Mandya News: ಮಂಡ್ಯ ಜಿಲ್ಲೆಯಲ್ಲಿ ಆಯೋಜಿಸಿದ್ದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಪಾಲ್ಗೊಂಡಿದ್ದರು.
ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕಳೆದ ಚುನಾವಣೆಯಲ್ಲಿ ರಾಜ್ಯದ ಜನ ನಮ್ಮ ನಿರೀಕ್ಷೆಯನ್ನೂ ಮೀರಿ ಆಶೀರ್ವಾದ ಮಾಡಿದ್ದಾರೆ. 136 ಸ್ಥಾನಗಳಲ್ಲಿ ನಮ್ಮನ್ನು ಗೆಲ್ಲಿಸಿದ್ದಾರೆ. ಕರ್ನಾಟಕದ ಜನ ಪ್ರಭುದ್ಧವಾದ ತೀರ್ಮಾನ ಮಾಡಿದ್ದಾರೆ. ಮಂಡ್ಯ ಜನರಿಗೆ ಕೂಡ ವಿಪಕ್ಷಗಳು ಸುಳ್ಳು ಭರವಸೆ ನೀಡಿದ್ದರೂ, ದಾರಿ ತಪ್ಪಿಸುವ ಕೆಲಸ ಮಾಡಿದ್ದರೂ ನಮ್ಮನ್ನು ಬೆಂಬಲಿಸಿ ಸರಿಯಾದ ತೀರ್ಮಾನವನ್ನೇ ಮಾಡಿದ್ದಾರೆ ಎಂದರು.
ಚುನಾವಣಾ ಪೂರ್ವದಲ್ಲಿ ನೀಡಿದ್ದ ಅನೇಕ ಭರವಸೆಗಳ ಪೈಕಿ ಪ್ರಮುಖವಾಗಿ ಐದು ಗ್ಯಾರಂಟಿಗಳನ್ನು ಅಧಿಕಾರಕ್ಕೆ ಬಂದ ಕೂಡಲೇ ಜಾರಿಗೆ ತಂದೆವು. ಪ್ರಮಾಣವಚನ ಸ್ವೀಕಾರ ಮಾಡಿದ ದಿನವೇ 5 ಗ್ಯಾರಂಟಿಗಳ ಜಾರಿಗೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಿದೆವು. ರಾಜ್ಯದ 3.50 ಕೋಟಿ ಮಹಿಳೆಯರು ಸರ್ಕಾರಿ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದಾದ ಶಕ್ತಿ ಯೋಜನೆಗೆ ಚಾಲನೆ ನೀಡಿದೆವು. ನಿತ್ಯ 50 ರಿಂದ 60 ಲಕ್ಷ ಮಹಿಳೆಯರು ಈ ಯೋಜನೆಯ ಸೌಲಭ್ಯ ಪಡೆಯುತ್ತಿದ್ದಾರೆ. ಕೃಷಿ ಇಲಾಖೆಗೆ 600 ಕೋಟಿ ರೂ.ಗಳನ್ನು ಬೆಳೆ ವಿಮೆಗೆ ನೀಡಲಾಗಿದ್ದು, ಇನ್ನೂ 800 ಕೋಟಿ ರೂ.ಗಳನ್ನು ನೀಡಲಾಗುವುದು. 33.25 ಲಕ್ಷ ರೈತರಿಗೆ 631 ಕೋಟಿ ರೂ.ಗಳನ್ನು ತಲಾ 2,000 ರೂ.ಗಳ ಬೆಳೆ ಪರಿಹಾರಕ್ಕೆ ನೀಡಿದ್ದೇವೆ ಎಂದು ಸಿಎಂ ಹೇಳಿದರು.
