Political News: ತಮಿಳುನಾಡಿನ ರಾಜಕೀಯದಲ್ಲಿ ಇದ್ದಕ್ಕಿದ್ದಂತೆ ಸಿನಿಮಾ ಸ್ಟಾರ್‌ಗಳು ಫಳ ಫಳ ಹೊಳೆಯಲು ಶುರುವಿಟ್ಟುಕೊಂಡಿದ್ದಾರೆ. ಎಂಜಿಆರ್ ಮತ್ತು ಜಯಲಲಿತಾ ಒಟ್ಟೊಟ್ಟಿಗೆ ರಾಜಕೀಯ ಆರಂಭಿಸಿದ ಬಳಿಕ ಬಹುಶಃ ಇದೇ ಮೊದಲ ಬಾರಿಗೆ ಆ ರಾಜ್ಯವು ಹೆಚ್ಚು ತಾರೆಗಳನ್ನು ನೋಡುತ್ತಿದೆ. ಜಯಲಲಿತಾ ಸಾವಿನ ಬಳಿಕ ತಮಿಳುನಾಡಿನ ರಾಜಕೀಯವು ಸ್ಟಾರ್‌ಗಳ ಹೊಳಪು ಕಳೆದುಕೊಂಡಿತ್ತು. ಈಗ ಅದೇ ಸಿನಿಮಾ ನಟರು ಆ ಶೂನ್ಯ ತುಂಬಲು ಸಜ್ಜಾಗಿದ್ದಾರೆ.
ತಮಿಳುನಾಡು ರಾಜಕೀಯಕ್ಕೆ ಪ್ರಶಾಂತ್ ಕಿಶೋರ್ ಎಂಟ್ರಿ!
ಡಿಎಂಕೆ, ಬಿಜೆಪಿಗೆ ದಳಪತಿ ವಿಜಯ್ ಬಿಗ್ ಶಾಕ್!
ಎಂಜಿಆರ್ ಬಳಿಕ ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ಪಟ್ಟಕ್ಕಾಗಿ ಸ್ಪರ್ಧೆ ನಡೆಯುತ್ತಾ ಬಂದದ್ದು ರಜನೀಕಾಂತ್ ಮತ್ತು ಕಮಲ್‌ಹಾಸನ್ ನಡುವೆ. ಈ ಇಬ್ಬರೂ ಜಿದ್ದಿಗೆ ಬಿದ್ದವರಂತೆ ರಾಜಕೀಯ ಪ್ರವೇಶವನ್ನ ಘೋಷಿಸಿಕೊಂಡಿದ್ದರು. ಆದರೆ ಅದು ನಿರೀಕ್ಷಿತ ಮಟ್ಟದಲ್ಲಿ ಫಲ ನೀಡಲಿಲ್ಲ. ಆದರೆ ಇವೆಲ್ಲವನ್ನ ಮೀರಿ ಇದೀಗ ಮತ್ತೊಬ್ಬ ಸ್ಟಾರ್ ನಟ ತಮಿಳುನಾಡಲ್ಲಿ ರಾಜಕೀಯ ಬಿರುಗಾಳಿ ಎಬ್ಬಿಸಲು ಸಜ್ಜಾಗಿದ್ದಾರೆ.
ತಮಿಳಿಗರಿಗೆ ವಿಜಯ್ ಹೊಸ ಭರವಸೆ..
ತಮಿಳುನಾಡು ಎಲೆಕ್ಷನ್‌ನಲ್ಲಿ ಟಿವಿಕೆ ವಿಕ್ಟರಿಯಾಗುತ್ತೆ ಅಂದಿದ್ದೇಕೆ ಪಿಕೆ..?
ದೇಶದ ಕೆಲವೇ ಕೆಲವು ರಾಜ್ಯಗಳು ತಮ್ಮ ಪ್ರಾದೇಶಿಕ ಅಸ್ಮಿತೆ ಹಾಗೂ ನಾಡಿನ ಸ್ವಂತಿಕೆಯನ್ನ ಉಳಿಸಿಕೊಳ್ಳುವಲ್ಲಿ ತಮ್ಮದೇ ಆದ ರೀತಿಯಲ್ಲಿ ಹೋರಾಟವನ್ನ ನಡೆಸುತ್ತಿವೆ. ಇದಕ್ಕೆ ಈ ತಮಿಳುನಾಡು ಹೊರತೇನಲ್ಲ, ತಮಿಳುನಾಡಿನ ರಾಜಕಾರಣದಲ್ಲಿ ನಾವು ನೋಡಿದಾಗ ಬಹುತೇಕ ಸ್ಥಳೀಯ ಪಕ್ಷಗಳದ್ದೇ ಕಾರುಬಾರು ನಡೆಯುತ್ತಾ ಬಂದಿರುವುದನ್ನ ಕಾಣಬಹುದಾಗಿದೆ. ಕರ್ನಾಟಕ, ಮಹಾರಾಷ್ಟ್ರ ಗುಜರಾತ್ ಹೀಗೆ ರಾಷ್ಟ್ರದ ಹಲವು ರಾಜ್ಯಗಳಂತೆ ತಮಿಳುನಾಡಿನ ರಾಜಕಾರಣ ಇಲ್ಲ ಅನ್ನೋದು ನಮಗೆ ಅಲ್ಲಿ ನಡೆದು ಬಂದ ರಾಜಕೀಯದ ಅನೇಕ ಮಜಲುಗಳನ್ನ ಗಮನಿಸಿದಾಗ ಕಂಡು ಬರುತ್ತೆ.
ಪ್ರಮುಖವಾಗಿ ಪ್ರಸ್ತುತದಲ್ಲಿ ದೇಶದಲ್ಲಿ ಬಹುತೇಕ ರಾಷ್ಟ್ರೀಯ ಪಕ್ಷಗಳ ಆಡಳಿತ ನಡೆಯುತ್ತಿದ್ದರೆ, ಈ ತಮಿಳುನಾಡಿನಲ್ಲಿ ಮಾತ್ರ ಬೇರೆಯದ್ದೇ ಕಥೆಯಾಗಿದೆ.ಎಸ್.. ಈ ತಮಿಳಿಗರು ತಮ್ಮ ನಾಡಿನ ಮೇಲೆ ಹಾಗೂ ಮಣ್ಣಿನ ಮೇಲೆ ಅತ್ಯಂತ ಭಾವುಕವಾದ ಮನಸ್ಥಿತಿಯನ್ನ ಹೊಂದಿದ್ದಾರೆ. ಯಾವುದೇ ಚುನಾವಣೆ ಬರಲಿ ಅಲ್ಲಿನ ಜನರು ತಮ್ಮ ಆಳ್ವಿಕೆಯನ್ನ ತಮ್ಮವರೇ ನಡೆಸಲಿ ಅನ್ನೋ ಮೈಂಡ್ ಸೆಟ್ ಹೊಂದಿದ್ದವರಾಗಿದ್ದಾರೆ ಅನ್ನೋದು ಈಗಾಗಲೇ ಹಲವು ಫಲಿತಾಂಶಗಳು ಸಾಬೀತುಪಡಿಸಿವೆ. ಅಂದ್ರೆ ಸ್ಥಳೀಯ ಪ್ರಾದೇಶಿಕ ಪಕ್ಷಗಳ ಕೈಗೆ ಅಧಿಕಾರ ನೀಡುವುದು ಅವರ ಯೋಚನೆಯಾಗಿರುತ್ತೆ.
ಟಿವಿಕೆ ರಾಜಕೀಯ ಭದ್ರ ಬುನಾದಿಗೆ ಪಿಕೆ ಮೊರೆ ಹೋದ್ರಾ ವಿಜಯ್..?
ಸಿನಿಮಾಗೂ ತಮಿಳುನಾಡು ರಾಜಕೀಯಕ್ಕೆ ಯಾಕಿಷ್ಟು ಬಿಡಿಸದ ನಂಟು..?
