ಧರ್ಮಸ್ಥಳದ ಆರೋಪ ಪ್ರಕರಣದ ಬಗ್ಗೆ, ಮೊದಲ ಬಾರಿಗೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಸ್ಪಷ್ಟನೆ ನೀಡಿದ್ದಾರೆ. ರಾಷ್ಟ್ರೀಯ ನ್ಯೂಸ್ ಏಜೆನ್ಸಿ PTIಗೆ ನೀಡಿದ ಸಂದರ್ಶನದಲ್ಲಿ, ನಿಗೂಢ ಸಾವಿನ ಆರೋಪಗಳ ಬಗ್ಗೆ ಮೊದಲ ಬಾರಿಗೆ ಮಾತನಾಡಿದ್ದಾರೆ.
ಆರೋಪಗಳು ಆಧಾರ ರಹಿತ ಮತ್ತು ಸೃಷ್ಟಿಸಲಾಗಿದೆ. ನಾನು ಈ ರೀತಿಯ ಆರೋಪಗಳಿಂದ ನೊಂದಿದ್ದೇನೆ. ನನ್ನ ಹಾಗೂ ಕ್ಷೇತ್ರದ ಬಗ್ಗೆ ಯಾವುದೇ ಅನುಮಾನ ಇಲ್ಲ. ಈ ರೀತಿಯ ಆರೋಪಗಳ ಬಗ್ಗೆ ಅಸಹ್ಯ ಪಡುತ್ತೇನೆ. ಎಸ್‌ಐಟಿ ಟೀಂ ರಚನೆ ಮಾಡಿರುವುದನ್ನು ಸ್ವಾಗತಿಸುತ್ತೇನೆ. ಒಮ್ಮೆ ಎಲ್ಲರ ಎದುರು ಸತ್ಯ ಹೊರಗೆ ಬರಬೇಕಿದೆ. ತನಿಖೆಗೆ ನಮ್ಮ ಸಂಪೂರ್ಣ ಸಹಕಾರವನ್ನು ನೀಡುತ್ತೇವೆ ಎಂದು ವೀರೇಂದ್ರ ಹೆಗ್ಗಡೆಯವರು ಸ್ಪಷ್ಟನೆ ಕೊಟ್ಟಿದ್ದಾರೆ.
ಎಸ್‌ಐಟಿ ತನಿಖೆ ಮತ್ತು ಸರ್ಕಾರದ ನಿರ್ಧಾರವನ್ನು ಸ್ವಾಗತಿಸುತ್ತೇನೆ. ಜನರಲ್ಲಿ ಹಲವು ಅನುಮಾನಗಳು ಸೃಷ್ಟಿಯಾಗಿದ್ದವು. ಭಕ್ತರಲ್ಲಿ ಹಲವು ಗೊಂದಲಗಳು ಮೂಡಿದ್ದವು. ತನಿಖೆಯಿಂದ ಎಲ್ಲವೂ ಕ್ಲಿಯರ್ ಆಗಲಿವೆ. ತನಿಖೆ ಅನ್ನೋದು ಒಳ್ಳೆಯ ನಿರ್ಧಾರ. ಪರಿಹಾರ ಹುಡುಕಲು ಸೂಕ್ತವಾದದ್ದಾಗಿದೆ ಅಂತಾ ವೀರೇಂದ್ರ ಹೆಗ್ಗಡೆಯವರು ಹೇಳಿದ್ದಾರೆ.
ಇನ್ನು, ತಮ್ಮ ಕುಟುಂಬದ ವಿವರವನ್ನು ಇದೇ ವೇಳೆ ವೀರೇಂದ್ರ ಹೆಗ್ಗಡೆಯವರು ಬಿಚ್ಚಿಟ್ಟಿದ್ದಾರೆ. ನನಗೆ ಮೂವರು ಸಹೋದರರು, ಓರ್ವ ಸಹೋದರಿ ಇದ್ದಾರೆ. ನನ್ನ 2ನೇ ಸಹೋದರ ಬೆಂಗಳೂರಿನಲ್ಲಿ ಇದ್ದಾನೆ. ಆತ ಶಿಕ್ಷಣ ಸಂಸ್ಥೆಗಳ ಜವಾಬ್ದಾರಿ ಹೊತ್ತಿದ್ದಾನೆ. 3ನೇ ಸಹೋದರ ಇಲ್ಲೇ ಇದ್ದಾನೆ. ನಾನು ಇಲ್ಲದಿರುವಾಗ ನನ್ನ ಸ್ಥಾನದಲ್ಲಿ ನಿಲ್ಲುತ್ತಾನೆ. ಧರ್ಮಸ್ಥಳದಲ್ಲಿರುವ ಸಂಸ್ಥೆಗಳ ಜವಾಬ್ದಾರಿಯನ್ನು ಹೊರುತ್ತಾನೆ. ಅಲ್ಲಿನ ಸ್ವಚ್ಛತೆಗಳ ಬಗ್ಗೆ ಗಮನಹರಿಸುತ್ತಾನೆ. ಆತ ಹಲವು ಜವಾಬ್ದಾರಿಗಳನ್ನು ಹೊತ್ತಿದ್ದಾನೆ. ಇನ್ನಿಬ್ಬರು ಸಹೋದರರು ಸ್ವತಂತ್ರವಾಗಿದ್ದಾರೆ. ನನ್ನ ಭಾವ ಧಾರವಾಡ ಮೆಡಿಕಲ್ ಕಾಲೇಜಿನಲ್ಲಿ ಇದ್ದಾರೆ. ಅದೀಗ ಯೂನಿವರ್ಸಿಟಿ ಆಗಿದೆ. ಅಲ್ಲಿ ವೈಸ್ ಚಾನ್ಸಲರ್ ಆಗಿದ್ದಾರೆ ಎಂದಿದ್ದಾರೆ.
2 ದಿನಗಳ ಹಿಂದಷ್ಟೇ ರಾಜ್ಯ ಬಿಜೆಪಿ ನಾಯಕರು ಧರ್ಮಸ್ಥಳ ಚಲೋ ಕೈಗೊಂಡಿದ್ರು. ಆಗಸ್ಟ್ 16ರಂದು ಶಾಸಕ ಎಸ್.ಆರ್. ವಿಶ್ವನಾಥ್ ನೇತೃತ್ವದಲ್ಲಿ, 300ಕ್ಕೂ ಹೆಚ್ಚು ಕಾರುಗಳಲ್ಲಿ ಧರ್ಮಸ್ಥಳಕ್ಕೆ ಹೋಗಿದ್ರು. ಆಗಸ್ಟ್ 17ರಂದು ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದ 2ನೇ ಟೀಂ, ಧರ್ಮಸ್ಥಳ ತಲುಪಿತ್ತು. ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ರು. ಬಿಜೆಪಿ ನಾಯಕರ ಭೇಟಿ ಬೆನ್ನಲ್ಲೇ, ನಿಗೂಢ ಸಾವುಗಳಿಗೆ ಸಂಬಂಧಿಸಿದ ಆರೋಪಗಳಿಗೆಲ್ಲಾ, ಪ್ರತಿಕ್ರಿಯೆ ನೀಡಿದ್ದಾರೆ. ಇದೇ ಮೊದಲ ಬಾರಿಗೆ ಮೌನ ಮುರಿದು ಧರ್ಮಾಧಿಕಾರಿಗಳು ಮಾತನಾಡಿದ್ದಾರೆ.