ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಮೂರು ದಿನಗಳ ಕಾಲ ನಡೆದ ‘ನಮ್ಮೂರ ಐಪಿಎಲ್’ ಸೀಸನ್–2 ಕ್ರಿಕೆಟ್ ಲೀಗ್ ಭರ್ಜರಿ ಯಶಸ್ಸಿನೊಂದಿಗೆ ಅಂತ್ಯಗೊಂಡಿತು. ರಾಜರಾಜೇಶ್ವರಿ ನಗರ ಕ್ರೀಡೆ ಮತ್ತು ಸಾಂಸ್ಕೃತಿಕ ಸಂಘ ಹಾಗೂ ರಾಜರಾಜೇಶ್ವರಿ ನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಹಿರಿಯ ರಾಜಕೀಯ ಮುಖಂಡ ಜಿ. ಎಚ್. ರಾಮಚಂದ್ರ ಹಾಗೂ ಅವರ ಪುತ್ರ ಜಗದೀಶ್ ಆರ್. ಚಂದ್ರ ಅವರ ನೇತೃತ್ವದಲ್ಲಿ ಆಯೋಜಿಸಲಾದ ಈ ಟೂರ್ನಿ, ಮೇ 8ರಂದು ಆರಂಭವಾಗಿತ್ತು. ಒಟ್ಟು 12 ತಂಡಗಳ 300ಕ್ಕೂ ಹೆಚ್ಚು ಆಟಗಾರರು ಪಾಲ್ಗೊಂಡ ಈ ಲೀಗ್ ರಾಜರಾಜೇಶ್ವರಿ ನಗರದಲ್ಲಿ ಕ್ರೀಡಾಭಿಮಾನಿಗಳ ಗಮನ ಸೆಳೆಯಿತು.

ಗೆಲುವು ಕೇವಲ ಮೈದಾನದ್ದಲ್ಲ, ಆ ಗೆಲುವನ್ನು ಹರಸಲು ಬಂದ ಗಣ್ಯರ ಪ್ರೀತಿಯೂ ದೊಡ್ಡದು
ಇನ್ನು ಫೈನಲ್ ಪಂದ್ಯಕ್ಕೆ ಮುಖ್ಯ ಅತಿಥಿಗಳಾಗಿ ಸಿ. ಎನ್. ಮಂಜುನಾಥ್, ಮುನಿರತ್ನ, ಜಿ. ಎಚ್. ರಾಮಚಂದ್ರ, ಜಗದೀಶ್ ಆರ್. ಚಂದ್ರ, ಡಾ. ಅರುಣಾಚಲಂ ಮತ್ತು ಅಶ್ವಸೂರ್ಯ ರಿಯಾಲಿಟೀಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನಿರ್ದೇಶಕ ರಂಜಿತ್ ಕುಮಾರ್ ಹಾಗೂ ಕರ್ನಾಟಕ ಟಿವಿ ಮುಖ್ಯಸ್ಥ ಕೆ.ಎಂ. ಶಿವಕುಮಾರ್ ಉಪಸ್ಥಿತರಿದ್ದರು. ವಿಶೇಷ ಅಂದರೆ ಡ್ರೋನ್ ಮೂಲಕ ಟಾಸ್ ನಡೆಸಿ ಫೈನಲ್ ಪಂದ್ಯಕ್ಕೆ ಚಾಲನೆ ನೀಡಲಾಯಿತು.

ನಮ್ಮೂರ ಐಪಿಎಲ್ ಸೀಸನ್ 2ರ ಮಹಾ ಫೈನಲ್‌ಗೆ ಅದ್ಧೂರಿ ಚಾಲನೆ
ಟಾಸ್ ಗೆದ್ದ ಇ-3 ಪ್ಯಾಂಥರ್ಸ್ ಹಾಗೂ ಎಸ್.ಆರ್. ಕ್ರಷರ್ಸ್ ತಂಡಗಳ ನಡುವೆ ರೋಚಕ ಪೈಪೋಟಿ ನಡೆಯಿತು. ಆರಂಭಿಕ ಪ್ರದರ್ಶನವಾಗಿ ಜಿ. ಎಚ್. ರಾಮಚಂದ್ರ ಬೌಲಿಂಗ್ ಮಾಡಿದ್ರೆ, ಸಿ. ಎನ್. ಮಂಜುನಾಥ್ ಬ್ಯಾಟಿಂಗ್ ನಡೆಸುವ ಮೂಲಕ ಫೈನಲ್ ಪಂದ್ಯವನ್ನು ಉದ್ಘಾಟಿಸಿದರು. ಎರಡು ತಂಡಗಳ ಮಧ್ಯೆ ತೀವ್ರ ಪೈಪೋಟಿ ನಡೆಯಿತು.

