ಗೋವಾದ ಬೇತುಲ್ ಸಮುದ್ರ ಪ್ರದೇಶದಲ್ಲಿ ಆಳಸಮುದ್ರದ ಮೀನುಗಾರಿಕಾ ಬೋಟ್ ಮುಳುಗಡೆ. ಕಾರವಾರ ಮೂಲದ ಪರ್ಶಿಯನ್ ಮಾದರಿಯ ಆಳಸಮುದ್ರ ಮೀನುಗಾರಿಕಾ ಬೋಟ್ ಗೋವಾದ ಬೇತುಲ್ ಸಮುದ್ರ ಪ್ರದೇಶದಲ್ಲಿ ಮುಳುಗಡೆಯಾದ ಘಟನೆ ನಡೆದಿದೆ. ಅದೃಷ್ಟವಶಾತ್, ಬೋಟ್ನಲ್ಲಿದ್ದ ಎಲ್ಲಾ 22 ಮಂದಿ ಮೀನುಗಾರರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ‘ಶ್ರೀ ಅಮ್ಮ’ ಹೆಸರಿನ ಈ ಮೀನುಗಾರಿಕಾ ಬೋಟ್ ಕಾರವಾರ ತಾಲೂಕಿನ ಮುದಗಾ ಬಂದರಿನಿಂದ ಸುಮಾರು ಒಂದು ವಾರದ ಹಿಂದೆ ಆಳಸಮುದ್ರ ಮೀನುಗಾರಿಕೆಗೆ ತೆರಳಿತ್ತು. ಮುದಗಾದ ದಿನೇಶ ಕಾಂಚನ್ ಅವರಿಗೆ ಸೇರಿದ ಈ ಬೋಟ್ ಗೋವಾದ ಬೇತುಲ್ ಸಮುದ್ರ ವ್ಯಾಪ್ತಿಯಲ್ಲಿ ಮೀನುಗಾರಿಕೆ ನಡೆಸುವ ವೇಳೆ ಏಕಾಏಕಿ ಸಮುದ್ರದಲ್ಲಿ ಮುಳುಗಿದೆ ಎಂದು ತಿಳಿದುಬಂದಿದೆ.

ಗೋವಾದ ಬೇತುಲ್ ಸಮುದ್ರದಲ್ಲಿ ಮುಳುಗಿದ ಕಾರವಾರದ ‘ಶ್ರೀ ಅಮ್ಮ’ ಬೋಟ್
ಘಟನೆ ಸಂಭವಿಸಿದ ತಕ್ಷಣ ಸಮೀಪದಲ್ಲೇ ಮೀನುಗಾರಿಕೆ ನಡೆಸುತ್ತಿದ್ದ ಇತರ ಮೀನುಗಾರರು ರಕ್ಷಣಾ ಕಾರ್ಯಾಚರಣೆ ನಡೆಸಿ, ಬೋಟ್ನಲ್ಲಿದ್ದ 22 ಮಂದಿಯನ್ನು ಸುರಕ್ಷಿತವಾಗಿ ಕರಾವಳಿಗೆ ಕರೆತಂದಿದ್ದಾರೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಬೋಟ್ ಜೊತೆಗೆ ದುಬಾರಿ ಮೀನುಗಾರಿಕಾ ಬಲೆಗಳು ಸಮುದ್ರದ ಪಾಲಾಗಿದ್ದು, ಕೋಟ್ಯಾಂತರ ರೂಪಾಯಿ ನಷ್ಟ ಸಂಭವಿಸಿರುವ ಸಾಧ್ಯತೆ ಇದೆ. ಘಟನೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.




