Saturday, July 27, 2024

Latest Posts

ಸೀಕ್ರೆಟ್ಸ್ ಆಫ್ ರಾಹುಲ್…!

- Advertisement -

ವಿಶ್ವ ಕ್ರಿಕೆಟ್ ನಲ್ಲಿ ಭಾರತದ ಸಾಧನೆ ಅದ್ವಿತೀಯ. ಭಾರತದ ಈ ಸಾಧನೆಯಲ್ಲಿ ಕರ್ನಾಟಕದ ಕೊಡುಗೆ ಅಪಾರ. ರೋಜರ್ ಬಿನ್ನಿ, ಸಯ್ಯದ್ ಕಿರ್ಮಾನಿ ಅವರಿಂದ ಹಿಡಿದು ಸದ್ಯ ಕೆ. ಎಲ್. ರಾಹುಲ್ ವರೆಗೆ ಕನ್ನಡ ನಾಡಿನಲ್ಲಿ ಉದಯಿಸಿದ ಹಲವು ಪ್ರತಿಭೆಗಳು ನೀಲಿ ಜರ್ಸಿ ತೊಟ್ಟು ಕ್ರಿಕೆಟ್ ಮೈದಾನದಲ್ಲಿ ಮಿಂಚಿದ್ದಾರೆ. ಅದರಲ್ಲೂ ಜಿ. ಆರ್. ವಿಶ್ವನಾಥ್, ಜಾವಗಲ್ ಶ್ರೀನಾಥ್, ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್ ಹತ್ತು ಹಲವು ವಿಶ್ವ ದಾಖಲೆಗಳನ್ವ ನಿರ್ಮಿಸುವ ಮೂಲಕ, ವಿಶ್ವ ಕ್ರಿಕೆಟ್ ನಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಸದ್ಯ ಇದೇ ಸಾಲಿನಲ್ಲಿ ಮಿಂಚುವುದಕ್ಕೆ ಸಜ್ಜಾಗಿರುವ ಕನ್ನಡದ ಕುಡಿ ಅಂದ್ರೆ, ಅದು ಕೆ. ಎಲ್ ರಾಹುಲ್. ಹೌದು 2019ರ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ದೇಶವನ್ನು ಪ್ರತಿನಿಧಿಸುತ್ತಿರುವ ರಾಹುಲ್, ತಮ್ಮ ಜವಾಬ್ದಾರಿಯನ್ನ ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ. ತಂಡದ ಅಗತ್ಯಕ್ಕೆ ತಕ್ಕಂತೆ ಯಾವುದೇ ಕ್ರಮಾಂಕದಲ್ಲಿ ಕಣಕ್ಕಿಳಿಯುವ ರಾಹುಲ್, ಗೋಡೆ ಖ್ಯಾತಿಯ ರಾಹುಲ್ ದ್ರಾವಿಡ್ ಅವರನ್ನೇ ನೆನಪಿಸುತ್ತಾರೆ. ಅಗತ್ಯಕ್ಕೆ ತಕ್ಕಂತೆ ಬ್ಯಾಟ್ ಬೀಸುವ ಮಂಗಳೂರಿನ ಹುಡುಗ, ರಾಷ್ಟ್ರೀಯ ತಂಡದಲ್ಲಿ ಕನ್ನಡಿಗರನ್ನ ಪ್ರತಿನಿಧಿಸುತ್ತಿದ್ದಾನೆ. ಪ್ರತಿಷ್ಠಿತ ವಿಶ್ವಕಪ್ ಟೂರ್ನಿಯ ಈ ಸಂದರ್ಭದಲ್ಲಿ, ರಾಹುಲ್ ಬಗ್ಗೆ ನಿಮಗೆ ತಿಳಿಯದ ಅದೆಷ್ಟೋ ವಿಷಯಗಳನ್ನ ನಿಮ್ಮ ಮುಂದಿಡುವ ಪ್ರಯತ್ನವೇ, ‘ಸೀಕ್ರೆಟ್ಸ್ ಆಫ್ ರಾಹುಲ್’.

