ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಟ್ರಂಪ್ ಪಕ್ಷಕ್ಕೆ ದೊಡ್ಡ ಹಿನ್ನಡೆಯಾಗಿದೆ. ಹೌದು ‘ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷವು 259 ಸ್ಥಾನಗಳನ್ನು ಗೆದ್ದುಕೊಂಡರೆ, ಆಡಳಿತಾರೂಢ ರಿಪಬ್ಲಿಕನ್ ಪಕ್ಷ 176 ಸ್ಥಾನಗಳಿಗೆ ಕುಸಿದಿದೆ. ಇದರ ಬೆನ್ನಲ್ಲೇ ಈಗ ಯುದ್ಧದ ವಿಚಾರದಲ್ಲಿ ಟ್ರಂಪ್ ತಮ್ಮ ವರಸೆಯನ್ನು ಬದಲಿಸಿದ್ದಾರೆ. ಇರಾನ್ ಜತೆ ಯುದ್ಧ ಮಾಡುವ ಅಗತ್ಯವಿಲ್ಲ ಅಂತ ಹೇಳಿಕೆ ನೀಡಿದ್ದಾರೆ.
ಇತ್ತೀಚಿಗೆ ವಾಹಿನಿಯೊಂದರಲ್ಲಿ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಡೊನಾಲ್ಡ್ ಟ್ರಂಪ್, ಇರಾನ್ ಪರಮಾಣು ಕಾರ್ಯಕ್ರಮ ಮತ್ತು ಹಾರ್ಮುಜ್ ಜಲಸಂಧಿ ತೆರೆಯುವ ಕುರಿತು ಮಾತುಕತೆಗಳು ಪ್ರಗತಿ ಕಂಡರೆ, ಇರಾನ್ ಮೇಲೆ ಮತ್ತೊಮ್ಮೆ ಸೇನಾ ದಾಳಿ ನಡೆಸುವ ಅಗತ್ಯ ಬರುವುದಿಲ್ಲ ಎಂದಿದ್ದಾರೆ. ಆದರೆ, ಇರಾನ್ ಬಲವಾದ ಒಪ್ಪಂದಕ್ಕೆ ಒಪ್ಪದಿದ್ದರೆ ಸೇನಾ ಕ್ರಮಕ್ಕೆ ಅಮೆರಿಕ ಎಂದಿಗೂ ಸಿದ್ಧವಿದೆ ಅಂತ ಎಚ್ಚರಿಕೆ ಕೂಡ ನೀಡಿದ್ದಾರೆ.
ಅಮೆರಿಕದ ದಾಳಿಯಿಂದ ಇರಾನ್ನ ವಾಯು ರಕ್ಷಣಾ ವ್ಯವಸ್ಥೆ ಹಾಗೂ ಸೇನಾ ಸಾಮರ್ಥ್ಯಕ್ಕೆ ಭಾರಿ ಹಾನಿಯಾಗಿದೆ ಎಂದಿರುವ ಟ್ರಂಪ್, ಇರಾನ್ನ ಕ್ಷಿಪಣಿ ಸಾಮರ್ಥ್ಯ ಈಗ ಕೇವಲ ಶೇ. 10ರಷ್ಟು ಮತ್ತು ಡ್ರೋನ್ ಸಾಮರ್ಥ್ಯ ಶೇ. 15ರಷ್ಟ ಮಾತ್ರ ಉಳಿದಿದೆ ಅಂತ ಅಂದಾಜಿಸಿದ್ದಾರೆ. ಪ್ರಸ್ತುತ ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಮೂರು ವಿಮಾನವಾಹಕ ನೌಕೆಗಳು ಸಹ ಸಿದ್ಧವಾಗಿವೆ ಎಂದೂ ಅವರು ತಿಳಿಸಿದ್ದಾರೆ.
ಮತ್ತೊಂದೆಡೆ, ಉದ್ವಿಗ್ನತೆ ಕಡಿಮೆ ಮಾಡಲು ಕತಾರ್ ದೊರೆ ಹಾಗೂ ಇರಾನ್ ವಿದೇಶಾಂಗ ಸಚಿವರು ವಿವಿಧ ದೇಶಗಳ ಜತೆ ರಾಜತಾಂತ್ರಿಕ ಮಾತುಕತೆ ನಡೆಸುತ್ತಿದ್ದಾರೆ. ಆದರೂ, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಮಾತ್ರ, ಇರಾನ್ ಬೇಡಿಕೆಗಳು ಒಪ್ಪುವಂತಿಲ್ಲದ ಕಾರಣ ಸದ್ಯದಲ್ಲೇ ಒಪ್ಪಂದವಾಗುವ ನಿರೀಕ್ಷೆಯಿಲ್ಲ ಅಂತ ಅಭಿಪ್ರಾಯಪಟ್ಟಿದ್ದಾರೆ. ಹಾಗಾಗಿ ‘ಅಮೆರಿಕ-ಇರಾನ್ ನಡುವಿನ ಈ ಸಂಘರ್ಷದ ಹಾದಿ ಮುಂದೆ ಎಲ್ಲಿಗೆ ಬಂದು ನಿಲ್ಲಲಿದೆ ಎಂಬುದನ್ನು ಮುಂಬರುವ ದಿನಗಳಲ್ಲಿ ಕಾದು ನೋಡಬೇಕಿದೆ.




