Hubballi news: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, ಇಂದು ಕೆಲ ಕಾರ್ಯಕ್ರಮಗಳ ಹಿನ್ನೆಲೆ ಜಿಲ್ಲೆಗೆ ಆಗಮಿಸಿದ್ದೇನೆ. ಆರೋಗ್ಯ ಇಲಾಖೆಯ ವ್ಯವಸ್ಥೆ ಹಾಗೂ ಪ್ರಗತಿ ಪರಿಶೀಲನೆಗಾಗಿ ಶೀಘ್ರವೇ ಜಿಲ್ಲೆಗೆ ಮತ್ತೆ ಆಗಮಿಸಲಿದ್ದೇನೆ. ಈ ಹಿಂದೆ ಈ ಭಾಗದಲ್ಲಿ ಉಸ್ತುವಾರಿ ಸಚಿವನಾಗಿ ಕೆಲಸ ಮಾಡಿದ್ದೇನೆ. 100 ದಿನಗಳ ಆಡಳಿತದಲ್ಲಿ ನಾವು ನುಡಿದಂತೆ ನಡೆದಿದ್ದೇವೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜನಪರ ಆಡಳಿತ ನೀಡುತ್ತಿದೆ. ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದಕೂಡಲೇ ಆಶ್ವಾಶನೆಗಳನ್ನ ಈಡೇರಿಸುವುದಿಲ್ಲ. ಆದ್ರೆ ಸಿದ್ಧರಾಮಯ್ಯ ಅವರು ಜನತೆಗೆ ಕೊಟ್ಟಂತ ಮಾತು ಉಳಿಸಿಕೊಂಡಿದ್ದಾರೆ ಎಂದು ಗುಂಡೂರಾವ್ ಹೇಳಿದ್ದಾರೆ.
ಅಲ್ಲದೇ, ನಾವು ಜನತೆಗೆ ಒಳ್ಳೆಯದನ್ನೇ ಬಯಸಿದ್ದೇವೆ. ಆದ್ರೆ ಅದರಲ್ಲಿ ಕೆಲವರು ಮೊಸರಲ್ಲಿ ಕಲ್ಲು ಹುಡುಕುವಂತ ಕೆಲಸ ಮಾಡಿದ್ದರು. ಈವರೆಗೂ ಯಾವುದೇ ಸರ್ಕಾರ ಕೊಟ್ಟ ಮಾತನ್ನ ಉಳಿಸಿಕೊಂಡಿಲ್ಲ. ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತುನಂತೆ ನಡೆದುಕೊಂಡಿದೆ. ಇದು ನಮಗೆ ತುಂಬಾ ಹೆಮ್ಮೆಯ ವಿಷಯ. ಈ ಹಿಂದೆ ಸಾಂಕ್ರಾಮಿಕ ರೋಗಗಳಿಂದ ಸಾಕಷ್ಟು ಸಾವು ನೋವು ಸಂಭವಿಸುತ್ತಿದ್ದರು. ಈಗ ಅಸಾಂಕ್ರಾಮಿಕ ರೋಗಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ಈ ತರಹದ ರೋಗಗಳನ್ನ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಹಾಗೂ ಇಲಾಖೆ ಬದ್ಧವಾಗಿದೆ. ಈ ನಿಟ್ಟಿನಲ್ಲಿ ಜನತೆಗೆ ಜಾಗೃತಿ ಮೂಡಿಸಲು ಸರ್ಕಾರ ಯೋಜನೆ ಹಮ್ಮಿಕೊಂಡಿದೆ. ಮೊಬೈಲ್ ಯೂನಿಟ್ ಜಾರಿಗೆ ತರಲು ಸರ್ಕಾರ ಯೋಜನೆ ರೂಪಿಸಿದೆ. ಮುಂದಿನ ತಿಂಗಳಿನಿಂದ ಆಶಾಕಿರಣ ಯೋಜನೆ ರೂಪಿಸಲಾಗಿದೆ. ಗ್ರಾಮೀಣ ಭಾಗಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದು ಗುಂಡೂರಾವ್ ಹೇಳಿದ್ದಾರೆ..
