ಬಿಜೆಪಿ ಅಧಿಕಾರಕ್ಕೆ ಬಂದ್ರೆ ಎಲ್ಲಾ ಗ್ಯಾರಂಟಿ ಯೋಜನೆಗಳಿಗೂ ಕುತ್ತು ಬರಲಿದೆ, ಇದನ್ನ ಜನ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ ಅಂತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಹಾಸನ ಜಿಲ್ಲೆಯ ಭುವನಹಳ್ಳಿಯಲ್ಲಿ ಮಾತನಾಡಿದ ಅವರು, ವಿಪಕ್ಷಗಳ ನಾಯಕರ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ.
ಹೌದು ‘ಗ್ಯಾರಂಟಿಗಳನ್ನು ಕೊಟ್ಟು ರಾಜ್ಯವನ್ನು ಹಾಳು ಮಾಡಲಾಗಿದೆ ಅಂತ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಬಿಜೆಪಿ ನಾಯಕರು ಮಾಡ್ತಿರೋ ಟೀಕೆಗಳಿಗೆ ತಿರುಗೇಟು ನೀಡಿರುವ ಡಿಕೆಶಿ, “ವಿಪಕ್ಷಗಳಿಗೆ ಟೀಕೆ ಮಾಡಲು ಬೇರೆ ವಿಚಾರಗಳು ಏನಿವೆ? ರಾಜ್ಯದ ಜನರಿಗೆ ನಮ್ಮ ಎಲ್ಲಾ ಗ್ಯಾರಂಟಿಗಳು ಯಶಸ್ವಿಯಾಗಿ ತಲುಪುತ್ತಿದ್ದು, ಇದನ್ನ ಸಹಿಸಲು ಅವರಿಗೆ ಆಗ್ತಿಲ್ಲ, ಜೆಡಿಎಸ್ ಮತ್ತು ಬಿಜೆಪಿಯವರು ಗ್ಯಾರಂಟಿ ವಿರೋಧಿಗಳು” ಅಂತ ಗುಡುಗಿದ್ದಾರೆ.
ಇನ್ನು ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾದ ಕಾರಣದಿಂದಲೇ ಐದು ಗ್ಯಾರಂಟಿಗಳನ್ನು ಜಾರಿಗೆ ತಂದು ಜನರಿಗೆ ನೆರವಾಗುತ್ತಿದ್ದೇವೆ ಅಂತ ಸ್ಪಷ್ಟಪಡಿಸಿರುವ ಡಿ.ಕೆ. ಶಿವಕುಮಾರ್, ರೈತರ ಇನ್ಪುಟ್ ಸಬ್ಸಿಡಿಯನ್ನು 2,500 ರೂಪಾಯಿಯಿಂದ 5,000 ರೂಪಾಯಿಗೆ ಹೆಚ್ಚಿಸಲಾಗಿದೆ ಎಂದರು. ಇನ್ನು ಅದರ ಜೊತೆಗೆ ‘ರೈತರ ಪಂಪ್ಸೆಟ್ಗಳ ಉಚಿತ ವಿದ್ಯುತ್ ಸಬ್ಸಿಡಿ 30 ಸಾವಿರ ಕೋಟಿ ರೂಪಾಯಿಗೆ ಏರಿಕೆಯಾಗಿದೆ ಅಂತ ಅಂಕಿ-ಅಂಶಗಳ ಸಮೇತ ಮಾಹಿತಿ ನೀಡಿದ್ದಾರೆ.
ಇದೇ ವೇಳೆ ಹಾಸನಾಂಬೆ ದರ್ಶನ ಪಡೆದು ಮಾತನಾಡಿದ ಅವರು, ಬೆಳಕಿನ ಹಬ್ಬ ದೀಪಾವಳಿ ಜನರ ಬದುಕಿನಲ್ಲಿ ಬೆಳಕು ತುಂಬಲಿ ಅಂತ ಪ್ರಾರ್ಥಿಸೋದಾಗಿ ತಿಳಿಸಿದ್ದಾರೆ. ಹಾಸನಾಂಬೆ ಕಾರಿಡಾರ್ ಪ್ರಸ್ತಾವನೆ ಬಗ್ಗೆ ತಮ್ಮ ಬಳಿ ಯಾವುದೇ ಮಾಹಿತಿ ಇಲ್ಲ ಎಂದಿರುವ ಅವರು, ಜಿಲ್ಲಾಡಳಿತದ ಜತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.




