Chhattisgarh News: ಛತ್ತೀಸ್‌ಗಢದಲ್ಲಿ ನಕ್ಸಲರ ವಿರುದ್ಧದ ಕಾರ್ಯಾಚರಣೆ ಚುರುಕುಗೊಂಡಿದ್ದು, ಭದ್ರತಾ ಪಡೆಗಳು 30 ನಕ್ಸಲರನ್ನು ಪ್ರತ್ಯೇಕವಾದ ಎರಡು ಪ್ರಕರಣಗಳಲ್ಲಿ ಹೊಡೆದುರುಳಿದ್ದಾರೆ. ಅಲ್ಲದೆ ಇದೇ ವೇಳೆ ಒಬ್ಬರು ಭದ್ರತಾ ಸಿಬ್ಬಂದಿಯು ಹತರಾಗಿದ್ದಾರೆ. ಇನ್ನೂ ಇಲ್ಲಿನ ಬಿಜಾಪುರ ಜಿಲ್ಲೆಯಲ್ಲಿ ಕಾರ್ಯಾಚರಣೆ ನಡೆಸಿದ ಭದ್ರತಾ ಪಡೆಗಳು 26 ನಕ್ಸಲೀಯರನ್ನು ಹತ್ಯೆ ಮಾಡಿವೆ. ಅಲ್ಲದೆ ಕಂಕೇರ್ ಪ್ರದೇಶದಲ್ಲಿ ಬಿಎಸ್‌ಎಫ್ ಮತ್ತು ರಾಜ್ಯ ಪೊಲೀಸರ ಡಿಆರ್‌ಜಿ ಸಿಬ್ಬಂದಿಗಳ ತಂಡದ ಜಂಟಿ ಕಾರ್ಯಾಚರಣೆಯಲ್ಲಿ ನಾಲ್ವರು ನಕ್ಸಲರು ಬಲಿಯಾಗಿದ್ದಾರೆ . ಅಲ್ಲದೆ ಈ ಎನ್‌ಕೌಂಟರ್‌ನ ವೇಳೆ ಗುರಿ ತಪ್ಪಿ ಓರ್ವ ಪೊಲೀಸ್ ಸಿಬ್ಬಂದಿಯೂ ಹುತಾತ್ಮರಾಗಿದ್ದಾರೆ. ಇನ್ನೂ ಗಂಗಲೂರು ಪೊಲೀಸ್ ಠಾಣಾ ಪ್ರದೇಶದಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಈ ಸಿಬ್ಬಂದಿ ತೊಡಗಿದ್ದರು ಎನ್ನಲಾಗುತ್ತಿದೆ.
ಇಲ್ಲಿನ ಬಸ್ತಾರ್ ವ್ಯಾಪ್ತಿಯ ಬಿಜಾಪುರ ಮತ್ತು ಕಂಕೇರ್‌ನಲ್ಲಿ ಪ್ರತ್ಯೇಕ ಎನ್‌ಕೌಂಟರ್‌ಗಳು ನಡೆದಿವೆ ಎಂದು ಬಸ್ತಾರ್ ರೇಂಜ್ ಐಜಿ ಸುಂದರರಾಜ್ ಪಿ ಹೇಳಿದ್ದಾರೆ. ಬಿಜಾಪುರ ಡಿಆರ್‌ಜಿ, ಸುಕ್ಮಾ ಡಿಆರ್‌ಜಿ, ಕೋಬ್ರಾ ಸಿಆರ್‌ಪಿಎಫ್ ಪಡೆಗಳು ಬಿಜಾಪುರ ಎನ್‌ಕೌಂಟರ್‌ನಲ್ಲಿ ಪಾಲ್ಗೊಂಡಿದ್ದವು. ಬಿಜಾಪುರ ದಾಂತೇವಾಡ ಸುಕ್ಮಾದ ಗಡಿ ಪ್ರದೇಶದಲ್ಲಿ ಈ ಎನ್‌ಕೌಂಟರ್ ನಡೆದಿದೆ. ಇಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ 26 ನಕ್ಸಲೀಯರು ಹತರಾಗಿದ್ದಾರೆ. ಇದರಲ್ಲಿಯೇ ಬಿಜಾಪುರದ ಡಿಆರ್‌ಜಿ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ಭದ್ರತಾ ಪಡೆಗಳು ನಿರಂತರವಾಗಿ ನಕ್ಸಲರಿಗೆ ಶೋಧ ನಡೆಸುತ್ತಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳ ವಶಕ್ಕೆ..
ಅಲ್ಲದೆ ಈ ಎರಡೂ ಎನ್‌ಕೌಂಟರ್‌ಗಳಲ್ಲಿ ಇಲ್ಲಿಯವರೆಗೆ 30 ನಕ್ಸಲೀಯರು ಹತರಾಗಿದ್ದಾರೆ ಎಂಬ ಬಗ್ಗೆ ಬಸ್ತಾರ್ ಐಜಿ ಸುಂದರರಾಜ್ ಪಿ ಖಚಿತಪಡಿಸಿದ್ದಾರೆ. ಅಂದಹಾಗೆ ಎನ್‌ಕೌಂ ಟರ್ ಸಮಯದಲ್ಲಿ ಕಂಕೇರ್‌ನಲ್ಲಿ ಇದುವರೆಗೆ 4 ಮಾವೋವಾದಿಗಳ ಮೃತ ದೇಹಗಳು ಪತ್ತೆಯಾಗಿವೆ. ಆ ಎನ್‌ಕೌಂಟರ್ ನಡೆದ ಜಾಗದಲ್ಲಿ ಇನ್ನೂ ಕೂಡ ಶೋಧ ಮುಂದುವರೆದಿದೆ. ನಕ್ಸಲರಿಗೆ ಸಂಬಂಧಿಸಿದ್ದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದು ಗುಂಡುಗಳನ್ನು ಆ ಸ್ಥಳದಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ಸುಂದರ್ ರಾಜ್ ಪಿ ತಿಳಿಸಿದ್ದಾರೆ. ಅಲ್ಲದೆ ಕರ್ತವ್ಯದ ವೇಳೆ ಪ್ರಾಣ ಕಳೆದುಕೊಂಡಿರುವ ಭದ್ರತಾ ಸಿಬ್ಬಂದಿ ಛತ್ತೀಸ್‌ಗಢ ಪೊಲೀಸರ ಜಿಲ್ಲಾ ಮೀಸಲು ಪಡೆ ಡಿಆರ್‌ಜಿಗೆ ಸೇರಿದವರಾಗಿದ್ದಾರೆ.
