Political News: ಧಾರವಾಡ: ಜಿಲ್ಲಾಮಟ್ಟದ ಜನತಾದರ್ಶನ ಯಶಸ್ವಿಯಾಗುತ್ತಿದ್ದು, ನಾಗರಿಕರ ಅಹವಾಲುಗಳ ಪರಿಹಾರಕ್ಕೆ ಆದ್ಯತೆ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ತಾಲೂಕು ಮಟ್ಟದಲ್ಲೂ ಜನತಾದರ್ಶನ ನಡೆಸಲಾಗುವುದು ಎಂದು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಅವರು ತಿಳಿಸಿದರು.
ಧಾರವಾಡ ಜಿಲ್ಲಾಡಳಿತದ ವತಿಯಿಂದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಜನತಾದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಾನ್ಯ ಮುಖ್ಯಮಂತ್ರಿಗಳ ನಿರ್ದೇಶನದಂತೆ ಜನತಾ ದರ್ಶನ ಹಮ್ಮಿಕೊಳ್ಳುತ್ತಿದ್ದು, ಸಾಕಷ್ಟು ಅಹವಾಲುಗಳಿಗೆ ಸ್ಥಳದಲ್ಲೇ ಪರಿಹಾರ ನೀಡಲಾಗಿದೆ. ಇನ್ನುಳಿದವುಗಳಿಗೆ ಆದ್ಯತೆ ಮೇರೆಗೆ ಪರಿಹರಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು. ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತಾಲೂಕು ಮಟ್ಟದಲ್ಲಿ ಜನತಾದರ್ಶನ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
೨೦೦ ಕ್ಕೂ ಹೆಚ್ಚು ಅಹವಾಲು ಸ್ವೀಕಾರ
ಇಂದು ನಡೆಸಿದ ಜನತಾದರ್ಶನದಲ್ಲಿ ೨೦೦ ಕ್ಕೂ ಹೆಚ್ಚು ಅಹವಾಲುಗಳನ್ನು ಸ್ವೀಕರಿಸಲಾಯಿತು. ಹೆಸ್ಕಾಂ, ಉದ್ಯೋಗ ಇಲಾಖೆ, ಸಾರಿಗೆ, ವಸತಿ, ಗ್ರಾಮೀಣಾಭಿವೃದ್ಧಿ, ಲೋಕೋಪಯೋಗಿ, ಸಮಾಜ ಕಲ್ಯಾಣ, ಪೌರಾಡಳಿತ, ಕ್ರೀಡೆ, ಅಲ್ಪಸಂಖ್ಯಾತರ ಇಲಾಖೆ, ಮಹಾನಗರ ಪಾಲಿಕೆ, ಕಂದಾಯ ಇಲಾಖೆ ಸೇರಿದಂತೆ ಹಲವು ಇಲಾಖೆಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ಸ್ವೀಕರಿಸಲಾಯಿತು.
ಬರ: ಮುನ್ನೆಚ್ಚರಿಕೆ ವಹಿಸಲು ಸೂಚನೆ
ಮುಂಬರುವ ದಿನಗಳಲ್ಲಿ ಬರದ ತೀವ್ರತೆ ಹೆಚ್ಚುವ ಸಾಧ್ಯತೆ ಇರುವ ಕಾರಣ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸಚಿವ ಲಾಡ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ನೀರು, ಮೇವು, ಉದ್ಯೋಗ ಸಮಸ್ಯೆಗಳು ತೀವ್ರವಾಗಬಹುದು. ಆದ್ದರಿಂದ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಿ. ನೀರಿನ ಪೂರೈಕೆಗಾಗಿ ಹೊಸ ಕೊಳವೆಬಾವಿ ಕೊರೆಸಲು ಕ್ರಮ ಕೈಗೊಳ್ಳಿ. ಟ್ಯಾಂಕರ್ ಮೂಲಕ ನೀರು ಒದಗಿಸಲು ಮುಂದಾಗಿ ಎಂದು ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಗೋಪಾಲ ಬ್ಯಾಕೋಡ, ಉಪ ಪೊಲೀಸ್ ಆಯುಕ್ತ ರಾಜೀವ ಎಂ. ಪಾಲಿಕೆ ಆಯುಕ್ತ ಡಾ. ಸಂತೋಷ ಬಿರಾದಾರ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್ ಎಸ್ ಕೆಳದಿಮಠ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಶಶಿ ಪಾಟೀಲ, ಜಿಲ್ಲಾ ಪಂಚಾಯಿತಿ ಸಿಇಒ ಸ್ವರೂಪ ಟಿ ಕೆ, ಮಹಾನಗರ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಸಿ ಡಿ. ಸೇರಿದಂತೆ ಹಲವು ಇಲಾಖೆಗಳ ಹಿರಿಯ ಅಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು.
