ಸಿಎಂ ತವರೂರಲ್ಲೇ ಜೋರಾಯ್ತು ಡ್ರಗ್ಸ್ ದಂಧೆ: ಖುರ್ಚಿ ಕುಸ್ತಿ ಬಿಟ್ಟು ಸ್ಥಿರ ಆಡಳಿತ ಮಾಡಿ ಅಂದ್ರು ಯತ್ನಾಳ್

Political News: ಮೈಸೂರಿನಲ್ಲಿ ಡ್ರಗ್ಸ್ ಹಾವಳಿ ಜೋರಾಗಿದ್ದು, ಮೈಸೂರು ಮ್ಯಾಂಗೋ ಮತ್ತು ಮೈಸೂರ್ ಕುಶ್ ಅನ್ನೋ ಬ್ರ್ಯಾಂಡ್‌ನ ಡ್ರಗ್ಸ್‌ಳ ಮಾರಾಟ ಹೆಚ್ಚಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಈ ವಿಷಯಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಖ್ಯ ಮಂತ್ರಿಗಳ ಸ್ವ ಕ್ಷೇತ್ರದಲ್ಲಿ ಶಾಲಾ ಮಕ್ಕಳು ಶೌಚಾಲಯಗಳನ್ನು ಸ್ವಚ್ಛ ಮಾಡುವುದು ವರದಿ ಆದ ಬೆನ್ನಲ್ಲೇ ಮೈಸೂರು ಬ್ರಾಂಡ್ ಗಾಂಜಾ ‘ಮೈಸೂರು ಮ್ಯಾಂಗೋ’ ಹಾಗೂ ‘ಮೈಸೂರು ಕುಶ್’ ಈಗ ಸಾಕಷ್ಟು ಬೇಡಿಕೆಯಲ್ಲಿವೆ ಎಂದು ಗೊತ್ತಾಗಿದೆ ಎಂದು ಯತ್ನಾಳ್ ಹೇಳಿದ್ದಾರೆ.

ಹೋದವಾರವಷ್ಟೇ, ಡ್ರಗ್ಸ್ ದಂಧೆಯನ್ನು ಬುಡ ಸಮೇತ ತೆಗೆದು ಹಾಕುತ್ತೇವೆ ಎಂದು ಹೇಳಿದ್ದ ಮುಖ್ಯ ಮಂತ್ರಿಗಳ ಜಿಲ್ಲೆಯಲ್ಲೇ ‘ಮೈಸೂರು ಬ್ರಾಂಡ್’ ಗಾಂಜಾ ಜನಪ್ರಿಯವಾಗಿದೆ.

‘ಖುರ್ಚಿ ಕುಸ್ತಿ’ ಯಲ್ಲಿ, ‘ನವೆಂಬರ್ ಕ್ರಾಂತಿ’ ಯ ನಡುವೆ ಆಡಳಿತ ಹಾಗೂ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ತಾವು ಪ್ರತಿನಿಧಿಸುವ ಕ್ಷೇತ್ರದಲ್ಲೇ ಹತ್ತು ಹಲವು ಸಮಸ್ಯೆಗಳನ್ನು ಬಗೆಹರಿಸಲು ಮುಖ್ಯ ಮಂತ್ರಿಗಳು ವಿಫಲರಾಗಿದ್ದಾರೆ ಎಂದು ಯತ್ನಾಳ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದೆಹಲಿ ಭೇಟಿ, ಆಪ್ತ ಬಣದೊಂದಿಗೆ ‘ಬ್ರೇಕ್ ಫಸ್ಟ್ ಮೀಟಿಂಗ್’ ನಲ್ಲೆ ಕಾರ್ಯನಿರತವಾಗಿರುವ ಸಿ.ಎಂ ರಾಜ್ಯದ ಹಿತಾಸಕ್ತಿಯನ್ನು ಬಲಿಕೊಟ್ಟಿದ್ದಾರೆ. ಯುವಕರನ್ನು ದಾರಿತಪ್ಪಿಸುವ ಡ್ರಗ್ಸ್ ನಂತ ಗಂಭೀರ ಪ್ರಕರಣಗಳ ಉಗಮ ತಮ್ಮ ಜಿಲ್ಲೆಯಿಂದಲೇ ಆಗುತ್ತಿದೆ ಎಂಬುದನ್ನು ಅರಿತು, ಡ್ರಗ್ ಪೆಡ್ಲರ್ ಗಳ ಮೇಲೆ ಕ್ರಮ ಕೈಗೊಳ್ಳಲಿ ಹಾಗೂ ಖುರ್ಚಿ ಕುಸ್ತಿ ಬಿಟ್ಟು ಸ್ಥಿರ ಆಡಳಿತ ಹಾಗೂ ಕಾನೂನು ಸುವ್ಯವಸ್ಥೆಯನ್ನು ಬಿಗಿ ಗೊಳ್ಳಿಸಲಿ ಎಂದು ಯತ್ನಾಳ್ ಆಗ್ರಹಿಸಿದ್ದಾರೆ.

About The Author