ಪ್ರಧಾನಿ ಮೋದಿಗೆ ಸಾಲು ಸಾಲು ಪ್ರಶ್ನೆ ಕೇಳಿ ಕುಟುಕಿದ ಸಿಎಂ ಸಿದ್ದರಾಮಯ್ಯ

Political News: ಚುನಾವಣಾ ದಿನಾಂಕ ಘೋಷಣೆಯಾಗುತ್ತಲೇ, ಪ್ರಧಾನಿ ಮೋದಿ ದಕ್ಷಿಣ ದಂಡಯಾತ್ರೆ ಕೈಗೊಂಡಿದ್ದಾರೆ. ಆಂಧ್ರ ಕರ್ನಾಟಕದಲ್ಲಿ ಪ್ರವಾಸ ನಡೆಸಿರುವ ಮೋದಿ ಇಂದು, ಶಿವಮೊಗ್ಗಕ್ಕೆ ಬಂದಿದ್ದಾರೆ. ಈ ವೇಳೆ ಸಿಎಂ ಸಿದ್ದರಾಮಯ್ಯ, ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಬಿ.ವೈ.ರಾಘವೇಂದ್ರಗೆ ಟಿಕೇಟ್ ನೀಡುವ ಬಗ್ಗೆ ವ್ಯಂಗ್ಯವಾಡಿದ್ದಾರೆ. ಅಲ್ಲದೇ ಪ್ರಧಾನಿ ಮೋದಿಗೆ ಸಾಲು ಸಾಲು ಪ್ರಶ್ನೆ ಕೇಳಿದ್ದಾರೆ. ಅವರು ಕೇಳಿದ ಪ್ರಶ್ನೆ ಹೀಗಿದೆ.

ರೈತ ಚಳವಳಿಗಳ ತವರು ಶಿವಮೊಗ್ಗದಲ್ಲಿ ನಿಂತು ಗೋಲಿಬಾರ್ ಮಾಡಿಸಿ ರೈತರ ಸಾವಿಗೆ ಕಾರಣರಾದ ಬಿ.ಎಸ್ ಯಡಿಯೂರಪ್ಪ ಅವರ ಮಗನಿಗೆ ಮತ ನೀಡಿ ಎನ್ನಲು ನಿಮ್ಮ‌ಆತ್ಮಸಾಕ್ಷಿ ಒಪ್ಪುವುದೇ ನರೇಂದ್ರ ಮೋದಿ ಅವರೇ?

ಕಳೆದ ಚುನಾವಣೆಯಲ್ಲಿ ಕೂಡ ಬಿಜೆಪಿ ತಾನು ಅಧಿಕಾರಕ್ಕೆ ಬಂದರೆ ಮೊದಲ‌ ಸಂಪುಟ ಸಭೆಯಲ್ಲೇ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿರುವ ರೂ. 1 ಲಕ್ಷದ ವರೆಗಿನ ರೈತರ ಸಾಲ ಮನ್ನಾ ಮಾಡುವ ಭರವಸೆ ನೀಡಿ, ಅಧಿಕಾರ ಸಿಕ್ಕ ನಂತರ ಕೊಟ್ಟ ಮಾತಿನಂತೆ ನಡೆಯಲೇ ಇಲ್ಲ. ಇದು ರೈತರಿಗೆ ಮಾಡಿದ ದ್ರೋಹ ಅಲ್ಲವೇ ನರೇಂದ್ರಮೋದಿ ಅವರೇ?

ರಾಜ್ಯಕ್ಕೆ ಬರಪರಿಹಾರ ಬಿಡುಗಡೆ ಮಾಡುವಂತೆ ಕೋರಿ ಕೇಂದ್ರ ಬಿಜೆಪಿ ಸರ್ಕಾರಕ್ಕೆ ಮೇಲಿಂದ ಮೇಲೆ ಪತ್ರ ಬರೆಯಲಾಗಿದೆ, ನಮ್ಮ ಸಚಿವರು ಕೇಂದ್ರ ಕೃಷಿ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ, ನಾನೇ ಖುದ್ದಾಗಿ ತಮ್ಮನ್ನು ಹಾಗೂ ಗೃಹ ಸಚಿವರಾದ ಅಮಿತ್ ಶಾ ಅವರನ್ನು ಭೇಟಿ ಮಾಡಿ ಒತ್ತಾಯಿಸಿದ್ದೇನೆ, ಆದರೂ ನಯಾಪೈಸೆ ರಾಜ್ಯಕ್ಕೆ ಬಂದಿಲ್ಲ. ಇದು ರಾಜ್ಯದ ರೈತರಿಗೆ ಮಾಡಿದ ಅನ್ಯಾಯವಲ್ಲವೇ ನರೇಂದ್ರಮೋದಿ ಅವರೇ?

ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಬಿಜೆಪಿ ಸರ್ಕಾರವೇ ಬಜೆಟ್‌ನಲ್ಲಿ ಘೋಷಿಸಿದ ರೂ.5,300 ಕೋಟಿಯಲ್ಲಿ ನಯಾಪೈಸೆ ಅನುದಾನ ಬಂದಿಲ್ಲ, ಮಹದಾಯಿ – ಮೇಕೆದಾಟು ಯೋಜನೆಗಳು ಅನುಮತಿ ಸಿಗದೆ ನೆನೆಗುದಿಗೆ ಬಿದ್ದಿವೆ. ಕಾವೇರಿ ನೀರು ಹಂಚಿಕೆಯಲ್ಲಿ‌ ಅನ್ಯಾಯವಾದರೂ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸದೆ ಮೋಸ ಮಾಡಿದೆ. ಹೀಗೆ ರಾಜ್ಯಕ್ಕೆ ಸಾಲು ಸಾಲು ಅನ್ಯಾಯ ಮಾಡಿದವರು ನೀವೇ ಅಲ್ಲವೇ ನರೇಂದ್ರಮೋದಿ ಅವರೇ?

ಭೀಕರ ಬರದಿಂದ ಸಂಕಷ್ಟದಲ್ಲಿರುವ ಜನ ಉದ್ಯೋಗ ಅರಸಿ ಗುಳೆ ಹೋಗುವುದನ್ನು ತಪ್ಪಿಸಲು ನರೇಗಾ ಕೆಲಸವನ್ನು 100 ರಿಂದ 150 ದಿನಗಳಿಗೆ ಹೆಚ್ಚಿಸುವಂತೆ ಮನವಿ ಮಾಡಿದರೂ ಈ ವರೆಗೆ ಕೇಂದ್ರದಿಂದ ಯಾವುದೇ ಸ್ಪಂದನೆ ಬಂದಿಲ್ಲ. ಕನ್ನಡಿಗರ ಕಷ್ಟಕ್ಕೆ ನೆರವಾಗಬೇಕಾದವರು ನೀವೇ ಅಲ್ಲವೇ ನರೇಂದ್ರಮೋದಿ ಅವರೇ?

ದೇಶದ ಕೃಷಿ ವಲಯವನ್ನು ಬಂಡವಾಳಶಾಹಿಗಳ ಕೈಗಿಡಲು ಕೃಷಿಗೆ ಮಾರಕವಾದ ಮೂರು ಕಾಯ್ದೆಗಳನ್ನು ಜಾರಿಗೆ ತಂದು, ಪ್ರತಿಭಟನೆಯಲ್ಲಿ ನಿರತರಾಗಿದ್ದ 750ಕ್ಕೂ ಅಧಿಕ ಅನ್ನದಾತರ ಸಾವಿಗೆ ಕಾರಣರಾದವರು ನೀವಲ್ಲವೇ ನರೇಂದ್ರ ಮೋದಿ ಅವರೇ? ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.

ಮತ್ತೆ ರಷ್ಯಾ ಅಧ್ಯಕ್ಷರಾಗಿ ಆಯ್ಕೆಯಾದ ಪುಟಿನ್: ಇನ್ನು 6 ವರ್ಷ ವ್ಲಾದಿಮೀರ್ ಪಟ್ಟ ಗಟ್ಟಿ..

ಖ್ಯಾತ ಗಾಯಕಿ ಮಂಗ್ಲಿ ಕಾರು ಅಪಘಾತ

ಟ್ರೋಫಿ ಗೆದ್ದ WPL ಚಾಂಪಿಯನ್ಸ್‌ಗೆ ವಿಶ್ ಮಾಡಿದ ರಾಜಕೀಯ ಗಣ್ಯರು..

About The Author