Dharwad News: ಧಾರವಾಡ: ಭೋವಿ ಸಮಾಜದವರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ಭೋವಿ ಸಮಾಜ ವಿವಿಧೋದ್ದೇಶ ಕಲ್ಯಾಣ ಸಂಘದ ನೇತೃತ್ವದಲ್ಲಿ ಶುಕ್ರವಾರ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಭೋವಿ ಪದದ ಜೊತೆಗೆ ಸಮಾನಾಂತರ ಪದಗಳೆಂದು ವಡ್ಡರ ಜಾತಿಯ ಉಪ ಜಾತಿಗಳನ್ನು ಸೇರಿಸಿರುವುದರಿಂದ ಮೂಲ ಅಂದರೆ ಪಲ್ಲಕ್ಕಿ ಮಣೆ ಹೊರುವ ಮೂಲ ಭೋವಿ ಜಾತಿಯವರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆಯಲು ಆಗುತ್ತಿರುವ ತೊಂದರೆ ನಿವಾರಿಸಿ ಭೋವಿ ಸಮಾಜಕ್ಕೆ ಆಗುತ್ತಿರುವ ನಿರಂತರ ಅನ್ಯಾಯವನ್ನು ಸರಿಪಡಿಸಬೇಕು, ಭೋವಿ ಜಾತಿಯವರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವಾಗ ಕೇವಲ ಭೋವಿ ಎಂದು ಪರಿಗಣಿಸುವುದು. ಜೊತೆಗೆ ಸಮಾನಾಂತರ ಜಾತಿಗಳನ್ನು ಪರಿಗಣಿಸಬಾರದು, ಸರ್ಕಾರ ರಚನೆ ಮಾಡಿರುವ ಭೋವಿ ನಿಗಮದ ಹೆಸರನ್ನು ಭೋವಿ ಜಾತಿಯ ಹೊರತಾಗಿ ಅನ್ಯ ಜಾತಿ ಹೆಸರಿನಲ್ಲಿ ಪರಿಗಣಿಸದೇ ಭೋವಿ ಜಾತಿ ಹೆಸರಿನಲ್ಲಿ ಮುಂದೆವರೆಸಬೇಕು.
ಭೋವಿ ಜಾತಿಗೆ ಸಂಬಂಧವಿರದ ಭೋವಿ ಹೊರತಾಗಿ ಸಮಾನಾಂತರ ಪದಗಳನ್ನು ಮೂಲ ಭೋವಿ ಜಾತಿಯಿಂದ ಹೊರಗಿಡಬೇಕು, ಮೂಲ ಭೋವಿ ಜನಾಂಗದ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಶಾಲೆ, ವಸತಿ ನಿಲಯಗಳನ್ನು ನಿರ್ಮಿಸಲು ಹಾಗೂ ಭೋವಿ ಸಮುದಾಯ ಭವನ ನಿರ್ಮಿಸಲು, ಹುಬ್ಬಳ್ಳಿ ಧಾರವಾಡದಲ್ಲಿ ಸರ್ಕಾರದಿಂದ ಉಚಿತವಾಗಿ ನಿವೇಶನ ಒದಗಿಸಬೇಕು ಎಂಬ ಇತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.