Political News: ಜಿಬಿಎ ವ್ಯಾಪ್ತಿಯ ಸರ್ಕಾರಿ ಶಾಲೆ ಮಕ್ಕಳಿಗೆ ಸರಿಯಾಗಿ ಶೂ, ಬ್ಯಾಗ್, ಸಮವಸ್ತ್ರ ಸಿಗಲಿಲ್ಲವೆಂಬ ಆರೋಪವಿದೆ. ಈ ವಿರುದ್ಧ ಬಿಜೆಪಿ ನಾಯಕ ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದ್ದು, ರಾಜ್ಯ ಸರ್ಕಾರದ ವಿರುದ್ಧ ವಾಕ್್ಪರಹಾರ ನಡೆಸಿದ್ದಾರೆ.
ಶೈಕ್ಷಣಿಕ ವರ್ಷ ಆರಂಭವಾಗಿ ನಾಲ್ಕು ತಿಂಗಳು ಕಳೆದರೂ, ಜಿಬಿಎ ವ್ಯಾಪ್ತಿಯ ಸರ್ಕಾರಿ ಶಾಲೆಗಳ ಸುಮಾರು 23 ಸಾವಿರ ಮಕ್ಕಳಿಗೆ ಇಂದಿಗೂ ಶೂ, ಸಾಕ್ಸ್, ಸ್ಕೂಲ್ ಬ್ಯಾಗ್ ಹಾಗೂ ಸ್ವೆಟರ್ಗಳು ದೊರೆತಿಲ್ಲ! ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯ ಮತ್ತು ಸಂಪೂರ್ಣ ನಿರ್ಲಕ್ಷ್ಯದಿಂದಾಗಿ ಬಡ ಹಾಗೂ ಕೂಲಿ ಕಾರ್ಮಿಕರ ಕುಟುಂಬಗಳ ಮಕ್ಕಳು ತಮ್ಮ ಶಿಕ್ಷಣಕ್ಕೆ ಅಗತ್ಯವಾದ ಮೂಲಭೂತ ಸೌಲಭ್ಯಗಳಿಂದಲೇ ವಂಚಿತರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ನಾರಾಯಣಸ್ವಾಮಿ ಕಿಡಿಕಾರಿದ್ದಾರೆ.
ಒಂದೆಡೆ ಗ್ಯಾರಂಟಿ ಯೋಜನೆಗಳ ಪ್ರಚಾರದ ಭರಾಟೆ; ಮತ್ತೊಂದೆಡೆ ಬಡ ಮಕ್ಕಳ ಶಿಕ್ಷಣಕ್ಕೆ ಅಗತ್ಯವಾದ ಸೌಲಭ್ಯಗಳ ವಿತರಣೆಯಲ್ಲೂ ವಿಳಂಬ. ಕಾಗದದ ಪ್ರಕ್ರಿಯೆಗಳು, ಟೆಂಡರ್ ಗೊಂದಲಗಳಲ್ಲೇ ಕಾಲಹರಣ ಮಾಡುತ್ತಾ ಮಕ್ಕಳ ಭವಿಷ್ಯದೊಂದಿಗೆ ಚೆಲ್ಲಾಟವಾಡುವುದು ಸರ್ಕಾರದ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ.
ಎರಡು ಬಾರಿ ಟೆಂಡರ್ ಪ್ರಕ್ರಿಯೆ ವಿಫಲವಾದರೂ ಎಚ್ಚೆತ್ತುಕೊಳ್ಳದ ಆಡಳಿತ ಯಂತ್ರದಿಂದಾಗಿ ಇದೀಗ ಮೂರನೇ ಬಾರಿ ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ. ಶೈಕ್ಷಣಿಕ ವರ್ಷವೇ ಮುಕ್ತಾಯದ ಹಂತಕ್ಕೆ ತಲುಪುತ್ತಿರುವಾಗ ಮಕ್ಕಳಿಗೆ ಸಿಗಬೇಕಾದ ಶೂ, ಸಾಕ್ಸ್, ಬ್ಯಾಗ್ ಮತ್ತು ಸ್ವೆಟರ್ಗಳು ಇನ್ನೂ ದೊರೆಯದಿರುವುದು ಅತ್ಯಂತ ಗಂಭೀರ ವಿಚಾರ. ಮಕ್ಕಳ ಶಿಕ್ಷಣದಂತಹ ಮಹತ್ವದ ವಿಷಯದಲ್ಲಿ ಸರ್ಕಾರದ ಈ ನಿರ್ಲಕ್ಷ್ಯವನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ಛಲವಾದಿ ನಾರಾಯಣ ಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು, ಟೆಂಡರ್ ವಿಳಂಬಕ್ಕೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಮತ್ತಷ್ಟು ವಿಳಂಬ ಮಾಡದೆ, ಅರ್ಹ ಮಕ್ಕಳಿಗೆ ಶೂ, ಸಾಕ್ಸ್, ಸ್ಕೂಲ್ ಬ್ಯಾಗ್ ಹಾಗೂ ಸ್ವೆಟರ್ಗಳನ್ನು ತಕ್ಷಣ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತೇನೆ. ಮಕ್ಕಳ ಭವಿಷ್ಯದ ವಿಚಾರದಲ್ಲಿ ವಿಳಂಬಕ್ಕೆ ಅವಕಾಶವಿಲ್ಲ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.




