭೆ ಕ್ಷೇತ್ರದಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯನ್ನು ದ್ವಿಪಥದಿಂದ ಚತುಷ್ಪಥವಾಗಿ ಅಭಿವೃದ್ಧಿ ಮಾಡಲು ಮನವಿ ಮಾಡಿದ್ದಾರೆ.
ಚತುಷ್ಪಥ ಹೆದ್ದಾರಿ ಆಗುವುದರಿಂದ ಇಲ್ಲಿನ ಜನರ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ಸರಕು ಸಾಗಾಣೆಗೆ ಅನುಕೂಲವಾಗುತ್ತದೆ. ವ್ಯಾಪಾರ, ವಾಣಿಜ್ಯ ಚಟುವಟಿಕೆಗಳಿಗೆ ಉತ್ತೇಜನ ದೊರೆಯುತ್ತದೆ ಎಂದಿರುವ ಕುಮಾರಸ್ವಾಮಿಯವರು, ಕೋಲಾರ ಸೇರಿ ರಾಜ್ಯದ ಹಲವು ಹೆದ್ದಾರಿಗಳ ಅಭಿವೃದ್ಧಿ ಮಂಜೂರಾತಿ ಬಗ್ಗೆ ಕೇಂದ್ರ ಸಚಿವ ನಿತೀನ್ ಗಡ್ಕರಿ ಜೊತೆ ಚರ್ಚೆ ನಡೆಸಿದ್ದಾರೆ.
ಈ ವೇಳೆ ಮಾಜಿ ಸಚಿವರಾದ ಸಿ.ಎಸ್.ಪುಟ್ಟರಾಜು ಹಾಗೂ ಕೋಲಾರ ಸಂಸದ ಮಲ್ಲೇಶ್ ಬಾಬು ಕುಮಾರಸ್ವಾಮಿಗೆ ಸಾಥ್ ನೀಡಿದ್ದಾರೆ.