Bengaluru News: ಬೆಂಗಳೂರಿನ ಹಿರಿಯ ನಾಗರಿಕೊಬ್ಬರಿಗೆ ಸೈಟ್ ನೀಡುವಲ್ಲಿ ವಿಳಂಬ ಧೋರಣೆಯನ್ನು ಅನುಸರಿಸಿದ ಹಿನ್ನೆಲೆಯಲ್ಲಿ ಬೆಂಗಳೂರು ನಗರಾಭಿವೃದ್ದಿ ಪ್ರಾಧಿಕಾರ ಅಂದರೆ ಬಿಡಿಎಗೆ ಬರೊಬ್ಬರಿ 12.43 ಲಕ್ಷ ರೂಪಾಯಿ ದಂಡ ವಿಧಿಸುವ ಮೂಲಕ ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ ರೇರಾ ಬಿಸಿ ಮುಟ್ಟಿಸಿದೆ.
ನಗರದ ಅರ್ಕಾವತಿ ಬಡಾವಣೆ ಯೋಜನೆಯನ್ನು ರೇರಾ ಕಾಯ್ದೆಯ ಅಡಿಯಲ್ಲಿ 2023ರ ನವೆಂಬರ್ ತಿಂಗಳಿನಲ್ಲಿ ನೋಂದಣಿ ಮಾಡಿಸಲು ತಿಳಿಸಿದ್ದರೂ ಬಿಡಿಎ ಅದನ್ನು ನೋಂದಣಿ ಮಾಡಿಸಿರಲಿಲ್ಲ. ಹೀಗಾಗಿ ಈ ಕೂಡಲೇ ರಿಜಿಸ್ಟರ್ ಮಾಡಬೇಕೆಂದು ಪ್ರಾಧಿಕಾರಕ್ಕೆ ನಿರ್ದೇಶಿಸಿದೆ. ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ ಸೆಕ್ಷನ್ 31ರ ಅಡಿಯಲ್ಲಿ ಬಿಡಿಎ ಆಯುಕ್ತರ ವಿರುದ್ಧ ವಿದ್ಯಾರಣ್ಯಪುರದ ನಿವಾಸಿ ಹಾಗೂ ನಿವೃತ್ತ ಲೆಕ್ಕ ಪರಿಶೋಧಕ ಸುತಂತಿರಾಜ ಅವರು ಪ್ರಾಧಿಕಾರಕ್ಕೆ ದೂರು ನೀಡಿದ್ದರು.
2006ರಲ್ಲಿ ಸುತಂತಿರಾಜ ಬೆಂಗಳೂರು ಪೂರ್ವದ ಅರ್ಕಾವತಿ ಬಡಾವಣೆಯ ಅಮಾನಿಯ ಭೈರತಿಖಾನೆಯ ಬಳಿಯ 18ನೇ ಬ್ಲಾಕ್‌ನಲ್ಲಿನ 60*40 ನಿವೇಶನವನ್ನು7,50,100 ರೂಪಾಯಿಗೆ ಕೊಂಡಿದ್ದರು. ಅಲ್ಲದೆ ಸದರಿ ನಿವೇಶನ 358ಕ್ಕೆ ಸಂಬಂಧಪಟ್ಟ ಕ್ರಯಪತ್ರವನ್ನು 2017ರ ಜನವರಿ 2ರಂದು ರಿಜಿಸ್ಟರ್ ಮಾಡಲಾಗಿತ್ತು. ಇನ್ನೂ ನಿವೇಶನ ಕೊಳ್ಳುವ ಎಲ್ಲ ಪ್ರಕ್ರಿಯೆಗಳು ಪೂರ್ಣವಾಗಿದ್ದರೂ ಸಹ ಬಿಡಿಎ ಅರ್ಕಾವತಿ ಬಡಾವಣೆಯನ್ನು ಅಭಿವೃದ್ದಿ ಮಾಡಲು ನಿರ್ಲಕ್ಷ್ಯ ತೋರುತ್ತಿದೆ ಎಂದು ಸುತಂತಿರಾಜ್ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದರು.