ರಾಹುಲ್ ಬಾಲ್ಯ
ಇಂದು ಟೀಮ್ ಇಂಡಿಯಾ ಆರಂಭಿಕ ಆಟಗಾರನಾಗಿ ಮಿಂಚುತ್ತಿರುವ ಕೆ.ಎಲ್. ರಾಹುಲ್ ಹುಟ್ಟಿದ್ದು, ಸಮುದ್ರ ನಗರಿ ಮಂಗಳೂರಿನಲ್ಲಿ. ತಂದೆ ಕೆ.ಎನ್. ಲೋಕೇಶ್, ತಾಯಿ ರಾಜೇಶ್ವರಿ. ವೃತ್ತಿಯಲ್ಲಿ ಇಬ್ಬರೂ ಪ್ರೊಫೆಸರ್ಸ್ ತಂದೆ ಲೋಕೇಶ್ ಅವರಿಗೆ ಕ್ರಿಕೆಟ್ ಅಂದ್ರೆ ಪಂಚಪ್ರಾಣ. ರಾಹುಲ್ ಗೆ ಈ ಹೆಸರು ಇಡುವುದಕ್ಕೆ ಕಾರಣ ತಂದೆಯ ಕ್ರಿಕೆಟ್ ಪ್ರೀತಿ. ಲೋಕೇಶ್ ಅವರ ಅಚ್ಚು ಮೆಚ್ಚಿನ ಆಟಗಾರ ಸುನಿಲ್ ಗವಾಸ್ಕರ್, ಗವಾಸ್ಕರ್ ತಮ್ಮ ಮಗನಿಗೆ ರೋಹನ್ ಎಂದು ಹೆಸರಿಟ್ಟರು. ಇತ್ತ ಲೋಕೇಶ್, ಗವಾಸ್ಕರ್ ಮೇಲಿನ ಪ್ರೀತಿಗೆ ಮಗನಿಗೆ ರಾಹುಲ್ ಎಂದು ಹೆಸರಿಟ್ಟರಂತೆ. ಬಾಲ್ಯದ ವಿದ್ಯಾಭ್ಯಾಸವನ್ನು ಸುರತ್ಕಲ್ ನ NITKಯಲ್ಲಿ ಆರಂಭಿಸಿದ ರಾಹುಲ್, ಸೆಂಟ್ ಅಲೋಶಿಯಸ್ ಪಿಯು ಕಾಲೇಜಿನಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿ ಉನ್ನತ ಶಿಕ್ಷಣಕ್ಕಾಗಿ ಬೆಂಗಳೂರಿನ ಜೈನ್ ಕಾಲೇಜ್ ಸೇರಿದ್ರು. ಈ ನಡುವೆ 11ನೇ ವಯಸ್ಸಿನಲ್ಲೇ ಪೂರ್ಣ ಪ್ರಮಾಣದಲ್ಲಿ ಕ್ರಿಕೆಟ್ ಅಭ್ಯಾಸ ಆರಂಭಿಸಿದ ರಾಹುಲ್, 2004ರಲ್ಲಿ ನಡೆದ 13ವರ್ಷ ವಯೋಮಿತಿಯ ಮೂರು ಕ್ರಿಕೆಟ್ ಪಂದ್ಯಗಳ 4 ಇನ್ನಿಂಗ್ಸ್ ಗಳಲ್ಲಿ, 650 ರನ್ ಸಿಡಿಸಿ ಬೆಸ್ಟ್ ಬ್ಯಾಟ್ಸ್ ಮನ್ ಪ್ರಶಸ್ತಿ ಪಡೆದುಕೊಂಡಿದ್ರು. ಬಳಿಕ 2010ರ ಅಂಡರ್-19 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದ ರಾಹುಲ್, ದೇಶವನ್ನ ಪ್ರತಿನಿಧಿಸಿದ್ದರು. ನಂತರ 2012-13ನೇ ಸಾಲಿನ ರಣಜಿ ಟೂರ್ನಿ ವೇಳೆ ರಾಜ್ಯ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡ್ರು. ಅಷ್ಟೇ ಅಲ್ಲದೇ ಅದೇ ವರ್ಷ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ರು.

