Dharwad News: ಧಾರವಾಡ: ಅಂತಾರಾಷ್ಟ್ರೀಯ ಟೆನಿಸ್ ಫೆಡರೇಶನ್ನಿನ ವಿಶ್ವ ಟೆನಿಸ್ ಟೂರ್ ಡಾಲರ್ 25 ಸಾವಿರ ಬಹುಮಾನ ಮೊತ್ತದ ಪುರುಷರ ಸಿಂಗಲ್ಸ್ ಮತ್ತು ಡಬಲ್ಸ್ ಟೆನಿಸ್ ಪಂದ್ಯಾವಳಿ ಧಾರವಾಡ ಜಿಲ್ಲಾ ಟೆನಿಸ್ ಸಂಸ್ಥೆ (DDLTA) ಆಶ್ರಯದಲ್ಲಿ ರಾಜಾಧ್ಯಕ್ಷ ಪೆವಿಲಿಯನ್ ಆವರಣದಲ್ಲಿರುವ ಐದು ಹಾರ್ಡ್ ಕೋರ್ಟ್ ಅಂಗಣಗಳಲ್ಲಿ ಇಂದಿನಿಂದ ಅಂದರೆ 15 ರಿಂದ 22ರ ವರೆಗೆ ನಡೆಯಲಿದ್ದು, ಪಂದ್ಯಾವಳಿಗೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ.
ಅ. 17ರಂದು ಬೆಳಿಗ್ಗೆ 8.30ಕ್ಕೆ ಕಾರ್ಮಿಕ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಪಂದ್ಯಾವಳಿ ಉದ್ಘಾಟಿಸಲಿದ್ದು, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ, ರಾಜ್ಯ ಯುವಜನ ಸೇವಾ ಮತ್ತು ಕ್ರೀಡಾ ಖಾತೆ ಸಚಿವ ಬಿ. ನಾಗೇಂದ್ರ, ಶಾಸಕರಾದ ಅರವಿಂದ ಬೆಲ್ಲದ ಗೌರವ ಅತಿಥಿಗಳಾಗಿರುವರು.
20 ರಾಷ್ಟ್ರಗಳಿಂದ 44 ಆಟಗಾರರು ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದು, ಇದರಲ್ಲಿ 12 ಜನರು ಭಾರತೀಯ ಆಟಗಾರರು ಇದ್ದಾರೆ. ಭಾರತ, ಅಮೇರಿಕಾ, ಫ್ರಾನ್ಸ್, ಜಪಾನ್, ಮಲೇಶಿಯಾ, ನೆದರ್‌ಲ್ಯಾಂಡ್, ಕೋರಿಯಾ, ಸ್ವೀಡನ್, ಗ್ರೇಟ್ ಬ್ರಿಟನ್, ಇಟಲಿ, ವಿಯಟ್ನಾಂ, ಆಸ್ಟ್ರೇಲಿಯಾ, ನೇಪಾಳ, ಸ್ವೀಜರ್‌ಲ್ಯಾಂಡ್, ತೈಪೇ, ಅರ್ಜೆಂಟಿನಾ, ಉಕ್ರೇನ್, ಜರ್ಮನಿ, ಇರಾಕ್ ಮತ್ತು ಕೆಮರೂನ್ ರಾಷ್ಟ್ರಗಳ ಆಟಗಾರರು ತಮ್ಮ ಸಾಮರ್ಥ್ಯ ಪ್ರದರ್ಶಿಸಲಿದ್ದಾರೆ.
ಪಂದ್ಯಾವಳಿಯಲ್ಲಿ ಒಟ್ಟು 32 ಸಿಂಗಲ್ಸ್ ಅರ್ಹತಾ ಸುತ್ತಿನ ಪಂದ್ಯಗಳು ಮತ್ತು 32 ಮೇನ್ ಡ್ರಾ ಪಂದ್ಯಗಳು ನಡೆಯಲಿದ್ದು, ಈ ಪಂದ್ಯಗಳು ಅಕ್ಟೋಬರ್ 15, 16ರಂದು ನಡೆಯಲಿವೆ. ಅರ್ಹತಾ ಸುತ್ತಿನಲ್ಲಿ ಭಾರತದ 18 ಸೇರಿದಂತೆ ಒಟ್ಟು 27 ಆಟಗಾರರು ಪಾಲ್ಗೊಳ್ಳಲಿದ್ದಾರೆ. ಮುಖ್ಯ ಡ್ರಾ ಪಂದ್ಯಗಳು ಅಕ್ಟೋಬರ್ 17 ರಿಂದ ನಡೆಯಲಿವೆ.
ಡಬಲ್ಸ್ ಪಂದ್ಯಗಳಲ್ಲಿ ನೇರವಾಗಿ ಮೇನ್ ಡ್ರಾ ಇರುತ್ತವೆ. 16 ಜೋಡಿಗಳು ಡಬಲ್ಸ್ ನಲ್ಲಿ ಭಾಗವಹಿಸುತ್ತವೆ. ಪ್ರತಿ ಪಂದ್ಯ ಬೆಸ್ಟ್ ಆಫ್ ಫೈವ್ ಸೆಟ್ಸ್ ಇರಲಿದೆ. ಅಂತಿಮ ಪಂದ್ಯಗಳು ಡಬಲ್ಸ್ ಹಾಗೂ ಸಿಂಗಲ್ಸ್ ಕ್ರಮವಾಗಿ ಅ. 21 ಹಾಗೂ 22ರಂದು ನಡೆಯಲಿವೆ. ಜಿ.ಆರ್. ಅಮರನಾಥ ಪಂದ್ಯಾವಳಿಯ ನಿರ್ದೇಶಕರಾಗಿದ್ದು, ಐಟಿಎಫ್ ಮತ್ತು ಕೆಎಸ್‌ಎಲ್‌ಟಿಎ ಉಸ್ತುವಾರಿಯಲ್ಲಿ ಪಂದ್ಯಾವಳಿ ಜರುಗಲಿದೆ.
ಬಹುಮಾನ ಮೊತ್ತ ಮತ್ತು ಪಂದ್ಯಾವಳಿಯ ಖರ್ಚಿಗಾಗಿ ಪ್ರಾಯೋಜಕರಿಂದ ನಿಧಿ ಸಂಗ್ರಹಿಸಲಾಗಿದ್ದು, ಈ ನಿಧಿಯ ಸದ್ಬಳಿಕೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ. ಕ್ರೀಡಾ ಪ್ರೇಮಿಗಳಿಗೆ ಪಂದ್ಯ ವೀಕ್ಷಿಸಲು ಮತ್ತು ಕ್ರೀಡಾಪಟುಗಳಿಗೆ ವಸತಿ ಹಾಗೂ ಇತರ ಸೌಲಭ್ಯಗಳಿಗಾಗಿ ಸೂಕ್ತ ವ್ಯವಸ್ಥೆ ಮಾಡಲಾಗಿದೆ.
ಲೋಕಾ ಪೊಲೀಸರಿಗೆ ಚಳ್ಳೇಹಣ್ಣು ತಿನ್ನಿಸಿ ದಾವಣಗೆರೆ ಅಬಕಾರಿ ಡಿಎಸ್‌ಪಿ ಪರಾರಿ
World Cup:ಗೆದ್ದು ಬಾ ಭಾರತ ಎಂದು ನೃತ್ಯದ ಮೂಲಕ ಶುಭ ಹಾರೈಸಿದ ಡ್ಯಾನ್ಸ್ ತಂಡ..!