ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ಕಾಂಗ್ರೆಸ್ ಶಾಸಕ ತಮ್ಮ ಆಪ್ತರ ಜೊತೆ ಫೋನಿನಲ್ಲಿ ಮಾತಾಡಿದ್ದರು. ಈ ವೀಡಿಯೋ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಫೋನ್ನಲ್ಲಿ ಆಪ್ತರ ಜೊತೆ ಮಾತಾಡ್ತಿದ್ದ ಬಿ.ಆರ್. ಪಾಟೀಲ್, ಸಿದ್ದರಾಮಯ್ಯ ಲಕ್ಕಿ ಲಾಟರಿ ಹೊಡೆದುಬಿಟ್ಟ. ಮುಖ್ಯಮಂತ್ರಿಯೂ ಆಗಿಬಿಟ್ಟ. ಅಲ್ಲದೇ ಸಿದ್ದರಾಮಯ್ಯಗೆ ಸೋನಿಯಾ ಗಾಂಧಿ ಅವರನ್ನು ಮೊದಲು ಭೇಟಿ ಮಾಡಿಸಿದವನು ನಾನೇ. ಅವನ ಗ್ರಹಚಾರ ಚೆನ್ನಾಗಿತ್ತು ಅದಕ್ಕೆ ಸಿಎಂ ಆದ ಎಂದು ವ್ಯಂಗ್ಯವಾಡಿದ್ದರು.
ಆದರೆ ಇದೀಗ ಈ ವಿಚಾರಕ್ಕೆ ಖುದ್ದು ಸ್ಪಷ್ಟನೆ ನೀಡಿರುವ ಬಿ.ಆರ್. ಪಾಟೀಲ್, ಸಿದ್ದರಾಮಯ್ಯ ಮಾಸ್ ಲೀಡರ್. ನನ್ನ ಮತ್ತು ಅವರ ಸಂಬಂಧ ಹಾಳು ಮಾಡಲು ಉದ್ದೇಶಪೂರ್ವಕವಾಗಿ ಯತ್ನ ನಡೆದಿದೆ ಎಂದು ಹೇಳಿದ್ದಾರೆ.
ಈ ಕುರಿತು ವೀಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಸಿದ್ದರಾಮಯ್ಯನವರು ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಲ್ಲ ಎಂದಾಗ ನಾನು ಭೇಟಿ ಮಾಡೋಣ ಎಂದು ಹೇಳಿ ಒತ್ತಾಯಿಸಿದ್ದೆ. ಆದರೆ ನನ್ನ ಹೇಳಿಕೆಯನ್ನು ತಿರುಚಲಾಗಿದ್ದು, ಸಿದ್ದರಾಮಯ್ಯನವರನ್ನು ನಾವು ಸಿಎಂ ಮಾಡಿಲ್ಲ. ಸಿದ್ದರಾಮಯ್ಯಗೆ ಸಾಥ್ ಕೊಟ್ಟು 9 ಶಾಸಕರ ಜೊತೆ ನಾನು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿಕೊಂಡಿದ್ದೇವೆ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡುವ ಶಕ್ತಿ ನನಗಿಲ್ಲ, ಆದರೆ ಅವರಿಗಿರುವ ಜನ ಬೆಂಬಲವನ್ನು ನೋಡಿ ಕಾಂಗ್ರೆಸ್ ಅವರನ್ನು ಸಿಎಂ ಮಾಡಿದೆ ಎಂದು ಸಿದ್ದು ಪರ ಪಾಟೀಲ್ ಬ್ಯಾಟ್ ಬೀಸಿದ್ದಾರೆ. ನನ್ನ ಮತ್ತು ಅವರ ನಡುವಿನ ಆತ್ಮೀಯ ಸಂಬಂಧ ಹಾಳು ಮಾಡೋದಕ್ಕೆ ಉದ್ದೇಶಪೂರ್ವಕವಾಗಿ ವೀಡಿಯೋ ಬಿಡುಗಡೆ ಮಾಡಿ ತೇಜೋವಧೆ ಮಾಡಲಾಗುತ್ತಿದೆ. ಇದು ಸರಿಯಲ್ಲ ಎಂದು ಕೈ ಶಾಸಕ ಬೇಸರ ವ್ಯಕ್ತಪಡಿಸಿದ್ದಾರೆ.