ಬೆಂಗಳೂರು: ವಿಶ್ವಾಸಮತ ಯಾಚನೆಗೆ ಅಡ್ಡಿಯಾಗಿ ದೊಡ್ಡದೊಂದು ಗೊಂದಲ ಸೃಷ್ಟಿಸಿರುವ ಅತೃಪ್ತ ಶಾಸಕರ ವಿಪ್ ಉಲ್ಲಂಘನೆ ವಿಚಾರವಾಗಿ ಕಾಂಗ್ರೆಸ್ ಸುಪ್ರೀಂಕೋರ್ಟ್ ಮೊರೆ ಹೋಗಿದೆ.
15 ಮಂದಿ ಅತೃಪ್ತ ಶಾಸಕರ ವಿಪ್ ಉಲ್ಲಂಘನೆ ವಿಚಾರವಾಗಿ ರಾಜಕೀಯ ನಾಯಕರು ತಲೆ ಕೆಡಿಸಿಕೊಂಡಿದ್ದಾರೆ. ನಿನ್ನೆಯ ವಿಶ್ವಾಸಮತ ಯಾಚನೆಯಿಂದ ತಪ್ಪಿಸಿಕೊಂಡಿದ್ದ ಸಿಎಂ ಇದೇ ವಿಚಾರವನ್ನು ಮುಂದಿಟ್ಟುಕೊಂಡು ಬೀಸೋ ದೊಣ್ಣೆಯಿಂದ ಪಾರಾಗಿದ್ದರು. ಆದರೆ ಇಂದೂ ಸಹ ಸದನದಲ್ಲಿ ಇದೇ ವಿಚಾರ ಸಾಕಷ್ಟು ಸಮಯ ಹರಣಕ್ಕೆ ಕಾರಣವಾಯ್ತು. ಸುಪ್ರೀಂಕೋರ್ಟ್ ನೀಡಿರುವ ಮೊನ್ನೆಯ ಮಧ್ಯಂತರ ಆದೇಶವನ್ನು ರಾಜಕೀಯ ನಾಯಕರು ತಮಗೆ ಬೇಕಾದಂತೆ ವಿಶ್ಲೇಷಣೆ ಮಾಡುತ್ತಿದ್ದು ಅದರಂತೆಯೇ ತಂತ್ರ ರೂಪಿಸಲು ಹೊರಟಿದ್ರು. ಆದ್ರೆ ಇದೀಗ ಮಧ್ಯಂತರ ಆದೇಶದ ಕುರಿತಾಗಿ ಮೂಡಿರುವ ಗೊಂದಲ ನಿವಾರಿಸಿಕೊಳ್ಳಲು ಕಾಂಗ್ರೆಸ್ ತೀರ್ಮಾನಿಸಿದ್ದು ಸುಪ್ರೀಂಕೋರ್ಟ್ ಗೆ ಅರ್ಜಿ ಹಾಕಿದೆ. ಸರ್ವೋಚ್ಚ ನಾಯ್ಯಾಲಯಕ್ಕೆ ಈ ಕುರಿತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅರ್ಜಿ ಸಲ್ಲಿಸಿದ್ದಾರೆ.
ಇನ್ನು ಸುಪ್ರೀಂ ಕೋರ್ಟ್ ಈ ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸಿದ್ರೆ ವಿಶ್ವಾಸಮತ ಯಾಚನೆಗೆ ಆದಷ್ಟು ಬೇಗ ಕಾಲ ಕೂಡಿಬರಲಿದೆ. ಇಲ್ಲದಿದ್ದರೆ ವಾರಾಂತ್ಯಗಳು ಎದುರಾಗೋದ್ರಿಂದ ಸೋಮವಾರದವರೆಗೂ ಅರ್ಜಿ ವಿಚಾರಣೆಗೆ ಕಾಯಲೇಬೇಕಾದ ಅನಿವಾರ್ಯತೆ ಎದುರಾಗಲಿದೆ. ಇನ್ನು ಸೋಮವಾರದವರೆಗೂ ಹೇಗಾದ್ರೂ ಮಾಡಿ ವಿಶ್ವಾಸಮತ ಯಾಚನೆ ಮುಂದೂಡುವ ದೋಸ್ತಿಯ ತಂತ್ರ ಈ ರೀತಿ ವರ್ಕೌಟ್ ಆಗುವ ಎಲ್ಲಾ ಲಕ್ಷಣಗಳು ಸ್ಪಷ್ಟವಾಗಿದೆ.