ಡಿಸಿಎಂ ಡಿ.ಕೆ ಶಿವಕುಮಾರ್ ಅವರ ಬೆಂಬಲಿಗರ ವಿರುದ್ಧದ ಪ್ರಕರಣವೂ ಸೇರಿ, ಒಟ್ಟು 62 ಪ್ರಕರಣಗಳನ್ನು ಅಭಿಯೋಜನೆಯಿಂದ ವಾಪಸ್ ಪಡೆಯುವ ನಿರ್ಣಯವನ್ನು, ರಾಜ್ಯ ಸಚಿವ ಸಂಪುಟ ಸಭೆ ಕೈಗೊಂಡಿದೆ.
ಜಾರಿ ನಿರ್ದೇಶನಾಲಯದ ಅಧಿಕಾರಿಗಳು 2019ರಲ್ಲಿ, ಡಿ.ಕೆ. ಶಿವಕುಮಾರ್ ಅವರನ್ನು ಬಂಧಿಸಿದಾಗ, ದಾಂಧಲೆ ನಡೆಸಿದ ಬೆಂಗಲಿಗರ ವಿರುದ್ಧ, ಸಾತನೂರು, ಕೋಡಿಹಳ್ಳಿ, ರಾಮನಗರ ಜಿಲ್ಲೆ ಸೇರಿ ಹಲವೆಡೆ ಕ್ರಿಮಿನಲ್ ಕೇಸ್ ದಾಖಲಿಸಲಾಗಿತ್ತು. ಹಲವು ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣ, ರೈತ ಮುಖಂಡರು, ನಾನಾ ಸಂಘಟನೆಗಳ ಮುಖಂಡರ ವಿರುದ್ಧದ ಮೊಕದ್ದಮೆಗಳನ್ನು, ಕೈಬಿಡುವ ನಿರ್ಣಯವನ್ನು ಕ್ಯಾಬಿನೆಟ್ ತೆಗೆದುಕೊಂಡಿತು.
ಸಚಿವ ಶಿವಾನಂದ ಪಾಟೀಲ್ ವಿರುದ್ಧ ವಿಜಯಪುರ ಜಿಲ್ಲೆ ಕೊಲ್ಹಾರ ಪೊಲೀಸ್ ಠಾಣೆಯಲ್ಲಿ 2021ರಲ್ಲಿ ಪ್ರಕರಣವನ್ನೂ, ಹಿಂಪಡೆಯಲಾಗಿದೆ. ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ವಿರುದ್ಧ ರಾಯಚೂರಿನ ಬಳಗಾನೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ, ಕೃಷ್ಣರಾಜನಗರ ಕ್ಷೇತ್ರದ ಶಾಸಕ ರವಿಶಂಕರ್ ವಿರುದ್ಧ ಕೆ.ಆರ್.ನಗರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ, ಹೊನ್ನಾಳಿ ಕ್ಷೇತ್ರದ ಶಾಸಕ ಡಿ.ಜಿ.ಶಾಂತನಗೌಡ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ ವಿರುದ್ಧ ಸುರತ್ಕಲ್ ಠಾಣೆಯಲ್ಲಿದಾಖಲಾಗಿದ್ದ ಪ್ರಕರಣಗಳನ್ನೂ ಅಭಿಯೋಜನೆಯಿಂದ ಹಿಂಪಡೆಯಲಾಗಿದೆ.
ಎಚ್.ಡಿ.ಕೋಟೆ ಶಾಸಕ ಅನಿಲ್ ಚಿಕ್ಕಮಾದು ವಿರುದ್ಧದ ಪ್ರಕರಣ, ಕೊಪ್ಪಳದ ಶಾಸಕ ರಾಘವೇಂದ್ರ ಹಿಟ್ನಾಳ್ ವಿರುದ್ಧ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಹಾಗೂ ಮಾಜಿ ಸಚಿವ ಎಚ್.ವೈ.ಮೇಟಿ ವಿರುದ್ಧ ಬಾದಾಮಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಗಳು, ದಕ್ಷಿಣ ಕನ್ನಡ ಜಿಲ್ಲಾಕಾಂಗ್ರೆಸ್ ಸಮಿತಿಯ ಮನೋರಾಜ್ ರಾಜೀವ್, ಔರಾದ್ ತಾಲೂಕು ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪ್ರವೀಣ್ ಕುಮಾರ್, ಬೆಂಗಳೂರು ದಕ್ಷಿಣ ಡಿಸಿಸಿ ಅಧ್ಯಕ್ಷ ಜಿ.ಕೃಷ್ಣಪ್ಪ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ವಾಪಸ್ ತೆಗೆದುಕೊಳ್ಳಲಾಗಿದೆ.
ರಾಜ್ಯ ರೈತ ಸಂಘದ ಬಡಗಲಪುರ ನಾಗೇಂದ್ರ ವಿರುದ್ಧ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ, ರೈತ ಸಂಘದ ಗುಂಡ್ಲುಪೇಟೆಯ ಮುಖಂಡ ಟಿ.ಎಸ್. ಶಾಂತಮಲ್ಲಪ್ಪ, ಮೈಸೂರಿನ ದಲಿತ ಸಂಘರ್ಷ ಸಮಿತಿಯ ಆಲಗೂಡು ಶಿವಕುಮಾರ್, ಕರ್ನಾಟಕ ಮೀಸಲು ಸಂರಕ್ಷಣಾ ಒಕ್ಕೂಟದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಸೇರಿದಂತೆ ಕೆಲವು ಜನಪರ ಹೋರಾಟಗಾರರ ವಿರುದ್ಧದ ಕೇಸ್‌ಗಳನ್ನು ಕೈಬಿಡುವ ತೀರ್ಮಾನವನ್ನು ಸಂಪುಟ ಕೈಗೊಂಡಿದೆ.