ಧಾರವಾಡದಲ್ಲಿ ನಡುಕ ಹುಟ್ಟಿಸಿದ್ದ ಆ ಕಿಲಾಡಿ ಕಳ್ಳರು ಕೊನೆಗೂ ಲಾಕ್

ಧಾರವಾಡ ನಗರದಲ್ಲಿ ನಡೆದ ಸರ ಕಳ್ಳತನ ಹಾಗೂ ಮನೆ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಧಾರವಾಡ ಶಹರ ಪೊಲೀಸ್ ಠಾಣೆಯ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಹಲವು ದಿನಗಳಿಂದ ಆತಂಕ ಮೂಡಿಸಿದ್ದ ಕಳ್ಳತನ ಪ್ರಕರಣಗಳಿಗೆ ಬ್ರೇಕ್ ಹಾಕಲಾಗಿದೆ.

ಬಂಧಿತರನ್ನು ಹುಬ್ಬಳ್ಳಿ ಮೂಲದ ಅಸೀಫ್ ಕಾಶಿಂಸಾಬ ಬೇಗ್ ಮತ್ತು ಅಮ್ಮಿನಭಾವಿ ಗ್ರಾಮದ ಗುರುಪ್ರಸಾದ ಶಿವಾನಂದ ಉಳ್ಳಿಗೇರಿ ಎಂದು ಗುರುತಿಸಲಾಗಿದೆ. ಧಾರವಾಡ ಶಹರ ಹಾಗೂ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಮನೆ ಕಳ್ಳತನ ಪ್ರಕರಣಗಳಲ್ಲಿ ಇವರಿಬ್ಬರ ಪಾತ್ರ ಇರುವುದಾಗಿ ತನಿಖೆಯಿಂದ ತಿಳಿದುಬಂದಿದೆ.

ಆರೋಪಿಗಳಿಂದ ಒಟ್ಟು 4.5 ಲಕ್ಷ ರೂ. ಮೌಲ್ಯದ 31 ಗ್ರಾಂ ಚಿನ್ನದ ಆಭರಣಗಳು, 39,600 ರೂ. ಮೌಲ್ಯದ 124 ಗ್ರಾಂ ಬೆಳ್ಳಿಯ ಆಭರಣಗಳು ಹಾಗೂ ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮುಂದಿನ ತನಿಖೆಗಾಗಿ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ.

ಈ ಯಶಸ್ವಿ ಕಾರ್ಯಾಚರಣೆಗೆ ಧಾರವಾಡ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಶಹರ ಠಾಣೆ ಪೊಲೀಸರ ಕಾರ್ಯಕ್ಷಮತೆಯನ್ನು ಶ್ಲಾಘಿಸಿದ್ದಾರೆ. ನಗರದಲ್ಲಿ ಕಳ್ಳತನ ಪ್ರಕರಣಗಳ ಮೇಲೆ ಮತ್ತಷ್ಟು ಕಟ್ಟುನಿಟ್ಟಿನ ನಿಗಾವಹಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

About The Author