ಮೈಸೂರು ದಸರಾ ಉದ್ಘಾಟಕರಾಗಿ ಬಾನು ಮುಷ್ತಾಕ್ ಆಯ್ಕೆಯ ನಿರ್ಧಾರಕ್ಕೆ ಬಿಜೆಪಿಯಿಂದ ವಿರೋಧ ವ್ಯಕ್ತವಾಗ್ತಿದೆ. ಬಿಜೆಪಿಗರ ವಿರೋಧಕ್ಕೆ ಈಗ ಕಾಂಗ್ರೆಸ್ ಸೆಡ್ಡು ಹೊಡೆದಿದೆ. ಟೀಕೆ ಟಿಪ್ಪಣಿಗಳಿಗೆಲ್ಲಾ ಸಮರ್ಥನೆ ಕೊಡಲು ಖುದ್ದು ಸಿಎಂ, ಡಿಸಿಎಂ ಕಣಕ್ಕಿಳಿದಿದ್ದಾರೆ. ಚಾಮುಂಡಿ ಸನ್ನಿಧಾನ ಮೈಸೂರಲ್ಲಿ ಸಿಎಂ ಸಿದ್ದರಾಮಯ್ಯ, ಕೃಷ್ಣನ ಊರಾದ ಉಡುಪಿಯಲ್ಲಿ ಡಿಸಿಎಂ ಡಿಕೆಶಿ ತಿರುಗೇಟು ಕೊಟ್ಟಿದ್ದಾರೆ.
ಮೈಸೂರಲ್ಲಿ ಮಾತನಾಡಿದ ಸಿದ್ದರಾಮಯ್ಯ, ನನಗೆ ಹೈಪವರ್ ಕಮಿಟಿಯಲ್ಲಿ ನನಗೆ ಅಧಿಕಾರ ಕೊಟ್ಟಿದ್ದಾರೆ. ನಾನು
ಬೂಕರ್ ಪ್ರಶಸ್ತಿ ಬಂದಿರುವವರಿಗೆ, ದಸರಾ ಉದ್ಘಾಟನೆಗೆ ಅವಕಾಶ ಕೊಟ್ಟಿದ್ದೇವೆ. ಹಿಂದೆಯೂ ಕೂಡ ಮುಸ್ಲಿಂ ಜನಾಂಗದ ಕವಿ ನಿಸಾರ್ ಅಹಮದ್ ಅವರಿಗೆ ಕೊಟ್ಟಿದ್ವಿ. ದಸರಾ ಮಹೋತ್ಸವ ಸಾಂಸ್ಕೃತಿಕವಾಗಿ ಮಾಡುವಂತಹ ಹಬ್ಬ. ಇದೊಂದು ನಾಡಹಬ್ಬ.
ನಾಡಹಬ್ಬದಲ್ಲಿ ಇಂಥವರೇ ಉದ್ಘಾಟನೆ ಮಾಡಬೇಕೆಂದೇನು ಇಲ್ಲ. ನಾಡಹಬ್ಬ ಅಂದ್ರೆ ಎಲ್ಲರಿಗೂ ಹಬ್ಬ. ಹಿಂದೂಗಳು, ಕ್ರಿಶ್ಚಿಯನ್, ಮುಸಲ್ಮಾನರು, ಬೌದ್ಧರು, ಜೈನರಿಗೂ ಇದು ಹಬ್ಬ. ಹಿಂದೆ ಮಹಾರಾಜರ ಕಾಲದಲ್ಲಿ ಹೈದರಾಲಿ, ಟಿಪ್ಪು ಆಚರಣೆ ಮಾಡುತ್ತಿದ್ರಲ್ವಾ. ಮಿರ್ಜಾ ಇಸ್ಮಾಯಿಲ್ ದಿವಾನರಾಗಿ ಇರಲಿಲ್ವಾ. ಆಗಾಗಿ ಇದೊಂದು ಧರ್ಮಾತೀತವಾದ, ಜಾತ್ಯಾತೀತವಾದ ಹಬ್ಬ ದಸರಾ. ಹೀಗಂತ ಸಿಎಂ ಸಿದ್ದರಾಮಯ್ಯ, ತಮ್ಮ ತೀರ್ಮಾನವನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.
ಉಡುಪಿಯ ಶ್ರೀಕೃಷ್ಣ ಮಠದಲ್ಲೂ ಡಿಸಿಎಂ ಡಿಕೆಶಿ, ದಸರಾ ಉದ್ಘಾಟಕರ ಆಯ್ಕೆ ಬಗ್ಗೆ ಟೀಕೆಗಳಿಗೆಲ್ಲಾ ಟಾಂಗ್ ಕೊಟ್ಟಿದ್ದಾರೆ. ಚಾಮುಂಡಿಯನ್ನು ನಾಡದೇವತೆ ಅಂತಾ, ರಾಜವಂಶಸ್ಥರು ಹಾಗೂ ಸರ್ಕಾರ ಕರೆಯುತ್ತಾರೆ. ಎಲ್ಲೂ ಚಾಮುಂಡಿ ಬೆಟ್ಟ ಹಿಂದೂ ಧರ್ಮದ್ದು ಎಂದು ಹೇಳಿಲ್ಲ. ಇದು ಸರ್ಕಾರದ ಆಸ್ತಿ. ಇಲ್ಲಿ ಹಿಂದೂಗಳು ಮಾತ್ರ ಬರಬೇಕು ಎಂದೇನೂ ಇಲ್ಲ. ಎಲ್ಲಾ ಧರ್ಮದವರನ್ನು ಆಶೀರ್ವದಿಸುವ ದೇವತೆ ಚಾಮುಂಡಿ. ದಸರಾ ಹಬ್ಬಕ್ಕೆ ವಿದೇಶಿಗರೂ ಬರುತ್ತಾರೆ, ಬೇರೆ ಧರ್ಮದವರು ಕೂಡ ಬರುತ್ತಾರೆ.
ಮಹಾರಾಜರು ವಿದೇಶಿಯರನ್ನು ಆಹ್ವಾನಿಸುತ್ತಿದ್ರು. ಅವರೆಲ್ಲ ಯಾವ ಸಮುದಾಯಕ್ಕೆ ಸೇರಿದವರು?. ಬಾನು ಮುಷ್ತಾಕ್ ಬೆಟ್ಟ ಹತ್ತಬಾರದು ಅಂದ್ರೆ ಹೇಗೆ?. ನೀರು, ಸೂರ್ಯ, ದೇವರಿಗೆ ಧರ್ಮವಿಲ್ಲ. ಕ್ರಿಶ್ಚಿಯನ್ನರ ಚರ್ಚ್, ಮುಸ್ಲಿಮರ ಮಸೀದಿಗೆ ನಮ್ಮನ್ನು ಬಿಡಲ್ವೇ?. ಗೊಮ್ಮಟಗಿರಿಗೆ ನಮ್ಮನ್ನು ಬಿಡುವುದಿಲ್ವೇ? ಅಂತಾ, ಕೃಷ್ಣಮಠದಲ್ಲೂ ಬಾನು ಮುಷ್ತಾಕ್ ಆಯ್ಕೆಯನ್ನು ಡಿಕೆಶಿ ಸಮರ್ಥಿಸಿಕೊಂಡಿದ್ದಾರೆ.