ಮಹಾರಾಷ್ಟ್ರದಲ್ಲಿ ಮಹಿಳಾ ವೈದ್ಯೆಯ ಆತ್ಮಹತ್ಯೆ ಪ್ರಕರಣದಲ್ಲಿ ಹೊಸ ಬೆಳವಣಿಗೆ ನಡೆದಿದೆ. ಸತಾರಾ ಜಿಲ್ಲೆಯಲ್ಲಿ 26 ವರ್ಷದ ಯುವ ಡಾಕ್ಟರ್ ಫಾಲ್ತಾನ್‌ನಲ್ಲಿ ಏಳು ಸಾಲಿನ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆ ನೋಟ್‌ನಲ್ಲಿ ಮಹಿಳೆ ತನ್ನ ಮೇಲೆ ಪದೇಪದೇ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಗೋಪಾಲ್ ಬದಾನೆ ಅತ್ಯಾಚಾರ ಮತ್ತು ಲೈಂಗಿಕ ಶೋಷಣೆ ಮಾಡುತ್ತಿದ್ದಾನೆ ಎಂದು ಖಂಡಿಸಿದ್ದಾಳೆ.
ನೋಟ್‌ನಲ್ಲಿ, ಜಮೀನುದಾರನ ಮಗ ಪ್ರಶಾಂತ್ ಬಣಕಾರ್ ಕೂಡ ಕಿರುಕುಳ ಮತ್ತು ಮಾನಸಿಕ ಹಿಂಸೆಗೆ ಕಾರಣನಾಗಿದ್ದಾನೆ ಎಂದು ಉಲ್ಲೇಖಿಸಲಾಗಿದೆ. ಇಬ್ಬರೂ ಕಳೆದ ನಾಲ್ಕು ತಿಂಗಳಿನಿಂದ ಆಕೆಯನ್ನು ಹಿಂಸಿಸುತ್ತಿದ್ದರು ಎಂದು ಆರೋಪಿಸಲಾಗಿದೆ. ಆತ್ಮಹತ್ಯೆಗೆ ಮುನ್ನ ಪ್ರಶಾಂತ್ ಬಣಕಾರ್ ಜೊತೆ ಆಕೆ ಮಾತನಾಡಿದ್ದಾಳೆ ಎಂಬ ಮಾಹಿತಿಯು ತನಿಖೆಯಲ್ಲಿ ಲಭ್ಯವಾಗಿದೆ.
ಸತಾರಾ ಪೊಲೀಸ್ ಇಲಾಖೆ ಎರಡು ವಿಶೇಷ ತಂಡಗಳನ್ನು ರಚಿಸಿ ತನಿಖೆ ನಡೆಸಿದ್ದು, ಶುಕ್ರವಾರ ಪ್ರಶಾಂತ್ ಬಣಕಾರ್ ಅವರನ್ನು ಸತಾರಾದಲ್ಲಿನ ಸ್ನೇಹಿತನ ಫಾರ್ಮ್‌ಹೌಸ್‌ನಿಂದ ಬಂಧಿಸಿದೆ. ಆದರೆ ಪ್ರಮುಖ ಆರೋಪಿ, ಪಿಎಸ್‌ಐ ಗೋಪಾಲ್ ಬದಾನೆ ತಲೆಮರೆಸಿಕೊಂಡಿದ್ದಾನೆ ಮತ್ತು ಅವರಿಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ. ಪ್ರಶಾಂತ್ ಬಣಕಾರ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಕಾರ್ಯ ಪ್ರಾರಂಭವಾಗಿದೆ.
ಮಹಿಳಾ ವೈದ್ಯೆಯ ಡೆತ್ ನೋಟ್‌ನಲ್ಲಿ ಪಿಎಸ್‌ಐ ಗೋಪಾಲ್ ಬದಾನೆ ನಾಲ್ಕು ಬಾರಿ ಅತ್ಯಾಚಾರ ಎಸಗಿರುವುದಾಗಿ ಬರೆದಿದ್ದಾರೆ. ಜೊತೆಗೆ ಪ್ರಭಾವಿ ಸಂಸದ ಮತ್ತು ಅವರ ಸಹಚರರು ನಕಲಿ ವೈದ್ಯಕೀಯ ಪ್ರಮಾಣ ಪತ್ರ ನೀಡಲು ಒತ್ತಡ ಹಾಕಿದ್ದರು; ನಿರಾಕರಿಸಿದಾಗ ಕಿರುಕುಳ ಹೆಚ್ಚಾಗಿತ್ತು. ಈ ಪ್ರಕರಣವನ್ನು ಶೀಘ್ರ ತನಿಖೆ ನಡೆಸಬೇಕೆಂದು ಸಾರ್ವಜನಿಕರು ಹಾಗೂ ರಾಜಕೀಯ ನಾಯಕರು ಒತ್ತಾಯಿಸಿದ್ದಾರೆ, ಮತ್ತು ಘಟನೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