ಇನ್ನೂ ಇದೇ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಛತ್ತೀಸ್‌ಗಢ ಗೃಹ ಸಚಿವ ವಿಜಯ್ ಶರ್ಮಾ, ಅತಿ ಹೆಚ್ಚು ನಕ್ಸಲರಿರುವ ಪ್ರದೇಶವಾಗಿರುವ ಬಿಜಾಪುರದ ಗಂಗಲೂರಿನಲ್ಲಿ ಬೆಳಗ್ಗೆಯಿಂದ ಎನ್‌ಕೌಂಟರ್ ನಡೆಯುತ್ತಿದೆ. ಗಂಗಲೂರಿನಲ್ಲಿ 22 ನಕ್ಸಲರ ಮೃತದೇಹಗಳನ್ನು ಗುರುತಿಸಿ ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ ನಕ್ಸಲರೊಂದಿಗಿನ ಗುಂಡಿನ ಕಾಳಗದಲ್ಲಿ ನಮ್ಮ ಒಬ್ಬ ಸೈನಿಕ ಹುತಾತ್ಮರಾಗಿದ್ದಾರೆ. ಆ ಯೋಧನ ಕುಟುಂಬದೊಂದಿಗೆ ಛತ್ತೀಸ್‌ಗಢದ ಇಡೀ ಸರ್ಕಾರ ನಿಲ್ಲುತ್ತದೆ. ಸೈನಿಕರ ಧೈರ್ಯ, ತ್ಯಾಗ ಹಾಗೂ ಎದೆಗಾರಿಕೆಯ ಬಲದಿಂದಾಗಿ, ನಮ್ಮ ಒಂದು ಮುಖ್ಯವಾದ ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದು ಅವರು ಮೃತ ಯೋಧ ಹಾಗೂ ಪೊಲೀಸ್ ಸಿಬ್ಬಂದಿಯ ಆತ್ಮಕ್ಕೆ ಶಾಂತಿ ಕೋರಿದ್ದಾರೆ.
2026ಕ್ಕೆ ಭಾರತ ನಕ್ಸಲ್ ಮುಕ್ತವಾಗುತ್ತದೆ..
ಇನ್ನೂ ಈ ಎನ್‌ಕೌಂಟರ್ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ದೇಶವನ್ನು ನಕ್ಸಲ್ ಮುಕ್ತ ಮಾಡಿ, ನಕ್ಸಲ್ ವಿರೋಧಿ ಭಾರತ ಅಭಿಯಾನ ಸಾಕಾರಗೊಳಿಸುವಲ್ಲಿ ನಮ್ಮ ಭದ್ರತಾ ಪಡೆಗಳು ಮತ್ತೊಂದು ಮಹತ್ವದ ಮೈಲುಗಲ್ಲು ಇಟ್ಟಿವೆ. ಇದರ ಮೊದಲ ಭಾಗವಾಗಿ ಛತ್ತೀಸ್‌ಗಢದಲ್ಲಿ ಭದ್ರತಾಪಡೆಗಳು ನಕ್ಸಲರನ್ನು ಹೊಡೆದುರುಳಿಸಿವೆ. ಶರಣಾಗುವಂತೆ ಹಲವಾರು ಸೌಲಭ್ಯಗಳನ್ನು 22 ನಕ್ಸಲರಿಗೆ ಸರ್ಕಾರ ಹೇಳಿತ್ತು. ಆದರೆ ಅದರ ಹೊರತಾಗಿಯೂ ಶರಣಾಗದ ಈ ತೀವ್ರವಾದಿಗಳ ವಿರುದ್ಧ ಪ್ರಧಾನಿ ಮೋದಿ ನೇತೃತ್ವದ ಸರ್ಕಾರವು ಯಾವುದೇ ಸಹಿಷ್ಣುತೆಯ ನಿಲುವನ್ನು ಅನುಸರಿಸುವುದಿಲ್ಲ. ಬದಲಿಗೆ ಇಂಥವರನ್ನು ನಿರ್ದಾಕ್ಷಿಣ್ಯವಾಗಿ ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ. ಇನ್ನೂ ಮುಂಬರುವ 2026 ಮಾರ್ಚ್ ತಿಂಗಳ 31ರೊಳಗೆ ಭಾರತ ದೇಶವು ಸಂಪೂರ್ಣವಾಗಿ ನಕ್ಸಲ್ ಮುಕ್ತವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕಾರ್ಯಾಚರಣೆಯಲ್ಲಿ ಹತರಾದ ಯೋಧ ಹಾಗೂ ಪೊಲೀಸ್ ಸಿಬ್ಬಂದಿಗಳಿಗೆ ಅಮಿತ್ ಶಾ ಶ್ರದ್ದಾಂಜಲಿ ಕೋರಿದ್ದಾರೆ.