Dharwad News: ಧಾರವಾಡ: ಕಳೆದ 33 ವರ್ಷಗಳಿಂದ ಖಾಕಿ ನನ್ನ ದೇವರು, ತಾಯಿಯಂತೆ ಗೌರವಿಸಿ, ಬದುಕಿದ್ದೇನೆ. ಯುವ ಅಧಿಕಾರಿಗಳು ವೃತ್ತಿಯ ಘನತೆ, ಗೌರವ ಎತ್ತಿ ಹಿಡಿಯುವಂತೆ ಸದಾ ಕಾಲ ಹೆಮ್ಮೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಎಎಸ್ ಪಿ. ನಾರಾಯಣ ಬರಮನಿ ಅವರು ಹೇಳಿದರು.
ಅವರು ನಿನ್ನೆ ಸಂಜೆ ಎಸ್.ಪಿ.ಕಚೇರಿ ಸಭಾಭವನದಲ್ಲಿ ಧಾರವಾಡ ಜಿಲ್ಲಾ ಪೋಲಿಸ ಇಲಾಖೆಯಿಂದ ಬೆಳಗಾವಿ ಪೊಲೀಸ ಅಯುಕ್ತಾಲಯದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಉಪ ಪೊಲಿಸ ಆಯುಕ್ತ ಹುದ್ದೆಗೆ ವರ್ಗಾವಣೆ ಅಗಿರುವ ನಿಮಿತ್ತ ಆಯೋಜಿಸಿದ್ದ ಬಿಳ್ಕೋಡುಗೆ ಸಮಾರಂಭದಲ್ಲಿ ಗೌರವ, ಸನ್ಮಾನ ಸ್ವೀಕರಿಸಿ, ಮಾತನಾಡಿದರು.
ನಾವು ಕೆಲಸ ಮಾಡುವ ಇಲಾಖೆ, ಹುದ್ದೆಯ ಬಗ್ಗೆ ಯಾವಾಗಲೂ ನಿಷ್ಠೆ, ಹೆಮ್ಮೆ, ಅಭಿಮಾನ ಇರಬೇಕು. ಪೊಲೀಸ ಇಲಾಖೆಯ ಧ್ಯೇಯವಾದ ದುಷ್ಟರಿಗೆ ಶಿಕ್ಷೆ; ಶಿಷ್ಟರಿಗೆ ರಕ್ಷೆ ತರಹ ನಮ್ಮ ವೃತ್ತಿ ಬದುಕು ಇರಬೇಕು ಎಂದರು.
ಪೊಲೀಸ ಇಲಾಖೆಯಲ್ಲಿ ಕೆಲಸ ಮಾಡುವಾಗ ನಿಷ್ಠುರತೆ ಇರಬೇಕು. ಕಾನೂನು ಪ್ರಕಾರ ಆಗುವುದನ್ನು ಮಾಡಲು ಆಗುತ್ತದೆ, ಇಲ್ಲದ್ದನ್ನು ಇಲ್ಲವೆಂದು ನೇರವಾಗಿ ಹೇಳುವ ಸಾಮರ್ಥ್ಯ, ಗುಣ ಬೆಳೆಸಿಕೊಳ್ಳಬೇಕು. ಸಮಾಜವನ್ನು ಸರಿದಾರಿಗೆ ತರುವ ಕೆಲಸ ನಮ್ಮಿಂದ ಆಗಬೇಕು. ನಮ್ಮತನವನ್ನು ಎಂದು ಕಳೆದುಕೊಳ್ಳಬಾರದು ಎಂದು ಅವರು ಹೇಳಿದರು.
