2023-24ರ ಹಣಕಾಸು ವರ್ಷಕ್ಕೆ ಬಿಜೆಪಿಗೆ ಬಂಪರ್ ಕೊಡುಗೆ ಸಿಕ್ಕಿದೆ. ಬಿಜೆಪಿಗೆ ವಿವಿಧ ಮೂಲಗಳಿಂದ ದೇಣಿಗೆ ರೂಪದಲ್ಲಿ ₹2,604.71 ಕೋಟಿ ಹರಿದುಬಂದಿದೆ. ಇದೇ ಅವಧಿಯಲ್ಲಿ ಕಾಂಗ್ರೆಸ್ ₹281.38 ಕೋಟಿ ದೇಣಿಗೆ ಸ್ವೀಕರಿಸಿದೆ.
ಈ ವರ್ಷದ ಆರಂಭದಲ್ಲಿ ಲೋಕಸಭಾ ಚುನಾವಣೆ ಇದ್ದ ಕಾರಣ ರಾಜಕೀಯ ಪಕ್ಷಗಳಿಗೆ ದೊಡ್ಡ ಮಟ್ಟದ ದೇಣಿಗೆ ಲಭಿಸಿದೆ. ಬಿಜೆಪಿಯು, ಕಾಂಗ್ರೆಸ್‌ಗಿಂತ ಒಂಬತ್ತು ಪಟ್ಟು ಅಧಿಕ ದೇಣಿಗೆ ಸ್ವೀಕರಿಸಿದೆ.
ವ್ಯಕ್ತಿಗಳು, ಕಾರ್ಪೊರೇಟ್ ಸಂಸ್ಥೆಗಳು ಮತ್ತು ಎಲೆಕ್ಟೋರಲ್ ಟ್ರಸ್ಟ್‌ಗಳ ಮೂಲಕ ಬಿಜೆಪಿ ಪಡೆದಿರುವ ದೇಣಿಗೆಯು 2022–23ರ ಅವಧಿಯಲ್ಲಿ ಸಂಗ್ರಹಿಸಿದ್ದಕ್ಕಿಂತ ಮೂರು ಪಟ್ಟು ಹೆಚ್ಚಾಗಿದೆ. ಕಾಂಗ್ರೆಸ್ ಕೂಡಾ ಹಿಂದಿನ ಹಣಕಾಸು ವರ್ಷಕ್ಕಿಂತ ಮೂರು ಪಟ್ಟು ಅಧಿಕ ದೇಣಿಗೆ ಗಳಿಸಿದೆ.
ಎರಡೂ ಪಕ್ಷಗಳು ಚುನಾವಣಾ ಟ್ರಸ್ಟ್‌ಗಳಿಂದ ಅತ್ಯಧಿಕ ದೇಣಿಗೆ ಪಡೆದಿದ್ದು, ‘ಪ್ರುಡೆಂಟ್ ಎಲೆಕ್ಟೋರಲ್ ಟ್ರಸ್ಟ್’ ಬಿಜೆಪಿಗೆ ಸುಮಾರು ₹ 724 ಕೋಟಿ ಹಾಗೂ ಕಾಂಗ್ರೆಸ್‌ಗೆ ₹ 156 ಕೋಟಿ ದೇಣಿಗೆ ನೀಡಿದೆ. ಬಿಜೆಪಿಯು ‘ಟ್ರಯಂಫ್ ಎಲೆಕ್ಟೋರಲ್ ಟ್ರಸ್ಟ್’ನಿಂದ ₹127 ಕೋಟಿ ಸ್ವೀಕರಿಸಿದೆ.
ವಿವಿಧ ಪಕ್ಷಗಳು ದೇಣಿಗೆಯಾಗಿ ₹20 ಸಾವಿರ ಅಥವಾ ಅದಕ್ಕಿಂತ ಹೆಚ್ಚಿಗೆ ಪಡೆದಿರುವುದರ ಮಾಹಿತಿಯನ್ನು ಮಾತ್ರ ಚುನಾವಣಾ ಆಯೋಗ ನೀಡಿದೆ. ₹20 ಸಾವಿರ ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತದ ಯಾವುದೇ ದೇಣಿಗೆ ಸ್ವೀಕರಿಸಿಲ್ಲ ಎಂದು ಬಿಎಸ್‌ಪಿ ತನ್ನ ವರದಿಯಲ್ಲಿ ತಿಳಿಸಿದೆ.
