ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಕನ್ನಡಿಗ ರಾಹುಲ್ ದ್ರಾವಿಡ್ ಅವರ ಅವಧಿ ಮುಕ್ತಾಯವಾಗಿದ್ದು, ಬಿಸಿಸಿಐ ಗೌತಮ್ ಗಂಭೀರ್ ಅವರನ್ನು ನೂತನ ಮುಖ್ಯ ಕೋಚ್ ಆಗಿ ನೇಮಕ ಮಾಡಿದೆ. ಈ ವಿಚಾರವನ್ನು ಸ್ವತಃ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಜು.09ರ ಸಂಜೆ ಸಾಮಾಜಿಕ ಜಾಲತಾಣವಾದ x ಮೂಲಕ ಖಚಿತಪಡಿಸಿದ್ದರು. ಹೊಸ ಸವಾಲು ಹಾಗೂ ಗುರಿಯನ್ನಿಟ್ಟುಕೊಂಡು ಪ್ರತಿಷ್ಠಿತ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ನೇಮಕವಾಗಿರುವ ಗೌತಮ್ ಗಂಭೀರ್ ತಮ್ಮ ತರಬೇತಿ ಸಿಬ್ಬಂದಿ ಬಗ್ಗೆ ಬಿಸಿಸಿಐ ಬಳಿ ವಿಶೇಷ ಬೇಡಿಕೆ ಇಟ್ಟಿದ್ದಾರೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಕೋಚ್ ಆಗಿ ಇವರೇ ಬೇಕು ಎಂದು ಗಂಭೀರ್ ಕೇಳಿದ್ದಾರೆ ಎಂದು ವರದಿಯಾಗಿದೆ. ಬೌಲಿಂಗ್ ಕೋಚ್ ಆಗಿ ಈ ಕನ್ನಡಿಗನೇ ಬೇಕು ಎನ್ನುತ್ತಿದ್ದಾರೆ ಗಂಭೀರ್.
ವರದಿಗಳ ಪ್ರಕಾರ ಬ್ಯಾಟಿಂಗ್ ಕೋಚ್ ಆಗಿ ಅಭಿಷೇಕ್ ನಾಯರ್ ಮತ್ತು ಬೌಲಿಂಗ್ ಕೋಚ್ ಆಗಿ ವಿನಯ್ ಕುಮಾರ್ ಬೇಕು ಎಂದು ಗಂಭೀರ್ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಬಿಸಿಸಿಐ ಶೀಘ್ರದಲ್ಲೇ ಕೋಚಿಂಗ್ ಸಹಾಯಕ ಸಿಬ್ಬಂದಿ ನೇಮಕ ಮಾಡಲು ಅರ್ಜಿ ಆಹ್ವಾನಿಸಲಿದೆ. ದಾವಣಗೆರೆ ಎಕ್ಸ್‌ಪ್ರೆಸ್ ಎಂದೇ ಪ್ರಸಿದ್ಧವಾಗಿರುವ ಭಾರತ ತಂಡದ ಮಾಜಿ ಆಟಗಾರ ಬೌಲಿಂಗ್ ಕೋಚ್ ಆಗುತ್ತಾರೆ ಎನ್ನಲಾಗಿದೆ. 40 ವರ್ಷದ ವಿನಯ್ ಕುಮಾರ್ ಅವರಿಗೆ ಅಂತಾರಾಷ್ಟ್ರೀಯ ಮತ್ತು ದೇಶೀಯ ಟೂರ್ನಿಯಲ್ಲಿ ಆಡಿರುವ ಅಪಾರ ಅನುಭವ ಇದೆ. ಮುಖ್ಯವಾಗಿ ಕೆಕೆಆರ್ ತಂಡದಲ್ಲಿ ಗಂಭೀರ್ ನಾಯಕರಾಗಿದ್ದ ಅವಧಿಯಲ್ಲಿ ವಿನಯ್ ಕುಮಾರ್ ಮುಖ್ಯ ಬೌಲರ್ ಆಗಿದ್ದರು. ಹೀಗಾಗಿ ವಿನಯ್ ಕುಮಾರ್ ಬಗ್ಗೆ ಗಂಭೀರ್ ಅವರಿಗೆ ಚೆನ್ನಾಗಿ ಗೊತ್ತಿದೆ.
ಭಾರತ ತಂಡಕ್ಕಾಗಿ ವಿನಯ್ ಕುಮಾರ್ 1 ಟೆಸ್ಟ್, 31 ಏಕದಿನ ಮತ್ತು 10 ಟಿ20 ಪಂದ್ಯಗಳನ್ನು ಆಡಿದ್ದಾರೆ. ಅವರ ನಾಯಕತ್ವದಲ್ಲಿ ಕರ್ನಾಟಕ ಎರಡು ಬಾರಿ ರಣಜಿ ಟ್ರೋಫಿ ಗೆದ್ದಿದೆ. 139 ಪ್ರಥಮ ದರ್ಜೆ ಪಂದ್ಯಗಳನ್ನಾಡಿರುವ ಅವರು 504 ವಿಕೆಟ್ ಪಡೆದಿದ್ದಾರೆ. ಇದೀಗ ವಿನಯ್ ಕುಮಾರ್ ಅವರು ಭಾರತದ ಮುಖ್ಯ ಕೋಚ್ ಗಂಭೀರ್ ಅವರ ಗರಡಿ ಸೇರಿ ಟೀಂ ಇಂಡಿಯಾ ಯಶಸ್ಸಿಗೆ ಶ್ರಮಿಸಲಿದ್ದಾರಾ ಎನ್ನುವುದು ಕಾದುನೋಡಬೇಕಿದೆ.