ಒಂದು ಹೆಣ್ಣಿನ ಮದುವೆ ಆಗಬೇಕು ಅಂದ್ರೆ, ಅವಳ ಅಪ್ಪ ಅಮ್ಮ ಅದೆಷ್ಠು ಕಷ್ಟ ಪಟ್ಟಿರ್ತಾರೆ ಅನ್ನೋದು ಅನುಭವಿಸಿದವರಿಗೆ ಗೊತ್ತು. ಹಾಗಂತ ಗಂಡು ಮಕ್ಕಳ ಅಪ್ಪ ಅಮ್ಮ ಅವರ ಮದುವೆಗೆ ಕಷ್ಟ ಪಡುವುದಿಲ್ಲ ಎಂದಲ್ಲ. ಆದ್ರೆ ಹೆಣ್ಣು ಮಕ್ಕಳ ತಂದೆ ತಾಯಿಗೆ ಅದಕ್ಕಿಂತಲೂ ಹೆಚ್ಚು ಕಷ್ಟವಿರುತ್ತದೆ. ಹಾಗೆ ಕಷ್ಟ ಪಟ್ಟು ಮದುವೆ ಮಾಡಿಕೊಟ್ಟಾಗ, ಆಕೆ ಗಂಡನ ಮನೆಯಲ್ಲಿ ಸುಖವಾಗಿದ್ದರೆ, ಆ ತಂದೆ ತಾಯಿಗೆ ಅದಕ್ಕಿಂತ ಸಂತೋಷ ಮತ್ತೊಂದಿಲ್ಲ. ಆದ್ರೆ ಲಕ್ಷ ಲಕ್ಷ ವರದಕ್ಷಿಣೆ ಕೊಟ್ಟು, ಅದ್ಧೂರಿಯಾಗಿ ಮದುವೆ ಮಾಡಿ, ಅಷ್ಟು ವರ್ಷ ಹೆತ್ತು, ಹೊತ್ತು, ಸಾಕಿ ಬೆಳೆಸಿದ ಮಗಳನ್ನ ಕೊಟ್ಟರೂ, ಆಕೆ ಹಿಂಸೆ ಅನುಭವಿಸುತ್ತಿದ್ದರೆ, ಅದಕ್ಕಿಂತ ದುಃಖ ಮತ್ತೊಂದಿಲ್ಲ.
ಉತ್ತರಪ್ರದೇಶದ ಶಹಜಹಾನ್ ಪುರದಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ. ಓರ್ವ ಯುವತಿಯನ್ನು ಸತ್ಯಂ ಎಂಬ ಯುವಕನೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಮದುವೆ ಮಾಡಿಕೊಡುವಾಗ, ನಮಗೆ 10 ಲಕ್ಷ ವರದಕ್ಷಿಣೆ ಬೇಕು. ನೀವೇ ಅದ್ಧೂರಿಯಾಗಿ ಮದುವೆ ಮಾಡಿಕೊಡಬೇಕು ಅಂತಾ ಹುಡುಗನ ಕಡೆಯವರು ಬೇಡಿಕೆ ಇಟ್ಟಿದ್ದರು. ಅದರಂತೆ, ಹೆಣ್ಣಿನ ತಂದೆ ಹತ್ತು ಲಕ್ಷ ಹೊಂದಿಸಿ, ವರದಕ್ಷಿಣೆ ಕೊಟ್ಟಿದ್ದಲ್ಲದೇ, ತಮ್ಮ ಮನೆಯಲ್ಲಿ ಅದ್ಧೂರಿಯಾಗಿ ಮದುವೆ ಮಾಡಿ ಕೊಟ್ಟಿದ್ದಾರೆ.
ಆದ್ರೆ ಮದುವೆ ಮಾಡಿಕೊಂಡು, ಪತಿ ಪತ್ನಿ ಹನಿಮೂನ್ ಗೆ ಹೋಗಿ ಬಂದ ಬಳಿಕ, ಪತಿ ನಪುಂಸಕ ಎಂಬ ಕರಾಳ ಸತ್ಯ ಬೆಳಕಿಗೆ ಬಂದಿದೆ. ಮನೆಗೆ ಬಂದ ಬಳಿಕ ನೀವು ನನಗೆ ಮೋಸ ಮಾಡಿದ್ರಿ, 10 ಲಕ್ಷ ವರದಕ್ಷಿಣೆ ಪಡೆದು ಕೂಡ, ಸುಳ್ಳು ಹೇಳಿ ಈ ನಪುಂಸಕನೊಂದಿಗೆ ನನ್ನ ಮದುವೆ ಮಾಡಿದ್ರಿ ಎಂದು ಪತ್ನಿ ಜಗಳವಾಡಿದ್ದಾಳೆ.
ಆಗ ಪತಿಯ ಮನೆಯವರು ಆಕೆಯ ಬಾಯಿ ಮುಚ್ಚಿಸಲು ಆಕೆಗೆ ಹೊಡೆದು ಬಡೆದು ಹಿಂಸೆ ನೀಡಿದ್ದಾರೆಂದು ಹೆಣ್ಣಿನ ಮನೆಯವರು ಆರೋಪಿಸಿದ್ದಾರೆ. ಅಲ್ಲದೇ, ನೀವು ಥಳಿಸಿದ್ದನ್ನು ನಾನು ನಮ್ಮ ಮನೆಯವರಿಗೆ ಹೇಳುತ್ತೇನೆ. ಎಲ್ಲ ಸತ್ಯ ಬಯಲಿಗೆಳೆಯುತ್ತೇನೆಂದು ಯುವತಿ ಹೇಳಿದಾಗ, ಕೊಲೆ ಬೆದರಿಕೆ ಹಾಕಲಾಗಿತ್ತಂತೆ. ಆದ್ದರಿಂದ ಮದುವೆಯಾಗಿ ಕೆಲ ದಿನಗಳ ಕಾಲ ಯುವತಿ ಸುಮ್ಮನಿದ್ದು, ತವರು ಮನೆಗೆ ಬಂದಾಗ, ಈ ವಿಷಯ ತಿಳಿಸಿದ್ದಾಳೆ. ಈ ಬಗ್ಗೆ ಸ್ಥಳೀಯ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಗಂಡನ ಮನೆಯಲ್ಲಿರುವ ಎಂಟು ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ಬಗ್ಗೆ ತನಿಖೆ ಮುಂದುವರೆದಿದೆ.