ಇನ್ನೂ ಈ ತಮಿಳುನಾಡು ರಾಜಕಾರಣವು ಈಗಾಗಲೇ ಅಣ್ಣಾ ಮಲೈ ಅವರಂತಹ ಜನಸೇವೆಯ ತುಡಿತವಿರುವ ಯುವಕನನ್ನ ಸ್ವೀಕರಿಸಲು ಸಾಧ್ಯವಾಗಿಲ್ಲ. ಕಳೆದ ಎರಡು ಚುನಾವಣೆಗಳಲ್ಲಿಯೂ ಬಿಜೆಪಿಯಿಂದ ಸ್ಫರ್ಧಿಸಿದ್ದ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾ ಮಲೈ ಅವರು ಸೋಲು ಕಂಡಿದ್ದರು. ಅಂದ್ರೆ ಇಲ್ಲಿನ ರಾಜಕಾರಣವು ಯಾವಾಗ ಹೇಗೆ..? ಯಾವ ದಿಕ್ಕಿನತ್ತ ಸಾಗುತ್ತೆ ಅನ್ನೋದನ್ನ ಊಹಿಸಿಕೊಳ್ಳಲು ಕಷ್ಟವಾಗುತ್ತೆ. ಅಷ್ಟೊಂದು ಡಿಫರೆಂಟ್ ಆಗಿಯೇ ನಡೆಯುತ್ತೆ. ಇದೇ ಅಣ್ಣಾ ಮಲೈ ಸ್ಟಾಲಿನ್ ಸರ್ಕಾರದ ಆಡಳಿತ ನೀತಿಯ ವಿರುದ್ಧ ಹಾಗೂ ಕೇಂದ್ರ ಸರ್ಕಾರದ ಯೋಜನಗೆಳನ್ನ ತಮಿಳಿಗರ ಮನೆಗಳಿಗೆ ತಲುಪಿಸುವ ಉದ್ದೇಶದಿಂದ ಎಣ್ಣ ಮನ್, ಎಣ್ಣ ಮಕ್ಕಳ್ ಎಂಬ ಪಾದಯಾತ್ರೆಯನ್ನ ಕೈಗೊಂಡು ಸಂಚಲನ ಮೂಡಿಸಿದ್ದರು. ಆದ್ರೆ ಬಳಿಕ ಎದುರಾದ ಲೋಕಸಭಾ ಚುನಾವಣೆಯಲ್ಲಿ ಅಣ್ಣಾ ಮಲೈ ಮಾಡಿದ್ದ ಕಸರತ್ತು ತಮಿಳುನಾಡಿನಲಿ ಬಿಜೆಪಿಗೆ ಲಾಭವಾಗಲಿಲ್ಲ. ಇದು ತಮಿಳುನಾಡಿನ ವಾಸ್ತವ ರಾಜಕೀಯವಾಗಿದೆ. ಈ ಮೊದಲಿನಿಂದಲೂ ಸಹ ಪ್ರಾದೇಶಿಕ ಪಕ್ಷಗಳಾದ ಡಿಎಂಕೆ, ಎಐಡಿಎಂಕೆ ಹೊರತಾಗಿ ಇನ್ಯಾವುದೇ ರಾಷ್ಟೀಯ ಪಕ್ಷಗಳು ತಮಿಳುನಾಡಲ್ಲಿ ತಮ್ಮ ಅಧಿಪತ್ಯ ಸ್ಥಾಪಿಸಲು ಸಾಧ್ಯವಾಗಿಲ್ಲ ಅನ್ನೋದು ಕೂಡ ಗಮನಾರ್ಹವಾದ ಸಂಗತಿಯಾಗಿದೆ.
ತಮಿಳುನಾಡಿನಲ್ಲಿ ಸಂಚಲನ ಮೂಡಿಸಿದ ಪಾಲಿಟಿಕಲ್ ಸ್ಟ್ರ್ಯಾಟಜಿಸ್ಟ್ ಪಿಕೆ ಎಂಟ್ರಿ..
ಎಸ್.. ತಮಿಳುನಾಡಿನ ವಿಧಾನಸಭಾ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಉಳಿದಿದೆ. ಆದರೆ ಈಗಿನಿಂದಲೇ ಅಲ್ಲಿ ದಿನಕಳೆದಂತೆಲ್ಲಾ ರಾಜಕೀಯ ಚಟುವಟಿಕೆಗಳು ನಡೆಯುತ್ತಿವೆ. ಕಳೆದ 2024ರ ಫೆಬ್ರವರಿಯಲ್ಲಿ ತಮಿಳಿನ ಖ್ಯಾತ ಸ್ಟಾರ್ ನಟ ದಳಪತಿ ವಿಜಯ್ ತಮ್ಮದೇ ಆದ ತಮಿಳು ವೆಟ್ರಿ ಕಳಗಂ ಅಂದ್ರೆ ಟಿವಿಕೆ ಅನ್ನೋ ನೂತನ ರಾಜಕೀಯ ಪಕ್ಷವನ್ನ ಘೋಷಿಸಿದ್ದರು. ತಮಿಳುನಾಡಿನ ವಿಕ್ರಂವಾಡಿಯಲ್ಲಿ ಲಕ್ಷಾಂತರ ಜನರನ್ನ ಸೇರಿಸಿ ತಮ್ಮ ಮುಂದಿನ ನಡೆಯನ್ನೂ ಸಹ ತಿಳಿಸಿದ್ದರು. ಅಲ್ದೆ ಇದೀಗ ಮತ್ತೆ ವಿಜಯ್ ಅಧಿಕೃತವಾಗಿ 2026ರ ವಿಧಾನಸಭಾ ಚುನಾವಣೆಗೆ ರಣಕಹಳೆ ಊದಿದ್ದಾರೆ. ಕಳೆದ ಫೆಬ್ರವರಿ 26ರಂದು ಮಹಾಬಲಿಪುರಂನಲ್ಲಿ ತಮ್ಮ ಪಕ್ಷದ ಮೊದಲ ವಾರ್ಷಿಕೋತ್ಸವ ಕಾರ್ಯಕ್ರಮವನ್ನ ಅದ್ದೂರಿಯಾಗಿ ನಡೆಸಿರುವ ವಿಜಯ್, ಇದಕ್ಕೆ ಮುಖ್ಯ ಅತಿಥಿಯಾಗಿ ಬಿಹಾರದ ಜನ್ ಸುರಾಜ್ ಪಕ್ಷದ ಸಂಸ್ಥಾಪಕ ಹಾಗೂ ಖ್ಯಾತ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಅವರನ್ನ ಆಹ್ವಾನಿಸಿದ್ದರು.
ಬಿಜೆಪಿ, ಟಿಎಂಸಿ ಹಾಗೂ ಕಾಂಗ್ರೆಸ್ ಸೇರಿದಂತೆ ದೇಶದ ವಿವಿಧ ನಾಯಕರ ಗೆಲುವಿಗಾಗಿ ಚುನಾವಣಾ ತಂತ್ರಗಳನ್ನ ಹೆಣೆದಿದ್ದ ಪ್ರಶಾತ್ ಕಿಶೋರ್ ಎಂಟ್ರಿಯಿಂದ ತಮಿಳುನಾಡಿನ ರಾಜಕೀಯದಲ್ಲಿ ಸಂಚಲನ ಸೃಷ್ಟಿಯಾಗಿದೆ. ಸಮಾರಂಭದಲ್ಲಿ ವಿಜಯ್ ಹಾಗೂ ಪ್ರಶಾಂತ್ ಕಿಶೋರ್ ಇಬ್ಬರೂ ಸಹ ಪರಸ್ಪರ ಆತ್ಮೀಯವಾಗಿ ಮಾತನಾಡಿಕೊಂಡಿದ್ದು ಅತ್ತ ತಮಿಳುನಾಡಿನ ಡಿಎಂಕೆ ವಿಚಲಿತವಾಗಲು ಕಾರಣವಾದ್ರೆ ಇತ್ತ ಬಿಜೆಪಿ ನಾಯಕರ ನಿದ್ದೆಗೆಡುವಂತೆ ಮಾಡಿದೆ. ಹೇಗಾದರೂ ಮಾಡಿ 2026ರ ಚುನಾವಣೆಯಲ್ಲಿ ತಮಿಳುನಾಡಿನ ಅಧಿಕಾರ ಗದ್ದುಗೆ ಹಿಡಿಯಬೇಕು ಅಂತ ಪ್ಲ್ಯಾನ್ ಮಾಡಿರುವ ವಿಜಯ್, ತಮಿಳಿಗರ ಮನಗೆಲ್ಲಲು ಸತತ ಪ್ರಯತ್ನ ಮಾಡುತ್ತಿದ್ದಾರೆ. ಅದರ ಮುಂದುವರೆದ ಭಾಗವಾಗಿಯೇ ಇದೀಗ ಎಲೆಕ್ಷನ್ ಮಾಸ್ಟರ್ ಮೈಂಡ್ ಪ್ರಶಾಂತ್ ಕಿಶೋರ್ ಅವರನ್ನ ತಮ್ಮ ಟೀಂಗೆ ಸೇರಿಸಿಕೊಂಡಿದ್ದಾರೆ.
ಭ್ರಷ್ಟಾಚಾರ..ಕುಟುಂಬ ರಾಜಕಾರಣ, ಬಂಡವಾಳಶಾಹಿ ನೀತಿಗಳು..
ಡಿಎಂಕೆಯ ವಿರುದ್ಧ ವಿಜಯ್ ಬಹಿರಂಗ ಸಮರ..
