International News: ಇಂದು ಡಿಸೆಂಬರ್ 25. ಪ್ರಪಂಚದ ಎಲ್ಲೆಡೆ ಕ್ರಿಶ್ಚಿಯನ್ ಬಾಂಧವರು ಕ್ರಿಸ್‌ಮಸ್ ಆಚರಿಸುತ್ತಿದ್ದಾರೆ. ಕ್ರಿಸ್‌ಮಸ್ ಟ್ರೀ ನೆಟ್ಟು,ಸಿಹಿ, ಕೇಕ್ ತಿಂದು, ಹೊಸ ಬಟ್ಟೆ ಧರಿಸಿ, ಚರ್ಚ್‌ಗೆ ಹೋಗಿ ಪ್ರಾರ್ಥನೆ ಸಲ್ಲಿಸಿ, ಹಬ್ಬ ಆಚರಿಸುತ್ತಿದ್ದಾರೆ. ಆದರೆ ಏಸು ಹುಟ್ಟಿದ ನಾಡಲ್ಲೇ ಕ್ರಿಸ್‌ಮಸ್ ಹಬ್ಬದ ಸಂಭ್ರಮವಿಲ್ಲ. ಅಲ್ಲಿ ಬರೀ ಸೂತಕದ ಛಾಯೆ ಆವರಿಸಿದೆ.
ಪ್ಯಾಲೇಸ್ತಿನ್‌ನ ಬೆತಲ್‌ಹೆಮ್‌ನಲ್ಲಿ ಏಸು ಕ್ರಿಸ್ತ ಹುಟ್ಟಿದ್ದು. ಆದರೆ ಇಂದು ಈ ಸ್ಥಳದಲ್ಲಿ ಜನ, ತಮ್ಮ ಪ್ರಾಣ ಉಳಿಸಿಕೊಳ್ಳಲು ದೇವರ ಮೊರೆ ಹೋಗುತ್ತಿದ್ದಾರೆ. ಇಸ್ರೇಲ್- ಹಮಾಸ್ ಯುದ್ಧ ನಡೆಯುತ್ತಿದ್ದು, ಇವರಿಬ್ಬರ ಯುದ್ಧದ ಮಧ್ಯೆ, ಪ್ಯಾಲೇಸ್ತಿನ್ ನಾಗರಿಕರು ಸಾವನ್ನಪ್ಪುತ್ತಿದ್ದಾರೆ. ಇಲ್ಲಿನ ನಾಗರಿಕರ ಸಾವಿನ ಸಂಖ್ಯೆ 20 ಸಾವಿರ ಗಡಿ ದಾಟಿದೆ. ಇಂದು ಕೂಡ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ 78 ಜನ ಪ್ಯಾಲೇಸ್ತೇನಿಯನ್ನರು ಮೃತಪಟ್ಟಿದ್ದಾರೆ.
ಪ್ರತೀ ವರ್ಷ ಬೆತಲ್‌ಹೆಮ್‌ನಲ್ಲಿ ಕ್ರಿಸ್ಮಸ್ ಹಬ್ಬಕ್ಕೆ, ಜನ ಜಂಗುಳಿ ಇರುತ್ತಿತ್ತು. ಮಾರುಕಟ್ಟೆಗಳು ತುಂಬಿರುತ್ತಿದ್ದವು. ಜನ ಹಬ್ಬಕ್ಕಾಗಿ ಶಾಪಿಂಗ್ ಮಾಡುತ್ತಿದ್ದರು. ಕ್ರಿಸ್‌ಮಸ್ ಟ್ರೀ ನೆಟ್ಟು, ಅದಕ್ಕೆ ಅಲಂಕಾರ ಮಾಡುತ್ತಿದ್ದರು. ಚರ್ಚ್‌ಗೆ ಹೋಗಿ, ಖುಷಿ ಖುಷಿಯಿಂದ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಆದರೆ ಈ ವರ್ಷ, ಇಲ್ಲಿ ಕ್ರಿಸ್‌ಮಸ್ ಟ್ರೀ ಇಲ್ಲ, ತಂಗಲು ಮನೆ ಇದ್ದರೆ ಸಾಕು ಎನ್ನುವಂತಾಗಿದೆ. ಕ್ರಿಸ್‌ಮಸ್ ಕೇಕ್ ದೂರದ ಮಾತು. ತಿನ್ನಲು ಅನ್ನ ಸಿಗಲಿ ಎಂದು ಇಲ್ಲಿನವರು ಪ್ರಾರ್ಥಿಸುತ್ತಿದ್ದಾರೆ. ಜೀವ ಉಳಿಸಿಕೊಳ್ಳಲು ಪಡಬಾರದ ಪಾಡು ಪಡುತ್ತಿದ್ದಾರೆ. ಕ್ರೈಸ್ತನ ನಾಡಿನಲ್ಲಿ ಹಬ್ಬದ ದಿನವೇ ಸೂತಕದ ಛಾಯೆ ಆವರಿಸಿದೆ.
ಇಸ್ರೇಲ್ ವೈಮಾನಿಕ ದಾಳಿಯಲ್ಲಿ 78 ಮಂದಿ ಪ್ಯಾಲೇಸ್ತಿನ್ ನಾಗರಿಕರ ದುರ್ಮರಣ