ಕೋವಿಡ್ ಹಗರಣ ತನಿಖೆ ವಿಚಾರದ ಬಗ್ಗೆ ಮಾತನಾಡಿದ ಗುಂಡೂರಾವ್, ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ಆಗಬೇಕು. ಉನ್ನತ ಮಟ್ಟದ ತನಿಖೆಯಾಗಬೇಕು ಎಂಬ ಆಗ್ರಹ ಮಾಡಲಾಗಿದೆ. ಇದರಲ್ಲಿ ಯಾರನ್ನೋ ಗುರಿಯಾಗಿಸಬೇಕು ಎಂಬ ಉದ್ದೇಶವಿಲ್ಲ. ಈ ವಿಚಾರದಲ್ಲಾಗಿರುವ ಅವ್ಯವಸ್ಥೆ ಕುರಿತು ಸಮಗ್ರ ತನಿಖೆಯಾಗಬೇಕು. ರಿಪೋರ್ಟ್ ಆಧಾರದ ಮೇಲೆ ಸರ್ಕಾರಕ್ಕೆ ಪತ್ರ ಬರ್ದಿದ್ದೇವೆ. ನಿಷ್ಪಕ್ಷಪಾತವಾಗಿ ತನಿಖೆ ಆಗಬೇಕು . ನ್ಯಾಯಾಧೀಶ ಜಾನ ಮೈಕಲ್ ಕುನ್ನಾ ಆಧಾರದ ಮೇಲೆ ತನಿಖೆ ನಡೆಸಬೇಕು. ನಾವು ವಿರೋಧ ಪಕ್ಷದವರಿದ್ದಾಗ ಆರೋಪ ಮಾಡಿ ಸುಮ್ನೆ ಕೂತಿಲ್ಲ. ನ್ಯಾಯ ಸಿಗಬೇಕು ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಅದು ಅಧಿಕಾರಿಯಾಗಲಿ,ರಾಜಕಾರಣಿಯಾಗಲಿ ತಪ್ಪು ಮಾಡಿದವರಿಗೆ ಕ್ರಮ ಆಗಬೇಕು. ನಾವು ಆರೋಪ ಮಾಡಿ ಅಡ್ಜಸ್ಟಮೆಂಟ್ ಆಗಲ್ಲ . ಇಷ್ಟು ದಿನ ಹಾಗೇ ಆಗ್ತಿತ್ತು, ಆದ್ರೆ ನಾವು ಮಾತ್ರ ಯಾರ ಜೊತೆ ಅಡ್ಜಸ್ಟಮೆಂಟ್ ಮಾಡಿಕೊಳ್ಳಲ್ಲ . 40% ಕಮಿಷನ್ ವಿಚಾರದ ಬಗ್ಗೆಯೂ ತನಿಖೆ ಮಾಡಬೇಕು. ಬೆಂಗಳೂರು ನಗರದಲ್ಲಿ ಒಳ್ಳೆ ಒಳ್ಳೆ ಅಧಿಕಾರಿಗಳನ್ನು ನೇಮಿಸಿ ತನಿಖೆ ಮಾಡಲು ಹೇಳಿದ್ದೇವೆ. ನಾಲ್ವರು IAS ಅಧಿಕಾರಿಗಳ ನೇತೃತ್ವದಲ್ಲಿ ತನಿಖೆ ನಡೆಯಲಿದೆ. ಯಾರನ್ನೂ ಟಾರ್ಗೆಟ್ ಮಾಡಬೇಕು ಅಂತ ಅಲ್ಲಾ. ನಾವು ಭ್ರಷ್ಟಾಚಾರದ ಬಗ್ಗೆ ಜನರ ಮುಂದೆ ಹೇಳಿದ್ವಿ. ಈಗ ಅದನ್ನ ಸರಿಪಡಿಸಬೇಕು ಮುಂದಿನ ದಿನಗಳಲ್ಲಿ ಹೀಗೆ ಆಗಬಾರದು ಅಂತ ತನಿಖೆ ಆಗಬೇಕು ಎಂದು ಗುಂಡೂರಾವ್ ಹೇಳಿದ್ದಾರೆ.
ಸಚಿವ ಚಲುವರಾಯ ಸ್ವಾಮಿ ಮೇಲೆ ಆರೋಪ ವಿಚಾರದ ಬಗ್ಗೆ ಮಾತನಾಡಿದ ಗುಂಡೂರಾವ್, ಅವರ ಮೇಲೆ ಕೆಟ್ಟ ಅಭಿಪ್ರಾಯ ತರೋಕೆ ಮಾಡಿದ್ರು ಅದಕ್ಕೆ ಅವರು ಸ್ಪಷ್ಟ ಉತ್ತರ ಕೂಡ ಕೊಟ್ಟಿದ್ದಾರೆ. ನಮಗೆ ಯಾವ ನ್ಯೂನ್ಯತೆ ಇದೆ ? ನಾವು ಇಷ್ಟು ಬೇಗ ಗ್ಯಾರಂಟಿ ಜಾರಿ ಮಾಡ್ತೇವೆ ಅಂತ ಅವರು ಅಂದುಕೊಂಡಿರ್ಲಿಲ್ಲ. ಜನ ಬಿಜೆಪಿಯವರನ್ನು ಮನೆಗೆ ಕಳಿಸಿದ್ದಾರೆ. ಕೇಂದ್ರದಿಂದ ಅವರನ್ನು ಜಾಡಿಸಿದ್ದಾರೆ ಅವರು ಮಾನ ಮರ್ಯಾದೆ ಕಳ್ಕೊಂಡಿದ್ದಾರೆ. ಪ್ರಧಾನಿ ಮೋದಿ ಬೀದಿ ಬೀದಿ ಓಡಾಡಿದ್ರು. ರಾಜ್ಯ ಚುನಾವಣೆ ಮೋದಿ ಅವರಿಗೆ ಅವಮಾನ ಆಗಿದೆ. ಇಲ್ಲಿ ಪ್ರಧಾನಿ ಮೋದಿ ಅವರೇ ಸೋತ ಹಾಗಾಗಿದೆ. ಅದಕ್ಕೆ ಏನೇನೋ ಆರೋಪಗಳನ್ನು ಮಾಡ್ತಾ ಇದ್ದಾರೆ ಎಂದು ಗುಂಡೂರಾವ್ ವ್ಯಂಗ್ಯವಾಡಿದ್ದಾರೆ..
ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಅಧಿಕಾರಿಗಳಿಂದ ಬಾರ್ ಅಂಡ್ ರೆಸ್ಟೋರೆಂಟ್ ಅಂಗಡಿಗಳ ಮೇಲೆ ದಾಳಿ
ವ್ಹೀಲಿಂಗ್ ಮಾಡುತ್ತಿದ್ದ ಪಿಎಸ್‌ಐ ಪುತ್ರನನ್ನೇ ಜೈಲಿಗೆ ದಬ್ಬಿದ ಮೈಸೂರು ಪೊಲೀಸರು!