Saturday, March 22, 2025

Latest Posts

ಮಹಾರಾಷ್ಟ್ರ ರಾಜಕೀಯದಲ್ಲಿ ಸಂಚಲ ಸೃಷ್ಟಿ.. ಕನ್ನಡತಿ ದಿಶಾ ಸಾಲಿಯಾನ್‌ ಡೆತ್‌ ಕೇಸ್‌ಗೆ ಬಿಗ್‌ ಟ್ವಿಸ್ಟ್‌..!

- Advertisement -

Bollywood News: ಬಾಲಿವುಡ್‌ ನಟ ದಿವಂಗತ ಸುಶಾಂತ್‌ ಸಿಂಗ್‌ ರಜಪೂತ್‌ ಅವರ ಮಾಜಿ ಮ್ಯಾನೇಜರ್‌ ಆಗಿದ್ದ ಕನ್ನಡತಿ ದಿಶಾ ಸಾಲಿಯಾನ್‌ ಅವರ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಇದೀಗ ಟ್ವಿಸ್ಟ್‌ ಸಿಕ್ಕಿದೆ. ಅಲ್ಲದೆ ಶಿವಸೇನಯ ಉದ್ದವ್‌ ಠಾಕ್ರೆ ಬಣದ ಶಾಸಕ ಆದಿತ್ಯ ಠಾಕ್ರೆ ಅವರ ಮೇಲೆ ಎಫ್‌ಐಆರ್‌ ದಾಖಲಿಸಿ ಸಿಬಿಐ ತನಿಖೆಗೆ ವಹಿಸಬೇಕೆಂದು ದಿಶಾ ತಂದೆ ಸತೀಶ್‌ ಸಾಲಿಯಾನ್‌ ಮುಂಬೈ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ ಒತ್ತಾಯಿಸಿದ್ದಾರೆ. ಈ ಬೆಳವಣಿಗೆ ಬಳಿಕ ಮಹಾರಾಷ್ಟ್ರ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಯಾಗಿದೆ.

ಇನ್ನೂ ಘಟನೆ ನಡೆದ ದಿನ ರಾತ್ರಿ ಗ್ಯಾಲಕ್ಸಿ ರೆಸಿಡೆನ್ಸಿ ಕಟ್ಟಡದಲ್ಲಿ ನಡೆದ ಪಾರ್ಟಿಯಲ್ಲಿ ಅತ್ಯಾಚಾರ ನಡೆಸಿ ನನ್ನ ಮಗಳನ್ನು ಕೊಲೆ ಮಾಡಲಾಗಿದ್ದು, ಬಳಿಕ ಸಾಕ್ಷ್ಯಗಳನ್ನು ನಾಶಮಾಡಲಾಗಿದೆ. ಆ ಪಾರ್ಟಿಯಲ್ಲಿ ಮಾಜಿ ಸಚಿವ ಆದಿತ್ಯ ಠಾಕ್ರೆ, ನಟ ಸೂರಜ್ ಪಾಂಚೋಲಿ, ನಟ ಡಿನೋ ಮಾರಿಯೋ ಮತ್ತು ಆದಿತ್ಯ ಠಾಕ್ರೆ ಗನ್‌ ಮ್ಯಾನ್ ಭಾಗಿಯಾಗಿದ್ದರು. ಇನ್ನೂ ಪಾರ್ಟಿ ಬಳಿಕ ದಿಶಾ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದೆ. ಘಟನೆ ಬಳಿಕ ರಾಜಕೀಯದ ಪ್ರಭಾವಿ ವ್ಯಕ್ತಿಯು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಕರೆ ಮಾಡಿ ಪ್ರಕರಣವನ್ನು ಹತ್ತಿಕ್ಕುವ ಕೆಲಸ ಮಾಡಿಸಿದ್ದಾರೆ ಎಂಬ ಮಾಹಿತಿ ಇದೆ ಎಂದು ದಿಶಾ ತಂದೆ ಸಲ್ಲಿಸಿದ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಜೊತೆಗೆ ಆದಿತ್ಯ ಠಾಕ್ರೆ ಮತ್ತು ಇತರರ ವಿರುದ್ಧ ಐಪಿಸಿ ಸೆಕ್ಷನ್ 376 ಡಿ, 302, 201, 218, 409, 166, 107, 109, 120 ಬಿ ಮತ್ತು 34 ರ ಅಡಿಯಲ್ಲಿ ಪ್ರಕರಣ ದಾಖಲಿಸಿ ಈ ಪ್ರಕರಣವನ್ನು ಸಿಬಿಐಗೆ ನೀಡಬೇಕೆಂದು ಸತೀಶ್ ಸಾಲಿಯನ್ ನ್ಯಾಯಾಲಯವನ್ನು ಮನವಿ ಮಾಡಿಕೊಂಡಿದ್ದಾರೆ. ಇದರಿಂದ ಇದೀಗ ಆದಿತ್ಯ ಠಾಕ್ರೆಗೆ ಆತಂಕ ಶುರುವಾಗಿದೆ.

