Political News: ರಾಜ್ಯದಲ್ಲಿ ವ್ಯಾಪಕವಾಗಿರುವ ಅಕ್ರಮ ಬಾಂಗ್ಲಾ ವಲಸಿಗರ ಜಾಲವನ್ನು ಬಯಲಿಗೆಳೆದಿದ್ದಕ್ಕಾಗಿ ಡಾ. ನಾಗೇಂದ್ರಪ್ಪ ಅವರಿಗೆ ಪೊಲೀಸರಿಂದ ಕಿರುಕುಳ ಎಂಬ ಆರೋಪ ಕೇಳಿ ಬಂದಿದೆ. ಇದೇ ಕಾರಣಕ್ಕೆ ವಿಧಾನಸೌಧದ ಮುಂದೆ ಅವರು, ವಿಷ ಸೇವಿಸಿ, ಆತ್ಮಹತ್ಯೆಗೆ ಯತ್ನಿಸಿರುವ ವೀಡಿಯೋ ವೈರಲ್ ಆಗಿದೆ.
ಈ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಕಾಂಗ್ರೆಸ್ ಸರ್ಕಾರಕ್ಕೆ ಅಕ್ರಮ ಬಾಂಗ್ಲಾದೇಶಿಗಳ ಮೇಲೆ ಯಾಕಿಷ್ಟು ವ್ಯಾಮೋಹ? ರಾಜ್ಯದಲ್ಲಿ ವ್ಯಾಪಕವಾಗಿರುವ ಅಕ್ರಮ ಬಾಂಗ್ಲಾ ವಲಸಿಗರ ಜಾಲವನ್ನು ಬಯಲಿಗೆಳೆದಿದ್ದಕ್ಕಾಗಿ ಡಾ. ನಾಗೇಂದ್ರಪ್ಪ ಅವರಿಗೆ ಪೊಲೀಸರಿಂದ ಕಿರುಕುಳ ನೀಡಲಾಗುತ್ತಿದ್ದು, ಅವರು ವಿಧಾನಸೌಧದ ಮುಂದೆಯೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕಾಂಗ್ರೆಸ್ ಸರ್ಕಾರ ಅಕ್ರಮ ವಲಸಿಗರಿಗೆ ಪರೋಕ್ಷವಾಗಿ ಬೆಂಬಲ ನೀಡುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಅಶೋಕ್ ಹೇಳಿದ್ದಾರೆ.
ಒಂದೆಡೆ ದೇಶದ ಭದ್ರತೆಗೆ ಸವಾಲಾಗಿರುವ ಅಕ್ರಮ ವಲಸಿಗರನ್ನು ಪತ್ತೆ ಹಚ್ಚುವಲ್ಲಿ ಗೃಹ ಇಲಾಖೆ ಸಂಪೂರ್ಣ ವಿಫಲವಾಗಿದೆ. ಮತ್ತೊಂದೆಡೆ, ಜವಾಬ್ದಾರಿಯುತ ನಾಗರೀಕರು ಈ ಅಕ್ರಮಗಳನ್ನು ಎತ್ತಿ ತೋರಿಸಿದರೆ ಅವರನ್ನು ಟಾರ್ಗೆಟ್ ಮಾಡಿ ಕಿರುಕುಳ ಕೊಟ್ಟು ಜೈಲಿಗೆ ಅಟ್ಟಲಾಗುತ್ತಿದೆ. ಪುನೀತ್ ಕೆರೆಹಳ್ಳಿಯಂತಹ ಕಾರ್ಯಕರ್ತರ ಬಂಧನವೇ ಇದಕ್ಕೆ ಸಾಕ್ಷಿ ಎಂದು ಆರ್.ಅಶೋಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರೇ, ನಿಮ್ಮ ಇಲಾಖೆಯ ಕರ್ತವ್ಯವನ್ನೇ ಜನ ಸಾಮಾನ್ಯರು ಮಾಡುತ್ತಿರುವಾಗ ಅವರಿಗೆ ರಕ್ಷಣೆ ನೀಡುವ ಬದಲು ಪೊಲೀಸರ ಮೂಲಕ ಕಿರುಕುಳ ಕೊಡಿಸುತ್ತಿರುವುದು ಯಾವ ನ್ಯಾಯ? ಕಾಂಗ್ರೆಸ್ ಸರ್ಕಾರಕ್ಕೆ ದೇಶದ, ರಾಜ್ಯದ ಸುರಕ್ಷತೆಗಿಂತ ವೋಟ್ ಬ್ಯಾಂಕ್ ರಾಜಕಾರಣವೇ ಮುಖ್ಯವಾಯಿತೇ? ಅಕ್ರಮ ವಲಸಿಗರನ್ನು ಗಡಿಪಾರು ಮಾಡುವ ಇರಾದೆ, ದಮ್ಮು-ತಾಕತ್ತು ನಿಮ್ಮ ಸರ್ಕಾರಕ್ಕಿಲ್ಲವೇ? ಎಂದು ಅಶೋಕ್ ಪ್ರಶ್ನಿಸಿದ್ದಾರೆ.
ಜನರಿಗೆ ಕಿರುಕುಳ ನೀಡುವುದನ್ನು ಬಿಟ್ಟು, ಕೂಡಲೇ ಅಕ್ರಮ ಬಾಂಗ್ಲಾ ನಿವಾಸಿಗಳನ್ನು ಪತ್ತೆ ಹಚ್ಚಿ ಹೊರಗಟ್ಟಿ. ಬಾಂಗ್ಲಾ ವಲಸಿಗರ ರಕ್ಷಣೆಗೆ ನಿಂತಿರುವ ಈ ನಾಡದ್ರೋಹಿ ಕಾಂಗ್ರೆಸ್ ಸರ್ಕಾರ ಕನ್ನಡಿಗರ ವಿರೋಧಿಯಾಗಿದೆ! ಎಂದು ರಾಜ್ಯ ಸರ್ಕಾರದ ವಿರುದ್ಧ ಅಶೋಕ್ ಕಿಡಿಕಾರಿದ್ದಾರೆ.



