ಸಿಎಂ ಹುದ್ದೆ ರೇಸ್ನಲ್ಲಿ ಅಚ್ಚರಿಯ ಹೆಸರೊಂದು ಪ್ರಬಲವಾಗಿ ಕೇಳಿಬರ್ತಿದೆ. ವಿಜಯಪುರದಲ್ಲಿ ಕೋಡಿ ಮಠದ ಶ್ರೀಗಳು ನುಡಿದ ಭವಿಷ್ಯ ರಾಜ್ಯ ಕಾಂಗ್ರೆಸ್ ಪಡಸಾಲೆಯಲ್ಲಿ ಭಾರೀ ಸ್ಫೋಟವನ್ನೇ ಸೃಷ್ಟಿಸಿದೆ.
2023ರಲ್ಲಿ ಕಾಂಗ್ರೆಸ್ ಸರ್ಕಾರ ರಚನೆ ಆರಂಭದಲ್ಲೇ ಡಿಕೆಶಿ, ಸಿದ್ದರಾಮಯ್ಯ ನಡುವಿನ ಯುದ್ಧಕ್ಕೆ, ಅಧಿಕಾರ ಹಂಚಿಕೆ ಮುಲಾಮು ಸವರಲಾಗಿತ್ತು. ಕೆಲ ದಿನಗಳಿಂದ ಸೆಪ್ಟೆಂಬರ್ ಕ್ರಾಂತಿ ಪ್ರಳಯವನ್ನೇ ಸೃಷ್ಟಿಸಿದೆ. ಜೊತೆಗೆ ಮುಂದಿನ ಸಿಎಂ ಬಗ್ಗೆ ಬಹಿರಂಗ ಹೇಳಿಕೆಗಳು, ಕಾಂಗ್ರೆಸ್ಸಿಗರ ಎದೆಯಲ್ಲಿ ಕಿಚ್ಚು ಎಬ್ಬಿಸಿವೆ.
ಈಗಾಗಲೇ ಸಿಎಂ ರೇಸ್ನಲ್ಲಿ ಡಿ.ಕೆ. ಶಿವಕುಮಾರ್, ಜಿ. ಪರಮೇಶ್ವರ್, ಎಂ.ಬಿ. ಪಾಟೀಲ್, ಸತೀಶ್ ಜಾರಕಿಹೊಳಿ ಸೇರಿದಂತೆ ಹಲವು ನಾಯಕರಿದ್ದಾರೆ. ಸಿಎಂ ಸ್ಥಾನ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಲೇ ಇದೆ. ಹೀಗಿರುವಾಗ, ಎಂ.ಬಿ. ಪಾಟೀಲ್ ಅವರಿಗೆ ಸಿಎಂ ಯೋಗ ಇದೆ ಅಂತಾ, ಕೋಡಿ ಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ.
ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಕಡನಿ ಗ್ರಾಮದಲ್ಲಿ ನಡೆದ, ಸಾಮೂಹಿಕ ಕಾರ್ಯಕ್ರಮದಲ್ಲಿ ಕೋಡಿ ಮಠದ ಶ್ರೀಗಳು ಭಾಗಿಯಾಗಿದ್ದರು. ಈ ವೇಳೆ ಶ್ರೀಗಳು ನುಡಿದ ಭವಿಷ್ಯ ಭಾರೀ ವೈರಲ್ ಆಗಿದೆ.
ಕಳೆದ ತಿಂಗಳಷ್ಟೇ ರಾಜ್ಯರಾಜಕಾರಣದ ಬಗ್ಗೆ ಸ್ಫೋಟಕ ಭವಿಷ್ಯ ನುಡಿದಿದ್ದರು. ಅಧಿಕಾರವನ್ನು ಬಿಡಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಅವರಾಗಿಯೇ ಅಧಿಕಾರ ಬಿಡಬೇಕು ಅಂತಾ ಹೇಳಿದ್ರು. ಸಿದ್ದರಾಮಯ್ಯರಿಂದ ಅಧಿಕಾರ ಕಿತ್ತುಕೊಳ್ಳುವುದು ಕಬ್ಬಿಣದ ಕಡಲೆಯಷ್ಟೇ ಕಠಿಣ ಅಂತಾ, ಪರೋಕ್ಷವಾಗಿ ಭವಿಷ್ಯವಾಣಿ ನುಡಿದಿದ್ರು.
ಸಿಎಂ ಆಗುವ ಆಸೆ ಇದ್ರೂ ಹೈಕಮಾಂಡ್ ಮಾತಿಗೆ ಡಿಕೆಶಿ ಸೈಲೆಂಟ್ ಆಗಿದ್ದಾರೆ. ಪರಮೇಶ್ವರ್ ಕೂಡ ದಲಿತ ಸಿಎಂ ವಿಶ್ವಾಸದಲ್ಲೇ ದಿನದೂಡುತ್ತಿದ್ದಾರೆ. ಇವರಿಬ್ಬರನ್ನೂ ಬಿಟ್ಟು, ಸಿದ್ದರಾಮಯ್ಯ ಅವರ ಅತ್ಯಾಪ್ತ, ಲಿಂಗಾಯತ ಎಂ.ಬಿ. ಪಾಟೀಲ್ ಅವರು ಸಿಎಂ ಆದರೂ ಅಚ್ಚರಿ ಇಲ್ಲ.