ಇನ್ನಾದರೂ ಬದಲಾಗುತ್ತಾ ತಮಿಳುನಾಡು ಪಾಲಿಟಿಕ್ಸ್ ಟ್ರೆಂಡ್..?
ಅಲ್ದೆ ಇದೇ ಸಮಾರಂಭದಲ್ಲಿ ಕೇಂದ್ರ ಮತ್ತು ತಮಿಳುನಾಡು ಸರ್ಕಾರದ ನಡುವೆ ನಡೆಯುತ್ತಿರುವ ಹಿಂದಿ ಹೇರಿಕೆ ಸಂಘರ್ಷದ ಬಗ್ಗೆ ವಾಗ್ದಾಳಿ ನಡೆಸಿರುವ ನಟ ವಿಜಯ್, ಎನ್‌ಇಪಿ, ತ್ರಿಭಾಷಾ ಸೂತ್ರ ಜಾರಿ ವಿಚಾರದಲ್ಲಿ ಎರಡು ಪಕ್ಷಗಳ ಮಧ್ಯೆ ಯುದ್ಧ ನಡೀತಿದೆ. ಇವರು ತಮಿಳುನಾಡನ್ನ ರಣರಂಗ ಮಾಡುತ್ತಿದ್ದಾರೆ. ಎರಡೂ ಪಕ್ಷಗಳು ಸೋಷಿಯಲ್ ಮೀಡಿಯಾದಲ್ಲಿ ಹ್ಯಾಷ್‌ಟ್ಯಾಗ್ ಗೇಮ್ ಆಡುತ್ತಿವೆ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ. ಇನ್ನೂ ಈ ನಾಯಕರು ಜನರನ್ನ ಹಾದಿತಪ್ಪಿಸುವ ಪ್ರಯತ್ನ ನಡೆಸುತ್ತಿದ್ದಾರೆ ಅವರ ನಡುವಿನ ಸಂಘರ್ಷ ಚಿಕ್ಕಮಕ್ಕಳ ಗಲಾಟೆಯಂತಿದೆ ಅಂತ ಜರಿದಿದ್ದಾರೆ. ಇನ್ನೂ ಡಿಎಂಕೆ ಮಾದರಿಯಲ್ಲೇ ತ್ರಿಭಾಷಾ ವಿಧಾನವನ್ನ ಖಂಡಿಸಿ, ತಮಿಳುನಾಡಿನ ಶಿಕ್ಷಣ ವ್ಯವಸ್ಥೆಗಾಗಿ ಕೇಂದ್ರ ಸರ್ಕಾರ ನೀಡಬೇಕಿದ್ದ 2,400 ಕೋಟಿ ರೂಪಾಯಿ ಅನುದಾನ ನೀಡುವುದಿಲ್ಲ ಅಂತ ಹೇಳಿದ್ದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ನಡೆಯನ್ನ ಟೀಕಿಸಿದ್ದಾರೆ. ಅಲ್ದೆ ಇದು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ ಅಂತ ವಿಜಯ್ ಕಿಡಿದ್ದಾರೆ.
ಇನ್ನೂ ನಮ್ಮ ಪಕ್ಷವನ್ನ ತಳಮಟ್ಟದಿಂದ ಬಲಪಡಿಸುವ ಪ್ರಕ್ರಿಯೆಯಲ್ಲಿ ನಾವು ತೊಡಗಿಸಿಕೊಂಡಿದ್ದೇವೆ. ನಮ್ಮ ಪಕ್ಷ ಬಡ ಮತ್ತು ಸಾಮಾನ್ಯ ಜನರ ಏಳ್ಗೆಗಾಗಿ ದುಡಿಯಲಿದೆ. ಆದ್ದರಿಂದ, ಕಾರ್ಯಕರ್ತರೂ ಸಹ ಅದೇ ಹಿನ್ನೆಲೆಯಿಂದ ಬಂದವರಾಗಿದ್ದಾರೆ. ನಮ್ಮ ಪಕ್ಷ ಯಾವುದೇ ಬಂಡವಾಳಶಾಹಿಗಳಿಗಾಗಿ ಶ್ರಮಿಸುವುದಿಲ್ಲ, ಯಾವುದೇ ಭೂಮಾಲೀಕರಿಗಾಗಿ ಅಲ್ವೇ ಅಲ್ಲ ಎಂದು ವಿಜಯ್ ಸ್ಫಷ್ಟಪಡಿಸಿದ್ದಾರೆ. ಆದರೆ ಇಲ್ಲಿ ಈಗ ಅಧಿಕಾರದಲ್ಲಿರುವವರು ಭೂಮಾಲೀಕರಾಗುತ್ತಿದ್ದಾರೆ. ಜನರ ಕಲ್ಯಾಣ, ರಾಷ್ಟ್ರ ಕಲ್ಯಾಣದ ಬಗ್ಗೆ ಚಿಂತಿಸದೆ ಎಲ್ಲ ರೀತಿಯಲ್ಲೂ ಸಹ ಕೇವಲ ದುಡ್ಡು ಮಾಡುವ ದಾಹದಲ್ಲಿದ್ದಾರೆ. ಹೀಗೆ ಹಣ ಗಳಿಸುವುದೇ ನಮ್ಮ ರಾಜಕಾರಣದ ಮುಖ್ಯ ಗುರಿ ಅಂತ ಹೇಳುವವರನ್ನ ಹಾಗೂ ಈ ರೀತಿಯ ಲ್ಯಾಂಡ್ ಲಾರ್ಡ್‌ಗಳನ್ನ ರಾಜಕೀಯದಿಂದ ಕಿತ್ತೆಸೆಯುವುದೆ ನಮ್ಮ ಮೊದಲ ಕೆಲಸವಾಗಿದೆ ಅಂತ ವಿಪಕ್ಷಗಳ ವಿರುದ್ದ ಟಿವಿಕೆ ಮುಖ್ಯಸ್ಥ ವಿಜಯ್ ಗುಡುಗಿದ್ದಾರೆ.
ಪಿಕೆ ಕೈ ಹಿಡಿದವರು ರಾಜಕೀಯದಲ್ಲಿ ವಿಥೌಟ್ ಫೇಲ್, ಓನ್ಲಿ ಸಕ್ಸಸ್..
ಇನ್ನೂ ತಮಿಳುನಾಡಿನ ರಾಜಕೀಯದ ಪರಿವರ್ತನೆಗೆ ತಮ್ಮ ಬೆಂಬಲ ಸೂಚಿಸಿ ಮಾತನಾಡಿದ್ದ ಪ್ರಶಾಂತ್ ಕಿಶೋರ್, ತಮಿಳುನಾಡಿನ ರಾಜಕಾರಣದಲ್ಲಿ ಬದಲಾವಣೆಯನ್ನ ಕಾಣಲು ಬಯಸುವ ಅದೆಷ್ಟೋ ಲಕ್ಷಾಂತರ ಜನರಿಗೆ ವಿಜಯ್ ಭರವಸೆಯಾಗಿ ನಿಂತಿದ್ದಾರೆ. ತಮಿಳುನಾಡಿನ ಚುನಾವಣೆಯಲ್ಲಿ ವಿಜಯ್‌ಗೆ ತಂತ್ರಗಾರಿಕೆ ಸಹಾಯದ ಅಗತ್ಯವಿಲ್ಲ. ನಾನು ಯಾವುದೇ ಪಕ್ಷ ಅಥವಾ ನಾಯಕರೊಂದಿಗೆ ಕೆಲಸ ಮಾಡುವುದಿಲ್ಲ ಅಂತ ನಾಲ್ಕು ವರ್ಷಗಳ ಹಿಂದೆಯೇ ಘೋಷಿಸಿದ್ದೆ, ಆದರೆ ವಿಜಯ್ ನನಗೆ ರಾಜಕೀಯ ನಾಯಕನಲ್ಲ. ಅವರು ತಮಿಳುನಾಡಿಗೆ ಹೊಸ ಭರವಸೆ. ಟಿವಿಕೆ ತಮಿಳುನಾಡಿನಲ್ಲಿ ಹೊಸ ರಾಜಕೀಯ ವ್ಯವಸ್ಥೆಯನ್ನ ನೋಡಲು ಬಯಸುವ ಲಕ್ಷಾಂತರ ಜನರ ಚಳುವಳಿಯಾಗಿದೆ ಎಂದು ವ್ಯಾಖ್ಯಾನಿಸಿದ್ದಾರೆ. ಅಲ್ದೆ ಟಿವಿಕೆ ಮತ್ತು ವಿಜಯ್ ತಮಿಳುನಾಡಿನಲ್ಲಿ ಬದಲಾವಣೆಯನ್ನ ಪ್ರತಿಬಿಂಬಿಸುತ್ತಾರೆ ಅಂತ ಹೇಳುವ ಮೂಲಕ ಪ್ರಶಾಂತ್ ಕಿಶೋರ್ ತಮಿಳಿಗರಲ್ಲಿ ವಿಜಯ್ ಕುರಿತು ಹಲವಾರು ನಿರೀಕ್ಷೆಗಳನ್ನ ಬಿತ್ತಿದ್ದಾರೆ. ಇನ್ನೂ ಮುಂಬರುವ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಟಿವಿಕೆಯ ವಿಜಯ್ ನಾಯಕತ್ವ ವಿಕ್ಟರಿ ಬಾರಿಸಲಿದೆ ಆ ವೇಳೆ ನಾನೇ ತಮಿಳು ಮಾತನಾಡುವುದನ್ನ ಕಲಿತು ಅದೇ ಭಾಷೆಯಲ್ಲಿಯೇ ತಮಿಳುನಾಡಿನ ಜನತೆಗೆ ಧನ್ಯವಾದಗಳನ್ನ ತಿಳಿಸುತ್ತೇನೆ ಅಂತ ಹೇಳಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ. ಅಲ್ದೆ ತಮಿಳುನಾಡಿನ ಸ್ಥಳೀಯ ರಾಜಕೀಯ ಪಕ್ಷವಾಗಿರುವ ಡಿಎಂಕೆಯ ಆಡಳಿತವನ್ನ ಟೀಕಿಸಿರುವ ಪ್ರಶಾಂತ್ ಕಿಶೋರ್, ಆ ಪಕ್ಷದ ಭ್ರಷ್ಟಾಚಾರವೇ ರಾಜ್ಯದ ಅಭಿವೃದ್ಧಿಯಾಗಿಬಿಟ್ಟಿದೆ, ಕುಟುಂಬ ರಾಜಕಾರಣ ಮತ್ತು ಕೋಮುವಾದಗಳೇ ಅವರ ಡೆವಲಪ್‌ಮೆಂಟ್ ಮಾಡೆಲ್‌ಗಳಾಗಿವೆ ಅಂತ ಲೇವಡಿ ಮಾಡಿದ್ದಾರೆ.