ಚುನಾವಣಾ ಬಾಂಡ್ ರೂಪದಲ್ಲಿ ಬಂದ ₹495.52 ಕೋಟಿ ಮೊತ್ತ ಸೇರಿದಂತೆ ಒಟ್ಟು ₹580 ಕೋಟಿ ದೇಣಿಗೆ ಸ್ವೀಕರಿಸಿರುವುದಾಗಿ ಬಿಆರ್‌ಎಸ್ ತಿಳಿಸಿದೆ. ದೇಣಿಗೆಯ ವಿವರ ಸಲ್ಲಿಸುವಾಗ, ಚುನಾವಣಾ ಬಾಂಡ್ ಮೂಲಕ ಪಡೆದ ದೇಣಿಗೆ ವಿವರ ಬಹಿರಂಗಪಡಿಸುವುದನ್ನು ಚುನಾವಣಾ ಆಯೋಗವು ಕಡ್ಡಾಯಗೊಳಿಸಿಲ್ಲ.
ಆದರೆ ಬಿಆರ್‌ಎಸ್, ವೈಎಸ್‌ಆರ್ ಕಾಂಗ್ರೆಸ್, ಡಿಎಂಕೆ ಮತ್ತು ಜೆಎಂಎಂ ಪಕ್ಷಗಳು ಚುನಾವಣಾ ಬಾಂಡ್‌ಗಳ ಮೂಲಕ ಪಡೆದ ದೇಣಿಗೆಯ ವಿವರಗಳನ್ನೂ ಬಹಿರಂಗಪಡಿಸಿವೆ.
ಕಾಂಗ್ರೆಸ್ ಪಕ್ಷಕ್ಕೆ ಅದರ ಮುಖಂಡರು ಒಳಗೊಂಡಂತೆ ಸುಮಾರು 500 ಮಂದಿ ಬೆಂಬಲಿಗರು ತಲಾ ₹1.38 ಲಕ್ಷ ದೇಣಿಗೆ ನೀಡಿದ್ದಾರೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 138 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕಳೆದ ವರ್ಷದ ಡಿಸೆಂಬರ್‌ನಲ್ಲಿ ‘ದೇಶಕ್ಕಾಗಿ ದೇಣಿಗೆ ನೀಡಿ’ (ಡೊನೇಟ್ ಫಾರ್ ದೇಶ್) ಅಭಿಯಾನ ನಡೆಸಿತ್ತು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮುಖಂಡರಾದ ಸೋನಿಯಾ ಗಾಂಧಿ ರಾಹುಲ್ ಗಾಂಧಿ ಪ್ರಿಯಾಂಕಾ ಗಾಂಧಿ ಕೆ.ಸಿ.ವೇಣುಗೋಪಾಲ್ ಜೈರಾಮ್ ರಮೇಶ್ ಅಶೋಕ್ ಗೆಹಲೋತ್ ಮತ್ತು ಪವನ್ ಖೇರಾ ಅವರು ತಲಾ ₹1.38 ಲಕ್ಷ ದೇಣಿಗೆ ನೀಡಿದ್ದಾರೆ.
ಇನ್ನು ಯಾವ ಪಕ್ಷಕ್ಕೆ ಎಷ್ಟು ದೇಣಿಗೆ ಸಿಕ್ಕಿದೆ ಅನ್ನೋದನ್ನ ನೋಡೋದಾದ್ರೆ, ಬಿಜೆಪಿಗೆ 2604.71, ಬಿಆರ್‌ಎಸ್ ಗೆ 580, ಕಾಂಗ್ರೆಸ್ ಗೆ 281.38, ವೈಎಸ್‌ಆರ್ ಕಾಂಗ್ರೆಸ್ ಗೆ 184,ಡಿಎಂಕೆ ಗೆ 81.56,ಜೆಎಂಎಂ ಗೆ 11.5, ಸಿಪಿಎಂ 7.64, ಟಿಎಂಸಿ ಗೆ 6.42,ಜೆಡಿಎಸ್ ಗೆ 2.45, ಜೆಡಿಯುಗೆ 1.81 ರಷ್ಟು ಅನುದಾನ ಸಿಕ್ಕಿದೆ.