ಲೆಜೆಂಡ್ಸ್ ಸಮ್ಮುಖದಲ್ಲಿ ಚಾಂಪಿಯನ್ಸ್ ಟ್ರೋಫಿ ಸ್ವೀಕರಿಸಿದ ಐತಿಹಾಸಿಕ ಕ್ಷಣ.
ಇ-3 ಪ್ಯಾಂಥರ್ಸ್ ತಂಡವು ಕೇವಲ 3 ರನ್ ಅಂತರದಿಂದ ಎಸ್.ಆರ್. ಕ್ರಷರ್ಸ್ ತಂಡವನ್ನು ಮಣಿಸಿ, ‘ನಮ್ಮೂರ ಐಪಿಎಲ್’ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಜೊತೆಗೆ 3 ಲಕ್ಷ ರೂಪಾಯಿ ನಗದು ಬಹುಮಾನವನ್ನು ಪಡೆದಿತು. ರನ್ನರ್-ಅಪ್ ಆದ ಎಸ್.ಆರ್. ಕ್ರಷರ್ಸ್ ತಂಡಕ್ಕೆ 2 ಲಕ್ಷ ರೂಪಾಯಿ ಬಹುಮಾನ ನೀಡಲಾಯಿತು.
ಇದಷ್ಟೆ ಅಲ್ಲದೆ, ಮ್ಯಾನ್ ಆಫ್ ದ ಮ್ಯಾಚ್, ಬೆಸ್ಟ್ ಬ್ಯಾಟ್ಸ್‌ಮನ್ ಹಾಗೂ ಬೆಸ್ಟ್ ಬೌಲರ್ ಪ್ರಶಸ್ತಿಗಳನ್ನೂ ವಿತರಿಸಲಾಯಿತು. ಒಂದು ಕಡೆ ಇ-3 ಪ್ಯಾಂಥರ್ಸ್ ತಂಡದ ಟ್ರೋಫಿ ಸಂಭ್ರಮ, ಮತ್ತೊಂದು ಕಡೆ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗೆಲುವು—ಇವು ಎರಡೂ ಸೇರಿ ರಾಜರಾಜೇಶ್ವರಿ ನಗರದಲ್ಲಿ ಹಬ್ಬದ ವಾತಾವರಣ ನಿರ್ಮಿಸಿತು.
ಮುಂದಿನ ಸೀಸನ್‌ನಲ್ಲಿ ಮಹಿಳೆಯರ ತಂಡಗಳನ್ನೂ ಒಳಗೊಂಡ ಪ್ರತ್ಯೇಕ ಸ್ಪರ್ಧೆ ಆಯೋಜಿಸುವ ಸಿದ್ಧತೆ ನಡೆಯುತ್ತಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಕಾರ್ಯಕ್ರಮಕ್ಕೆ ಕನ್ನಡ ರ್ಯಾಪರ್ ಆಲ್ ಓಕೆ ಆಲೋಕ್ ವಿಶೇಷ ಮೆರುಗು ನೀಡಿದರು. ತಮ್ಮ ಗಾಯನದ ಮೂಲಕ ಆಟಗಾರರನ್ನು ಹುರಿದುಂಬಿಸಿದ ಅವರು, ‘ನಮ್ಮೂರ ಐಪಿಎಲ್’ ಆಂಥಮ್ ಜೊತೆಗೆ 12 ತಂಡಗಳಿಗೂ ವಿಶೇಷ ಹಾಡುಗಳನ್ನು ನೀಡಿರುವುದು ಕಾರ್ಯಕ್ರಮದ ಮತ್ತೊಂದು ವಿಶೇಷವಾಗಿತ್ತು.
ಸಂಜೆ ನಡೆದ ಸಮಾರೋಪದಲ್ಲಿ ಜಿ. ಎಚ್. ರಾಮಚಂದ್ರ ಅವರ ಕುಟುಂಬದ ಸಮ್ಮುಖದಲ್ಲಿ ತಾಯಂದಿರ ದಿನ ಆಚರಣೆ ಕೂಡ ನಡೆಯಿತು. ಒಟ್ಟಾರೆ, ‘ನಮ್ಮೂರ ಐಪಿಎಲ್’ ಸೀಸನ್–2 ರಾಜರಾಜೇಶ್ವರಿ ನಗರದಲ್ಲಿ ಗ್ರ್ಯಾಂಡ್ ಸಕ್ಸಸ್ ಕಂಡಿತು.