ಅಲ್ದೆ ಡಿಎಂಕೆ ಪಕ್ಷವನ್ನ ಉಲ್ಲೇಖಿಸಿ ವಂಶಪಾರಂಪರ್ಯ ರಾಜಕೀಯವನ್ನ ಕೊನೆಗೊಳಿಸಬೇಕೆಂದು ಕರೆ ನೀಡಿದ ಪಿಕೆ, ಕ್ರಿಕೆಟ್ ಲೋಕದ ದಂತಕಥೆ ಸುನಿಲ್ ಗವಾಸ್ಕರ್ ಮತ್ತು ಕಪಿಲ್ ದೇವ್ ಅವರ ಮಕ್ಕಳು ಭಾರತಕ್ಕಾಗಿ ಆಡಿದ್ದರೆ, ನಾವು ಇಂದು ಸಚಿನ್ ತೆಂಡೂಲ್ಕರ್, ಎಂಎಸ್ ಧೋನಿ ಮತ್ತು ವಿರಾಟ್ ಕೊಹ್ಲಿಯನ್ನ ಮೈದಾನದಲ್ಲಿ ನೋಡುತ್ತಿರಲಿಲ್ಲ ಎಂದು ಹೇಳುವ ಮೂಲಕ ಪಿಕೆ ತಮಿಳುನಾಡಿನ ರಾಜಕಾರಣವನ್ನ ಒಂದೇ ವಾಕ್ಯದಲ್ಲಿ ಖಂಡಿಸಿದ್ದಾರೆ. ಇನ್ನೂ ಈ ಪ್ರಶಾಂತ್ ಕಿಶೋರ್ ಟ್ರ್ಯಾಕ್ ರೆಕಾರ್ಡ್ ನೋಡೋದಾದ್ರೆ.. ಅಪೌಷ್ಠಿಕತೆಯ ಸುಧಾರಣಾ ಕಾರ್ಯದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಗುರುತಿಸಿಕೊಂಡಿದ್ದ ಪಿಕೆ, ತಮ್ಮ ಅಂಕಣಗಳಿಂದಲೇ 2011ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರ ಗಮನ ಸೆಳೆದಿದ್ದರು. ಬಳಿಕ ಅವರು ಮೋದಿಯವರ ತಂಡ ಸೇರಿ ತಮ್ಮ ರಾಜಕಾರಣದ ತಂತ್ರಗಾರಿಕೆಯನ್ನ ಮುಂದುವರೆಸಿದ್ದರು. ನಂತರದ ದಿನಗಳಲ್ಲಿ ಎದುರಾದ 2014ರ ಲೋಕಸಭಾ ಚುನಾವಣೆಯಲ್ಲಿ ಪ್ರಶಾಂತ್ ಕಿಶೋರ್ ಮೋದಿ ಹಾಗೂ ಬಿಜೆಪಿಯ ಗೆಲುವಿಗೆ ನೀಡಿದ್ದ ಸಕ್ಸಸ್ ಫಾರ್ಮುಲಾಗಳು ವಿಪಕ್ಷಗಳೇ ದಂಗಾಗುವಂತೆ ಮಾಡಿದ್ದವು. ಅಲ್ದೆ ಪಿಕೆ ತಂತ್ರಗಾರಿಕೆಯ ಫಲದಿಂದ ಗೆಲುವಿನ ಹಳಿ ಹಿಡಿದ ಬಿಜೆಪಿಯನ್ನ ನೋಡಿ ದೇಶದ ವಿಪಕ್ಷಗಳಿಗೆ ಇದೇ ಪಿಕೆಯ ಅವಶ್ಯಕತೆ ಎದುರಾಗಿತ್ತು. ಬಳಿಕ 2017ರಲ್ಲಿ ಪಂಜಾಬ್‌ನಲ್ಲಿ ಅಮರಿಂದರ್ ಸಿಂಗ್ ಗೆಲ್ಲಿಸುವಲ್ಲಿ ಪಿಕೆ ಮಾಸ್ಟರ್ ಮೈಂಡ್ ಯಶಸ್ವಿಯಾಗಿತ್ತು. ಅಲ್ದೆ 2019ರಲ್ಲಿ ಆಂದ್ರಪ್ರದೇಶಕ್ಕೆ ಕಾಲಿಟ್ಟಿದ್ದ ಪ್ರಶಾಂತ್ ಕಿಶೋರ್ ಜಗನ್‌ಮೋಹನ್ ರೆಡ್ಡಿಯವರನ್ನ ಸಿಎಂ ಆಗಿಸುವಲ್ಲಿ ಸಫಲತೆ ಕಂಡಿದ್ದರು. ಹೀಗೆ ಭಾರತದ ಚುನಾವಣಾ ರಾಜಕೀಯದಲ್ಲಿ ತಮ್ಮದೇ ಆದ ಹೆಸರು ಗಳಿಸಿರುವ ಪ್ರಶಾಂತ್ ಕಿಶೋರ್ ಗ್ರೌಂಡ್ ಲೆವೆಲ್‌ನಲ್ಲಿ ಮಾಡುವ ವರ್ಕೌಟ್ ಮಾತ್ರ ನಿಜಕ್ಕೂ ಶಾಕ್ ನೀಡುತ್ತೆ. ಯಾಕಂದ್ರೆ ಯಾವುದೇ ಒಂದು ಚುನಾವಣೆಯನ್ನ ಗೆಲ್ಲಬೇಕಾದರೆ ಅಲ್ಲಿನ ಸಂಪೂರ್ಣ ಮಾಹಿತಿಯ ಅವಶ್ಯಕತೆ ಸೇರಿದಂತೆ ವೋಟಿಂಗ್‌ಗೆ ಬೇಕಾಗುವ ಪ್ರತಿಯೊಂದು ಫ್ಯಾಕ್ಟರ್ ಅನ್ನು ಬೇರು ಮಟ್ಟದಲ್ಲಿ ಸಂಗ್ರಹಿಸಬೇಕಾಗುತ್ತೆ. ಹೀಗೆ ಡೆಡಿಕೇಟೆಡ್ ವರ್ಕ್ ಮಾಡುವಲ್ಲಿ ಪಿಕೆ ಎತ್ತಿದೆ ಕೈ. ಇಷ್ಟೆಲ್ಲ ಖ್ಯಾತಿಯನ್ನ ಹಾಗೂ ಶಕ್ತಿ ಸಾಮರ್ಥ್ಯವನ್ನ ಹೊಂದಿರುವ ಪ್ರಶಾಂತ್ ಕಿಶೋರ್ ಇದೀಗ ತಮಿಳು ನಾಡಿನಲ್ಲಿ ನೂತನ ಪಕ್ಷ ಟಿವಿಕೆಯ ಸಲಹೆಗಾರರಾಗಿರುವುದು ಅಲ್ಲಿನ ರಾಜಕಾರಣದಲ್ಲಿ ಇನ್ನಷ್ಟು ಸಾಧ್ಯತೆಗಳ ಬಾಗಿಲು ತೆರೆದುಕೊಂಡಂತಾಗಿದೆ. ಯಾಕಂದ್ರೆ ಯಾವಾಗಲೂ ಸಹ ತಮ್ಮ ಕೆಲಸದ ಬದ್ದತೆಯ ಬಗ್ಗೆ ಮಾತನಾಡುವ ಪಿಕೆ ತಮಿಳುನಾಡಿನ ಜನರಿಗೂ ಇದೇ ಬದ್ದತೆ, ಸಹಾನಭೂತಿ ಹಾಗೂ ಧೈರ್ಯದ ಪಾಠ ಮಾಡಿ ಬಂದಿರುವುದನ್ನ ನೋಡಿದಾಗ ಸಹಜವಾಗಿಯೇ ತಮಿಳುನಾಡಿನಲ್ಲಿ ಈ ಬಾರಿ ರಾಜಕೀಯದಲ್ಲಿ ಬದಲಾವಣೆಯ ಲಕ್ಷಣಗಳನ್ನ ಅಲ್ಲಗಳೆಯುವಂತಿಲ್ಲ.