ಅಲ್ಲದೆ ಬಿಡಿಎ ಮಾಡಿರುವ ವಿಳಂಬಕ್ಕೆ ಬಡ್ಡಿ ಸಮೇತ 12.43,792 ರೂಪಾಯಿಗಳನ್ನು ಕೊಡಬೇಕೆಂದು ದೂರುದಾರ ಬಿಡಿಎಗೆ ಬೇಡಿಕೆಯನ್ನು ಇಟ್ಟಿದ್ದರು. ಅಲ್ಲದೆ ಈ ಕುರಿತು ವಿವರಗಳನ್ನು ರೇರಾಗೆ ಅವರು ಸಲ್ಲಿಸಿದ್ದರು. ಆದರೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರೇರಾ ಅನೇಕ ಬಾರಿ ಬಿಡಿಎಗೆ ನೋಟಿಸ್ ಜಾರಿ ಮಾಡಿತ್ತು. ಆದರೆ ಇದಕ್ಕೆ ಬಿಡಿಎ ಯಾವುದೇ ಸೊಪ್ಪು ಹಾಕಿರಲಿಲ್ಲ, ಅಲ್ಲದೆ ಈ ಪ್ರಕರಣದಲ್ಲಿ ಹನ್ನೊಂದು ಸಲ ನಡೆದ ವಿಚಾರಣೆಗೂ ಬಿಡಿಎ ಆಯುಕ್ತರು ಹಾಜರಾಗಲಿಲ್ಲ. ಇನ್ನೂ ಇದಕ್ಕೆ ಸಂಬಂಧಿಸಿದಂತೆ ಉತ್ತರ ನೀಡಲು ಬಿಡಿಎಗೆ ಹೆಚ್ಚಿನ ಸಮಯಗಳ ಕಾಲ ಅವಕಾಶವನ್ನೂ ನೀಡಲಾಗಿತ್ತು. ಅಲ್ಲದೆ ನಿವೇಶನ ಖರೀದಿಗೂ ಮುನ್ನ ಗ್ರಾಹಕರಿಗೆ ಬಿಡಿಎ ನೀಡಿದ್ದ ಭರವಸೆಯನ್ನು ಈಡೇರಿಸುವಲ್ಲಿ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ದೂರುದಾರರು ಕೋರಿರುವಂತೆ ಬಡ್ಡಿ ಸಮೇತ ಹಣವನ್ನು ಆದೇಶದ 60 ದಿನಗಳೊಳಗಾಗಿ ಪಾವತಿ ಮಾಡಬೇಕೆಂದು ರೇರಾ ಅಧ್ಯಕ್ಷ ರಾಕೇಶ್ ಸಿಂಗ್ ಹಾಗೂ ಸದಸ್ಯರಾದ ಜಿ.ರವೀಂದ್ರನಾಥ ರೆಡ್ಡಿ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ಇನ್ನೂ ನಾನು ಕೊಂಡುಕೊಂಡಿದ್ದ ನಿವೇಶನಕ್ಕೆ ಹೋಗಲು ಹಲವು ಬಾರಿ ಪ್ರಯತ್ನಿಸಿದ್ದೆ, ಅದರೆ ಅದು ವಿಫಲವಾಗಿತ್ತು. ಜಮೀನು ನೀಡಿದವರಿಗೆ ಪರಿಹಾರವನ್ನು ನೀಡಿಲ್ಲ ಎಂಬ ಕಾರಣಕ್ಕೆ ಅದು ಸಾಧ್ಯವಾಗಿರಲಿಲ್ಲ. ಈಗ ಆ ಸಮಸ್ಯೆಯು ಪರಿಹಾರವಾಗಿದೆ ಎಂದು ದೂರುದಾರ ಸುತಂತಿರಾಜ್ ಅವರು ತಿಳಿಸಿದ್ದಾರೆ. ಅಲ್ಲದೆ ಅರ್ಕಾವತಿ ಬಡಾವಣೆಯ ಎಲ್ಲ 22 ಬ್ಲಾಕ್‌ಗಳಲ್ಲೂ ಮೂಲ ಸೌಕರ್ಯಗಳ ಕೊರತೆ ಎದುರಾಗಿದೆ ಎಂದು ಬಿಡಿಎ ನಿರ್ಲಕ್ಷ್ಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.