ತಾಲೂಕಿನ ಡಿ.ಎಂ.ಕುರ್ಕೆ ಗ್ರಾಮದಲ್ಲಿ ಮದ್ಯದ ಅಮಲಿನಲ್ಲಿ ಎರಡು ಗುಂಪುಗಳ ನಡುವೆ ನಡೆದ ಕ್ಷುಲ್ಲಕ ವಾಗ್ವಾದ ಭಾರೀ ಗಲಾಟೆಗೆ ತಿರುಗಿದ ಘಟನೆ ನಡೆದಿದೆ. ಬಿಯರ್ ಬಾಟಲ್ ತೆರೆಯುವ ವೇಳೆ ಬಿಯರ್ ಮೈಮೇಲೆ ಚಿಮ್ಮಿದ ಎಂಬ ಸಣ್ಣ ಕಾರಣದಿಂದ ಆರಂಭವಾದ ವಿವಾದ ಅಂತಿಮವಾಗಿ ಬಂದೂಕು ಪ್ರದರ್ಶನದ ಹಂತಕ್ಕೆ ತಲುಪಿದೆ. ಸಿಂಗೇನಹಳ್ಳಿ ಹಾಗೂ ಡಿ.ಎಂ.ಕುರ್ಕೆ ಗ್ರಾಮದ ಯುವಕರ ನಡುವೆ ಮಾತಿನ ಚಕಮಕಿ ಉಂಟಾಗಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಈ ವೇಳೆ ಸಿಂಗೇನಹಳ್ಳಿ ಗ್ರಾಮದ ರಮೇಶ್ ಎಂಬಾತ ಏರ್ ಗನ್ ತೆಗೆದುಕೊಂಡು ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.
ಘಟನೆ ಸಂದರ್ಭದಲ್ಲಿ ಎರಡು ಗುಂಪುಗಳ ನಡುವೆ ಬಂದೂಕು ಕಿತ್ತುಕೊಳ್ಳಲು ನೂಕಾಟ–ತಳ್ಳಾಟ ನಡೆದಿದ್ದು, ಲೋಡ್ ಆಗಿದ್ದ ಬಂದೂಕಿನಿಂದ ಅನಾಹುತ ಸಂಭವಿಸುವ ಅಪಾಯವೂ ಉಂಟಾಗಿತ್ತು ಎಂದು ತಿಳಿದುಬಂದಿದೆ. ಈ ಭಯಾನಕ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಘಟನೆಗೆ ಸಂಬಂಧಿಸಿದಂತೆ ರಮೇಶ್, ಮಂಜುನಾಥ್, ಮಧುಸೂದನ್ ಮತ್ತು ದರ್ಶನ್ ವಿರುದ್ಧ ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




