ರಾಯಚೂರು : ಕೊರೋನಾ ಹೊಡೆತಕ್ಕೆ ಸಿಕ್ಕಿ ಅನೇಕ ಕ್ಷೇತ್ರಗಳು ತತ್ತರಿಸಿ ಹೋಗಿವೆ. ಇದಕ್ಕೆ ವೃತ್ತಿ ರಂಗಭೂಮಿಯ ನಾಟಕ ಕಂಪನಿಗಳೂ ಹೊರತಾಗಿಲ್ಲ. ಹಲವು ಕ್ಷೇತ್ರಗಳು ಕೊರೋನಾ ಬಳಿಕ ಚೇತರಿಕೆ ಕಾಣುತ್ತಿದ್ದರೂ ರಂಗಭೂಮಿ ಮತ್ತು ರಂಗಭೂಮಿ ಕಲಾವಿದರ ಸ್ಥಿತಿ ಮಾತ್ರ ಅಯೋಮಯವಾಗಿದೆ. ನಾಟಕಗಳು ಪ್ರಾರಂಭವಾದರೂ ಪ್ರೇಕ್ಷಕರ ಕೊರತೆ ಕಾಡುತ್ತಿದೆ. ಇಲ್ಲಿದೆ ಈ ಕುರಿತು ಒಂದು ವರದಿ.
ಹೌದು ಮೊದಲೇ ಪ್ರೇಕ್ಷಕರ ಕೊರತೆ ಎದುರಿಸುತ್ತಿದ್ದ ನಾಟಕ ಕಂಪನಿಗಳು, ಕೊರೋನಾದಿಂದ ಅನೇಕ ದಿನಗಳ ಕಾಲ ನಾಟಕ ಪ್ರದರ್ಶನವೇ ಇಲ್ಲದಂತೆ ಆಗಿತ್ತು. ನಾಟಕಗಳನ್ನೇ ನೆಚ್ಚಿಕೊಂಡಿದ್ದ ಕಲಾವಿದರು ಕೊರೋನಾ ಕಾಲದಲ್ಲಿ ಒಂದು ಹೊತ್ತಿನ ಊಟಕ್ಕೂ ಪರದಾಡಿದ್ದರು. ಆದರೆ ಇದೀಗ ನಾಟಕಗಳ ಪ್ರದರ್ಶನಕ್ಕೆ ಸರ್ಕಾರ ಅವಕಾಶ ನೀಡಿದೆ. ಇನ್ನಾದರೂ ನಮ್ಮ ಬದಕು ಸರಿಹೋಗುತ್ತೆ ಎಂದು ತಿಳಿದಿದ್ದ ನಾಟಕ ಕಂಪನಿ ಮಾಲೀಕರು ಮತ್ತು ಕಲಾವಿದರಿಗೆ ನಿರಾಸೆಯಾಗಿದೆ. ನಿರೀಕ್ಷಿತ ಮಟ್ಟದಲ್ಲಿ ಪ್ರೇಕ್ಷಕರು ಬಾರದೇ ಇರುವುದರಿಂದ ನಾಟಕ ಕಂಪನಿ ಮಾಲೀಕರು ಮತ್ತು ಕಲಾವಿದರು ಪರದಾಡುವಂತಹ ಸ್ಥಿತಿ ಮುಂದುವರಿದಿದೆ.
ರಾಯಚೂರು ಜಿಲ್ಲೆಯ ಲಿಂಗಸ್ಗೂರು ಪಟ್ಟಣದ ಕಲಬುರಗಿ ಮುಖ್ಯರಸ್ತೆಗೆ ಹೊಂದಿಕೊ೦ಡಿರುವ ಅನ್ನದಾನಗೌಡ ಬಯ್ಯಾಪೂರ ಆಸ್ಪತ್ರೆ ಮುಂಭಾಗದಲ್ಲಿ ನಾಟ್ಯ ಸಂಘವೊ೦ದು ಠಿಕಾಣಿ ಹೂಡಿದ್ದು ಹವ್ಯಾಸಿ, ಸಾಂಸಾರಿಕ ಹಾಗೂ ಸಾಮಾಜಿಕ ನಾಟಕಗಳ ಪ್ರದರ್ಶನ ನಡೆಯುತ್ತಿದೆ. ಆದರೆ ಕೋವಿಡ್-19ನಿಂದ ಜನರ ಆಗಮನ ಕಡಿಮೆಯಾದ ನೋವಿನಲ್ಲಿ ಆರ್ಥಿಕ ಮುಗ್ಗಟ್ಟಿನಿಂದ ಕಂಪನಿಯ ಮಾಲೀಕರು ಕಂಗಾಲಾಗಿದ್ದಾರೆ.
