Tuesday, June 3, 2025

Latest Posts

ಸೋನಿಯಾ, ರಾಹುಲ್‌ ವಿರುದ್ಧ ಇಡಿ ಚಾರ್ಜ್‌ ಶೀಟ್‌ : ಮೋದಿ ಶಾ ಸೇಡಿನ ರಾಜಕಾರಣ : ಸಿಎಂ ವಾಗ್ದಾಳಿ

- Advertisement -

Political News: ನ್ಯಾಷನಲ್‌ ಹೆರಾಲ್ಡ್‌ ಹಗರಣದಲ್ಲಿ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಹಾಗೂ ಸಂಸದ ರಾಹುಲ್‌ ಗಾಂಧಿ ವಿರುದ್ಧ ಇಡಿ ಚಾರ್ಜ್‌ ಶೀಟ್‌ ದಾಖಲಿಸಿರುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಖಂಡಿಸಿದ್ದಾರೆ. ಅಲ್ಲದೆ ಇದನ್ನು ಕಾಂಗ್ರೆಸ್‌ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಸಹಿಸಿಕೊಳ್ಳುವುದಿಲ್ಲ, ಇದರ ವಿರುದ್ಧ ಪ್ರತಿಭಟನೆ ನಡೆಸಲಿದ್ದಾರೆ ಎಂದು ಎಚ್ಚರಿಸಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ ಸೋನಿಯಾ ಗಾಂಧಿ ಮತ್ತು ಕೇಂದ್ರ ಸರ್ಕಾರದ ಪಾಲಿಗೆ ಸಿಂಹಸ್ವಪ್ನರಾಗಿರುವ ರಾಹುಲ್ ಗಾಂಧಿಯವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿರುವ ಜಾರಿ ನಿರ್ದೇಶನಾಲಯದ ಇಡಿಯ ಕ್ರಮ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಸೇಡಿನ ರಾಜಕಾರಣದ ಮುಂದುವರಿದ ಭಾಗವಾಗಿದೆ ಎಂದು ಕಿಡಿ ಕಾರಿದ್ದಾರೆ.

ಇದು ಕೇವಲ ನಮ್ಮ ಪಕ್ಷದ ಇಬ್ಬರು ನಾಯಕರ ಇಲ್ಲವೇ ಕಾಂಗ್ರೆಸ್ ಪಕ್ಷದ ವಿರುದ್ಧದ ಸೇಡಿನ ಕ್ರಮ ಅಲ್ಲ, ಇದು ವಿರೋಧದ ದನಿಯನ್ನು ಸಹಿಸುವುದಿಲ್ಲ ಎಂಬ ಎಚ್ಚರಿಕೆಯನ್ನು ದೇಶದ ವಿರೋಧ ಪಕ್ಷಗಳು ಮತ್ತು ಪ್ರಜಾಪ್ರಭುತ್ವ ಪ್ರೇಮಿ ನಾಗರಿಕರಿಗೆ ನರೇಂದ್ರ ಮೋದಿ ಸರ್ಕಾರ ನೀಡಿರುವ ಎಚ್ಚರಿಕೆಯಾಗಿದೆ. ದ್ವೇಷದ ರಾಜಕಾರಣವನ್ನು ಎದುರಿಸುತ್ತಲೇ ಬಂದಿರುವ ಕಾಂಗ್ರೆಸ್ ಪಕ್ಷ ಇದನ್ನು ಕೂಡಾ ಸತ್ಯ ಮತ್ತು ನ್ಯಾಯದ ಬಲದಿಂದ ಎದುರಿಸಲಿದೆ ಎಂದು ಗಡುಗಿದ್ದಾರೆ.

