Saturday, March 29, 2025

Latest Posts

Political News: ಕೈ ಪ್ರಭಾವಿ ನಾಯಕನ ಜೊತೆ ಸೇರಿದ್ರಾ ದಳಪತಿ..? : ಬಂಡೆಗೆ ಶಾಕ್‌ ನೀಡಲು ಪ್ಲಾನ್!

- Advertisement -

Political News: ರಾಜ್ಯ ರಾಜಕಾರಣದಲ್ಲಿ ಹನಿಟ್ರ್ಯಾಪ್‌ ಸದ್ದು ಜೋರಾಗಿರುವ ಹೊತ್ತಿನಲ್ಲೇ ದೆಹಲಿಯಲ್ಲಿ ಮಹತ್ವದ ರಾಜಕೀಯ ಬೆಳವಣಿಗೆ ನಡೆದಿದೆ. ಇದರಿಂದ ರಾಜಕಾರಣದಲ್ಲಿ ಮತ್ತೊಂದು ಕ್ಷಿಪ್ರ ಕ್ರಾಂತಿಯಾಗಲಿದೆಯಾ ಎನ್ನುವ ಪ್ರಶ್ನೆ ಮೂಡಿದೆ. ರಾಜ್ಯದ ವಿವಿಧ ಅಭಿವೃದ್ದಿ ಯೋಜನೆಗಳು ಹಾಗೂ ಹನಿಟ್ರ್ಯಾಪ್‌ ವಿಚಾರಕ್ಕೆ ದೆಹಲಿ ದಂಡಯಾತ್ರೆಯಲ್ಲಿರುವ ಕೈ ಪ್ರಭಾವೀ ನಾಯಕ, ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹಾಗೂ ಜೆಡಿಎಸ್‌ ನಾಯಕ, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿಯವರನ್ನು ಭೇಟಿಯಾಗಿ ಮಾತಕತೆ ನಡೆಸಿರುವುದು ತೀವ್ರ ಕುತೂಹಲ ಕೆರಳಿಸಿದೆ.

ಕಳೆದೆರಡು ದಿನಗಳಿಂದ ರಾಷ್ಟ್ರ ರಾಜಧಾನಿಯಲ್ಲಿ ಬೀಡು ಬಿಟ್ಟಿರುವ ಸತೀಶ್‌ ಜಾರಕಿಹೊಳಿ ಕಾಂಗ್ರೆಸ್‌ ಹೈಕಮಾಂಡ್‌ ನಾಯಕರ ಭೇಟಿಯಾಗಿ ರಾಜ್ಯದ ರಾಜಕೀಯ ವಿದ್ಯಮಾನಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ ರಾಜ್ಯದ ಹನಿಟ್ರ್ಯಾಪ್‌ ವಿಚಾರದ ಕುರಿತು ಹೈಕಮಾಂಡ್‌ಗೆ ದೂರು ಸಲ್ಲಿಸಿದ್ದಾರೆ. ಆದರೆ ಇದರ ನಡುವೆಯೇ ಜಾರಕಿಹೊಳಿ, ದಳಪತಿ ಕುಮಾರಸ್ವಾಮಿಯವರನ್ನು ಭೇಟಿಯಾಗಿರುವುದು ರಾಜ್ಯ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ.

ದಳಪತಿ-ಸಾಹುಕಾರ್‌ ಡಿನ್ನರ್‌ ಮೀಟಿಂಗ್..

ಇನ್ನೂ ಒಂದು ಕಡೆ ಕುಮಾರಸ್ವಾಮಿಯವರೂ ಸಹ ಆ ಒಬ್ಬ ಮಹಾನಾಯಕನ ವಿರುದ್ಧ ಹೋರಾಡುತ್ತಿದ್ದಾರೆ. ಅಂದಹಾಗೆ ಸಾಹುಕಾರ್‌ ಸಹ ಅದೇ ನಾಯಕನನ್ನು ಮಣಿಸುವ ಗುರಿ ಇಟ್ಟುಕೊಂಡಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಖುದ್ದಾಗಿ ಕುಮಾರಸ್ವಾಮಿ ಅವರೇ ಸತೀಶ್‌ ಅವರನ್ನು ತಮ್ಮ ಗೆಸ್ಟ್‌ ಹೌಸ್‌ಗೆ ಡಿನ್ನರ್‌ ಮಾಡಲು ಬರುವಂತೆ ಆಹ್ವಾನಿಸಿದ್ದಾರೆ. ರಾಜ್ಯದ ಹಿರಿಯ ನಾಯಕನ ಮನವಿ ಸ್ವೀಕರಿಸಿರುವ ಸತೀಶ್‌ ಜಾರಕಿಹೊಳಿ, ಅವರ ಗೆಸ್ಟ್‌ ಹೌಸ್‌ಗೆ ಡಿನ್ನರ್ ಮಾಡುವುದರ ಜೊತೆಗೆ ಮಹತ್ವದ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಇದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ..‌