ಮೂಲತಃ ಕಲಬುರಗಿ ಜಿಲ್ಲೆಯ ಜೇವರ್ಗಿಯವರಾದ ರಾಜಣ್ಣ ಜೇವರ್ಗಿ ಹುಟ್ಟು ರಂಗಭೂಮಿಕಲಾವಿದರು, ನಾಟಕ ಸಾಹಿತ್ಯ ಬರೆಯುತ್ತಾ, ನಿರ್ದೇಶನ ಮಾಡುತ್ತಾ ರಂಗಭೂಮಿಯಲ್ಲೇ ಬದುಕು ಕಟ್ಟಿಕೊಂಡವರು. ಇವರು ರಚಿಸಿ ನಿರ್ದೇಶಿಸಿದ “ಕುಂಟ ಕೋಣ ಮೂಕ ಜಾಣ” ನಾಟಕ ಸರಿಸುಮಾರು 16000 ಪ್ರದರ್ಶನಗಳನ್ನ ಕಂಡಿದೆ.
ಹಾಗಾಗಿ ತಾವೇ ಸ್ವತಃ ಶ್ರೀ ಗುರು ಪಂಚಾಕ್ಷರಿ ನಾಟ್ಯ ಸಂಘ ಎಂಬ ನಾಟಕ ಕಂಪನಿಯನ್ನು ಸ್ಥಾಪಿಸಿ ತಮ್ಮ ಕುಟುಂಬದ ಸದಸ್ಯರೊಂದಿಗೆ ಹಳ್ಳಿಹಳ್ಳಿಗಳಲ್ಲಿ ಪೌರಾಣಿಕ ಸನ್ನಿವೇಶಗಳನ್ನು ಪ್ರದರ್ಶಿಸುತ್ತಾ ಸುಮಾರು 36 ವರ್ಷಗಳಿಂದ ನಾಡಿನ ಉದ್ದಗಲ್ಲಕ್ಕೂ ಸಂಚರಿಸುತ್ತಾ ಅಲೆಮಾರಿ ಜೀವನ ಸಾಗಿಸುತ್ತಿದ್ದಾರೆ. ಸದ್ಯ ರಾಜಣ್ಣ ಜೇವರ್ಗಿಯವರ ಇಡೀ ಕುಟುಂಬವೇ ರಂಗಭೂಮಿ ಕಲೆಗೆ ಜೀವನ ಮುಡಿಪಾಗಿಟ್ಟಿದೆ.
ಇನ್ನು ಹೀಗೆ ರಾಜ್ಯದಲ್ಲಿ ನಾಟಕ ಪ್ರದರ್ಶನಗಳನ್ನ ನಡೆಸುತ್ತಿರುವ ಅನೇಕ ಕಂಪನಿಯಲ್ಲಿ 25 ರಿಂದ 30 ಜನ ಕೆಲಸಗಾರರಿದ್ದು, ಅದರಲ್ಲಿ 15 ಜನ ಕಲಾವಿದರಿದ್ದಾರೆ. ಇವರೆಲ್ಲರ ಊಟ, ವಸತಿ ಹಾಗೂ ಸಂಬಳ ನೀಡಲು ಆರ್ಥಿಕ ದುಃಸ್ಥಿತಿ ಎದುರಾಗಿದ್ದು, ಸಾಲ ಸೋಲ ಮಾಡಿ ನಾಟಕ ಕಂಪನಿಯನ್ನು ಉಳಿಸಿಕೊಂಡು ಬಂದಿದ್ದಾರೆ. ಕಲಾವಿದರ ಪರಿಸ್ಥಿತಿ ಯಾರಿಗೂ ಬೇಡ. ಆದರೆ ರಂಗಭೂಮಿ ಉಳಿವಿಗಾಗಿ ಎಲ್ಲವನ್ನೂ ಸಹಿಸ್ಕೊಳ್ತೀನಿ, ರಂಗಭೂಮಿ ಉಳಿಬೇಕು ಅಂತಾರೆ ಕಲಾವಿದರು.
ವಿಪರ್ಯಾಸ ಅಂದ್ರೆ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪ್ರತಿ ವರ್ಷ ನೀಡಲಾಗುವ ಅನುದಾನವನ್ನೂ ಇತ್ತೀಚಿಗೆ ನೀಡ್ತಿಲ್ವಂತೆ. ಹೀಗಾದ್ರೆ ರಂಗಭೂಮಿ ಉಳಿಯೋದು ಹೇಗೆ ಎನ್ನುವುದು ಕಲಾವಿದರು, ಅಭಿಮಾನಿಗಳ ಪ್ರಶ್ನೆ.. ಇನ್ನಾದ್ರೂ ಸರ್ಕಾರಗಳು ರಂಗಭೂಮಿ ಉಳಿವಿಗೆ ಮುಂದಾಗಬೇಕಿದೆ.
ಅನಿಲ್‌ಕುಮಾರ್, ಕರ್ನಾಟಕ ಟಿವಿ, ರಾಯಚೂರು.