ಬಾಲಿವುಡ್ನ ಸ್ಟಾರ್ ಬ್ಯೂಟಿ, ಐಶ್ವರ್ಯ ರೈ ಜೊತೆ ರೊಮ್ಯಾನ್ಸ್ ಮಾಡಲು ಅವಕಾಶವೇ ಸಿಕ್ತಿಲ್ಲ ಅಂತ ಕಿಂಗ್ ಖಾನ್ ಶಾರುಖ್ ಹೇಳಿದ್ದ ಹಳೆಯ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ.
ಜೋಶ್, ದೇವದಾಸ್, ಮೊಹಬ್ಬತೆ ನಂತಹ ಬ್ಲಾಕ್ ಬಸ್ಟರ್ ಸಿನಿಮಾಗಳಲ್ಲಿ ಶಾರುಖ್ ಖಾನ್ ಹಾಗೂ ಐಶ್ವರ್ಯ ರೈ ಜೊತೆಯಾಗಿ ನಟಿಸಿದ್ದಾರೆ. ನಂತರ ಈ ಇಬ್ಬರು ಜೋಡಿಯಾಗಿ ಹಲವು ವರ್ಷಗಳು ನಟಿಸಿಲ್ಲ. ಎಸ್ಆರ್ಕೆ ಮತ್ತು ಐಶ್ವರ್ಯ ರೈ ನಟಿಸಿಲ್ಲ ಎನ್ನವುದಕ್ಕಿಂತ, ಇವರಿಬ್ಬರಿಗೆ ಐದು ಸಿನಿಮಾಗಳಲ್ಲಿ ಜೋಡಿಯಾಗಿ ಕಾಣಿಸಿಕೊಳ್ಳುವ ಅವಕಾಶವಿದ್ದರೂ, ಈ ಚಿತ್ರಕ್ಕೆ ನಟಿ ಓಕೆ ಆಗಿದ್ದರೂ ಸಹ ಶಾರುಖ್ ಮಾತ್ರ ಐಶ್ವರ್ಯರನ್ನು ರಿಜೆಕ್ಟ್ ಮಾಡಿಬಿಟ್ಟಿದ್ರಂತೆ! ಈ ಬಗ್ಗೆ ಖುದ್ದು ನಟಿ ಐಶ್ವರ್ಯ ರೈ, ಬಾಲಿವುಡ್ ನಟಿ ಸಿಮಿ ಅಗರ್ವಾಲ್ ಚಾಟ್ ಷೋನಲ್ಲಿ ನೀಡಿರುವ ಸಂದರ್ಶನದ ವಿಡಿಯೋವೊಂದು ಮತ್ತೆ ವೈರಲ್ ಆಗುತ್ತಿದೆ. ಯಸ್, ಶಾರುಖ್ ಕೆಲವು ಸನ್ನಿವೇಶಗಳಲ್ಲಿ ಐಶ್ವರ್ಯ ಜೊತೆ ನಟಿಸೋಕೆ ಒಪ್ಪಲಿಲ್ಲ ಎನ್ನುವುದೇ ವಿಶೇಷವಾಗಿದೆ. ಈ ಬಗ್ಗೆ ನನಗೂ ವಿಚಿತ್ರ ಎನಿಸುತ್ತಿದ್ದು, ಆದ್ರೆ ಕಾರಣ ಗೊತ್ತಿಲ್ಲ ಅಂತ ನಟಿ ಐಶ್ವರ್ಯ ರೈ ಹೇಳಿದ್ದಾರೆ.
ಇನ್ನು ಈ ಜೋಡಿ ಈ ಮೊದಲು ಹೇಳಿದ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದರೂ, ಇಬ್ಬರಿಗೂ ರೊಮ್ಯಾನ್ಸ್ ಮಾಡುವ ಅವಕಾಶ ಸಿಕ್ಕಿರಲಿಲ್ಲ. ಈ ಬೇಸರದ ವಿಚಾರವನ್ನ ಶಾರುಖ್ ಕೆಲ ವರ್ಷಗಳ ಹಿಂದೆ ಒಂದು ಅವಾರ್ಡ್ ಕಾರ್ಯಕ್ರಮದ ವೇದಿಕೆ ಮೇಲೆ ಬಹಿರಂಗವಾಗಿ ಹೇಳಿದ್ದರು. ಇವರಿಬ್ಬರ ಮೊದಲ ‘ಜೋಶ್’ ಸಿನಿಮಾದಲ್ಲಿ ಐಶ್ವರ್ಯ ತಂಗಿಯ ಪಾತ್ರ ಮಾಡಿದ್ರು. ಎರಡನೇ ಸಿನಿಮಾದಲ್ಲಿ ಐಶ್ವರ್ಯ ನನ್ನನ್ನು ಬಿಟ್ಟು ಹೋಗ್ತಾರೆ. ಇನ್ನು ಮೂರನೇ ಸಿನಿಮಾಗೆ ಬರುವುದಾದರೆ ‘ಮೊಹಬ್ಬತೆ’ನಲ್ಲಿ ದೆವ್ವದ ಪಾತ್ರ ಮಾಡಿದ್ರು. ಆದ್ರೆ ಐಶ್ವರ್ಯ ಜೊತೆ ರೋಮ್ಯಾನ್ಸ್ ಮಾಡುವ ಟೈಮ್ ಬರಲಿಲ್ಲ. ಈ ವಿಚಾರವಾಗಿ ನನಗೆ ಬೇಸರ ಇದೆ ಎಂದಿದ್ದ ಶಾರುಖ್ ಐದು ಸಿನಿಮಾಗಳಿಂದ ನಟಿಯನ್ನ ರಿಜೆಕ್ಟ್ ಮಾಡಿದ್ರು ಎಂದರೆ ನಂಬುವುದು ಕಷ್ಟ..!