ಮುಖ್ಯವಾಗಿ ತಮಿಳುನಾಡಿನಲ್ಲಿ ಎರಡು ದ್ರಾವಿಡ ಪಕ್ಷಗಳ ನಡುವೆಯೇ ರಾಜಕೀಯ ಸ್ಪರ್ಧೆಯು ನಡೆಯುತ್ತಾ ಬಂದಿದೆ. ರಾಷ್ಟ್ರೀಯ ಪಕ್ಷಗಳು ಮತ್ತು ನಿರ್ದಿಷ್ಟ ಸಮುದಾಯಗಳ ಬೆಂಬಲ ಪಡೆದಿರುವ ಸ್ಥಳೀಯ ಪಕ್ಷಗಳು ಇವೆರಡರಲ್ಲಿ ಒಂದು ಪಕ್ಷದ ಬಾಲಂಗೋಚಿಯಾಗಿದ್ದುಕೊಂಡೇ ಚುನಾವಣೆಗಳನ್ನ ಎದುರಿಸಿವೆ. ಈ ದ್ರಾವಿಡ ಪಕ್ಷಗಳೂ ಅಪಾರ ಭ್ರಷ್ಟಾಚಾರದಿಂದ ಕೂಡಿದ ಹಲವು ಜನಪ್ರಿಯ ಯೋಜನೆಗಳ ಮೂಲಕ ಜನರ ಕೆಲವು ಅಗತ್ಯಗಳನ್ನ ಪೂರೈಸಿ ತಾವು ಜನತೆಯ ಪೋಷಕರಂತಾ ಬಿಂಬಿಸಿಕೊಳ್ಳುತ್ತಲೇ ತಮ್ಮ ಸ್ಥಾನವನ್ನ ಗಟ್ಟಿಗೊಳಿಸಿಕೊಳ್ಳುತ್ತ ಬಂದಿರುವುದು ಇದು ಅವುಗಳ ರಾಜಕೀಯದ ಸ್ಟೈಲ್ ಆಗಿದೆ. ಇನ್ನೂ ಕೇಂದ್ರದಲ್ಲಿ ಇವೆರಡು ಪಕ್ಷಗಳು ಕಾಂಗ್ರೆಸ್ಸನ್ನೋ ಅಥವಾ ಬಿಜೆಪಿಯನ್ನೋ ಬೆಂಬಲಿಸುತ್ತಾ ಬಂದರೂ ರಾಜ್ಯದಲ್ಲಿ ಮಾತ್ರ ಆ ರಾಷ್ಟ್ರೀಯ ಪಕ್ಷಗಳು ತಮ್ಮ ಅಧೀನವಾಗಿಯೇ ಉಳಿದುಕೊಳ್ಳುವಂತೆ ನೋಡಿಕೊಂಡಿವೆ. ಆದರೆ ಯಾವುದೇ ದ್ರಾವಿಡ ಪಕ್ಷ ಅಧಿಕಾರಕ್ಕೆ ಬಂದರೂ ಸಹ ಆ ಸರ್ಕಾರಕ್ಕೆ ಫಲಾನುಭವಿಯನ್ನ ಪ್ರಜೆಯೆಂದು ಕಾಣುವ ವ್ಯವಸ್ಥೆಯು ನಿಜರೂಪದಲ್ಲಿ ತನ್ನದೇ ಆದ ವೈರುಧ್ಯಗಳನ್ನೂ ಹೊಂದಿರುತ್ತೆ ಅನ್ನೋದು ಅಲ್ಲಿನ ರಾಜಕೀಯಕ್ಕೆ ಅಂಟಿರುವ ಕಳಂಕವಾಗಿದೆ.
ಗೆಟ್ ಔಟ್ ಕ್ಯಾಂಪೇನ್‌ಗೆ ಸಹಿ ಹಾಕದ ಪಿಕೆ ನಡೆ ನಿಗೂಢವಾಯ್ತಾ..?
ಹೌದು.. ಟಿವಿಕೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಇರಿಸಿದ್ದ ಬೋರ್ಡ್ ಮೇಲೆ ಪ್ರಸ್ತುತ ಆಢಳಿತದಲ್ಲಿರುವ ತಮಿಳುನಾಡಿನ ಡಿಎಂಕೆ ಸರ್ಕಾರದ ಮುಖ್ಯಮಂತ್ರಿ ಸ್ಟಾಲಿನ್ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ನೀತಿಗಳನ್ನ ಖಂಡಿಸಿ ಟಿವಿಕೆ ನಡೆಸುತ್ತಿರುವ ಗೆಟ್ ಔಟ್ ಅಭಿಯಾನಕ್ಕೆ ಸಹಿ ಹಾಕಲು ಪ್ರಶಾಂತ್ ಕಿಶೋರ್ ಹಿಂದೇಟು ಹಾಕಿದ್ದಾರೆ. ವಿಜಯ್ ಸೇರಿದಂತೆ ಸ್ಥಳದಲ್ಲಿದ್ದ ಅನೇಕರು ಮೋದಿ ಹಾಗೂ ಸ್ಟಾಲಿನ್ ವಿರುದ್ಧ ಸಹಿ ಹಾಕಿದ್ದಾರೆ. ಆದರೆ ಅಲ್ಲಿನ ಸಂಘಟಕರು ಹಾಗೂ ಮುಖಂಡರು ಸಹಿ ಹಾಕಲು ಪಿಕೆಗೆ ಹೇಳಿದರೆ ಅದನ್ನ ಅವರು ನಿರಾಕರಿಸಿರುವುದು ಮತ್ತೊಂದು ಹೊಸ ಚರ್ಚೆಯನ್ನ ಸೃಷ್ಟಿಸಿದೆ. ತಮಿಳುನಾಡು ಚುನಾವಣೆಯಲ್ಲಿ ವಿಜಯ್ ಹಾಗೂ ಬಿಜೆಪಿ ಮೈತ್ರಿಗೆ ಪಿಕೆ ಸೇತುವೆಯಾದ್ರಾ..? ಅಥವಾ ಟಿವಿಕೆ ಹಾಗೂ ಬಿಜೆಪಿ ಪಕ್ಷಗಳು ಚುನಾವಣೆಯ ಸಮಯದಲ್ಲಿ ಒಂದಾಗಿ ಡಿಎಂಕೆ ಮಣಿಸುವ ಮುನ್ಸೂಚನೆ ನೀಡಿದ್ರಾ ಎಂಬೆಲ್ಲ ಚರ್ಚೆಗಳು ಜೋರಾಗಿಯೇ ನಡೆಯುತ್ತಿವೆ. ಹೇಳಿ ಕೇಳಿ ಇದೇ ಪ್ರಶಾಂತ್ ಕಿಶೋರ್ ಈ ಹಿಂದೆ ಮೋದಿ ಟೀಂ ನಿಂದಲೇ ಮುನ್ನೆಲೆಗೆ ಬಂದಿದ್ದಾರೆ ಅನ್ನೋದು ಇಲ್ಲಿ ಗಮನಾರ್ಹ.
ತಮಿಳು ರಾಜಕೀಯಕ್ಕೂ ಸಿನಿಮಾಗೂ ಬಿಡಿಸದ ನಂಟು..