ತ್ರಿಚಕ್ರ ವಾಹನ ಕೊಡಿಸುವ ಭರವಸೆ ನೀಡಿದ ಲಾಡ್
ಜನತಾ ದರ್ಶನದಲ್ಲಿ ಗದಗ ಜಿಲ್ಲೆ ನರಗುಂದ ತಾಲೂಕಿನ ಹದ್ಲಿ ಗ್ರಾಮದ ವಿಶೇಷಚೇತನ ಶಿವಾನಂದ ಸುಂಕದ ತನಗೆ ತ್ರಿಚಕ್ರ ವಾಹನದ ಅವಶ್ಯಕತೆ ಇದೆ ಎಂಬ ಅಹವಾಲನ್ನು ಸಚಿವ ಲಾಡ್ ಅವರಿಗೆ ಸಲ್ಲಿಸಿದರು. ಈ ವೇಳೆ ಶಿವಾನಂದ ಅವರು ಇದ್ದಲಿಗೆ ಬಂದು, ಇತ್ತೀಚೆಗಷ್ಟೇ ಧಾರವಾಡದಲ್ಲಿ ಅಂಗವಿಕಲರಿಗೆ ಕಾರ್ಮಿಕ ಇಲಾಖೆ ವತಿಯಿಂದ ತ್ರಿಚಕ್ರ ವಾಹನ ವಿತರಿಸಿದ್ದೇವೆ. ನೀನೇಕೆ ಅರ್ಜಿ ಹಾಕಲಿಲ್ಲ ಎಂದು ಪ್ರಶ್ನಿಸಿದರು. ಆದರೂ ತ್ರಿಚಕ್ರ ವಾಹನ ಕೊಡಿಸಲು ಅಗತ್ಯ ಕ್ರಮ ಕೈಗೊಳ್ಳುತ್ತೇನೆ ಎಂದು ಲಾಡ್ ಅವರು ಭರವಸೆ ನೀಡಿದರು. ಸಚಿವರ ಈ ಮಾನವೀಯ ನಡೆ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.
ಮಕ್ಕಳು ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ, ಸಹಾಯ ಮಾಡಿ
ಜನತಾದರ್ಶನದಲ್ಲಿ ೭೫ ವರ್ಷದ ವೃದ್ಧ ಧಾರವಾಡ ತಾಲೂಕಿನ ಶಿಬಾರಗಟ್ಟಿ ಗ್ರಾಮದ ಬಸಪ್ಪ ದಳವಾಯಿ ಅವರು ಸಚಿವರಿಗೆ ಅಹವಾಲು ಸಲ್ಲಿಸಿದರು. ಇಳಿ ವಯಸ್ಸಿನಲ್ಲಿ ಮಕ್ಕಳು ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ. ಸಹಾಯ ಮಾಡಿ ಎಂದು ಸಚಿವರಿಗೆ ಮನವಿ ಮಾಡಿದರು.
ದಳವಾಯಿ ಅವರು, ಹಿರಿಯರ ಕ್ರೀಡಾಕೂಟದಲ್ಲ ಭಾಗವಹಿಸಿ ಧಾರವಾಡಕ್ಕೆ ಕೀರ್ತಿ ತಂದಿದ್ದಾರೆ. ರಾಜ್ಯ ಮತ್ತು ಅಂತರರಾಜ್ಯ ಮಟ್ಟದಲ್ಲಿ ನಡೆದ ಹಿರಿಯರ ಕ್ರೀಡಾಕೂಟದಲ್ಲಿ ಭಾಗವಹಿಸಿ ಪದಕ ಪಡೆದಿದ್ದಾರೆ. ಆದರೆ ಮಕ್ಕಳು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಸಚಿವರಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಸಚಿವರು, ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಭರವಸೆ ನೀಡಿದರು.
ಲೋಕಸಭೆಗೆ ಸ್ಪರ್ಧಿಸಲು ನನಗೆ ವೈಯಕ್ತಿಕವಾಗಿ ಆಸಕ್ತಿ ಇಲ್ಲ – ಸಚಿವ ಸಂತೋಷ್ ಲಾಡ್
ಕಿವಿಗೆ ಪೆಟ್ಟು ಬೀಳುವಷ್ಟು ಕೆಟ್ಟದಾಗಿ ಪತ್ನಿಗೆ ಹೊಡೆದ್ರಾ ವಿವೇಕ್ ಬಿಂದ್ರಾ..?
ಭಜರಂಗ್ ಪುನಿಯಾ ಬೆನ್ನಲ್ಲೇ ಪದ್ಮಶ್ರೀ ಪ್ರಶಸ್ತಿ ಹಿಂದಿರುಗಿಸಿದ ಕುಸ್ತಿಪಟು ವೀರೇಂದ್ರ ಸಿಂಗ್