ಇದೇ ವಿಚಾರವಾಗಿ ಮಾತನಾಡಿದ್ದ ಐಶ್ವರ್ಯ, ಕೆಲವು ಸಿನಿಮಾಗಳಿಂದ ನನ್ನನ್ನು ಹೊರಹಾಕಿದ್ದ ಕಾರಣ ಏನು ಅನ್ನವುದು ನನಗೆ ತಿಳಿದಿಲ್ಲ. ಏನೇ ಆದರೂ, ಯಾರೂ ಏನೇ ಮಾಡಿದರೂ ಅದು ಏನು, ಯಾಕೆ ಅಂತ ನಾನು ಕೇಳಲು ಹೋಗುವುದಿಲ್ಲ. ಹಾಗೆಯೇ ಈ ವಿಚಾರದ ಬಗ್ಗೆಯೂ ಕೂಡ ನಾನು ಅನವಶ್ಯಕ ಚರ್ಚೆ ಮಾಡ್ಲಿಲ್ಲ. ಯಾಕಿರಬಹುದು ಎಂಬ ಕಾರಣವನ್ನು ತಿಳಿದುಕೊಳ್ಳುವ ಉತ್ಸಾಹವು ನನಗಿರಲಿಲ್ಲ ಎಂದಿದ್ದಾರೆ.
ಇನ್ನು ಐಶ್ವರ್ಯಾ ಹಾಗೂ ಶಾರುಖ್ ಇಬ್ಬರೂ ಬಹಳ ಹಿಂದಿನಿಂದಲೂ ಒಳ್ಳೆಯ ಸ್ನೇಹಿತರು. ತಮ್ಮ ಸ್ನೇಹದ ಕುರಿತಾಗಿ ಮಾತನಾಡಿದ್ದ ಶಾರುಖ್, ಈ ಮೊದಲು ನಾವು ಸಿನಿಮಾ ಸೆಟ್‌ನಲ್ಲಿ ಸಿಗುತ್ತಿದ್ದೆವು. ಆದರೀಗ ಮಕ್ಕಳ ಶಾಲೆಯ ಹೊರಗೆ ಭೇಟಿಯಾಗುತ್ತಿದ್ದೇವೆ ಎಂದಿದ್ದರು. ಇವರಿಬ್ಬರ ಮಕ್ಕಳು ಒಂದೇ ಶಾಲೆಯಲ್ಲಿ ಶಿಕ್ಷಣ ಪಡೆದವರು. ಆದರೆ ಕೊನೆಗೆ ಶಾರುಖ್ಗೆ ಅದೇನಾಯಿತೋ ಗೊತ್ತಿಲ್ಲ. ಐಶ್ವರ್ಯಾ ರೈ ‘‘ಚಲ್ತೆ ಚಲ್ತೆ ’’ ಸಿನಿಮಾಗೆ ಮೊದಲು ಆಯ್ಕೆಯಾಗಿದ್ರು. ಆದರೆ ಇವರ ಬದಲಿಗೆ ರಾಣಿ ಮುಖರ್ಜಿ ಅವರನ್ನು ಹಾಕಿಕೊಳ್ಳಲಾಯಿತು. ಐಶ್ವರ್ಯ ರೈ ಸಲ್ಮಾನ್ ಖಾನ್ ಅವರಿಗೆ ಕೈಕೊಟ್ಟಿದ್ದ ಕಾರಣಕ್ಕೆ ಅವರ ಮಾತು ಕೇಳಿ ಶಾರುಖ್ ಹೀಗೆ ಮಾಡಿದ್ರು ಎನ್ನಲಾಗಿತ್ತು. ನಂತರ ವೀರ್ ಝಾ ಚಿತ್ರದಿಂದಲೂ ನಟಿಯನ್ನು ಹೊರ ಹಾಕಲಾಯಿತು. ಹೀಗೆ ಒಂದಾದ ಮೇಲೊಂದರಂತೆ ಐದು ಸಿನಿಮಾಗಳಿಂದ ಐಶ್ವರ್ಯಾ ಅವರನ್ನು ರಿಜೆಕ್ಟ್ ಮಾಡಿದ್ರಂತೆ ಕಿಂಗ್ ಖಾನ್. ಈ ವಿಚಾರವನ್ನು ಖುದ್ದು ನಟಿ ಹೇಳಿದ್ದಾರೆ.
ಇನ್ನು ಈ ಸಂದರ್ಶನದ ಬಳಿಕ ಕರಣ್ ಜೋಹರ್ ಬರ್ತ್ಡೇ ಪಾರ್ಟಿಯಲ್ಲಿ ಶಾರುಖ್ ಖಾನ್ ಈ ವಿಚಾರವಾಗಿ ಐಶ್ವರ್ಯಾ ಅವರೊಂದಿಗೆ ಕ್ಷಮೆ ಕೇಳಿದ್ದಾರೆ ಎನ್ನಲಾಗಿದೆ. ಆದರೆ ಶಾರುಖ್ ಆ ರೀತಿ ಮಾಡಿದ್ದು ಯಾಕೆ ಎನ್ನುವುದು ಮಾತ್ರ ಇನ್ನೂ ತಿಳಿದಿಲ್ಲ.
*ಸ್ವಾತಿ.ಎಸ್.