ಹಾಸನ: ಹಾಸನದ ಅರಸಿಕೆರೆಯಲ್ಲಿ ಜೆಡಿಎಸ್ ಮಾಜಿ ಸಚಿವ ಶಿವಲಿಂಗೇಗೌಡ ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಈ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಶಿವಲಿಂಗೇಗೌಡರನ್ನು ಹೊಗಳಿದ್ದಾರೆ. ಅಲ್ಲದೇ ಬಿಜೆಪಿ, ಜೆಡಿಎಸ್ ವಿರುದ್ಧ ಕಿಡಿಕಾರಿದ್ದಾರೆ.
ಅಧಿಕಾರ ನಶ್ವರ, ಶಿವಲಿಂಗೇಗೌಡ್ರು ಮಾಡಿರೋ ಅಭಿವೃದ್ದಿಯ ಕೆಲಸ ಅಜರಾಮರ, ಮತದಾರರೇ ಈಶ್ವರ. ಶಿವಲಿಂಗೇಗೌಡ್ರಿಗೆ ತುಂಬು ಹೃದಯದ ಸ್ವಾಗತವನ್ನು ಬಯಸುತ್ತೇನೆ. ಇವತ್ತು ಶಿವಲಿಂಗೇಗೌಡ್ರನ್ನು ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಬರ ಮಾಡಿಕೊಂಡಿದ್ದೇವೆ ಎಂದು ಡಿಕೆಶಿ ಹೇಳಿದರು.
ಶಿವಲಿಂಗೇಗೌಡ್ರಿಗೆ ಕಳೆದು ಹತ್ತು ವರ್ಷದಿಂದ ಗಾಳ ಹಾಕ್ತಿದ್ದೆ. ಆದ್ರೆ ನಮ್ಮ ಗಾಳಕ್ಕೆ ಬಿದ್ದೇ ಇರಲಿಲ್ಲ. ನಾನು ಗಾಳ ಹಾಕ್ತಿದ್ದೆ, ಸಿದ್ದರಾಮಯ್ಯನವರೂ ಗಾಳ ಹಾಕ್ತಾ ಇದ್ರೂ. ಆದ್ರೆ ಅವರು ನನ್ನ ಗಾಳಕ್ಕೂ ಬಿದ್ದಿರಲಿಲ್ಲ, ಸಿದ್ದರಾಮಯ್ಯ ನವರ ಗಾಳಕ್ಕೂ ಬಿದ್ದಿರಲಿಲ್ಲ. ಅವರು ಈ ಕ್ಷೇತ್ರದ ಜನರ ಗಾಳಕ್ಕೆ ಬಿದ್ದಿದ್ದಾರೆ. ನಮ್ಮ ಕಷ್ಟಕಾಲದಲ್ಲಿ ನೀವು ಧ್ವಜ ಹಿಡಿದಿದ್ದೀರಾ. ರಾಜಕಾರಣದಲ್ಲಿ ವೈಷಮ್ಯಗಳು ಇದ್ದೇ ಇರುತ್ತವೆ. ನಮಗೆ ನಿಮಗೆ ಎಲ್ಲರಿಗೂ ಒಂದೇ ಗುರಿ ಎಂದು ಡಿಕೆಶಿ ಹೇಳಿದ್ದಾರೆ..