ಎಸ್.. ತಮಿಳುನಾಡಿನ ಬಹುತೇಕ ರಾಜಕೀಯ ನಾಯಕರು ಚಿತ್ರರಂಗದ ಹಿನ್ನೆಲೆಯಿಂದಲೇ ಬಂದವರಾಗಿ ಅಲ್ಲಿನ ರಾಜಕಾರಣದಲ್ಲಿ ತಮ್ಮದೆ ಆದ ಹೆಜ್ಜೆ ಗುರುತುಗಳನ್ನ ಬಿಟ್ಟು ಹೋಗಿದ್ದಾರೆ. ನಾವಿಲ್ಲಿ ತಮಿಳುನಾಡಿನ ರಾಜಕೀಯದಲ್ಲಿ ಹೆಸರು ಮಾಡಿರುವವರ ಮೂಲ ಗಮನಿಸಿದಾಗ ಅವರು ನಟನೆಯ ಜೊತೆಗೆಯೇ ರಾಜಕೀಯಕ್ಕೆ ಕಾಲಿಟ್ಟಿರುವುದು ಕಂಡು ಬರುತ್ತೆ. ಅಲ್ದೆ ಇದೇ ವಿಚಾರದಲ್ಲಿ ಇನ್ನಷ್ಟು ಆಳವಾಗಿ ಇಣುಕಿ ನೋಡಿದಾಗ ನಮಗೆ ತಮಿಳುನಾಡಿನ ರಾಜಕೀಯದ ಇಂಟ್ರೆಸ್ಟಿಂಗ್ ಮಾಹಿತಿಗಳು ನಮಗೆ ದೊರೆಯುತ್ತವೆ. ಪ್ರಸ್ತುತ ತಮಿಳುನಾಡಿನಲ್ಲಿ ಅಧಿಕಾರದಲ್ಲಿರುವ ದ್ರಾವಿಡ ಮುನೇತ್ರ ಕಳಗಂ ಅಂದ್ರೆ ದ ವೆಲ್ ನೋನ್ ಡಿಎಂಕೆ.. ಇದರ ಸಂಸ್ಥಾಪಕ ಹಾಗೂ ತಮಿಳುನಾಡಿನ ಮೊದಲ ಮುಖ್ಯಮಂತ್ರಿ ಅಂತ ಕರೆಸಿಕೊಂಡಿದ್ದ ಅಣ್ಣಾ ದೊರೈ ಅವರೂ ಸಹ ಈ ಸಿನಿಮಾ ರಂಗದ ಹಿನ್ನೆಲೆಯಿಂದಲೇ ಬಂದವರಾಗಿದ್ದರು ಅನ್ನೋದನ್ನ ಗಮನಿಸಿದಾಗ ತಮಿಳಿಗರಲ್ಲಿ ಸಿನಿಮಾ ಲೋಕ ಎಷ್ಟು ದೀರ್ಘವಾಗಿ ಹಾಸು ಹೊಕ್ಕಾಗಿದೆ ಅಂತ ನಾವಿಲ್ಲಿ ತಿಳಿದುಕೊಳ್ಳಬಹುದಾಗಿದೆ. ಅಲ್ದೆ ಆಗ ಅವರು ಸಿನಿಮಾವನ್ನ ಚಳುವಳಿ ಹಾಗೂ ರಾಜಕೀಯಕ್ಕೆ ಶಕ್ತವಾಗಿ ಬಳಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಇನ್ನೂ ಕೆಲವು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ್ದಲ್ದೆ, ಚಿತ್ರಕತೆಗಳನ್ನ ಈ ಅಣ್ಣಾ ದೊರೈ ಸಹ ಬರೆದಿದ್ದರು.
ಇವರಷ್ಟೇ ಅಲ್ದೆ ಈ ತಮಿಳುನಾಡಿನ ಇನ್ನೊಬ್ಬ ಹಿರಿಯ ರಾಜಕಾರಣಿ ಹಾಗೂ ಡಿಎಂಕೆಯ ಸ್ಥಾಪಕರಲ್ಲಿ ಒಬ್ಬರಾಗಿರುವ ಹಾಗೂ ದ್ರಾವಿಡ ಚಳುವಳಿಯ ಮುಂಚೂಣಿಯಲ್ಲಿದ್ದ ಎಂ ಕರುಣಾನಿಧಿ ಅವರು ಸಿನಿಮಾಗಳಲ್ಲಿ ಬಣ್ಣ ಹಚ್ಚಿಲ್ಲ. ಆದ್ರೆ ಹಲವಾರು ಸಿನಿಮಾಗಳಿಗೆ ಚಿತ್ರಕತೆ, ಗೀತೆಗಳು, ಕತೆಗಳನ್ನ ರಚಿಸಿದ್ದರು. ಹೀಗೆ 19ನೇ ಶತಮಾನದಲ್ಲಿದ್ದ ದ್ರಾವಿಡ ಚಳುವಳಿಯನ್ನ ತಮಿಳು ಜನರ ಮನಸ್ಸಿಗೆ ತಾಗಿಸಿದ ಸಿನಿಮಾ ‘ಪರಾಶಕ್ತಿ’ಯ ಚಿತ್ರಕತೆಯನ್ನ ಬರೆದಿದ್ದು ಇದೇ ಎಂ ಕರುಣಾನಿಧಿ. ಆ ಪರಾಶಕ್ತಿ ಸಿನಿಮಾ ಆಗ ತಮಿಳುನಾಡಿನಾದ್ಯಂತ ಹೊಸ ಅಲೆಯನ್ನೇ ಎಬ್ಬಿಸಿತ್ತು. ಇನ್ನೂ ಹೀಗಿದ್ದ ಕರುಣಾನಿಧಿ ತಮಿಳುನಾಡಿನ ಸಿಎಂ ಆಗಿಯೂ ಸೇವೆ ಸಲ್ಲಿಸಿದ್ದರು. ಇನ್ನೂ ದ್ರಾವಿಡ ಚಳುವಳಿಯ ಮೂಲಕವೇ ಚಿತ್ರರಂಗಕ್ಕೆ ಕಾಲಿಟ್ಟಿದ್ದ ಶಿವಾಜಿ ಗಣೇಶನ್ ಅವರೂ ಸಹ ಇದೇ ಡಿಎಂಕೆ ಪಕ್ಷವನ್ನ ಸೇರಿದ್ದರು. ಆದರೆ ತಿರುಪತಿಗೆ ಭೇಟಿ ನೀಡಿದ್ದರು ಎಂಬ ಕಾರಣಕ್ಕೆ ಇದೇ ದೊಡ್ಡ ವಿವಾದವಾಗಿ ಅವರೂ ಡಿಎಂಕೆ ತೊರೆಯುವಂತಾಗಿತ್ತು. ಹೀಗೆ ಸಿನಿಮಾ ಮಂದಿಯು ರಾಜಕೀಯಕ್ಕೆ ಬರಲು ದ್ರಾವಿಡ ಚಳುವಳಿಯು ಕಾರಣವಾಗಿತ್ತು.
ಇನ್ನೂ ತಮಿಳುನಾಡಿನ ರಾಜಕೀಯ ಹಾಗೂ ಸಿನಿಮಾ ರಂಗದಲ್ಲಿ ತಮ್ಮದೇ ಆದ ಹೆಸರು ಮಾಡಿ ಜನಪ್ರಿಯತೆ ಗಳಿಸಿದ್ದ ಎಂಜಿಆರ್ ಅಂದ್ರೆ ಎಂ.ಜಿ. ರಾಮಚಂದ್ರನ್ ಅವರೂ ಸಹ ಮೂಲತಃ ಚಿತ್ರರಂಗದ ಹಿನ್ನೆಲೆಯಿಂದ ಬಂದವರಾಗಿದ್ದರು. ಅವರು 1953ರ ವರೆಗೆ ಕಾಂಗ್ರೆಸ್ನಲ್ಲಿದ್ದರು, ಬಳಿಕ ಅಣ್ಣಾದೊರೈ ಅವರಿಂದ ಪ್ರೇರಿತರಾಗಿ ಡಿಎಂಕೆ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಆದರೆ ಅಣ್ಣಾದೊರೈ ನಿಧನದ ಬಳಿಕ ಕರುಣಾನಿಧಿ ಡಿಎಂಕೆಯ ನೇತೃತ್ವ ವಹಿಸಿಕೊಂಡು, ತಮಿಳುನಾಡಿನ ಮುಖ್ಯಮಂತ್ರಿ ಕೂಡ ಆದರು. ಅಲ್ಲಿಂದ ಇಬ್ಬರ ನಡುವೆ ಅಸಮಾಧಾನ ಪ್ರಾರಂಭವಾಯ್ತು. ಪಕ್ಷದ ವಿರುದ್ಧ ಮಾತನಾಡಿದ್ದಕ್ಕೆ ಎಂಜಿಆರ್ ಅವರನ್ನ ಉಚ್ಛಾಟನೆ ಮಾಡಲಾಯ್ತು. ಬಳಿಕ ಎಂಜಿಆರ್ ತಮ್ಮ ಆಪ್ತನೇ ಪ್ರಾರಂಭಿಸಿದ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ ಅಂದ್ರೆ ಎಡಿಎಂಕೆ ಸೇರಿ ಅದರ ನಾಯಕತ್ವ ವಹಿಸಿಕೊಂಡರು. ಬಳಿಕ ಎಐಎಡಿಎಂಕೆ ಅಂತ ಅದರ ಹೆಸರು ಬದಲಾಯಿಸಿ ಎರಡು ಬಾರಿ ಸಿಎಂ ಸಹ ಆಗಿದ್ದರು.