ಆರೋಪಿಗಳ ವಿರುದ್ಧ ಕ್ರಮಕ್ಕೆ ಮಹಾಯುತಿ ಆಗ್ರಹ..

ಇನ್ನೂ ಈ ವಿಚಾರದ ಚರ್ಚೆಯ ಮೇಲೆ ಮಹಾರಾಷ್ಟ್ರದಲ್ಲಿ ಆಡಳಿತದಲ್ಲಿರುವ ಮಹಾಯುತಿಯ ಹಾಗೂ ವಿಪಕ್ಷಗಳ ಸದಸ್ಯರ ನಡುವೆ ವಿಧಾನಮಂಡಲದ ಉಭಯ ಸದನಗಳಲ್ಲಿ ವಾಗ್ವಾದ ನಡೆದು ಕೋಲಾಹಲ ಸೃಷ್ಟಿಯಾಗಿತ್ತು. ಮಹಾಯುತಿಯಲ್ಲಿರುವ ಬಿಜೆಪಿ, ಶಿವಸೇನೆ ಹಾಗೂ ಎನ್‌ಸಿಪಿಯ ಶಾಸಕರುಗಳು ಘೋಷಣೆಗಳನ್ನು ಮೊಳಗಿಸುತ್ತಾ ಸದನದ ಬಾವಿಗಿಳಿದು ದಿಶಾ ಸಾವಿನ ಪ್ರಕರಣದ ತನಿಖೆ ನಡೆಸಿ. ಇದರಲ್ಲಿ ಭಾಗಿಯಾದವರನ್ನು ಪತ್ತೆ ಹಚ್ಚಿ ಶಿಕ್ಷಿಸಬೇಕು ಎಂದು ಆಗ್ರಹಿಸಿದ್ದರು.

ಅಲ್ಲದೆ ಇದೇ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಗೃಹ ಖಾತೆ ಸಚಿವ ಯೋಗೇಶ್ ಕದಮ್ , ದಿಶಾ ಸಾಲಿಯಾನ್‌ ಸಾವಿನ ಪ್ರಕರಣದ ತನಿಖೆಯನ್ನು ಎಸ್‌ಐಟಿ ಕೈಗೆತ್ತಿಕೊಂಡಿದ್ದು, ಅದರ ಪ್ರಕ್ರಿಯೆ ಮುಂದುವರೆದಿದೆ. ದಿಶಾ ಸಾಲಿಯಾನ್ ಅವರ ತಂದೆಯು ರಾಜ್ಯ ಸರ್ಕಾರವನ್ನು ತಮ್ಮ ಅರ್ಜಿಯಲ್ಲಿ ಕಕ್ಷಿದಾರರನ್ನಾಗಿ ಮಾಡಿದ್ದಾರೆ. ನಾವು ನ್ಯಾಯಾಲಯದ ಆದೇಶದಂತೆ ಕಾರ್ಯನಿರ್ವಹಿಸುತ್ತೇವೆ. ತಪ್ಪಿತಸ್ಥರು ಎಷ್ಟೇ ಪ್ರಭಾವಿಗಳಾಗಿದ್ದರೂ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ಅವರ ತಪ್ಪಿಗೆ ಶಿಕ್ಷೆಯಾಗಲೇಬೇಕು ಎಂದು ಅವರು ಖಡಕ್‌ ಹೇಳಿಕೆ ನೀಡಿದ್ದಾರೆ.

ಬಿಜೆಪಿ ನಮ್ಮ ಕುಟುಂಬ ಟಾರ್ಗೆಟ್‌ ಮಾಡಿದೆ..

