ಹೆದ್ದಾರಿಯ ಭಾವಚಿತ್ರಕ್ಕೆ ಶ್ರದ್ಧಾಂಜಲಿ! ರಸ್ತೆಗಾಗಿ ‘ಮಾಡು ಇಲ್ಲವೇ ಮಡಿ’ ಹೋರಾಟ!

ಶಿರಸಿ-ಹಾವೇರಿ ಹೆದ್ದಾರಿ ಬೇಡಿಕೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಭುಗಿಲೆದ್ದ ಹೋರಾಟ. “ಮಾಡು ಇಲ್ಲವೇ ಮಡಿ” ಘೋಷಣೆಯೊಂದಿಗೆ ರಾಜಕೀಯ ತಾಪಮಾನವನ್ನು ಏರಿಸಿದೆ. ಶಿರಸಿ ತಾಲೂಕಿನ ಬಿಸಿಲಕೊಪ್ಪ ಬಳಿ ನಡೆಯುತ್ತಿರುವ ಈ ಬೃಹತ್ ಪ್ರತಿಭಟನೆ, ಇದೀಗ ಜಿಲ್ಲೆಯ ಗಮನವನ್ನು ಸಂಪೂರ್ಣವಾಗಿ ತನ್ನತ್ತ ಸೆಳೆದಿದೆ. ಪ್ರತಿಭಟನೆಗೆ ವಿಭಿನ್ನವಾಗಿ ಚಾಲನೆ ನೀಡಿದ ಹೋರಾಟಗಾರರು, ರಸ್ತೆಯ ಮಧ್ಯದಲ್ಲೇ ಹೆದ್ದಾರಿಯ ಭಾವಚಿತ್ರಕ್ಕೆ ಹೂಹಾರ ಹಾಕಿ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಈ ರಸ್ತೆ ಈಗ ಸತ್ತಂತಾಗಿದೆ” ಎಂಬ ಸಂದೇಶವನ್ನು ಪ್ರಾತಿನಿಧಿಕವಾಗಿ ತೋರಿಸುವ ಈ ನಡೆ ಸ್ಥಳದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ಒಂದು ಇಂಚು ಕೂಡ ಜಾಗಬಿಟ್ಟು ಕದಲುವುದಿಲ್ಲ ಎಂದು ಪ್ರತಿಭಟನೆಗಾರರು ಪಟ್ಟು ಹಿಡಿದಿದ್ದಾರೆ. ಹೀಗಾಗಿ ಪರಿಸ್ಥಿತಿ ತೀವ್ರತೆ ಪಡೆಯುತ್ತಿದ್ದು, ಯಾವುದೇ ಕ್ಷಣದಲ್ಲಿ ಮತ್ತಷ್ಟು ತೀವ್ರ ಹೋರಾಟಕ್ಕೆ ತಿರುಗುವ ಸಾಧ್ಯತೆ ಇದೆ. ಎಪಿಎಂಸಿ ಮಾಜಿ ಅಧ್ಯಕ್ಷ ಸುನೀಲ್ ನಾಯ್ಕ ನೇತೃತ್ವದಲ್ಲಿ ನೂರಾರು ಸಂಖ್ಯೆಯಲ್ಲಿ ಜನರು ಸೇರಿಕೊಂಡಿದ್ದು, “ಇದು ನಮ್ಮ ಹಕ್ಕಿನ ಹೋರಾಟ” ಎಂದು ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ. ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಶಿರಸಿ-ಹಾವೇರಿ ಹೆದ್ದಾರಿ ಕಾಮಗಾರಿ ತಕ್ಷಣ ಪ್ರಾರಂಭಿಸಬೇಕು ಎಂಬುದು ಅವರ ಪ್ರಮುಖ ಆಗ್ರಹವಾಗಿದೆ.

ಪ್ರತಿಭಟನೆಯ ತೀವ್ರತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟುನಿಟ್ಟಿನ ನಿಗಾ ವಹಿಸಲಾಗಿತ್ತು. ಪ್ರತಿಭಟನೆಯ ಪರಿಣಾಮವಾಗಿ ಶಿರಸಿ-ಹಾವೇರಿ ಮಾರ್ಗದಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ. ಒಂದು ರಸ್ತೆಗಾಗಿ ಶುರುವಾದ ಈ ಹೋರಾಟ ಈಗ ಸರ್ಕಾರಕ್ಕೆ ದೊಡ್ಡ ತಲೆನೋವಾಗುತ್ತದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.

ಒಟ್ಟಾರೆ, ಮಾಡು ಇಲ್ಲವೇ ಮಡಿ ಹೋರಾಟ ಕೇವಲ ರಸ್ತೆ ಬೇಡಿಕೆಯಾಗಿರದೇ, ಜನರ ಸಹನೆಯ ಮಿತಿ ಮೀರಿ ಹೊರಬಂದ ಕೋಪದ ಪ್ರತಿಫಲವಾಗಿ ಕಾಣಿಸುತ್ತಿದ್ದು, ಮುಂದಿನ ಬೆಳವಣಿಗೆಗಳತ್ತ ಎಲ್ಲರ ಕಣ್ಣು ನೆಟ್ಟಿದೆ.

About The Author