ಅಲ್ದೆ ಇಷ್ಟಕ್ಕೆ ಮುಗಿಯದ ತಮಿಳುನಾಡು ರಾಜಕೀಯದ ಸಿನಿಮಾ ನಂಟು ಮಾಜಿ ಮುಖ್ಯಮಂತ್ರಿಯಾಗಿದ್ದ ಜೆ ಜಯಲಲಿತಾ ಅವರವರೆಗೂ ಸಹ ಹಬ್ಬಿತ್ತು. ತಮಿಳುನಾಡು ರಾಜಕೀಯದಲ್ಲಿ ಅತಿ ದೊಡ್ಡ ಹೆಸರು ಮಾಡಿದ್ದ ಇವರೂ ಸಹ ನಟನೆಯಿಂದಲೇ ರಾಜಕಾರಣಕ್ಕೆ ಪ್ರವೇಶ ಪಡೆದವರಾಗಿದ್ದರು. ಆಗ ಎಂಜಿಆರ್ ನಾಯಕತ್ವ ವಹಿಸಿದ್ದ ಎಐಎಡಿಎಂಕೆ ಪಕ್ಷವನ್ನ ಜಯಲಲಿತಾ ಸೇರಿದ್ದರು. ಇನ್ನೂ ರಾಜಕೀಯದಲ್ಲಿ ಒಬ್ಬ ನಾಯಕ ಚಳುವಳಿಗಳೊಂದಿಗೆ ಗುರುತಿಸಿಕೊಳ್ಳಬೇಕು ಎಂಬ ನಿಲುವಿನಿಂದ ಅವರು ಮಾಡಿದ್ದ ರಾಜಕೀಯ ಹೋರಾಟಗಳು ಇಂದಿಗೂ ಸಹ ಜನಜನಿತವಾಗಿವೆ. ಅಲ್ದೆ ಎಂಜಿಆರ್ ನಿಧನದ ಬಳಿಕ ಜಯಲಲಿತಾ ಹಾಗೂ ಪಕ್ಷವೂ ಹಲವಾರು ಕಠಿಣ ಸಮಸ್ಯೆಗಳನ್ನ ಎದುರಿಸಿತ್ತು. ಅದರೆ ಛಲ ಬಿಡದೆ ಅಮ್ಮಾ ಖ್ಯಾತಿಯ ಜಯಲಲಿತಾ ಪಕ್ಷದ ಎಲ್ಲ ನಾಯಕರನ್ನ ವಿಶ್ವಾಸಕ್ಕೆ ಪಡೆದು ಹೋರಾಟಗಳನ್ನ ನಡೆಸಿದ್ದರು. ಇದರ ಫಲವಾಗಿ ತಮಿಳುನಾಡಿನಲ್ಲಿ ಜಯಲಲಿತಾ ಅಧಿಕಾರದ ಗದ್ದುಗೆಯನ್ನ ಏರುತ್ತಾರೆ. ಅಚ್ಚರಿಯ ಸಂಗತಿ ಏನಂದ್ರೆ.. ಹೀಗೆ ಹೋರಾಟದ ಮೂಲಕ ರಾಜ್ಯದ ಚುಕ್ಕಾಣಿಯನ್ನ ತಮ್ಮ ಕೈಗೆ ಪಡೆದಿದ್ದ ಜಯಲಲಿತಾ ಬರೊಬ್ಬರಿ 6 ಬಾರಿ ತಮಿಳುನಾಡಿನ ಸಿಎಂ ಆಗುವ ಮೂಲಕ ಸಾವಿನ ಬಳಿಕವೂ ಇಂದಿಗೂ ತಮಿಳಿಗರ ಮನೆಮನಗಳಲ್ಲಿ ನೆಲೆಸಿದ್ದಾರೆ.
ಇನ್ನೂ ನಟ ವಿಜಯ್ಕಾಂತ್ ಕೂಡ 2005ರಲ್ಲಿ ಪಕ್ಷ ಸ್ಥಾಪನೆ ಮಾಡಿದ್ದರು. ಬಳಿಕ 2011ರಲಿ ವಿಪಕ್ಷ ನಾಯಕನಾಗಿಯೂ ಸೇವೆ ಸಲ್ಲಿಸಿದ್ದರು. ಆದರೆ ಕಾಲಾನಂತರದಲ್ಲಿ ಅವರ ಪಕ್ಷ ತನ್ನ ವರ್ಚಸ್ಸು ಉಳಿಸಿಕೊಳ್ಳುವಲ್ಲಿ ವಿಫಲವಾಗಿತ್ತು. ಇಷ್ಟೇ ಅಲ್ದೆ ನಟ ಕಮಲ್ ಹಾಸನ್ ಸಿನಿಮಾ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರು ಮಾಡಿರುವವರು. ಈಗಲೂ ನಟನೆಯಲ್ಲಿ ಸಕ್ರಿಯರಾಗಿದ್ದಾರೆ. 2018ರಲ್ಲಿ ಇದೇ ಕಮಲ್ ಹಾಸನ್ ‘ಮಕ್ಕಳ್ ನಿಧಿ ಮಯಂ’ ಪಕ್ಷ ಸ್ಥಾಪನೆ ಮಾಡಿದ್ದರು. ಅಲ್ದೆ 2019ರ ಲೋಕಸಭಾ ಚುನಾವಣೆಯಲ್ಲಿ ಸ್ಫರ್ಧಿಸಿದ್ದರು. ಆದರೆ ದುರಾದೃಷ್ಟವಶಾತ್ ಆಗ ಕಮಲ್ ಹಾಸನ್ ಗೆಲುವು ಸಾಧಿಸುವಲ್ಲಿ ವಿಫಲವಾಗಿದ್ದರು. ಸದ್ಯ ಪಕ್ಷದ ಸಂಘಟನೆಯನ್ನ ಕಮಲ್ ಮುಂದುವರೆಸಿದ್ದಾರೆ. ಆದರೆ ಈ ಎಲ್ಲ ಸಿನಿಮಾ ಸ್ಟಾರ್‌ಗಳ ಸಾಲಿಗೆ ವಿಜಯ್ ಸೇರಿದ್ದಾರೆ. ತಮಿಳುನಾಡಿನ ರಾಜಕೀಯದಲ್ಲಿ ಅಮೂಲಾಗ್ರ ಬದಲಾವಣೆಯನ್ನ ತರುವ ನಿಟ್ಟಿನಲ್ಲಿ ಯುವಕರನ್ನೇ ಕೇಂದ್ರವಾಗಿಸಿಕೊಂಡು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ವಿಜಯ್ ತಮಿಳಿಗರಲ್ಲಿ ಹಲವು ನಿರೀಕ್ಷೆಗಳನ್ನ ಹುಟ್ಟು ಹಾಕಿದ್ದಾರೆ. ಎನ್‌ಇಪಿ ಸೇರಿದಂತೆ ಕೇಂದ್ರ ಸರ್ಕಾರದ ಹಲವು ನಿರ್ಧಾರಗಳನ್ನ ಬಹಿರಂಗವಾಗಿಯೇ ಟಿವಿಕೆ ನಾಯಕ ವಿಜಯ್ ಖಂಡಿಸಿದ್ದಾರೆ. ಕೆಲವು ಎಡಪಂಥಿಯ ಚಿಂತನೆಗಳನ್ನ ಅಳವಡಿಸಿಕೊಂಡು, ದ್ರಾವಿಡ ಚಳುವಳಿಯ ಪೆರಿಯಾರ್ ಅವರ ನಾಸ್ತಿಕ ಐಡಿಯಾಲಜಿ ಹೊರತುಪಡಿಸಿ ಇತರ ಚಿಂತನೆಗಳೊಂದಿಗೆ ಹಾಗೂ ಸಂವಿಧಾನ ಪಿತಾಮಹ ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಧಾರೆಗಳೊಂದಿಗೆ ಮುನ್ನಡೆಯುವುದಾಗಿ ಈಗಾಗಲೇ ವಿಜಯ್ ಘೋಷಿಸಿರುವುದು ಪ್ರಗತಿಪರ ಮನಸ್ಸುಗಳಲ್ಲಿ ಹತ್ತಾರು ಅಲೋಚನೆಗಳನ್ನ ಹುಟ್ಟುಹಾಕಿದೆ.