ಇನ್ನೂ ಇದೇ ವಿಚಾರದ ಬಗ್ಗೆ ಮಾತನಾಡಿರುವ ಶಿವಸೇನೆ ಯುಬಿಟಿ ನಾಯಕ ಉದ್ಧವ್ ಠಾಕ್ರೆ, ದಿಶಾ ಸಾಲಿಯಾನ್‌ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆಯಲ್ಲಿ ಆದಿತ್ಯ ಠಾಕ್ರೆ ಅವರಿಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲವೆಂದು ಹೇಳಲಾಗಿದೆ. ಇಷ್ಟೆಲ್ಲಾ ಆದರೂ ಬಿಜೆಪಿಯವರಿಗೆ ನಮ್ಮ ಕುಟುಂಬದ ಸದಸ್ಯರೇ ಟಾರ್ಗೆಟ್‌ ಆಗಿದ್ದಾರೆ. ಈ ಮೂಲಕ ಅವರು ನಮ್ಮ ಮಾನಹಾನಿ ಮಾಡುತ್ತಿದ್ದಾರೆ. ಆದಿತ್ಯ ಯಾವುದೇ ತಪ್ಪು ಮಾಡಿಲ್ಲ. ಹೀಗಿರುವಾಗ, ಅವರು ಏಕೆ ಹೆದರಬೇಕು? ನಾವು ಯಾವುದೇ ತನಿಖೆ ಎದುರಿಸಲು ಸಿದ್ದರಾಗಿದ್ದೇವೆ ಎಂದು ಅವರು ತಿಳಿಸಿದ್ದಾರೆ. ಈಗ ನಾಗ್ಪುರದಲ್ಲಿ ನಡೆದ ಹಿಂಸಾಚಾರದ ಪ್ರಕರಣವನ್ನು ಮುಚ್ಚಿ ಹಾಕಿಸಲು ಬಿಜೆಪಿ ನಾಯಕರಿಗೆ ದಿಶಾ ಪ್ರಕರಣ ನೆನೆಪಿಗೆ ಬಂದಿದೆ. ಈ ವಿಷಯವನ್ನು ಬೇಕಾಗಿಯೇ ಕೆಣಕಲಾಗುತ್ತಿದೆ ಎಂದು ಉದ್ಧವ್ ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ.

ಅಲ್ಲದೆ ಈ ಪ್ರಕರಣವು ಪ್ರಸ್ತುತ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಈ ವಿಚಾರದಲ್ಲಿ ಕಳೆದ 5 ವರ್ಷಗಳಿಂದ ನನ್ನ ವಿರುದ್ಧ ಅಪ ಪ್ರಚಾರ ನಡೆಸಲಾಗುತ್ತಿದೆ. ಈ ಕೇಸ್‌ ನ್ಯಾಯಾಲಯದಲ್ಲಿದೆ ಆದ್ದರಿಂದ, ನಾನು ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಆದಿತ್ಯ ಠಾಕ್ರೆ ತಿಳಿಸಿದ್ದಾರೆ. ಇನ್ನೂ ಈ ಘಟನೆಗೂ ನಮಗೂ ಯಾವುದೇ ಸಂಬಂಧವಿಲ್ಲ. ನೀವು ಅಂತಹ ವಿಚಾರವನ್ನು ಹರಡುತ್ತಿದ್ದರೆ, ಅದು ನಿಮಗೂ ತಿರುಗುಬಾಣವಾಗುತ್ತದೆ ಎಂಬುದನ್ನು ನೆನಪಿಡಿ. ಭವಿಷ್ಯದಲ್ಲಿ ಅದು ನಿಮಗೆ ಉರುಳಾಗಲಿದೆ ಎಂದು ಬಿಜೆಪಿಗೆ ಆದಿತ್ಯ ಎಚ್ಚರಿಕೆ ನೀಡಿದ್ದಾರೆ.

ನಾನು ಮೊದಲೇ ಹೇಳಿದ್ದೆ..