ಇನ್ನೂ ಇದೇ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಸತೀಶ್‌ ಜಾರಕಿಹೊಳಿ, ನಾನು ಕುಮಾರಸ್ವಾಮಿ ಭೇಟಿಯಾಗಿದ್ದು ನಿಜವಾಗಿದೆ, ಆದರೆ ಅಲ್ಲಿ ಯಾವುದೇ ರಾಜಕೀಯ ಚರ್ಚೆ ನಡೆಸಿಲ್ಲ. ನಮ್ಮ ಬೆಳಗಾವಿಗೆ ದೊಡ್ಡ ಕಂಪನಿ ಬರಬೇಕಿದೆ ಅದಕ್ಕಾಗಿ ಅವರನ್ನು ಭೇಟಿಯಾಗಿ ಮನವಿ ಮಾಡಿಕೊಂಡಿದ್ದೇನೆ. ಈ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವ ಅವಶ್ಯಕತೆ ಇಲ್ಲ ಎಂದು ತಮ್ಮ ಭೇಟಿಯ ಕುರಿತು ರಾಜಕೀಯ ಚರ್ಚೆಗಳನ್ನು ಮಾಡಿರುವುದನ್ನು ತಳ್ಳಿ ಹಾಕಿದ್ದಾರೆ.

ಅಂದಹಾಗೆ ಮುಖ್ಯವಾಗಿ ರಾಜ್ಯದಲ್ಲಿ ಸಿದ್ದರಾಮಯ್ಯ ಬಣದ ಶಾಸಕರು, ಸಚಿವರನ್ನೇ ಟಾರ್ಗೆಟ್‌ ಮಾಡಲಾಗುತ್ತಿದೆ. ಇದರ ಹಿಂದೆ ರಾಜ್ಯದಲ್ಲಿ ಅಧಿಕಾರದಲ್ಲಿರುವ ಅವರದೇ ಸರ್ಕಾರದ ಡಿಕೆ ಶಿವಕುಮಾರ್‌ ಕೈವಾಡವಿದೆಯಾ..? ಎನ್ನುವ ಶಂಕೆ ಎಲ್ಲರಿಗೂ ಮೂಡಿದೆ. ಅಲ್ಲದೆ ಕಾಂಗ್ರೆಸ್‌ ಪಾಳಯದಲ್ಲಿ ಆಂತರಿಕ ಬೇಗುದಿ ದಿನಕಳೆದಂತೆಲ್ಲ ಹೆಚ್ಚಾಗುತ್ತಿರುವ ಲಕ್ಷಣಗಳು ಗೋಚರಿಸುತ್ತಿವೆ. ಇನ್ನೂ ಹನಿ ಕಹಾನಿಯ ವಿಚಾರಕ್ಕೆ ಡಿಕೆ ಶಿವಕುಮಾರ್‌ ನೀಡುತ್ತಿರುವ ಒಂದೊಂದು ಹೇಳಿಕೆಗಳು ಕೈ ವಲಯದಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವಂತಾಗಿದೆ. ಅದರ ನಡುವೆಯೇ ದಳಪತಿಗಳ ಬದ್ಧ ವೈರಿಯಾಗಿರುವ ಬಂಡೆಯನ್ನು ಎದುರಿಸಲು ಇಬ್ಬರೂ ನಾಯಕರು ಒಂದಾದ್ರಾ ಎನ್ನುವ ಚರ್ಚೆಗಳು ಎಲ್ಲೆಡೆ ಜೋರಾಗಿವೆ.

- Advertisement -

Latest Posts

Don't Miss