ಒಟ್ನಲ್ಲಿ.. 2026ರ ತಮಿಳುನಾಡು ಎಲೆಕ್ಷನ್‌ಗೆ ಈಗ ರಂಗು ಬಂದಿರುವುದು ಕನ್ಫರ್ಮ್ ಆಗಿದೆ. ರಾಜಕೀಯಕ್ಕೆ ಭರ್ಜರಿ ಎಂಟ್ರಿ ಕೊಟ್ಟ ತಮಿಳು ನಟ, ಟಿವಿಕೆ ಪಕ್ಷದ ಅಧ್ಯಕ್ಷ ದಳಪತಿ ವಿಜಯ್ ಜತೆ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಕೈ ಜೋಡಿಸಿರುವುದೇ ತಮಿಳುನಾಡಿನಲ್ಲಿ ಸದ್ಯದ ಬಿಸಿ ಬಿಸಿ ಚರ್ಚೆಯಾಗಿದೆ. ಇದರೊಂದಿಗೆ ತಮಿಳುನಾಡು ರಾಜಕೀಯ ಮಗ್ಗಲು ಬದಲಾವಣೆಯಾಗುವುದು ಸ್ಪಷ್ಟವಾಗಿದೆ. ಟಿವಿಕೆ ಪಕ್ಷದ ರಾಜಕೀಯ ನಡೆಗಳ ಬಗ್ಗೆ ಡಿಎಂಕೆ, ಎಐಎಡಿಎಂಕೆ ತಲೆಬಿಸಿ ಮಾಡಿಕೊಂಡಿವೆ. ಈ ಮೂಲಕ ವಿಜಯ್ ತಮಿಳುನಾಡಿನಲ್ಲಿ ತಮ್ಮ ರಾಜಕೀಯ ಅಸ್ತಿತ್ವಕ್ಕೆ ಭದ್ರಬುನಾದಿ ಹಾಕಲು ಪ್ರಶಾಂತ್ ಕಿಶೋರ್ ಮೊರೆ ಹೋಗಿರುವುದನ್ನ ತಳ್ಳಿ ಹಾಕುವಂತಿಲ್ಲ. ಇನ್ನೂ ತಮಿಳು ಯುವ ಸಮುದಾಯವನ್ನೇ ಗುರಿಯಾಗಿಸಿಕೊಂಡಿರುವ ವಿಜಯ್, ಯುವ ಜನಾಂಗದ ಆಶಾಕಿರಣ ಎಂಬಂತೆ ಬಿಂಬಿಸಿಕೊಳ್ಳಲು ಪಕ್ಕಾ ಪ್ಲಾನ್ ಮಾಡಿದ್ದಾರೆ. ಇದಕ್ಕೆ ಅವರು ರೂಪಿಸುವ ಕಾರ್ಯಕ್ರಮಗಳು, ವೇದಿಕೆಗಳ ಮೇಲಿನ ಹೀರೋ ಭಾಷಣ, ಡಿಎಂಕೆ ಸರ್ಕಾರ, ಮೋದಿ ಸರ್ಕಾರವನ್ನ ಟೀಕಿಸುವ ಪರಿ ನೋಡಿದರೆ, ವಿಜಯ್ ಮಾಸ್ಟರ್ ಪ್ಲ್ಯಾನ್ ಯಾರಿಗೂ ಅರ್ಥವಾಗದೆ ಇರದು. ಆದರೆ, ಅಲ್ಲಿನ ಭಾಷೆ, ಕಾವೇರಿ ನೀರು, ಹಿಂದಿ ಹೇರಿಕೆ ವಿಚಾರ, ಪೆರಿಯಾರ್ ಐಡಿಯಾಲಜಿ, ಜಲ್ಲಿಕಟ್ಟು ಎಂಬ ಅಸ್ಮಿತೆಗಾಗಿಯೇ ಎದೆಬಡಿದುಕೊಳ್ಳುವ ತಮಿಳರನ್ನ ಹಾಗೂ ಅವರ ಎಮೋಷನ್ ಪ್ರಶಾಂತ್ ಕಿಶೋರ್‌ಗೆ ಅರ್ಥ ಮಾಡಿಕೊಳ್ಳುವುದೇ ದೊಡ್ಡ ಸವಾಲು ಅನ್ನೋದು ಕೂಡ ಅಷ್ಟೇ ಸತ್ಯವಾಗಿದೆ. ಸದ್ಯಕ್ಕೆ ಭ್ರಷ್ಟಾಚಾರದ ಬಗ್ಗೆಯಷ್ಟೇ ಮಾತಾಡ್ತಿರೋ ವಿಜಯ್
ಅವರತ್ತ ತಮಿಳಿಗರನ್ನ ಸೆಳೆಯುವಲ್ಲಿ ಪ್ರಶಾಂತ್ ಕಿಶೋರ್ ಯಶಸ್ವಿಯಾಗ್ತಾರಾ ಅನ್ನೋದೇ ಸದ್ಯದ ದೊಡ್ಡ ಪ್ರಶ್ನೆಯಾಗಿದೆ.
ಎಂಜಿಆರ್ ಮತ್ತು ಜಯಲಲಿತಾ ಬಳಿಕ ತಮಿಳುನಾಡು ರಾಜಕೀಯವನ್ನು ಅಕ್ಷರಶಃ ಆಳಿದ ಮತ್ತೊಬ್ಬ ನಟನಿಲ್ಲ. ವಿಜಯಕಾಂತ್ ಸ್ವಲ್ಪಮಟ್ಟಿನ ಸಕ್ಸಸ್ ಕಂಡರು. ಕಮಲ್ ಹಾಸನ್ ಬೇರೂರಲಿಲ್ಲ. ರಜನೀಕಾಂತ್ ಸ್ಪೀಡ್ ಎಂಟ್ರಿ ಕೊಟ್ಟರೂ, ಎಣಿಸಿ, ಗುಣಿಸಿ ಕೊನೆಗೂ ರಾಜಕೀಯದಿಂದ ಕಾಲ್ಕಿತ್ತರು. ತಾರೆಯರ ರಂಗು ಕಳೆದುಕೊಂಡಿದ್ದ ತಮಿಳುನಾಡು ರಾಜಕೀಯಕ್ಕೆ ಜೋಸೆಫ್ ವಿಜಯ್ ಎಂಟ್ರಿ ಬಿರುಗಾಳಿ ಎಬ್ಬಿಸಿದ್ದಂತೂ ಸುಳ್ಳಲ್ಲ. ಆದ್ರೆ, ಡಿಎಂಕೆ- ಎಐಡಿಎಂಕೆ ಬಿಟ್ಟರೆ ಬಿಜೆಪಿ, ಕಾಂಗ್ರೆಸ್ ತಳವೂರಲು ಬಿಡದ ತಮಿಳು ಮತದಾರರು, ದಳಪತಿ ವಿಜಯ್ ಗೆ ಮಣೆ ಹಾಕ್ತಾರಾ? ಅಧಿಕಾರ ಕೊಡ್ತಾರಾ? ಅಮಿತ್ ಶಾ ತಂತ್ರಗಾರಿಕೆ, ಅಣ್ಣಾಮಲೈ ಪಾದಯಾತ್ರೆ ಯಾವುದೂ ವರ್ಕ್ಔಟ್ ಆಗಲಿಲ್ಲ. ವಿಜಯ್ ಗೆಲ್ಲಿಸಿಯೇ ಬಿಡುವಂಥ ಪ್ರಶಾಂತ್ ಕಿಶೋರ್ ತಂತ್ರಕ್ಕೆ ತಮಿಳು ಮತದಾರ ಮರುಳಾಗ್ತಾನಾ ? ಪ್ರತಿ ಚುನಾವಣೆಗಳಲ್ಲಿ ತಮ್ಮದೇ ಆದ ತೀರ್ಪುಗಳನ್ನ ನೀಡುತ್ತಿರೋ ತಮಿಳಿಗರು ತಮ್ಮ ಪ್ರಾದೇಶಿಕ ಪರಂಪರೆ ಮುಂದುವರೆಸಿಕೊಂಡು ಬಂದಿದ್ದಾರೆ. ಹೇಳಿ ಕೇಳಿ ಇದು ತಮಿಳುನಾಡು ಇಲ್ಲಿ ರಾಜಕೀಯ ಲೆಕ್ಕಾಚಾರ ಹಾಕೋದು ಅಷ್ಟು ಸುಲಭವಲ್ಲ ಅನ್ನೋದು ಕೂಡ ಅಷ್ಟೇ ನಿಜವಾಗಿದೆ.