ಸ್ವಾಯತ್ತ ತನಿಖಾ ಸಂಸ್ಥೆಯಾದ ಇಡಿಯನ್ನು ವಿರೋಧ ಪಕ್ಷದ ನಾಯಕರ ವಿರುದ್ಧ ದ್ವೇಷ ಸಾಧಿಸಲು ಆಯುಧವನ್ನಾಗಿ ಬಳಸುತ್ತಾ ಬಂದಿರುವ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಈಗ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಹಣ ಅಕ್ರಮ ವರ್ಗಾವಣೆಯಾಗಿರುವ ಸುಳ್ಳು ಆರೋಪವನ್ನು ಬಳಸಿಕೊಂಡಿದೆ. ಇದು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಆದೇಶದಂತೆಯೇ ಈ ದ್ವೇಷದ ರಾಜಕಾರಣ ನಡೆಯುತ್ತಿದೆ ಎನ್ನುವುದು ಸ್ಪಷ್ಟವಾಗಿದೆ ಎಂದು ಅವರು ಟೀಕಿಸಿದ್ದಾರೆ.

ವಿಚಾರಣೆಯ ನೆಪದಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರು ಸೇರಿದಂತೆ ನಮ್ಮ ಪಕ್ಷದ ಪ್ರಮುಖ ನಾಯಕರಿಗೆ ನಿರಂತರವಾಗಿ ಮಾನಸಿಕ ಕಿರುಕುಳ ನೀಡಿ ಪೀಡಿಸಿದ ಇಡಿಯು ಅದರಿಂದ ಯಾವುದೇ ಫಲ ಸಿಗದೆ ಇದ್ದಾಗ ಕಲ್ಪಿತ ಕತೆಗಳನ್ನು ಕಟ್ಟಿ ಆರೋಪ ಪಟ್ಟಿ ಸಲ್ಲಿಸಿದೆ ಎಂದು ಆರೋಪಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸರ್ವಾಧಿಕಾರಿ ಧೋರಣೆಯ ವಿರುದ್ದ ಕಾಂಗ್ರೆಸ್ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನೂ ಬೀದಿಗೆ ಇಳಿದು ಇದನ್ನು ಪ್ರತಿಭಟಿಸಲಿದ್ದಾರೆ. ಈ ಪ್ರತಿರೋಧಕ್ಕೆ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಟ್ಟಿರುವ ಪ್ರತಿಯೊಬ್ಬ ಪ್ರಜೆಯೂ ಕೈಜೋಡಿಸಬೇಕಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಏನಿದು ನ್ಯಾಷನಲ್ ಹೆರಾಲ್ಡ್​ ಪ್ರಕರಣ?:

ನ್ಯಾಷನಲ್ ಹೆರಾಲ್ಡ್​ ಎನ್ನುವುದು ಒಂದು ಪತ್ರಿಕೆ. 1937ರಲ್ಲಿ ಅಂದಿನ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಅವರು ಅಸೋಸಿಯೇಟೆಡ್ ಜರ್ನಲ್ಸ್​ ಲಿಮಿಟೆಡ್ ಎಜೆಎಲ್ ಎಂಬ ಕಂಪನಿಯೊಂದನ್ನು ಸ್ಥಾಪಿಸಿದ್ದರು. ಈ ಕಂಪನಿಗೆ 5 ಸಾವಿರ ಜನ ಸ್ವಾತಂತ್ರ್ಯ ಹೋರಾಟಗಾರರು ಷೇರುದಾರರಾಗಿದ್ದರು. ನ್ಯಾಷನಲ್ ಹೆರಾಲ್ಡ್​ ಪತ್ರಿಕೆಯು ಇದೇ ಸಂಸ್ಥೆಯಿಂದ ಪ್ರಕಾಶನಗೊಳ್ಳುತ್ತಿತ್ತು. ಈ ಪತ್ರಿಕೆಯನ್ನು ಅಕ್ರಮವಾಗಿ ಬೇರೊಂದು ಸಂಸ್ಥೆಗೆ ಪರಭಾರೆ ಮಾಡಲಾಗಿದೆ ಎಂದು ಆರೋಪಿಸಿ, ಈ ಬಗ್ಗೆ ತನಿಖೆ ನಡೆಸುವಂತೆ ಕೋರಿ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ನ್ಯಾಯಾಲಯದಲ್ಲಿ 2012 ರಲ್ಲಿ ದಾವೆ ದಾಖಲಿಸಿದ್ದರು.

