Health Tips: ನೀರಿನ ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಸಿಕ್ಕಾಪಟ್ಟೆ ಲಾಭವಿದೆ ಅನ್ನೋದು ಎಲ್ಲರಿಗೂ ಗೊತ್ತು. ಆದರೆ, ನೀವು ತಾಮ್ರದ ಲೋಟ, ಚೊಂಬು, ಪಾತ್ರೆಯಲ್ಲಿ ತುಂಬಿಸಿಟ್ಟ ನೀರನ್ನು ಕುಡಿದರೆ, ಇನ್ನೂ ಹೆಚ್ಚು ಆರೋಗ್ಯ ಲಾಭವನ್ನು ಪಡೆಯಬಹುದು. ಹಾಗಾದ್ರೆ, ತಾಮ್ರದ ಪಾತ್ರೆಯಲ್ಲಿದ್ದ ನೀರು ಕುಡಿಯುವುದರಿಂದ ಆರೋಗ್ಯಕ್ಕಾಗುವ ಪ್ರಯೋಜನಗಳೇನು ಅಂತಾ ತಿಳಿಯೋಣ ಬನ್ನಿ..
ತಾಮ್ರದ ಪಾತ್ರೆಯನ್ನು ಚೆನ್ನಾಗಿ ತೊಳೆದು. ಅದರಲ್ಲಿ ರಾತ್ರಿ ನೀರು ತುಂಬಿಸಿ ಇಡಬೇಕು. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಾಯಿ ತೊಳೆಯದೇ, ತಾಮ್ರದ ಪಾತ್ರೆಯಲ್ಲಿದ್ದ ನೀರನ್ನು ಕುಡಿಯಬೇಕು. ಆಗ ನೀವು, ಗಟ್ಟಿಮುಟ್ಟಾಗಿ ಇರುತ್ತೀರಿ. ನಿಮಗೆ ಎಷ್ಟೇ ವಯಸ್ಸಾದರೂ ಮೂಳೆ ನೋವಿನ ಸಮಸ್ಯೆ ಬರುವುದಿಲ್ಲ.
ಅಲ್ಲದೇ, ನಿಮ್ಮ ಮುಖದಲ್ಲಿ ಸುಕ್ಕು ಹೆಚ್ಚಾಗಿದೆ. ಹೆಚ್ಚು ವಯಸ್ಸಾದಂತೆ ಕಾಣುತ್ತಿದೆ ಎಂದರಲ್ಲಿ, ನೀವು ಈ ರೀತಿ ತಾಮ್ರದ ಪಾತ್ರೆಯಲ್ಲಿ ತುಂಬಿಸಿಟ್ಟ ನೀರನ್ನು ಕುಡಿದರೆ, ನಿಮ್ಮ ಮುಖದಲ್ಲಿ ಕಾಂತಿ ಹೆಚ್ಚಾಗುತ್ತದೆ. ಕೂದಲು ಉದುರುವ ಸಮಸ್ಯೆಗೂ ಮುಕ್ತಿ ಸಿಗುತ್ತದೆ. ಏಕೆಂದರೆ, ಈ ನೀರಿನ ಸೇವನೆಯಿಂದ ಆರೋಗ್ಯ ಉತ್ತಮವಾಗಿರುತ್ತದೆ. ಆರೋಗ್ಯ ಅಭಿವೃದ್ಧಿಯಾದಷ್ಟು, ಸೌಂದರ್ಯ ಹೆಚ್ಚಾಗುತ್ತದೆ.
ಇನ್ನು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಬೇಕು. ಪದೇ ಪದೇ ರೋಗ, ನೆಗಡಿ, ಜ್ವರ, ಕೆಮ್ಮು ಬರಬಾರದು ಅಂದ್ರೆ, ಪ್ರತಿದಿನ ಕಾದು ತಣಿಸಿದ ನೀರನ್ನು ತಾಮ್ರದ ಪಾತ್ರೆಯಲ್ಲಿ ಹಾಕಿಟ್ಟು, ಬಳಿಕ, ಬೆಳಿಗ್ಗೆ ಎದ್ದ ತಕ್ಷಣ ಕುಡಿಯಬೇಕು.