ಧಾರವಾಡದಿಂದ ನಿಮ್ಮೆಲ್ಲರ ಪ್ರೀತಿ, ವಿಶ್ವಾಸದ ಮೂಟೆ ಹೊತ್ತು ಹೊರಟಿದ್ದೇನೆ. ಧಾರವಾಡ ಜಿಲ್ಲೆ ಶಾಂತ, ಸುಂದರವಾಗಿದೆ. ಸಂಸ್ಕಾರ, ಸಂಸ್ಕೃತಿ ಇನ್ನೂ ಉಳಿದಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಅರ್ಯ ಅವರು ಮಾತನಾಡಿ, ನೂರು ಪುಸ್ತಕ ಹೇಳುವ ಸಾರವನ್ನು ಒಬ್ಬ ಹಿರಿಯ ಅಧಿಕಾರಿಯ ಅನುಭವದ ಮಾತುಗಳು ಹೇಳುತ್ತವೆ. ಹಿರಿಯ ಪೊಲೀಸ್ ಅಧಿಕಾರಿ ನಾರಾಯಣ ಬರಮನಿ ನಮ್ಮ ಪೊಲೀಸ ಇಲಾಖೆಯ ಹೆಮ್ಮೆಯ ಪುತ್ರ. ಅವರ ಸೇವೆ, ನಡುವಳಿಕೆ, ಕರ್ತವ್ಯ ನಿಷ್ಠೆ ಮತ್ತು ಕರ್ತವ್ಯ ಪ್ರಜ್ಞೆ ಎಲ್ಲರಿಗೂ ಮಾದರಿಯಾಗಿದೆ ಎಂದರು.
ನಾರಾಯಣ ಬರಮನಿ ಅವರು ನಮ್ಮ ಇಲಾಖೆಯ ಐಕೋನ್. ಅವರ ಸುದೀರ್ಘ ಸೇವೆ, ಇಲಾಖೆಯ ಅಧಿಕಾರಿಗಳಿಗೆ ಸ್ಪೂರ್ತಿ, ಹೆಮ್ಮೆ ಮೂಡಿಸಿದೆ ಎದು ಎಸ್ಪಿ ಗುಂಜನ ಆರ್ಯ ಅವರು ಹೇಳಿದರು..
ವೇದಿಕೆಯಲ್ಲಿ ಡಿವೈಎಸ್ ಪಿ ವಿನೋದ ಮುಕ್ತೆದಾರ, ನಾರಾಯಣ ಬರಮನಿ ಅವರ ಧರ್ಮಪತ್ನಿ ಕಸ್ತೂರಿ ಬರಮನಿ, ಸೈಬರ್ ಪೊಲೀಸ ಠಾಣೆ ಡಿವೈಎಸ್.ಪಿ. ಶಿವಾನಂದ ಕಟಗಿ, ಡಿಎಸ್ಪಿ ಡಿಎಆರ್ ದೂಳಪ್ಪ ಧನಗರ ಇದ್ದರು.
ಕಾರ್ಯಕ್ರಮದಲ್ಲಿ ಪೊಲೀಸ್ ಇನಸ್ಪೇಕ್ಟರ್ ಗಳಾದ ಮುರಗೇಶ ಚಣ್ಣನ್ನನವರ, ರವಿ ಕಪ್ಪತ್ತನವರ, ಸಹಾಯಕ ಅಡಳಿತ ಅಧಿಕಾರಿ ಮಹಾಂತೇಶ ಎಸ್.ಹಿರೇಮಠ, ಸೋಕೊ ಅಧಿಕಾರಿ ಸಂಜೀವ ಪಾಟೀಲ ಮತ್ತು ಇತರರು ಮಾತನಾಡಿದರು.
ಪಿಐ ಮಹಾಂತೇಶ ನಿರೂಪಿಸಿದರು. ಡಿವೈಎಸ್.ಪಿ ಶಿವಾನಂದ ಕಟಗಿ ವಂದಿಸಿದರು. ಕಾರ್ಯಕ್ರಮದಲ್ಲಿ ದಾರವಾಡ ಗ್ರಾಮೀಣ ಜಿಲ್ಲೆಯ ವಿವಿಧ ಪೊಲೀಸ ಠಾಣೆಯ ಅಧಿಕಾರಿಗಳು, ಸಿಬ್ಬಂದಿಗಳು, ಸಾರ್ವಜನಿಕರು ಭಾಗವಹಿಸಿದ್ದರು.