ಬಿಜೆಪಿ ಮೇಲೆ ಜೆಡಿಎಸ್ ಅವರಿಗೆ ಬಹಳ ಪ್ರೀತಿ ಉಂಟಾಗಿದೆ. ನಮ್ಮ ಗ್ಯಾರಂಟಿಗಳ ಬಗ್ಗೆ ಟೀಕಿಸುತ್ತಾರೆ. ಜನರಿಗೆ ಸತ್ಯ ತಿಳಿಸದೆ ರೈತರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ನಾವು ನಿಮ್ಮ ಪರ ಇದ್ದೇವೆ. ಮಂಡ್ಯ ಜಿಲ್ಲೆಯನ್ನು ಸಂಪೂರ್ಣ ಅಭಿವೃದ್ಧಿ ಮಾಡಲಾಗುವುದು. 500 ಕೋಟಿ ರೂ.ಗಳನ್ನು ಜಿಲ್ಲೆಗೆ ನೀಡಲಾಗುತ್ತಿದೆ. ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ನೀರಾವರಿಗೆ ಹೆಚ್ಚಿನ ಒತ್ತು ನೀಡಲಾಗಿತ್ತು. ಇಲ್ಲಿ ವ್ಯವಸಾಯದ ಮೇಲೆ ಅವಲಂಬಿತ ಜನ ಹೆಚ್ಚಿದ್ದು, ಅಭಿವೃದ್ಧಿ ಮಾಡಲು ಪಣ ತೊಟ್ಟಿದ್ದೇವೆ. ಯಾರೂ ಏನೇ ಹೇಳಿದರೂ ಕೆಲಸ ಮಾಡಿದವರನ್ನು ಬೆಂಬಲಿಸಬೇಕು. ಮಂಡ್ಯದಲ್ಲಿ 4.57 ಕೋಟಿ ಮಹಿಳೆಯರು ಹಾಗೂ ಇಡೀ ರಾಜ್ಯದಲ್ಲಿ 170 ಕೋಟಿ ಉಚಿತವಾಗಿ ಪ್ರಯಾಣಿಸಿದ್ದಾರೆ. ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದ ನಂತರ ಜನರನ್ನು ಸಂಪೂರ್ಣವಾಗಿ ಹಿಂದಿನ ಬಿಜೆಪಿ ಸರ್ಕಾರ ಮರೆತಿತ್ತು. ಆದರೆ ನಾವು ನುಡಿದಂತೆ ನಡೆದಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಬಿಜೆಪಿಯವರು ರೈತಪರ, ಬಡವರಪರ ಎಂದು ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದರೂ, ಯಾವುದೇ ಭರವಸೆಗಳನ್ನು ಈಡೇರಿಸಲಿಲ್ಲ. ಅವರು ಸ್ವಂತ ಶಕ್ತಿಯ ಮೇಲೆ ಅಧಿಕಾರಕ್ಕೆ ಬರಲಿಲ್ಲ. ಕುಮಾರಸ್ವಾಮಿಯವರು ಸಿಎಂ ಆಗಿದ್ದಾಗ, ಬಿಜೆಪಿ ಪಕ್ಷದ ಯಡಿಯೂರಪ್ಪನವರು 17 ಶಾಸಕರನ್ನು ಕೊಂಡು ಆಪರೇಷನ್ ಕಮಲ ಮಾಡಿ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದರು. ಮಾಜಿ ಪ್ರಧಾನಿ ದೇವೇಗೌಡ ಅವರು ಕೋಮುವಾದಿಗಳೊಂದಿಗೆ ಸೇರುವುದಿಲ್ಲ ಎಂದಿದ್ದವರು, ಈಗ ಅವರನ್ನೇ ಬೆಂಬಲಿಸುತ್ತಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್‌ನ ಅಪವಿತ್ರ ಮೈತ್ರಿಯನ್ನು ತಿರಸ್ಕರಿಸಿ, ನಮ್ಮನ್ನು ಬೆಂಬಲಿಸಬೇಕು ಎಂದು ಸಿಎಂ ಮಂಡ್ಯ ಜನತೆಯಲ್ಲಿ ಮನವಿ ಮಾಡಿದ್ದಾರೆ.