ಇಂಥ ನೀರು ಕುಡಿದರೆ, ನಿಮ್ಮ ಹೃದಯದ ಆರೋಗ್ಯ ಉತ್ತಮವಾಗಿರುತ್ತದೆ. ದೇಹದಲ್ಲಿ ರಕ್ತಸಂಚಾರ ಸರಾಗವಾಗಿ ಆಗಲು, ತಾಮ್ರದ ಪಾತ್ರೆಯಲ್ಲಿ ಇರಿಸಿದ ನೀರು ಕುಡಿಯುವುದು ಉತ್ತಮ. ರಕ್ತನಾಳದಲ್ಲಿ ರಕ್ತಸಂಚಾರ ಉತ್ತಮವಾದಾಗ, ಹೃದಯದ ಆರೋಗ್ಯ ಸರಿಯಾಗಿ ಇರುತ್ತದೆ.
ತಾಮ್ರದ ಪಾತ್ರೆಯಲ್ಲಿ ಇರಿಸಿದ ನೀರು ಕುಡಿಯುವುದರಿಂದ ನಿಮ್ಮ ದೇಹದ ತೂಕವೂ ಇಳಿಯುತ್ತದೆ. ದೇಹದಲ್ಲಿರುವ ಕೆಟ್ಟ ಕೊಬ್ಬಿನ ಅಂಶವನ್ನು ಕಡಿಮೆ ಮಾಡುವಲ್ಲಿ ಇದು ಸಹಕಾರಿಯಾಗಿದೆ. ಹಾಗಾಗಿ ಯಾರ್ಯಾರು ಡಯಟ್ ಮಾಡುತ್ತಿದ್ದೀರೋ, ಅಂಥವರು ತಾಮ್ರದ ಪಾತ್ರೆಯಲ್ಲಿ ಇರಿಸಿದ ನೀರಿನ ಸೇವನೆ ಮಾಡಿ.
ಇನ್ನು ಯಾಕೆ ತಾಮ್ರದ ಪಾತ್ರೆಯಲ್ಲಿ ಇರಿಸಿದ ನೀರು ಆರೋಗ್ಯಕ್ಕೆ ಅಷ್ಟು ಉತ್ತಮವೆಂದರೆ, ಇದರಲ್ಲಿ ನೀರನ್ನು ಇರಿಸಿದರೆ, ಬ್ಯಾಕ್ಟಿರೀಯಾ ಬೆಳವಣಿಗೆ ಆಗುವುದಿಲ್ಲ. ಆ್ಯಂಟಿ ಬ್ಯಾಕ್ಟಿರೀಯಲ್ ಗುಣವಿರುವ ಕಾರಣ, ತಾಮ್ರದ ಪಾತ್ರೆಯಲ್ಲಿ ಇಟ್ಟ ನೀರು ಕುಡಿದರೆ ಆರೋಗ್ಯಕ್ಕೆ ಅತ್ಯುತ್ತಮ ಅಂತಾ ಹೇಳಲಾಗುತ್ತದೆ.
ಇನ್ನು ಅಪ್ಪಿತಪ್ಪಿಯೂ ನೀವು ತಾಮ್ರದ ಪಾತ್ರೆಯಲ್ಲಿ ನಿಂಬೆಹಣ್ಣಿನ ಪಾನಕವನ್ನು ಹಾಕಿ ಕುಡಿಯಬಾರದು. ಇದರಿಂದ ಬೇಧಿ ಶುರುವಾಗುತ್ತದೆ. ಏಕೆಂದರೆ, ನಿಂಬೆಹಣ್ಣು ಮತ್ತು ಹುಣಸೆಹಣ್ಣನ್ನು ತಾಮ್ರದ ಪಾತ್ರೆ ಕ್ಲೀನ್ ಆಗಲು ಬಳಸಲಾಗುತ್ತದೆ. ನೀವೇನಾದರೂ ನಿಂಬೆಹಣ್ಣಿನ ಪಾನಕವನ್ನು ತಾಮ್ರದ ಪಾತ್ರೆಯಲ್ಲಿ ಮಾಡಿದರೆ, ಅದರಲ್ಲಿರುವ ಕಸ ನಿಮ್ಮ ಹೊಟ್ಟೆ ಸೇರಿ, ಬೇಧಿ ಶುರುವಾಗುತ್ತದೆ. ಅನಾರೋಗ್ಯ ಉಂಟಾಗುತ್ತದೆ.