2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಜಾರಿ ನಿರ್ದೇಶನಾಲಯವು ಈ ಪ್ರಕರಣದ ವಿಚಾರಣೆಯನ್ನು ಆರಂಭಿಸಿದೆ. ಸುಬ್ರಮಣಿಯನ್ ಸ್ವಾಮಿ ಅವರ ದಾವೆ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯವು ಜೂನ್ 2014 ರಲ್ಲಿ ಸೋನಿಯಾ ಹಾಗೂ ರಾಹುಲ್ ಗಾಂಧಿ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್​ ನೀಡಿತ್ತು.

ಅದೇ ವರ್ಷದ ಆಗಸ್ಟ್​ನಲ್ಲಿ ಇಡಿ ಅಕ್ರಮ ಹಣ ವರ್ಗಾವಣೆಯ ಪ್ರಕರಣವನ್ನೂ ದಾಖಲಿಸಿತ್ತು. ಆದರೆ 2015 ರಲ್ಲಿ ಸೋನಿಯಾ ಹಾಗೂ ರಾಹುಲ್ ಗಾಂಧಿ ಇಬ್ಬರಿಗೂ ನ್ಯಾಯಾಲಯದಿಂದ ಜಾಮೀನು ಸಿಕ್ಕಿತ್ತು. ಖುದ್ದಾಗಿ ವಿಚಾರಣೆಗೆ ಹಾಜರಾಗುವುದರಿಂದ ಎಲ್ಲ ಆರೋಪಿಗಳಿಗೆ 2016 ರಲ್ಲಿ ಸುಪ್ರೀಂಕೋರ್ಟ್ ವಿನಾಯಿತಿ ನೀಡಿತ್ತು. ಮೋತಿಲಾಲ್ ವೋರಾ, ಆಸ್ಕರ್ ಫರ್ನಾಂಡಿಸ್, ಸ್ಯಾಮ್ ಪಿತ್ರೊಡಾ ಹಾಗೂ ಸುಮನ್ ದುಬೆ ಅವರನ್ನೂ ಪ್ರಕರಣದಲ್ಲಿ ಆರೋಪಿಗಳೆಂದು ಹೆಸರಿಸಲಾಗಿದೆ.

ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ದುಬೆ, ಪಿತ್ರೊಡಾ, ಕಾಂಗ್ರೆಸ್ಸಿನ ಮುಖಂಡರಾಗಿದ್ದ ಮೋತಿಲಾಲ್ ವೋರಾ ಮತ್ತು ಆಸ್ಕರ್ ಫರ್ನಾಂಡೀಸ್, ಖಾಸಗಿ ಕಂಪನಿಯಾದ ಯಂಗ್‌ ಇಂಡಿಯಾ ಮತ್ತು ಕೆಲವು ಪ್ರಮುಖ ರಾಜಕೀಯ ವ್ಯಕ್ತಿಗಳು ಕ್ರಿಮಿನಲ್ ಪಿತೂರಿ ನಡೆಸಿದ್ದನ್ನು ದೂರಿನಲ್ಲಿ ಎತ್ತಿತೋರಿಸಲಾಗಿದೆ. ಇವರೆಲ್ಲ, ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್‌ಗೆ (ಎಜೆಎಲ್‌) ಸೇರಿದ ₹2,000 ಕೋಟಿ ಬೆಲೆಬಾಳುವ ಆಸ್ತಿಗಳನ್ನು ಸ್ವಾಧಿನಕ್ಕೆ ತೆಗೆದುಕೊಳ್ಳುವಲ್ಲಿ ಹಣದ ಅಕ್ರಮ ವರ್ಗಾವಣೆ ನಡೆಸಿರುವುದನ್ನು ದೂರಿನಲ್ಲಿ ಹೇಳಲಾಗಿದೆ ಎಂದು ಇ.ಡಿ ಉಲ್ಲೇಖಿಸಿದೆ.

