FRP ಬೆಲೆ ಭರ್ಜರಿ ಏರಿಕೆ: 5 ಕೋಟಿ ರೈತರಿಗೆ ಲಾಭ!

ಕಬ್ಬು ಬೆಳೆಗಾರರಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ. 2026-27ನೇ ಹಂಗಾಮಿಗೆ ಕಬ್ಬಿನ ನ್ಯಾಯೋಚಿತ ಮತ್ತು ಲಾಭದಾಯಕ ಬೆಲೆ ಅಂದರೆ FRP ಯನ್ನು ಹೆಚ್ಚಿಸುವ ಮಹತ್ವದ ನಿರ್ಧಾರವನ್ನು ಕೇಂದ್ರ ಸಚಿವ ಸಂಪುಟ ಕೈಗೊಂಡಿದೆ. ಈ ಕುರಿತು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾಹಿತಿ ನೀಡಿದ್ದಾರೆ. ಈ ನಿರ್ಧಾರದಿಂದ ಲಕ್ಷಾಂತರ ರೈತರಿಗೆ ಲಾಭವಾಗಲಿದೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೈತರ ಪರ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ ಎಂದು ಹೇಳಿದ್ದಾರೆ. 2026-27ನೇ ಹಂಗಾಮಿಗೆ ಕಬ್ಬಿನ ನ್ಯಾಯೋಚಿತ ಮತ್ತು ಲಾಭದಾಯಕ ಬೆಲೆಯನ್ನು FRP ಶೇ.10.25 ರಿಕವರಿ ದರದ ಮೇಲೆ ಪ್ರತಿ ಕ್ವಿಂಟಲ್‌ಗೆ ₹365 ನಿಗದಿಪಡಿಸಲಾಗಿದೆ. ಈ ನಿರ್ಧಾರದಿಂದ ದೇಶದಾದ್ಯಂತ ಸುಮಾರು 5 ಕೋಟಿ ಕಬ್ಬು ಬೆಳೆಗಾರರು ಮತ್ತು ಅವರ ಕುಟುಂಬಗಳಿಗೆ ನೆರವಾಗಲಿದೆ. ಕರ್ನಾಟಕದಲ್ಲಿಯೇ 8ರಿಂದ 10 ಲಕ್ಷ ರೈತರು ಇದರ ಪ್ರಯೋಜನ ಪಡೆಯಲಿದ್ದಾರೆ. ಎಂದು ಹೇಳಿದ್ದಾರೆ.

ಕಬ್ಬಿನ ರಿಕವರಿ ದರ ಹೆಚ್ಚಿದಂತೆ ರೈತರಿಗೆ ಹೆಚ್ಚುವರಿ ಪ್ರೋತ್ಸಾಹಧನವೂ ಸಿಗಲಿದೆ. ಪ್ರತಿ 0.1% ರಿಕವರಿ ಏರಿಕೆಗೆ ₹3.56 ಹೆಚ್ಚುವರಿ ನೀಡಲಾಗುತ್ತದೆ. ಇದೇ ವೇಳೆ, ರಿಕವರಿ 9.5% ಅಥವಾ ಅದಕ್ಕಿಂತ ಕಡಿಮೆ ಇದ್ದರೂ, ಯಾವುದೇ ಕಡಿತವಿಲ್ಲದೆ ಪ್ರತಿ ಕ್ವಿಂಟಲ್‌ಗೆ ₹338.3 ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಲಾಗಿದೆ. ಈ FRP ಹೆಚ್ಚಳ ಕೇವಲ ರೈತರಿಗೆ ಮಾತ್ರವಲ್ಲ, ಸಕ್ಕರೆ ಕಾರ್ಖಾನೆಗಳು ಮತ್ತು ಉದ್ಯಮದಲ್ಲಿರುವ 5 ಲಕ್ಷಕ್ಕೂ ಅಧಿಕ ಕಾರ್ಮಿಕರಿಗೂ ನೆರವಾಗಲಿದೆ. ಕೃಷಿ ಮತ್ತು ಸಕ್ಕರೆ ಉದ್ಯಮವನ್ನು ಮತ್ತಷ್ಟು ಸಶಕ್ತಗೊಳಿಸುವಲ್ಲಿ ಕೇಂದ್ರ ಸರ್ಕಾರ ಬದ್ಧತೆ ತೋರಿದೆ ಎಂದು ಸಚಿವ ಜೋಶಿ ತಿಳಿಸಿದ್ದಾರೆ.

ಕರ್ನಾಟಕದ ಬೆಳಗಾವಿ, ಬಾಗಲಕೋಟೆ, ಮಂಡ್ಯ, ಮೈಸೂರು, ವಿಜಯಪುರ, ಬಳ್ಳಾರಿ, ದಾವಣಗೆರೆ ಮತ್ತು ಬೀದರ್ ಜಿಲ್ಲೆಗಳು
ಕಬ್ಬು ಉತ್ಪಾದನೆಯಲ್ಲಿ ಪ್ರಮುಖ ಸ್ಥಾನದಲ್ಲಿವೆ. ದೇಶದ ಒಟ್ಟು ಸಕ್ಕರೆ ಉತ್ಪಾದನೆಯಲ್ಲಿ ಸುಮಾರು 16% ಪಾಲು ಕರ್ನಾಟಕದ್ದೇ ಆಗಿದ್ದು,
ಈ FRP ಹೆಚ್ಚಳ ರಾಜ್ಯದ ರೈತರಿಗೆ ದೊಡ್ಡ ಬೂಸ್ಟ್ ಆಗಲಿದೆ. ಒಟ್ಟಾರೆ, ಕಬ್ಬಿನ ಬೆಂಬಲ ಬೆಲೆ ಹೆಚ್ಚಳದಿಂದ ರೈತರ ಆದಾಯ ಹೆಚ್ಚುವ ನಿರೀಕ್ಷೆ ಮೂಡಿದ್ದು, ಕೃಷಿ ಕ್ಷೇತ್ರಕ್ಕೆ ಹೊಸ ಚೈತನ್ಯ ಸಿಗಲಿದೆ ಎಂಬ ಮಾತು ಕೇಳಿಬರುತ್ತಿದೆ.

About The Author