Bollywood News: ಭಾರತೀಯ ಚಿತ್ರರಂಗ ಕಂಡ ಬಾಲಿವುಡ್ ನ ಹಿರಿಯ ನಟ ಮಿಥುನ್ ಚಕ್ರವರ್ತಿ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ. ಅಕ್ಟೋಬರ್ 8 ರಂದು ನಡೆಯಲಿರುವ 70ನೇ ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮಿಥುನ್ ಚಕ್ರವರ್ತಿ ಅವರು ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.
ದಾದಾಸಾಹೇಬ್ ಫಾಲ್ಕೆ ಘೋಷಣೆ ಕುರಿತಂತೆ ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಮಿಥುನ್ ಚಕ್ರವರ್ತಿ ಅವರ ಗಮನಾರ್ಹ ಸಿನಿಮೀಯ ಪ್ರಯಾಣವು ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ. ಭಾರತೀಯ ಚಿತ್ರರಂಗಕ್ಕೆ ಅವರ ಅಪ್ರತಿಮ ಕೊಡುಗೆಗಾಗಿ ಮಿಥುನ್ ಚಕ್ರವರ್ತಿಯವರನ್ನು ದಾದಾಸಾಹೇಬ್ ಫಾಲ್ಕೆ ತೀರ್ಪುಗಾರರ ಸಮಿತಿಯು ಆಯ್ಕೆ ಮಾಡಿದೆ. ಅಕ್ಟೋಬರ್ 8 ರಂದು 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದು ಬರೆದು ಪೋಸ್ಟ್ ಹಂಚಿಕೊಂಡಿದ್ದಾರೆ.
ಇನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೂ ಸಹ ಮಿಥುನ್ ಚಕ್ರವರ್ತಿ ಅವರಿಗೆ ಶುಭಾಶಯ ಹೇಳಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. “ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ, ಪ್ರತಿಷ್ಠಿತ ದಾದಾ ಸಾಹೇಬ್ ಪ್ರಶಸ್ತಿ ಬಂದಿರೋದಿಕ್ಕೆ ಮಿಥುನ್ ಚಕ್ರವರ್ತಿ ಅವರಿಗೆ ಧನ್ಯವಾದಗಳು. ಅವರು ಸಾಂಸ್ಕೃತಿಕ ವ್ಯಕ್ತಿ, ಇವರ ಪ್ರತಿಭೆಯನ್ನು ಎಲ್ಲ ಪೀಳಿಗೆಯವರು ಕೂಡ ಹೊಗಳಿದ್ದಾರೆ. ಅಭಿನಂದನೆಗಳು” ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
ಇನ್ನು, ದಾದಾಸಾಹೇಬ್ ಫಾಲ್ಕೆ ಘೋಷಣೆ ಆಗುತ್ತಿದ್ದಂತೆಯೇ ಅತ್ತ ಇಡೀ ಬಾಲಿವುಡ್ ಮಿಥುನ್ ಚಕ್ರವರ್ತಿ ಅವರನ್ನು ಅಭಿನಂದಿಸುತ್ತಿದೆ. ಅವರ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಈ ನಡುವೆ ಸ್ವತಃ ಮಿಥುನ್ ಚಕ್ರವರ್ತಿ ಕೂಡ ಸಂತಸದ ಕುರಿತು ಮಾತಾಡಿದ್ದಾರೆ. “ನನಗೆ ಶಬ್ದಗಳಿಲ್ಲ, ನನಗೆ ಅಳಲೂ ಆಗುತ್ತಿಲ್ಲ. ನಗಲೂ ಆಗ್ತಿಲ್ಲ. ನಾನು ಇದನ್ನು ಊಹಿಸಿಯೂ ಇರಲಿಲ್ಲ. ಈ ಪ್ರಶಸ್ತಿಯನ್ನು ನನ್ನ ಕುಟುಂಬ, ಅಭಿಮಾನಿಗಳಿಗೆ ಅರ್ಪಿಸುವೆ” ಎಂದು ಅವರು ಹೇಳಿದ್ದಾರೆ.