ಆರೋಪಿಗಳ ವಿರುದ್ಧದ ಕಾನೂನು ಪ್ರಕ್ರಿಯೆಗಳಿಗೆ ಸವಾಲುಗಳು ಎದುರಾಗಿದ್ದವು. ಆದರೆ ಪ್ರಕ್ರಿಯೆಗಳನ್ನು ದೆಹಲಿ ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ ಎತ್ತಿಹಿಡಿದಿವೆ. ಇದರಿಂದಾಗಿ ತನಿಖೆಯು ಮುಂದುವರಿಯಿತು’ ಎಂದು ಇ.ಡಿ ಹೇಳಿದೆ. ನ್ಯಾಷನಲ್ ಹೆರಾಲ್ಡ್ ಮಾಧ್ಯಮ ಸಂಸ್ಥೆಯ (ಪತ್ರಿಕೆ ಮತ್ತು ವೆಬ್‌ ತಾಣ) ಪ್ರಕಾಶನ ಸಂಸ್ಥೆ ಎಜೆಎಲ್‌. ಇದರ ಮಾಲೀಕತ್ವವನ್ನು ಯಂಗ್ ಇಂಡಿಯನ್ ಪ್ರೈ.ಲಿ. ಹೊಂದಿದೆ. ಯಂಗ್ ಇಂಡಿಯನ್ ಕಂಪನಿಯಲ್ಲಿ ತಲಾ ಶೇಕಡ 38ರಷ್ಟು ಷೇರುಗಳನ್ನು ಸೋನಿಯಾ ಮತ್ತು ರಾಹುಲ್ ಹೊಂದಿದ್ದಾರೆ.

ಜಾರಿ ನಿರ್ದೇಶನಾಲಯವು ಈ ಪ್ರಕರಣದಲ್ಲಿ ಸೋನಿಯಾ ಮತ್ತು ರಾಹುಲ್ ಅವರನ್ನು ಕೆಲವು ವರ್ಷಗಳ ಹಿಂದೆ ಗಂಟೆಗಳ ಕಾಲ ವಿಚಾರಣೆಗೆ ಗುರಿಪಡಿಸಿತ್ತು. ಸೋನಿಯಾ ಮತ್ತು ರಾಹುಲ್ ಅವರ ಒಡೆತನದ ಖಾಸಗಿ ಕಂಪನಿಯಾದ ಯಂಗ್ ಇಂಡಿಯನ್‌, ಎಜೆಎಲ್‌ಗೆ ಸೇರಿದ 2,000 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಕೇವಲ ₹50 ಲಕ್ಷಕ್ಕೆ ತನ್ನದಾಗಿಸಿಕೊಂಡಿದೆ ಎಂಬುದು ತನಿಖೆಯಿಂದ ನಿರ್ಣಾಯಕವಾಗಿ ತಿಳಿದುಬಂದಿದೆ ಎಂದು ಇ.ಡಿ. ಹೇಳಿದೆ. 18 ಕೋಟಿ ರೂಪಾಯಿ ಮೊತ್ತದ ನಕಲಿ ಡೊನೇಷನ್, 38 ಕೋಟಿ ರೂಪಾಯಿ ಮೊತ್ತದ ನಕಲಿ ಮುಂಗಡ ಬಾಡಿಗೆ, 29 ಕೋಟಿ ರೂಪಾಯಿ ಮೊತ್ತದ ನಕಲಿ ಜಾಹೀರಾತು ಹಣಕ್ಕೆ ಯಂಗ್ ಇಂಡಿಯನ್ ಮತ್ತು ಎಜೆಎಲ್‌ನ ಆಸ್ತಿಗಳನ್ನು ಮೂಲವೆಂದು ತೋರಿಸಲಾಗಿದೆ ಎಂದು ಇ.ಡಿ ಆರೋಪಿಸಿದೆ. ಅಲ್ಲದೆ ಇದೇ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆಯಾಗಿರುವ ಬಗ್ಗೆ ಇಡಿಯು ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ವಿರುದ್ಧ ಚಾರ್ಜ್‌ ಶೀಟ್‌ ದಾಖಲಿಸಿ ತನಿಖೆ ಮುಂದುವರೆಸಿದೆ.

- Advertisement -

Latest Posts

Don't Miss