ಅಂತರರಾಷ್ಟ್ರೀಯ ಕ್ರಿಕೆಟ್ ಗೆ ಎಂಟ್ರಿ

ದೇಸಿ ಕ್ರಿಕೆಟ್ ನಲ್ಲಿ ರನ್ ಹೊಳೆ ಹರಿಸಿದ್ದ ರಾಹುಲ್, ಸಹಜವಾಗಿಯೇ ಆಯ್ಕೆ ಮಂಡಳಿ ಗಮನ ಸೇಳೆಯುವುದರಲ್ಲಿ ಯಶಸ್ವಿ ಆದ್ರು. ಪರಿಣಾಮವಾಗಿ 2014ರ ಆಸ್ಟ್ರೇಲಿಯಾ ಪ್ರವಾಸದ ವೇಳೆ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದ್ರು. ನಂತರ ಮೆಲ್ಬೋರ್ನ್ ನಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್ ನಲ್ಲಿ ರೋಹಿತ್ ಶರ್ಮಾ ಬದಲಿಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಪಡೆಯುವ ಮೂಲಕ, ಅಂತರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ರು. ಅಂದು ಟೀಮ್ ಇಂಡಿಯಾ ಕ್ಯಾಪ್ಟನ್ ಆಗಿದ್ದಂತಹ ಮಹೇಂದ್ರ ಸಿಂಗ್ ಧೋನಿ, ರಾಹುಲ್ ಗೆ ಟೆಸ್ಟ್ ಕ್ಯಾಪ್ ನೀಡಿದ್ರು. ಈ ಮೂಲಕ ಟೆಸ್ಟ್ ಕ್ರಿಕೆಟ್ ನಲ್ಲಿ ದೇಶವನ್ನ ಪ್ರತಿನಿಧಿಸಿದ 284ನೇ ಆಟಗಾರನಾದ್ರು. ಮುಂದೆ 2016ರಲ್ಲಿ ಜಿಂಬಾಬ್ವೆ ವಿರುದ್ಧ ಏಕದಿನ ಕ್ರಿಕೆಟ್ ಗೆ ಎಂಟ್ರಿ ಯಾದ ರಾಹುಲ್, ಅದೇ ವರ್ಷ ಟಿ-ಟ್ವೆಂಟಿಗೂ ಪಾದಾರ್ಪಣೆ ಮಾಡಿದ್ರು. ಈ ನಡುವೆ ಜನಪ್ರಿಯತೆ ಜೊತೆಗೆ ಹಲವು ವಿವಾದ ಗಳಿಗೂ ರಾಹುಲ್ ತುತ್ತಾಗಬೇಕಾಯಿತು. 2016ರ ವೆಸ್ಟ್ ಇಂಡೀಸ್ ಪ್ರವಾಸದ ವೇಳೆ, ಕೈಯಲ್ಲಿ ಬಿಯರ್ ಬಾಟಲ್ ಹಿಡಿದು ಫೋಸ್ ನೀಡಿದ್ದ ರಾಹುಲ್, ಆ ಫೋಟೋವನ್ನ ಸಾಮಾಜಿಕ ಜಾಲತಾಣಗಳಲ್ಲಿ ಪೊಸ್ಟ್ ಮಾಡಿದ್ದು ಸಖತ್ ವೈರಲ್ ಆಗಿತ್ತು. ಆದ್ರೆ ಆ ಫೋಟೋ ವಿವಾದಕ್ಕೆ ಕಾರಣವಾದ ತಕ್ಷಣ ಡಿಲೀಟ್ ಮಾಡಿದ್ರು. ತೀರಾ ಇತ್ತೀಚೆಗೆ ಅಂದ್ರೆ ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ, ಖಾಸಗಿ ವಾಹಿನಿಯಂದರಲ್ಲಿ ಪ್ರಸಾರವಾಗುವ “ಕಾಫಿ ವಿತ್ ಕರಣ್” ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಹುಲ್, ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಜೊತೆ ಸೇರಿ ಮಹಿಳೆಯರಿಗೆ ಸಂಬಂಧಿಸಿದ ವಿಷಯಗಳಲ್ಲ ಕೀಳು ಮಟ್ಟದ ಹೇಳಿಕೆಗಳನ್ನ ನೀಡಿದ್ದು, ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಈ ವಿವಾದಕ್ಕೆ ಸಂಬಂಧಿಸಿದಂತೆ ಇಬ್ಬರು ಆಟಗಾರರನ್ನು ತಂಡದಿಂದ ಅಮಾನತು ಮಾಡಿದ್ದಲ್ಲದೆ, ಆಸ್ಟ್ರೇಲಿಯಾ ಪ್ರವಾಸದ ನಡುವೆ ತವರಿಗೆ ವಾಪಸ್ಸಾಗುವಂತಾಗಿತ್ತು.