ಅನ್ನಭಾಗ್ಯ ಯೋಜನೆಯಡಿ 5 ಕೆಜಿಯ ಜೊತೆಗೆ 5 ಕೆಜಿ ಅಕ್ಕಿ ನೀಡಿ, ರಾಜ್ಯವನ್ನು ಹಸಿವು ಮುಕ್ತ ಮಾಡುವ ಸರ್ಕಾರದ ಉದ್ದೇಶಕ್ಕೆ ಕೇಂದ್ರ ಬಿಜೆಪಿ ಸರ್ಕಾರ ಸಹಕರಿಸಲಿಲ್ಲ. ಆದ್ದರಿಂದ 5 ಕೆಜಿ ಬದಲಿಗೆ 170 ರೂ.ಗಳನ್ನು ನೀಡುತ್ತಿದ್ದೇವೆ. ಜಿಲ್ಲೆಯಲ್ಲಿ 4,38,705 ಫಲಾನುಭವಿಗಳಿಗೆ 166 ಕೋಟಿ ರೂ.ಗಳ ಅನ್ನಭಾಗ್ಯದ ಆರ್ಥಿಕ ನೆರವು ನೀಡಲಾಗಿದೆ. ಬಡವರ ಬೆಂಬಲಕ್ಕೆ ನಿಲ್ಲದ ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಈ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಬೇಕಲ್ಲವೇ? ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿ ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಇಲ್ಲಿನ ಜನರಿಗೆ 4,64,303 ಜನ ನೋಂದಾಯಿಸಿಕೊಂಡಿದ್ದು, 104 ಕೋಟಿ ರೂ. ನೀಡಲಾಗಿದೆ. ಗೃಹಲಕ್ಷ್ಮಿ ಯೋಜನೆಯಡಿ 4,49,197 ಮಹಿಳೆಯರು ನೊಂದಾಯಿಸಿಕೊಂಡಿದ್ದು, 512 ಕೋಟಿ ರೂ. ಗಳನ್ನು ನೀಡಲಾಗಿದೆ. ಯುವನಿಧಿ 3,148 ಅರ್ಜಿಗಳು ನೋಂದಾವಣೆಯಾಗಿದ್ದು, 22 ಲಕ್ಷ ರೂ.ಗಳನ್ನು ವರ್ಗಾಯಿಸಲಾಗಿದೆ. ಬಡವರು, ಮಹಿಳೆಯರು, ದಲಿತರು, ರೈತರು ಸೇರಿದಂತೆ ಎಲ್ಲ ಜಾತಿಧರ್ಮದವರಿಗೂ ಆರ್ಥಿಕವಾಗಿ ಬಲ ತುಂಬಲಾಗುತ್ತಿದೆ. ರಾಜ್ಯದಲ್ಲಿ 4.60 ಕೋಟಿ ಜನರಿಗೆ ಗ್ಯಾರಂಟಿ ಯೋಜನೆಗಳು ತಲುಪುತ್ತಿದೆ. ಈ ವರ್ಷ 36 ಸಾವಿರ ಕೋಟಿ, ಮುಂದಿನ ವರ್ಷ 52,009 ಕೋಟಿ ರೂ.ಗಳನ್ನು ಬಜೆಟ್‌ನಲ್ಲಿ ನಿಗದಿಪಡಿಸಲಾಗಿದೆ. ಇದರ ಜೊತೆಗೆ ಮಂಡ್ಯ ಜಿಲ್ಲೆಯ ಸಮಗ್ರ ಅಭಿವೃದ್ಧಿಗೂ ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಆಂಧ್ರಪ್ರದೇಶ ಲೋಕಸಭೆ ಚುನಾವಣೆಗೆ ಬಿಜೆಪಿ, ಟಿಡಿಪಿ,ಜೆಎಸ್‌ಪಿ ಮೈತ್ರಿ ಸ್ಪರ್ಧೆ
ಜಪಾನ್‌ನಲ್ಲಿ ಅಮೀರ್ ಖಾನ್ ಮಗ ಜುನೈದ್ ಖಾನ್ ಜೊತೆ ಸಾಯಿ ಪಲ್ಲವಿ ಪಾರ್ಟಿ..