ನಮಗೆ ದೇವೇಗೌಡ್ರಿಗೆ, ಕುಮಾರಸ್ವಾಮಿ, ಸಿದ್ದರಾಮಯ್ಯನವರಿಗೆ ರಾಜಕಾರಣದಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ. ನಾನು ದೇವೇಗೌಡ್ರು ವಿರುದ್ದವೂ ಚುನಾವಣೆಗೆ ನಿಂತಿದ್ದೆ. ಕುಮಾರಸ್ವಾಮಿ ಹಾಗೂ ಅವರ ಪತ್ನಿ ವಿರುದ್ಧವೂ ಚುನಾಣೆಗೆ ನಿಂತಿದ್ದೆ . ನೀನೇ ಅಧಿಕಾರ ಮಾಡಪ್ಪ ಅಂತಾ ಬೇಷರತ್ ಆಗಿ ಬೆಂಬಲ ಕೊಟ್ಟೆವು. ಆದ್ರೆ ಅದನ್ನ ಕುಮಾರಣ್ಣ ಉಳಿಸಿಕೊಳ್ಳಲಿಲ್ಲ. ಜಾತ್ಯಾತೀತತೆ ಉಳೀಬೇಕು ಅಂತಾ ನಾವು ಕುಮಾರಣ್ಣಂಗೆ ಬೆಂಬಲ ಕೊಟ್ಟೆವು. ದೇವೇಗೌಡ್ರನ್ನ ಪ್ರಧಾನ ಮಂತ್ರಿ ಮಾಡಿದ್ದು ನಮ್ಮ ಕಾಂಗ್ರೆಸ್ ಪಕ್ಷ. ಕುಮಾರಣ್ಣ ಸರ್ಕಾರ ಉಳಿಸೋದಕ್ಕೆ ನಾವೆಲ್ಲ ಮುಂಬೈಗೆ ಹೋಗಿದ್ದೆವು. ನಾನು ಶಿವಲಿಂಗೇಗೌಡ್ರು, ಶ್ರವಣಬೆಳಗೊಳ ಶಾಸಕ ಎಲ್ಲರೂ ಹೋಗಿದ್ದೆವು . ಅಲ್ಲಿ ಪೊಲೀಸನವರ ಹೇಗೆಲ್ಲಾ ನಡೆಸಿಕೊಂಡ್ರು ಅಂತಾ ನಮಗೆ ಗೊತ್ತು ಎಂದು ಡಿಕೆಶಿ ಹೇಳಿದ್ದಾರೆ.
ಅಲ್ಲದೇ, ನಾನು, ನೀವು ಶಿವಲಿಂಗೇಗೌಡ್ರು ಕಾಣ್ತಿರೋ ಕನಸೆಲ್ಲಾ ಬರೀ ಕನಸಲ್ಲ. ಅದು ಸಾಮಾಜಿಕ ಬದ್ದತೆಯ ಕನಸು, ಗ್ಯಾರಂಟಿಯ ಕನಸು. ನಾನು ಸಿದ್ದರಾಮಯ್ಯ ಇಬ್ಬರೂ ಗ್ಯಾರಂಟಿ ಕಾರ್ಡ್ ಗೆ ಸಹಿಹಾಕಿದ್ದೇವೆ. ಅದು ನಮ್ಮಬದ್ದತೆ, ನಾವು ಅವೆಲ್ಲವನ್ನೂ ಅನುಷ್ಠಾನಕ್ಕೆ ತರದೇ ಹೋದ್ರೆ, ಮತ್ತೊಮ್ಮೆ ಅರಸೀಕೆರೆಗೆ ಬಂದು ವೋಟ್ ಕೇಳೋದಿಲ್ಲ. ನೀವೆಲ್ಲಾ ಗ್ಯಾರಂಟಿ ಕಾರ್ಡ್‌ನ್ನು ಮನೆಮನೆಗೂ ತಲುಪಿಸಿ. ಮನೆಗೆ ತಲುಪಿಸಿ, ಅವರ ಮನೆಯ ನಂಬರ್ ಗಳನ್ನು ನಮಗೆ ಕಳುಹಿಸಿ. ಸರ್ಕಾರ ಬಂದಾಗ ಜಿಲ್ಲಾಧಿಕಾರಿಯಿಂದ ಅವರ ಮನೆಗೆ ಕರೆ ಹೋಗುತ್ತದೆ. ಹಸ್ತಕ್ಕೆ ಶಕ್ತಿಯನ್ನು ಕೊಡಬೇಕೆಂದು ನಿಮ್ಮಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ ಎಂದು ಡಿಕೆಶಿ, ಅರಸಿಕೆರೆ ಜನರಲ್ಲಿ ವಿನಂತಿಸಿದ್ದಾರೆ.