ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ನ್ಯೂ ಸೀಸನ್‌ಗಾಗಿ ವೀಕ್ಷಕರು ಮತ್ತು ಕಿಚ್ಚ ಸುದೀಪ್ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಇದೀಗ ಬಿಗ್‌ಬಾಸ್ 12ರ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಯಾವಾಗಿನಿಂದ ಬಿಗ್ ಬಾಸ್ ಸ್ಟಾರ್ಟ್ ಆಗುತ್ತೆ, ಯಾರೆಲ್ಲ ಸ್ಪರ್ಧಿಗಳು ಈ ಬಾರಿ ದೊಡ್ಮನೆ ಸೇರುತ್ತಾರೆ. ಹೀಗೆ ಸಾಕಷ್ಟು ಪ್ರಶ್ನೆಗಳು ಅಭಿಮಾನಿಗಳಿಗೆ ಕಾಡುತ್ತಿವೆ.
ಬಿಗ್‌ಬಾಸ್ ಅಭಿಮಾನಿಗಳ ಈ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ಬಿಗ್ ಬಾಸ್ 12 ರಿಯಾಲಿಟಿ ಶೋ ಪ್ರೋಮೋ ಹಾಗೂ ಪ್ರಸಾರ ದಿನಾಂಕಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಹೌದು.. ಕಿಚ್ಚ ಸುದೀಪ್ ಅವರು ಕಳೆದ ವರ್ಷ ಬಿಗ್ ಬಾಸ್ ನಡೆಸಿಕೊಡೋದಿಲ್ಲ ಎಂದು ಹೇಳಿದ್ದರು. ಆದರೆ, ಈ ಬಾರಿ ಅವರು ಮತ್ತೆ ದೊಡ್ಮನೆ ನಿರೂಪಣೆಗೆ ಕಂಬ್ಯಾಕ್ ಮಾಡುತ್ತಿದ್ದಾರೆ. ಈ ಕಾರಣಕ್ಕೆ ಶೋ ಬಗ್ಗೆ ಕುತೂಹಲ ಇದೆ. ಕಿಚ್ಚ ಸುದೀಪ್ ಬರ್ತ್ಡೇ ದಿನ ದೊಡ್ಡ ಅಪ್ಡೇಟ್ ಸಿಗಲಿದೆ.
ಕಿಚ್ಚ ಸುದೀಪ್ ಅವರು ಸೆಪ್ಟೆಂಬರ್ 2ರಂದು ಬರ್ತ್ಡೇ ಆಚರಿಸಿಕೊಳ್ಳುತ್ತಿದ್ದಾರೆ. ಈ ವಿಶೇಷ ದಿನಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ. ಈ ದಿನದಂದು ಬಿಗ್ ಬಾಸ್ ಪ್ರೋಮೋ ಬಿಡುಗಡೆ ಕಾಣಲಿದೆ ಎಂದು ಹೇಳಲಾಗುತ್ತಿದೆ. ಸೆಪ್ಟೆಂಬರ್ 28ರಂದು ಬಿಗ್ ಬಾಸ್ ಗ್ರ್ಯಾಂಡ್ ಓಪನಿಂಗ್ ನಡೆಯಲಿದೆ ಎನ್ನಲಾಗಿದೆ. 29ರಿಂದ ದೊಡ್ಮನೆ ಆಟ ಶುರುವಾಗಲಿದೆ. ಯಾವೆಲ್ಲ ಸ್ಪರ್ಧಿಗಳು ಈ ಬಾರಿ ಇರುತ್ತಾರೆ ಎನ್ನುವ ಕುತೂಹಲಕ್ಕೆ ಪ್ರೋಮೋದಲ್ಲಿ ಉತ್ತರ ಸಿಗಲಿದೆ.
ಬಿಗ್ ಬಾಸ್‌ನಲ್ಲಿ ಜನ ಸಾಮಾನ್ಯರು ಕೂಡ ಸ್ಪರ್ಧಿಸಬಹುದು ಎಂಬ ಆಯ್ಕೆಯನ್ನು ಈ ಹಿಂದೆ ನೀಡಲಾಗಿತ್ತು. ಅದನ್ನು ಈ ಬಾರಿ ಕೊಡಲಾಗುತ್ತದೆಯೇ ಅಥವಾ ಇಲ್ಲವೇ ಎನ್ನುವ ಪ್ರಶ್ನೆ ಅಭಿಮಾನಿಗಳಿಗೆ ಮೂಡಿದೆ. ಪ್ರೋಮೋದಲ್ಲಿ ಈ ಬಗ್ಗೆ ವಿವರ ಸಿಗೋ ಸಾಧ್ಯತೆ ಇದೆ. ಸುದೀಪ್ ಬರ್ತ್ಡೇ ದಿನ ಅವರ ಮುಂದಿನ ಸಿನಿಮಾ ಬಗ್ಗೆ ಅಪ್ಡೇಟ್ ಸಿಗೋ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಅವರ ಹೊಸ ಸಿನಿಮಾದ ಟೈಟಲ್ ಕೂಡ ಈ ದಿನದಂದು ರಿವೀಲ್ ಆಗುವ ಸಾಧ್ಯತೆ ಇದೆಯಂತೆ. ಈ ಎಲ್ಲಾ ವಿಚಾರಗಳು ಅಭಿಮಾನಿಗಳ ಖುಷಿಯನ್ನು ಹೆಚ್ಚಿಸಿವೆ. ಸುದೀಪ್ ಬರ್ತ್‌ಡೇ ಮತ್ತಷ್ಟು ವಿಶೇಷ ಆಗಲಿವೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