Darshan Case: ಗಂಡು ಮಗುವಿಗೆ ಜನ್ಮ ನೀಡಿದ ಮೃತ ರೇಣುಕಾಸ್ವಾಮಿ ಪತ್ನಿ

Sandalwood News: ಕೆಲ ತಿಂಗಳ ಹಿಂದೆ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಮಾಡಿದ್ದ ಕಾರಣಕ್ಕೆ, ನಟ ದರ್ಶನ್ ಗ್ಯಾಂಗ್‌ನಿಂದ ಕೊಲೆಯಾಗಿ ಸಾವನ್ನಪ್ಪಿದ ರೇಣುಕಾಸ್ವಾಮಿ ಪತ್ನಿಗೆ ಗಂಡು ಮಗು ಜನಿಸಿದೆ.

ರೇಣುಕಾಸ್ವಾಮಿ ಕೊಲೆಯಾದಾಗಲೇ ಆತನ ಪತ್ನಿ ಸಹನಾಗೆ 5 ತಿಂಗಳು ತುಂಬಿತ್ತು. ಇದೀಗ ಚಿತ್ರದುರ್ಗದ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಯಾಗಿ, ಆಕೆಗೆ ಗಂಡು ಮಗು ಹುಟ್ಟಿದೆ. ಪವಿತ್ರಾ ಗೌಡ ಮತ್ತು ಇನ್ನು ಇತರ ಹೆಣ್ಣು ಮಕ್ಕಳಿಗೆ ರೇಣುಕಾಸ್ವಾಮಿ ಗೌತಮ್ ಎಂಬ ಫೇಕ್ ಅಕೌಂಟ್ ಮೂಲಕ ಕೆಟ್ಟದಾಗಿ ಮೆಸೇಜ್ ಮಾಡುತ್ತಿದ್ದರು ಅನ್ನೋ ಆರೋಪವಿತ್ತು.

ಪವಿತ್ರಾ ಗೌಡ ಕೈ ಕೆಳಗೆ ಕೆಲಸ ಮಾಡುತ್ತಿದ್ದ ವ್ಯಕ್ತಿ ಪವಿತ್ರಾಗೌಡ ಅಕೌಂಟ್ ಮೂಲಕ ರೇಣುಕಾಸ್ವಾಮಿಯ ನಂಬರ್ ಪಡೆದು, ಚಾಟಿಂಗ್ ಮಾಡಿ, ಆತ ಬೆಂಗಳೂರಿಗೆ ಬರುವ ರೀತಿ, ಸ್ಕೆಚ್ ಹಾಕಿ, ಕಿಡ್ನ್ಯಾಪ್ ಮಾಡಿಸಲಾಗಿತ್ತು. ಬಳಿಕ, ದರ್ಶನ್, ಪವಿತ್ರ ಮತ್ತು ಸಂಗಡಿಗರು ಸೇರಿ, ರೇಣುಕಾಸ್ವಾಮಿಗೆ ಚಿತ್ರಹಿಂಸೆ ನೀಡಿ ಕೊಲೆ ಮಾಡಿದ್ದರು.

ಕೊಲೆ ಕೇಸ್ ಮುಚ್ಚಿ ಹಾಕಲು ದರ್ಶನ್ ಸಾಕಷ್ಟು ಪ್ರಯತ್ನ ಪಟ್ಟರೂ ಕೂಡ, ಬೆಂಗಳೂರು ಪೊಲೀಸರು ಬರೀ ಎರಡೇ ದಿನದಲ್ಲಿ ದರ್ಶನ್ ಬಣ್ಣ ಬಯಲು ಮಾಡಿ, ಆರೋಪಿಗಳನ್ನು ಬಂಧಿಸಿದ್ದರು. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಎಲ್ಲ ಖೈದಿಗಳನ್ನು ಶಿಫ್ಟ್ ಮಾಡಲಾಗಿತ್ತು. ಆದರೆ ಅಲ್ಲಿ ದರ್ಶನ್ ಗ್ಯಾಂಗ್‌ಗೆ ಐಷಾರಾಮಿ ಸೌಲಭ್ಯ ಸಿಗುತ್ತಿರುವುದು ಬಯಲಾಗಿ, ಬಳಿಕ ಬೇರೆ ಬೇರೆ ಜೈಲುಗಳಿಗೆ ಈ ಕೇಸ್‌ ಖೈದಿಗಳನ್ನು ಶಿಫ್ಟ್ ಮಾಡಲಾಯಿತು.

ಇದೀಗ ದರ್ಶನ್ ಬಳ್ಳಾರಿ ಜೈಲಿನಲ್ಲಿದ್ದು, ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅಲ್ಲದೇ, ಹಲವು ಬಾರಿ ಜಾಮೀನು ಪಡೆಯಲು ಪ್ರಯತ್ನಿಸಿದರೂ, ಇಲ್ಲಿಯವರೆಗೂ ದರ್ಶನ್‌ಗೆ ಜಾಮೀನು ಸಿಗುತ್ತಿಲ್ಲ. ಹಾಗಾಗಿ ಮುಂದಿನ ವಿಚಾರಣೆವರೆಗೂ, ಜಾಮೀನು ಸಿಗುವವರೆಗೂ ದರ್ಶನ್‌ಗೆ ಜೈಲೇ ಗತಿ.

About The Author