ದಿಶಾ ಸಾಲಿಯನ್ ಸಾವಿಗೆ ಬಗ್ಗೆ ಆಗಾಗ ಅನುಮಾನ ವ್ಯಕ್ತಪಡಿಸುತ್ತಿದ್ದ ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಕೂಡ ಈಗಿನ ಅರ್ಜಿ ಬಗ್ಗೆ ಪ್ರತಿಕ್ರಿಯಿಸಿ, ನಾನು ಈ ವಿಚಾರದಲ್ಲಿ ಮೊದಲಿನಿಂದಲೇ ನನ್ನ ನಿಲುವನ್ನು ಸ್ಪಷ್ಟವಾಗಿ ಹೇಳುತ್ತಲೇ ಬಂದಿದ್ದೇನೆ. ಅಲ್ಲದೆ ದಿಶಾ ತಂದೆ ಹೇಳಿರುವ ಎಲ್ಲಾ ಹೆಸರುಗಳನ್ನು ನಾನು ಆಗಲೇ ತಿಳಿಸಿದ್ದೆ. ಅಲ್ಲಿನ ಸೆಕ್ಯುರಿಟಿಗೆ ಏನಾಯಿತು? ಮರಣೋತ್ತರ ಪರೀಕ್ಷಾ ವರದಿ ಏನಾಯಿತು ? ಎನ್ನುವುದನ್ನು ನಾನು ಬಹಳ ಜನರನ್ನು ಕೇಳಿದ್ದೀನಿ. ಇನ್ನೂ ದಿಶಾ ತಂದೆ ಸತೀಶ್ ಅವರು ಅರ್ಜಿಯಲ್ಲಿ ಮಾಜಿ ಸಚಿವ ಆದಿತ್ಯ ಠಾಕ್ರೆಯ ಹೆಸರನ್ನು ಉಲ್ಲೇಖಿಸಿದ್ದು, ಈಗ ಸತ್ಯ ಬಹಿರಂಗಗೊಳ್ಳಲಿದೆ. ಅಂದು ಆದಿತ್ಯ ಠಾಕ್ರೆಯನ್ನು ರಕ್ಷಿಸಿದವರು ಈಗ ಏನು ಹೇಳುತ್ತಾರೋ ಗೊತ್ತಿಲ್ಲ. ಈಗ ತನಿಖೆ ಹೇಗಾಗುತ್ತದೆ ಎನ್ನುವುದೂ ಅವರಿಗೆ ತಿಳಿಯುತ್ತದೆ. ಅಲ್ಲದೆ ಇದೇ ವೇಳೆ ಎನ್​ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಪ್ರಕರಣದ ತನಿಖೆಯಾಗಬೇಕೆಂದು ರಾಣೆ ಒತ್ತಾಯಿಸಿದ್ದಾರೆ.

ದಿಶಾ ಸಾವಿನ ಹಿನ್ನೆಲೆ ಏನು..?

ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ಆಗಿದ್ದ ದಿಶಾ, ಜೂನ್ 8,2020 ರಂದು ಮುಂಬೈ ಉಪನಗರದ ಮಲಾಡ್‌ನಲ್ಲಿರುವ ಬಿಲ್ಡಿಂಗ್‌ ಒಂದರ 14 ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದರು. ಆದರೆ ಆಗ ಈ ಕೇಸ್‌ನಲ್ಲಿ ಆದಿತ್ಯ ಠಾಕ್ರೆ ಕೈವಾಡವಿರುವ ಶಂಕೆ ವ್ಯಕ್ತವಾಗಿತ್ತು. ಅಲ್ಲದೆ ಈ ಹಿಂದೆಯೇ ಈ ಪ್ರಕರಣದ ತನಿಖೆ ನಡೆಸಿದ್ದ ಮುಂಬೈ ಪೊಲೀಸರು, ಅಪಾರ್ಟ್​​ಮೆಂಟ್​ನಿಂದ ಆಕಸ್ಮಿಕವಾಗಿ ಬಿದ್ದು ದಿಶಾ ಸಾವನ್ನಪ್ಪಿದ್ದಾರೆ ಎಂದು ಪ್ರಕರಣ ಮುಚ್ಚಿ ಹಾಕಿದ್ದರು. ಇನ್ನೂಆಗ ದಿಶಾ ಸಾವನ್ನಪ್ಪಿದ ಕೇವಲ 6 ದಿನಗಳ ಬಳಿಕವಷ್ಟೇ ನಟ ಸುಶಾಂತ್ ಸಿಂಗ್ ರಜಪೂತ್ ಕೂಡ ಸಾವನ್ನಪ್ಪಿದ್ದರು.

ಒಟ್ನಲ್ಲಿ.. ಕರ್ನಾಟಕದ ಕಡಲ ತೀರದಲ್ಲಿ ಜನಿಸಿ ದೂರದ ಬಾಂಬೆಗೆ ಬದುಕು ಕಟ್ಟಿಕೊಳ್ಳಲು ಬಣ್ಣದ ಲೋಕಕ್ಕೆ ಬೆರಗಾಗಿ ಹೋಗಿದ್ದ ದಿಶಾ ಸಾಲಿಯಾನ್‌ ದುರಂತ ಅಂತ್ಯ ಕಂಡಿದ್ದು ನಿಜಕ್ಕೂ ವಿಪರ್ಯಾಸ. ಇನ್ನೂ ಈ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳಿಗೆ ಶಿಕ್ಷೆಯಾಗುವ ಮೂಲಕ ನೊಂದ ಕುಟುಂಬಕ್ಕೆ ನ್ಯಾಯ ಸಿಗುವಂತಾಗಲಿ ಅನ್ನೋದೆ ನಮ್ಮ ಆಶಯ..

- Advertisement -

Latest Posts

Don't Miss