ಮಿಥುನ್ ಚಕ್ರವರ್ತಿ ಅಂದಾಕ್ಷಣ ನೆನಪಾಗೋದೇ ಅವರ ಅದ್ಭುತ ಡ್ಯಾನ್ಸ್. ಅವರು ಭಾರತೀಯ ಚಿತ್ರರಂಗ ಕಂಡ ಅಪರೂಪದ ಹಿರಿಯ ನಟ. ಅವರ ಕೊಡುಗೆ ಅಪಾರ. ಈ ಹಿಂದೆ ಮಿಥುನ್ ಅವರಿಗೆ ‘ಪದ್ಮ ಭೂಷಣ’ ಪ್ರಶಸ್ತಿ ಘೋಷಣೆಯಾಗಿತ್ತು. ಇದಾಗಿ ತಿಂಗಳುಗಳು ಆಗುತ್ತಿದ್ದಂತೆ ‘ದಾದಾ ಸಾಹೇಬ್ ಫಾಲ್ಕೆ’ ಪ್ರಶಸ್ತಿ ಘೋಷಣೆಯಾಗಿದೆ.
ಪದ್ಮ ಭೂಷಣ ಪ್ರಶಸ್ತಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವಿತರಿಸಿ, ಗೌರವಿಸಿದ್ದರು. ಮಿಥುನ್ ಚಕ್ರವರ್ತಿ ಅವರು ಮೂರು ಬಾರಿ ರಾಷ್ಟ್ರ ಪ್ರಶಸ್ತಿಯನ್ನು ಪಡೆದಿದ್ದಾರೆ ಎಂಬುದು ವಿಶೇಷ. 74 ವರ್ಷ ವಯಸ್ಸಿನ ಮಿಥುನ್ ಚಕ್ರವರ್ತಿ, ಹಿಂದಿ ಮತ್ತು ಬಂಗಾಳಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ನಟನೆಯಷ್ಟೇ ಅಲ್ಲ, ನಿರ್ಮಾಪಕರಾಗಿಯೂ, ರಾಜಕಾರಣಿಯೂ ಆಗಿರುವ ಮಿಥುನ್ ಚಕ್ರವರ್ತಿ ಅವರು ರಿಯಾಲಿಟಿ ಶೋ ವೊಂದರ ತೀರ್ಪುಗಾರರಾಗಿಯೂ ಕೆಲಸ ಮಾಡಿದ್ದರು.
ಮಿಥುನ್ ಚಕ್ರವರ್ತಿ , ಅವರ ನೂರಾರು ಸಿನಿಮಾಗಳಲ್ಲಿ ಸಾಕಷ್ಟು ಹಿಟ್ ಸಿನಿಮಾಗಳು ಬಂದಿವೆ. ‘ಸುರಕ್ಷಾ’, ‘ಡ್ಯಾನ್ಸ್ ಡ್ಯಾನ್ಸ್’, ‘ಹಮ್ ಪಾಂಚ್’, ‘ಬಾಕ್ಸರ್’, ‘ಕಸಮ್ ಪೈದ ಕರ್ನೆ ವಾಲೆ ಕಿ’, ‘ಸಾಹಸ್’, ‘ದಿಲ್‌ವಾಲಾ’ ಮುಂತಾದ ಹಿಟ್ ಸಿನಿಮಾಗಳು ಅವರ ಸಿನಿಮಾ ಲಿಸ್ಟ್ ನಲ್ಲಿವೆ. ಮಿಥುನ್ ಚಕ್ರವರ್ತಿ ಅವರು ಇದುವರೆಗೂ 350ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇಲ್ಲಿಯವರೆಗೆ ಬಂಗಾಳಿ, ಹಿಂದಿ, ಒಡಿಯಾ, ಭೋಜಪುರಿ, ತಮಿಳು, ತೆಲುಗು, ಕನ್ನಡ, ಪಂಜಾಬಿ ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಂದಹಾಗೆ ಕನ್ನಡದ ಕಿಚ್ಚ ಸುದೀಪ್, ಶಿವರಾಜ್‌ಕುಮಾರ್ ಕಾಂಬಿನೇಶನ್‌ನಲ್ಲಿ ಮೂಡಿಬಂದ ‘ದಿ ವಿಲನ್’ ಸಿನಿಮಾದಲ್ಲಿ ಅವರು ಕಾಣಿಸಿಕೊಂಡಿದ್ದರು.
ವಿಜಯ್ ಭರಮಸಾಗರ, ಫಿಲ್ಮ್ ಬ್ಯೂರೋ, ಕರ್ನಾಟಕ ಟಿವಿ