ಕಲರ್ ಫುಲ್ ಆಗಿದೆ ರಾಹುಲ್ ಬದುಕು

ರಾಹುಲ್ ಬದುಕಿನ ಮತ್ತಷ್ಟು ಇಂಟರೆಸ್ಟಿಂಗ್ ವಿಷಯಗಳನ್ನು ನೋಡೋದಾದ್ರೆ, ವೈಯಕ್ತಿಕ ಬದುಕು ಕೂಡ ಕ್ರಿಕೆಟ್ ನಷ್ಟೇ ಕಲರ್ ಫುಲ್ ಆಗಿದೆ. ಮಿಡಲ್ ಕ್ಲಾಸ್ ಫ್ಯಾಮಿಲಿಯಲ್ಲಿ ಹುಟ್ಟಿದ ರಾಹುಲ್, ಈಗ ಬಿಂದಾಸ್ ಬದುಕು ಸಾಗಿಸುತ್ತಿದ್ದಾರೆ. ರಾಹುಲ್ ಗೆ ಕ್ರಿಕೆಟ್ ಅಷ್ಟೇ ಅಲ್ಲದೇ, ಟೆನಿಸ್ ಮತ್ತು ಫುಟ್ ಬಾಲ್ ಕೂಡ ಅಚ್ಚು ಮೆಚ್ಚು. ಇನ್ನೂ ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿಯಂತೆ, ರಾಹುಲ್ ಗೂ ಟ್ಯಾಟೂ ಅಂದ್ರೆ ಪಂಚ ಪ್ರಾಣ. ಹೀಗಾಗಿಯೇ ತನ್ನ ಬೆನ್ನ ಮೇಲೆ ತನ್ನ ಪ್ರೀತಿಯ ನಾಯಿ ‘ಸಿಂಬಾ’ನ ಮುಖವನ್ನ ಬಿಡಿಸಿ ಕೊಂಡಿದ್ದಾರೆ. ಇನ್ನೂ ರಾಹುಲ್ ಟ್ಯಾಟೂ ಪ್ರೀತಿ ಇಷ್ಟಕ್ಕೇ ನಿಲ್ಲುವುದಿಲ್ಲ. ತನ್ನ ಎಡಗೈ ಮೇಲೆ ಟ್ರೈಬಲ್ ಟ್ಯಾಟೂ ಒಂದನ್ನ ಹಾಕಿಸಿಕೊಂಡಿದ್ದಾರೆ. ಇನ್ನೂ ರಾಹುಲ್ ಗೆ ಇಷ್ಟವಾಗುವ ಕ್ರಿಕೆಟಿಗರು ಅಂದ್ರೆ, ರಾಹುಲ್ ದ್ರಾವಿಡ್, ಎಬಿ ಡಿವಿಲಿಯರ್ಸ್ ಮತ್ತು ವಿರಾಟ್ ಕೊಹ್ಲಿ. ಬೌಲರ್ ಗಳಲ್ಲಿ ನೋಡುವುದಾದ್ರೆ, ದಕ್ಷಿಣ ಆಫ್ರಿಕಾದ ಡೆಲ್ ಸ್ಟೈನ್ ಮತ್ತು ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಮತ್ತು ಆಸ್ಟ್ರೇಲಿಯಾದ ಸಿಡ್ನಿ ಕ್ರಿಕೆಟ್ ಸ್ಟೇಡಿಯಂ ಅಚ್ಚುಮೆಚ್ಚಿನ ಕ್ರೀಡಾಂಗಣಗಳಾಗಿವೆ. ರಾಹುಲ್ ಇಷ್ಟಪಡುವ ಅಥ್ಲೆಟಿಕ್ಸ್ ಆಟಗಾರ ಅಂದ್ರೆ, ಉಸೇನ್ ಬೋಲ್ಟ್. ರೋಜರ್ ಫೆಡರರ್ ರಾಹುಲ್ ನೆಚ್ಚಿನ ಟೆನಿಸ್ ಆಟಗಾರನಾಗಿದ್ದಾರೆ. ರಣ್ ಬೀರ್ ಕಪೂರ್, ರಾಹುಲ್ ನೆಚ್ಚಿನ ಹೀರೋ ಆದ್ರೆ, ಐಶ್ವರ್ಯ ರೈ, ಶ್ರದ್ದಾ ಕಪೂರ್, ಆಲಿಯಾ ಭಟ್ ಮತ್ತು ಕರೀನಾ ಕಪೂರ್ ನೆಚ್ಚಿನ ಹೀರೋಯಿನ್ ಗಳಾಗಿದ್ದಾರೆ. ಇದೆಲ್ಲದರ ನಡುವೆ ರಾಹುಲ್ ಗೆ ಗರ್ಲ್ ಫ್ರೆಂಡ್ ಇಲ್ವ ಅನ್ನೋ ಪ್ರಶ್ನೆ ಮೂಡೋದು ಸಹಜ. ಯಸ್..ರಾಹುಲ್ ಎಲಿಕ್ಸಿರ್ ನಹಾರ್ ಎಂಬ ಮಾಡೆಲ್ ಪ್ರೀತಿಯಲ್ಲಿ ಬಿದ್ದಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿವೆ. ಜೊತೆಗೆ ನಟಿ ಸೋನಮ್ ಬಾಜ್ವೆ ಜೊತೆಗೂ ರಾಹುಲ್ ಹೆಸರು ಕೇಳಿ ಬರುತ್ತಿದೆ.

ಅದೇನೇ ಇರಲಿ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ದೇಶವನ್ನು ಪ್ರತಿನಿಧಿಸುತ್ತಿರುವ ಕನ್ನಡಿಗ ರಾಹುಲ್, ವಿಶ್ವಕಪ್ ನಲ್ಲಿ ಮಿಂಚುತ್ತಿದ್ದಾರೆ. ಒಂದು ಅರ್ಧ ಶತಕ ಸೇರಿದಂತೆ 172ರನ್ ಬಾರಿಸಿದ್ದಾರೆ. ಯಸ್..ಅದೇನೆ ಇರಲಿ ಕನ್ನಡಿಗ ಕೆ. ಎಲ್. ರಾಹುಲ್, ಇಂಗ್ಲೆಂಡ್ ನಲ್ಲಿ ಮಿಂಚಲಿ. ಹಾಗೆ ದೇಶ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ ಭರವಸೆ ಮೂಡಿಸಿದ್ದಾರೆ.

ಐಸಿಸಿ ಲಿಸ್ಟ್ ನಲ್ಲಿ ಮೊದಲು ಯಾರು…? ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=LyRWu8vioF0
- Advertisement -

Latest Posts

Don't Miss